ಕುಸಿತದ ಅಂಚಿನಲ್ಲಿ ಶತಮಾನದ ಕೋಟೆ : ಶಿಥಿಲಗೊಂಡ ಕಮಾನುಗಳು, ಬಿರುಕು ಬಿಟ್ಟ ಗೋಡೆಗಳು

ರಾಷ್ಟ್ರಕೂಟ, ಚಾಲುಕ್ಯ, ಬಹಮನಿ, ಬಿಜಾಪುರದ ಆದಿಲ್ ಶಾಹಿ ವಂಶ ಹಾಗೂ ನಿಜಾಮರ ರಾಜವಂಶರು ಆಡಳಿತ ಮಾಡಿದ ಶತಮಾನದ ಯಾದಗಿರಿ ಕೋಟೆ ಇಂದು ಕುಸಿತದ ಅಂಚಿನಲ್ಲಿ ನಿಂತಿದೆ.
ಕೋಟೆಯ ಮೇಲ್ತುದಿಯಲ್ಲಿ ಫಿರಂಗಿಗಳು ನಿಶ್ಶಬ್ಧವಾಗಿ ಬಿದ್ದಿವೆ. ಕಮಾನುಗಳು ಕುಸಿಯುತ್ತಿವೆ ಹಾಗೂ ಗೋಡೆಗಳು ಶಿಥಿಲಗೊಂಡು ಕೋಟೆಯ ಸ್ವರೂಪ ಬಹುತೇಕ ವಿರೂಪಗೊಂಡಿದೆ.
ಕರ್ನಾಟಕದ ಪ್ರಮುಖ ಐತಿಹಾಸಿಕ ಕೋಟೆಗಳಲ್ಲಿ ಒಂದಾದ ಯಾದಗಿರಿ ಕೋಟೆ 850 ಮೀ. ಉದ್ದ, 500 ಮೀ. ಅಗಲ ಮತ್ತು 100 ಮೀ. ಎತ್ತರವನ್ನು ಹೊಂದಿದೆ. ಕೋಟೆಗೆ ಏಳು ಅಗಸಿಗಳಿದ್ದ್ದು, ಕೋಟೆಯ ಒಳಗೆ ಆರು ಶಾಸನಗಳು ಹಾಗೂ 17 ಫಿರಂಗಿಗಳು ಇವೆ.
ಕೋಟೆಯ ಮೇಲ್ಭಾಗದಲ್ಲಿ ಪ್ರಾಚೀನ ಭುವನೇಶ್ವರಿ ದೇವಿ ದೇವಾಲಯ, ರಾಮಲಿಂಗೇಶ್ವರ ದೇವಾಲಯ ಮತ್ತು ಜೈನ ದೇವಾಲಯ ಇವೆ. ಜೊತೆಗೆ ಮಧ್ಯಕಾಲೀನ ಅವಧಿಯಲ್ಲಿ ನಿರ್ಮಿತವಾದ ಮಸೀದಿ ಹಾಗೂ ಆ ಕಾಲದ ನೀರಿನ ಬಳಕೆಗೆ ಸಂಬಂಧಿಸಿದ ಹಲವು ಬಾವಿಗಳು ಕೂಡ ಇಲ್ಲಿ ಕಾಣಸಿಗುತ್ತವೆ.
ಆದರೆ, ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಈ ಐತಿಹಾಸಿಕ ಕೋಟೆ ಅವನತಿ ಅಂಚಿನತ್ತ ಸಾಗುತ್ತಿದೆ.
ಕೋಟೆಯ ಸುತ್ತಮುತ್ತ ಮದ್ಯದ ಬಾಟಲಿ, ಪ್ಲಾಸ್ಟಿಕ್ ಕಸದ ರಾಶಿಗಳಿಂದ ತುಂಬಿಹೋಗಿದ್ದು, ರಾತ್ರಿ ವೇಳೆ ನಡೆಯುವ ಮದ್ಯಪಾನ ಹಾಗೂ ಅನೈತಿಕ ಚಟುವಟಿಕೆಗಳಿಂದ ಇಲ್ಲಿನ ಪರಿಸರ ದುರ್ಗಂಧ ಬೀರುತ್ತಿದೆ. ಎಲ್ಲಿ ನೋಡಿದರೂ ಒಡೆದ ಗಾಜಿನ ಬಾಟಲಿಗಳು ತುಂಬಿದ್ದು, ಪ್ರವಾಸಿಗರು ಇಲ್ಲಿ ಕಾಲಿಡುವುದಕ್ಕೂ ಹೆದರುತ್ತಿದ್ದಾರೆ. ಸ್ಥಳೀಯರು ಕೂಡಾ ಇಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅನೈತಿಕ ಚಟುವಟಿಕೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪ್ರವಾಸಿಗರಿಗಾಗಿ ನಿರ್ಮಿಸಲಾದ ಕುಡಿಯುವ ನೀರಿನ ಟ್ಯಾಂಕ್‌ಗಳು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿಲ್ಲ. ಒಂದು ಟ್ಯಾಂಕ್ ನಾಮಕಾವಸ್ಥೆಯ ಕಾರ್ಯಾಚರಣೆಯಲ್ಲಿದೆ.
ಕೋಟೆ ಏರುವ ಪ್ರವಾಸಿಗರು ಮೂಲಭೂತ ಸೌಲಭ್ಯವಿಲ್ಲದೆ ಪರದಾಡುತ್ತಿದ್ದಾರೆ. ಕೋಟೆಯ ಸುತ್ತಮುತ್ತ ನೀರು, ಬೆಳಕು, ಸ್ವಚ್ಛತೆ ಸೇರಿದಂತೆ ಯಾವುದೇ ನಿರ್ವಹಣೆ ಸರಿಯಾಗಿಲ್ಲ. ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಕೋಟೆಯ ಪರಂಪರೆ ಮಣ್ಣು ಪಾಲಾಗಲಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಈ ಕೋಟೆಯನ್ನು ಅಭಿವೃದ್ಧಿಪಡಿಸಿದರೆ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಬಹುದು. ಇದರಿಂದ ಪ್ರವಾಸೋದ್ಯಮವೂ ಬೆಳವಣಿಗೆ ಹೊಂದಿ, ಹೊಸ ಉದ್ಯೋಗ ಸೃಷ್ಟಿ ಸಾಧ್ಯತೆಯೂ ಇದೆ. ಆದರೆ, ಇದೆಲ್ಲಾ ಸಾಧ್ಯವಾಗುವುದು ಸಂಬಂಧಪಟ್ಟವರು ಇತ್ತ ಗಮನ ಹರಿಸಿದರೆ ಮಾತ್ರ.!
ಯಾದಗಿರಿ ಜಿಲ್ಲೆಯಲ್ಲಿ ಹಲವು ರಾಜವಂಶಗಳ ಆಡಳಿತಕ್ಕೆ ಸಾಕ್ಷಿಯಾಗಿರುವ ಶತಮಾನಗಳ ಇತಿಹಾಸದ ಯಾದಗಿರಿ ಕೋಟೆ ಇಂದಿಗೂ ಅಭಿವೃದ್ಧಿಯಿಂದ ವಂಚಿತವಾಗಿದೆ. ಜಿಲ್ಲಾಡಳಿತ ಕೋಟೆಯನ್ನು ಅಭಿವೃದ್ಧಿ ಮಾಡುವಲ್ಲಿ ಸಂಪೂರ್ಣ ವಿಫಲವಾಗಿವೆ. ಕೋಟೆಯನ್ನು ಅಭಿವೃದ್ಧಿಪಡಿಸಿ ಪ್ರವಾಸಿಗರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು.
-ಟಿ.ಎನ್.ಭೀಮುನಾಯಕ, ಕರವೇ ಯಾದಗಿರಿ ಜಿಲ್ಲಾಧ್ಯಕ್ಷ
ಜಿಲ್ಲೆಯಲ್ಲಿ ಒಳ್ಳೆಯ ಕೋಟೆ ಇದೆ ಎಂದು ನೋಡಲು ಬಂದರೆ, ಅದು ಇಂದು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಕೋಟೆ ಆವರಣದಲ್ಲಿ ಮದ್ಯದ ಬಾಟಲಿಗಳು, ಗುಟ್ಕಾ ಪ್ಯಾಕೆಟ್‌ಗಳು ಬಿದ್ದು ಕೆಟ್ಟ ವಾತಾವರಣ ನಿರ್ಮಾಣವಾಗಿದೆ. ಜಿಲ್ಲಾಡಳಿತ ಕೂಡಲೇ ಕೋಟೆಯ ಅಭಿವೃದ್ಧಿಗೆ ಮುಂದಾಗಬೇಕು.
-ಅನಿಲಕುಮಾರ, ಪ್ರವಾಸಿಗ







