ಕಲ್ಯಾಣ ಕರ್ನಾಟಕದ ಕವಯಿತ್ರಿಯರ ಪ್ರಾತಿನಿಧಿಕ ಅವಲೋಕನ

ಸಾಹಿತ್ಯ ಮತ್ತು ಕಲೆಗಳಿಗೆ ಹೆಸರಾದ ಕಲ್ಯಾಣ ಕರ್ನಾಟಕ ಪ್ರದೇಶವು ಸುಮಾರು ಒಂದು ಸಾವಿರ ವರ್ಷಗಳ ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮೊದಲ ಸ್ಥಾನವನ್ನು ಅಲಂಕರಿಸಿದವನು ಕವಿರಾಜಮಾರ್ಗಕಾರನಾದ ಕಲಬುರಗಿ ಜಿಲ್ಲೆಯ ಮಳಖೇಡದ ಶ್ರೀವಿಜಯ. ಅನಂತರದ ಪ್ರಮುಖ ಘಟ್ಟವಾದ ವಚನ ಸಾಹಿತ್ಯವೂ ಜೇಡರ ದಾಸಿಮಯ್ಯನಿಂದ ಮೊಳಕೆಯೊಡೆದು ಬಸವಣ್ಣ, ಅಕ್ಕಮಹಾದೇವಿ ಮೊದಲಾದ ಶಿವಶರಣರಿಂದ ವಿಶಾಲ ವೃಕ್ಷವಾಗಿ ಮೈದಳೆದದ್ದು ಇದೇ ಭಾಗದ ಕಲ್ಯಾಣದಲ್ಲಿ. ಆ ನಂತರದ ದಾಸ ಸಾಹಿತ್ಯದ ಯುಗವನ್ನು ಶ್ರೀಮಂತಗೊಳಿಸಿದವರು ಈ ಪ್ರದೇಶದ ರಾಯಚೂರಿನ ಸುವಿಖ್ಯಾತ ಹರಿದಾಸರು. ಇವರೆಲ್ಲರನ್ನು ಕಂಡಂತಹ ಈ ಪ್ರದೇಶವು ಅಂದು ‘ಹಿಂದುಳಿದ ಪ್ರದೇಶ’ ವೆಂದು ಕರೆಯಲ್ಪಡುತ್ತಿತ್ತು. ಇನ್ನೂ ಆ ಹಣೆಪಟ್ಟಿ ಸ್ವಲ್ಪಮಟ್ಟಿಗಾದರೂ ಉಳಿದಿದೆ ಎನ್ನುವ ಅಭಿಪ್ರಾಯ ನನ್ನದು. ಇದಕ್ಕೆ ಕಾರಣವೇನು, ಹೀಗೆ ಉಚ್ಛ್ರಾಯದ ಸ್ಥಿತಿಗೆ ಏರಿ ಪ್ರಜ್ವಲಿಸಿದ ಸಾಹಿತ್ಯಿಕ ಕ್ರಾಂತಿಯು ಕ್ರಮೇಣ ಕಳೆಗುಂದುತ್ತಾ ಹೋದುದಾದರು ಏಕೆ ಎಂಬ ಪ್ರಶ್ನೆಗಳು ಒಮ್ಮೊಮ್ಮೆ ನಮ್ಮನ್ನು ಕಾಡುತ್ತವೆ. ಆದರೆ ಈ ಪ್ರದೇಶದ ಸಾಹಿತಿಗಳು ಅದರಲ್ಲೂ ವಿಶೇಷವಾಗಿ ಮಹಿಳಾ ಕವಯತ್ರಿಯರ ಕುರಿತು ಯಾವುದೇ ಪ್ರಮುಖ ಸಾಹಿತ್ಯ ಗ್ರಂಥಗಳಲ್ಲಿ ಹೆಚ್ಚಿನ ವಿಮರ್ಶೆ, ವಿವರಣೆಯಲ್ಲದಿರುವುದನ್ನು ಕಾಣುತ್ತೇವೆ. ಕರ್ನಾಟಕದ ಇತರ ಭಾಗಗಳಿಂದ ನಿರ್ಲಕ್ಷ್ಯಕ್ಕೊಳಗಾದ ಈ ಪ್ರದೇಶದ ಮಹಿಳಾ ಕವಯಿತ್ರಿಯರನ್ನು ಹಾಗೂ ಅವರ ಕಾವ್ಯಗಳನ್ನು ಕುರಿತು ಅಧ್ಯಯನ ಮಾಡುವ ಅಗತ್ಯವಿದೆ ಎಂದೆನಿಸುತ್ತದೆ. ಆದ್ದರಿಂದ ‘‘ಕಲ್ಯಾಣ ಕರ್ನಾಟಕದ ಮಹಿಳಾ ಕವಯಿತ್ರಿಯರ ಪ್ರಾತಿನಿಧಿಕ ಅವಲೋಕನ’’ ವನ್ನು ಇಲ್ಲಿ ಅಳವಡಿಸಿಕೊಳ್ಳಲಾಗಿದೆ.
ಭಾರತೀಯ ಸಂದರ್ಭದ ಮಹಿಳೆಯರಲ್ಲಿ 12ನೆಯ ಶತಮಾನದ ವಚನಕಾರ್ತಿಯರು ಪ್ರಥಮ ಬಾರಿಗೆ ಅಭಿವ್ಯಕ್ತಿಯ ಮುಕ್ತ ಅವಕಾಶಗಳನ್ನು ಪಡೆದರು. ಆ ನಂತರದಲ್ಲಿ ಆಧುನಿಕ ಕಾಲದ ಮಹಿಳೆಯರೂ ಅಷ್ಟೇ ಮುಕ್ತವಾಗಿ ಅಭಿವ್ಯಕ್ತಿಸಿದ್ದಾರೆ. ನಾಡಿನಲ್ಲಿ ಕನ್ನಡ ಕವಯತ್ರಿಯರ ಸಂಖ್ಯೆ ಗಣನೀಯವಾಗಿ ಬೆಳೆಯುತ್ತಿದೆ. ಸಾಹಿತ್ಯ ಜನಪರವಾಗುತ್ತಿರುವ ಇವತ್ತಿನ ಸಂದರ್ಭದಲ್ಲಿ ಬದುಕು-ಬರಹಗಳ ನಡುವೆ ಸಾವಯವ ಸಂಬಂಧ ಹೊಂದಿರುವ ಅನೇಕ ಮಹಿಳಾ ಕವಯತ್ರಿಯರ ಕುರಿತಾಗಿ ಸಮಗ್ರ ಅಧ್ಯಯನ ನಡೆಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಬರುವ ಮಹಿಳಾ ಕವಯತ್ರಿಯರು ಕೂಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. ಕನ್ನಡ ಸಾಹಿತ್ಯದ ಮುಖ್ಯ ಕಾವ್ಯ ಪ್ರವಾಹಕ್ಕೆ ಮಹಿಳೆಯರ ಧ್ವನಿಯಾಗಿ, ಕಲ್ಯಾಣ ಕರ್ನಾಟಕ ಪ್ರದೇಶದಿಂದ ಕವಯತ್ರಿಯರು ಮುಂಬರುವ ಜನಾಂಗಕ್ಕೆ ಆದರ್ಶಪ್ರಾಯವಾಗಿದ್ದಾರೆ. ಕರ್ನಾಟಕದ ಉತ್ತರದ ತುದಿಗಿರುವ ಬೀದರ ಜಿಲ್ಲೆಯನ್ನೊಳಗೊಂಡ, ಕಲಬುರಗಿ, ರಾಯಚೂರು, ಯಾದಗೀರ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಯನೊಳಗೊಂಡ ಪ್ರದೇಶ ಕಲ್ಯಾಣ ಕರ್ನಾಟಕದ ವ್ಯಾಪ್ತಿಗೆ ಒಳಪಟ್ಟಿದ್ದು, ರಾಜ್ಯದಲ್ಲಿಯೇ ಅತ್ಯಂತ ಕಡಿಮೆ ಭೂ ಪ್ರದೇಶವನ್ನು ಹೊಂದಿದೆ. ಭೌಗೋಳಿಕ ವ್ಯಾಪ್ತಿಯಲ್ಲಿ ಕಿರಿದಾಗಿದ್ದರೂ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಪರಂಪರೆಯಲ್ಲಿ ಹಿರಿದಾದ ಸ್ಥಾನವನ್ನು ಪಡೆದಿದೆ. ಸರ್ವಧರ್ಮ ಸಮನ್ವಯ ಸಂಸ್ಕೃತಿಯ ನೆಲೆಬೀಡಾಗಿದೆ. ಕಾಲಬದಲಾದಂತೆ ಹೊಸ ನಾಗರಿಕತೆಗೆ ಹೆಜ್ಜೆ ಇಡುತ್ತಿರುವ ಈ ಪ್ರದೇಶ ಅನೇಕ ಏರುಪೇರುಗಳನ್ನು ಕಂಡಿದ್ದು, ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ತನ್ನದೇ ಆದ ಸ್ಥಾನಮಾನ ಹೊಂದಿದೆ.
ಕಲ್ಯಾಣ ಕರ್ನಾಟಕ ಆಂಧ್ರಪ್ರದೇಶ, ಮಹಾರಾಷ್ಟ್ರಹಾಗೂ ಕರ್ನಾಟಕ ರಾಜ್ಯಗಳ ಗಡಿ ಸೀಮೆಯಾಗಿದ್ದರಿಂದ ಇಲ್ಲಿ ಮರಾಠಿ, ತೆಲುಗು, ಉರ್ದು, ಹಿಂದಿ, ಸಂಸ್ಕೃತಗಳ ಪ್ರಭಾವಕ್ಕೆ ಒಳಗಾಗಿರುವುದು ಸಹಜವೇ ಆಗಿದೆ. 12ನೆ ಶತಮಾನ ಶರಣ ಸಂಸ್ಕೃತಿಯ ಪ್ರಭಾವ ಹೇರಳವಾಗಿ ಇಲ್ಲಿ ಜನರ ಮೇಲಾಗಿರುವುದನ್ನು ಕಾಣಬಹುದು. ಹೀಗಾಗಿ ಈ ಭಾಗದ ಕನ್ನಡ ಸಂಸ್ಕೃತಿಯು ತನ್ನದೇ ಆದ ವಿಶೇಷತೆಗಳನ್ನು ಹೊಂದಿದೆ.
ಕಲ್ಯಾಣ ಕರ್ನಾಟಕದ ಮಹಿಳಾ ಕವಿಗಳು ಹೊಸಗನ್ನಡ ಅರುಣೋದಯ, ನವೋದಯ, ಪ್ರಗತಿಶೀಲ, ನವ್ಯ ದಲಿತ ಬಂಡಾಯದಂತಹ ಘಟ್ಟದ ಸಂದರ್ಭದಲ್ಲಿ ಅಷ್ಟಾಗಿ ಸ್ಪಂದಿಸದಿದ್ದರೂ ಸತ್ವಯುತವಾದ ಕಾವ್ಯ ಕೃಷಿ ಮಾಡಿದರು. ಕಲ್ಯಾಣ ಕರ್ನಾಟಕ ಸಾಹಿತ್ಯದ ವಿಶ್ಲೇಷಣೆ ಯಾವ ಸಾಹಿತ್ಯ ವಿಮರ್ಶೆಯ ಮಾನದಂಡಕ್ಕೆ ಸಿಲುಕಿಕೊಳ್ಳದೆ ನವೋದಯ, ನವೋದಯೋತ್ತರ, ನವ್ಯೋತ್ತರ, ಬಂಡಾಯೋತ್ತರವಾಗಿ ಬೆಳೆದು ಇದೊಂದು ಉಪೇಕ್ಷಿತ ಸಾಹಿತ್ಯವಾಗಿ ತನ್ನನ್ನು ತಾನು ಗುರುತಿಸಿಕೊಳ್ಳುತ್ತದೆ. ಈ ಪ್ರದೇಶದ ಸಾಹಿತ್ಯದ ಮೇಲೆ ಹಿಂದಿನ ಹತ್ತು ವರ್ಷದ ಪರಿಛಾಯೆ ಇದ್ದೇ ಇದೆ. ಕಲ್ಯಾಣ ಕರ್ನಾಟಕದ ಕವಯತ್ರಿಯರು ತಮ್ಮ ಸ್ವಂತ ಧ್ವನಿಯ ಅನ್ವೇಷಣೆಯ ದೃಷ್ಟಿಯಿಂದ ಇನ್ನು ಪ್ರಯೋಗದ ಹಂತದಲ್ಲಿಯೇ ಉಳಿದುಕೊಂಡಿರುವುದು ಸಾಹಿತ್ಯದಲ್ಲಿ ತಾತ್ವಿಕವಾಗಿ ಅಧ್ಯಯನ ಬಯಸುತ್ತದೆ.
ಇಲ್ಲಿ ಆರಂಭದಲ್ಲಿ ಮಹಿಳಾ ಕಾವ್ಯ ಮುಂಚಲನೆ ಸಾಧ್ಯವಾದದ್ದು ಡಾ. ಶೈಲಜಾ ಉಡಚಣ ಅವರಿಂದ. ಇವರು ಹಿರಿಯ ತಲೆಮಾರಿನ ಕವಯತ್ರಿಯರ ಸಾಲಿನಲ್ಲಿ ನಿಂತು ಮುಂಬರುವ ಕವಯತ್ರಿಯರ ಮೈಚಳಿ ಬಿಡಿಸಿದವರು. ಇಲ್ಲಿ ಹಿರಿಯ ತಲೆಮಾರಿನ ಕವಯತ್ರಿಯರು ಹಾಗೂ ಇತ್ತೀಚಿನ ಕವಯತ್ರಿಯರು ಎಂದು ವಿಂಗಡಿಸಿ ಅವರ ಕಾವ್ಯ ಕುರಿತು ಅಧ್ಯಯನಕ್ಕೆ ಒಳಪಡಿಸಬಹುದಾಗಿದೆ. ಉದಾಹರಣೆಗೆ ಪ್ರೇಮಾ ಸಿರ್ಸೆ, ವಿಜಯಶ್ರೀ ಸಬರದ ಮತ್ತು ಕೆ. ನೀಲಾ, ಮುಕ್ತಾಯಕ್ಕ, ವಿಜಯಕ್ಷ್ಮೀ ಶಾಸ್ತ್ರೀ, ವಿನುತಾ ಅಯ್ಯಂಗಾರ, ಜ್ಯೋತಿ ಬಿ. ಕಿಲಕರ್ಣಿ, ವಜ್ರಾ ಪಾಟೀಲ ಹೀಗೆ ಅನೇಕರಿಂದ ಇನ್ನು ಇಂಥ ಅತೃಪ್ತಿಯನ್ನು ದಾಟುವ ಕ್ರಮ ಯಾವುದು. ಈಗ ಬರೆಯುತ್ತಿರುವ ಹೊಸಬರು ಮತ್ತು ಅವರು ಹಾಗೂ ಕಾವ್ಯದ ಜೊತೆಗೆ ಅವರಿಗಿರುವ ಸಂಬಂಧ ಎಂಥದ್ದು ಎಂಬುದನ್ನು ಪರಿಶೀಲಿಸಬೇಕಾಗಿದೆ. ತನ್ನ ವ್ಯಕ್ತಿತ್ವ ಕಂಡ ಅನುಭವವನ್ನು ಕಾವ್ಯದಲ್ಲಿ ಹೇಗೆ ಕರಗಿಸಬೇಕು ಎಂಬುದನ್ನು ಶೋಧಿಸಲಾಗಿದೆ. ಇದೆಲ್ಲವನ್ನು ನೈತಿಕ ಎಚ್ಚರದಿಂದ ಒಳಗೊಳ್ಳಬೇಕಾದ ದಾರಿಗಳನ್ನು ಹುಡುಕಲಾಗಿದೆ. ನಮ್ಮ ಕಾವ್ಯದ ಒಳ ಜಗತ್ತನ್ನು ರೂಪಿಸಿಕೊಳ್ಳುವುದಕ್ಕಾಗಿ ಈ ಭಾಗದ ಕವಯಿತ್ರಿಯರ ಅಧ್ಯಯನ ಅವಶ್ಯಕವಾಗಿದೆ.
ಮಹಿಳೆ ಎಂದರೆ ಅಸ್ಪಶ್ಯರಿಗಿಂತ ಕೀಳು ಎಂದು ಭಾವಿಸಿ ಶತಮಾನಗಳಿಂದ ಶೋಷಣೆಗೆ ಒಳಪಡಿಸುತ್ತಲೇ ಬಂದಿದ್ದಾರೆ. ಪುರುಷ ಪ್ರಧಾನ ಸಂಸ್ಕೃತಿಯೂ ಮಹಿಳೆಯನ್ನು ತಮ್ಮ ದಾಸಿಯನ್ನಾಗಿ, ಕೇವಲ ಹೆಂಡತಿಯನ್ನಾಗಿ ಸ್ವೀಕರಿಸಿದ್ದಾರೆ. ಭೋಗದ ವಸ್ತುಗಳಾಗಿ ನೋಡಿದ್ದಾರೆ. ಯಾವುದೇ ಕತೆ, ಪುರಾಣ ಏನೇ ಇರಲಿ ಅದರಲ್ಲಿ ಹೆಣ್ಣನ್ನು ಅತ್ಯಂತ ಕೀಳಾಗಿ ಕಾಣಲಾಗಿದೆ. ಇದು ಇಡೀ ಪ್ರಪಂಚದ ಇತಿಹಾಸವಾದರೆ ಇನ್ನು ಕಲ್ಯಾಣ ಕರ್ನಾಟಕ ಪ್ರದೇಶ ಕಟ್ಟ ಕಡೆಯ ಮಹಿಳಾ ಕವಯತ್ರಿಯರ ಸ್ಥಿತಿಗತಿಗಳು ಇನ್ನೂ ದೂರದ ಮಾತು. ಮಹಿಳಾ ಕಾವ್ಯ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬಂದರೂ ಅವನ್ನು ಜಿಲ್ಲಾವಾರು ಪರಿಸರದ ಹಿನ್ನೆಲೆಯಲ್ಲಿ ನೋಡಬೇಕಾಗಿದೆ.
ಹಲವು ರೀತಿಯಿಂದ ಉಪೇಕ್ಷೆಗೊಳಪಟ್ಟ ವಿಫುಲವಾದ ಸಾಹಿತ್ಯ ಕೃಷಿ ಇಲ್ಲಿ ನಡೆದಿದೆ. ಸ್ವಾತಂತ್ರ್ಯೋತ್ತರ ಸಂದರ್ಭದಲ್ಲಿ ಅದರಲ್ಲೂ ಬಂಡಾಯೋತ್ತರ ಸಾಹಿತ್ಯದಲ್ಲಿ ಈ ಪ್ರದೇಶದ ಮಹಿಳಾ ಕಾವ್ಯ ಮೈಕೊಡವಿ ಎದ್ದು ನಿಂತಿದೆ. ಪ್ರಾದೇಶಿಕ ತಾರತಮ್ಯದದಿಂದ ಇಂತಹ ಸಂಗತಿಗಳು ಬೆಳಕಿಗೆ ಬರದೇ ಇರುವುದಕ್ಕೆ ಬಹುಮುಖ್ಯ ಕಾರಣ ಪ್ರಕಾಶನದ ಕೊರತೆಯಾಗಿದೆ. ಇದು ಲಾಭದಾಯಕ ಉದ್ಯಮವಾಗಿ ಈ ಪ್ರದೇಶದಲ್ಲಿ ಕಂಡು ಬರಲಿಲ್ಲ ಎನಿಸುತ್ತದೆ. ‘ಹಿತ್ತಲಗಿಡ ಮದ್ದಲ್ಲ’ ಎನ್ನುವಂತೆ ಇಲ್ಲಿನ ಸಾಹಿತ್ಯಕ್ಕೆ ಸತ್ವವನ್ನು ಈ ಭಾಗದವರೂ ಅಷ್ಟಾಗಿ ಗುರುತಿಸದೆ, ಪ್ರೋತ್ಸಾಹಿಸದೆ ಹೋದರು. ಆದರೂ ಮಹಿಳಾ ಕಾವ್ಯ ಕೃಷಿ ತನ್ನ ಜೀವಂತಿಕೆಯನ್ನು ಕಳೆದುಕೊಂಡಿಲ್ಲ. ಈ ಅಜ್ಞಾತ ಜೀವಂತಿಕೆಯನ್ನು ಜ್ಞಾತಗೊಳಿಸುವುದು ಮುಖ್ಯವಾಗಿ ಆಗಬೇಕಾಗಿದೆ. ಈ ನಿಟ್ಟಿನಲ್ಲಿಯೇ ‘ಕಲ್ಯಾಣ ಕರ್ನಾಟಕದ ಮಹಿಳಾ ಕಾವ್ಯ’ ಕುರಿತು ಗಂಭೀರವಾದ ಅಧ್ಯಯನಕ್ಕೆ ಇಲ್ಲಿ ಅವಕಾಶವಿದೆ.
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ, ಯಾದಗಿರಿ ಐದು ಜಿಲ್ಲೆಗಳು ಸೇರ್ಪಡೆಯಾಗುತ್ತವೆ.ಬಳ್ಳಾರಿ ಜಿಲ್ಲೆಯನ್ನು ಕೇವಲ ಆಡಳಿತಾತ್ಮಕ ದೃಷ್ಟಿಯಿಂದ ಈ ವಿಭಾಗದಲ್ಲಿ ಸೇರಿಸಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ವಿಶಾಲವಾದ ಪರಂಪರೆಯನ್ನು ಹೊಂದಿದ್ದು, ಒಟ್ಟು ಐದು ಜಿಲ್ಲೆಗಳಲ್ಲಿ ಹಂಚಿ ಹೋಗಿರುವ ಕಲ್ಯಾಣ ಕರ್ನಾಟಕ ಪ್ರದೇಶದ ಜನಜೀವನ ಪದ್ಧತಿ, ಸಾಹಿತ್ಯ ಕೃಷಿ, ರೂಢಿ, ಸಂಪ್ರದಾಯ, ರೀತಿ ನೀತಿಗಳನ್ನು ಆಧಾರವಾಗಿಟ್ಟುಕೊಂಡು ಇಲ್ಲಿನ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಪರಂಪರೆ ಹಾಗೂ ಮಹಿಳೆಯರ ಕುರಿತು ಗಮನ ಹರಿಸಲಾಗಿದೆ.
ಶೈಲಜಾ ಉಡಚಣರು ಗದ್ಯಪದ್ಯಗಳೆರಡರಲ್ಲೂ ಸಮಾಸಮ ಕೃತಿಗಳನ್ನು ಹೊರತಂದವರಾಗಿದ್ದರೂ ನಾಡಿನಲ್ಲಿ ಅವರನ್ನು ಪ್ರಮುಖವಾಗಿ ಗುರುತಿಸುವುದು ಕವಯತ್ರಿ ಎಂದೇ. ಶೈಲಜಾ ಅವರ ಕಾವ್ಯ ಪ್ರವಾಹದ ಜೊತೆ ಜೊತೆಗೆ ತಮ್ಮ ಕಾದಂಬರಿ ವಾಹಿನಿ ಹರಿಸುತ್ತಾ ಹೋದ ಈ ಭಾಗದ ಪ್ರಮುಖ ಕಾದಂಬರಿಗಾರ್ತಿ ಗೀತಾ ನಾಗಭೂಷಣರಾಗಿದ್ದಾರೆ. ಅವರು ತಮ್ಮ ಬದಕನ್ನು ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪಡೆದುಕೊಂಡು ಕನ್ನಡ ಲೇಖಕಿಯರಿಗೆ ಅಭಿಮಾನ, ಹೆಮ್ಮೆ ತಂದು ಕೊಟ್ಟವರಾಗಿದ್ದಾರೆ.
ಇಪ್ಪತ್ತನೆ ಶತಮಾನದ ಮಧ್ಯಂತರ ಯುಗದಲ್ಲಿ ಕನ್ನಡ ಕಾವ್ಯ ರಚನೆ, ಉತ್ಕೃಷ್ಟ ಕೃತಿಗಳ ಬಗ್ಗೆ ಚಿಂತನೆ, ನಡೆಸಿದ ಸಾಧನೆ, ಪಡೆದುಕೊಂಡ ಸಿದ್ಧಿ, ಕಾವ್ಯ ಲಕ್ಷಣಗಳನ್ನು ಕುರಿತಾದ ವಿಫುಲವಾದ ಚರ್ಚೆ, ಸ್ತ್ರೀ ಸಂವೇದನಾ ದೃಷ್ಟಿಕೋನ, ಸ್ತ್ರೀತ್ವದ ಜಾಗೃತಿ ಇವೆಲ್ಲವೂ ಕವಯಿತ್ರಿ ಶೈಲಜಾ ಅವರ ಬೆನ್ನಿಗಿದ್ದವು. ಅದರಂತೆ ಸ್ವಾತಂತ್ರ್ಯ ನಂತರದಲ್ಲಿ ಮಹಿಳಾ ಸಾಹಿತ್ಯದ ರಚನೆಗೆ ಬದಲಾಗಿ ಸಾಮಾಜಿಕ ಮೌಲ್ಯಗಳು, ಸ್ತ್ರೀ ಶಿಕ್ಷಣ, ಸ್ವಾತಂತ್ರ್ಯ, ಸಮಾನತೆಯ ಅವಕಾಶಗಳು ಕಾರಣವಾದವು. ಇದರಿಂದಾಗಿ ಯಾವ ಕಾಲದ ಸಾಹಿತ್ಯದಲ್ಲಿಯೂ ಕಾಣಸಿಗದಷ್ಟು ವಸ್ತು ವೈವಿಧ್ಯ, ಪ್ರಯೋಗ ಶೀಲತೆಯನ್ನು ಹೊಸಗನ್ನಡ ಕಾಣುವಂತಾಯಿತು.
ಸಾಮಾಜಿಕ ಅಸಮಾನತೆಯನ್ನು ಕುರಿತು ಪ್ರಶ್ನಿಸುವುದು ‘‘ಸ್ತ್ರೀ ಶಿಕ್ಷಣದ ಅಗತ್ಯತೆಯ ಅರಿವು ಮೂಡಿಸುವುದು ವ್ಯಕ್ತಿ ಸ್ವಾತಂತ್ರ್ಯವನ್ನು ಬಯಸುವುದು ಈ ಮೊದಲಾದ ವೈಯಕ್ತಿಕ ಮತ್ತು ಸಾಮಾಜಿಕ ಕಾಳಜಿಯನ್ನು ಚಿತ್ರಿಸಿರುವುದು ನವೋದಯ ಲೇಖಕಿಯರ ಸಾಹಿತ್ಯಿಕ ಬಲವಾಗಿತ್ತು. ಅವರದು ಸಾಮಾನ್ಯವಾಗಿ ಸುಧಾರಣಾವಾದ ಮತ್ತು ವಾಸ್ತವವಾದದ ನೆಲೆಯಲ್ಲಿ ರಚನೆಗೊಂಡ ಸಾಹಿತ್ಯ. ಮಹಿಳಾ ಸಾಹಿತ್ಯ ಯಾವುದೇ ಕಾಲದ ಸಾಹಿತ್ಯಿಕ, ಸಾಮಾಜಿಕ ಚಳವಳಿಯ ಸಿದ್ಧಾಂತಗಳಿಗೆ ಬದ್ಧವಾಗಿದೆ. ಆಯಾ ಕಾಲದ ತಾತ್ವಿಕ ವಿಚಾರಗಳಿಂದ ಪ್ರಭಾವಿತವಾಗಿದೆ. ಬಂಡಾಯದ ಸಂದರ್ಭವನ್ನು ಹೊರತುಪಡಿಸಿದರೆ ಲೇಖಕಿಯರು ಯಾವುದೇ ಚಳವಳಿ, ಸಂಘಟನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಾಹಿತ್ಯ ರಚನೆಗೆ ತೊಡಗಿದವರಲ್ಲಿ, ಚಳವಳಿಯ ಹೊರಗಿದ್ದುಕೊಂಡೇ ಚಳವಳಿಯ ಆಶಯಗಳನ್ನು ಅಭಿವ್ಯಕ್ತಿ ಮಾಡಿದ್ದಾರೆ. ಸಮಕಾಲೀನ ಸಾಮಾಜಿಕ ವ್ಯವಸ್ಥೆಯನ್ನು ಅವಲೋಕಿಸಿದ್ದಾರೆ, ಸ್ಪಂದಿಸಿದ್ದಾರೆ. ಶೈಲಜಾ ಉಡಚಣರು ಇದಕ್ಕೆ ಹೊರತಲ್ಲ.
ಆಧುನಿಕ ಮಹಿಳಾ ಲೇಖಕಿಯರು ಕಥೆ, ಕಾದಂಬರಿ ಸಾಹಿತ್ಯಗಳಲ್ಲಿ ತೋರುತ್ತಿರುವ ಒಲವು, ಕಾವ್ಯ ಸಾಹಿತ್ಯದಲ್ಲಿ ತೋರದಿರುವುದು ಗಮನಾರ್ಹ. ಯಾವ ಕಾಲದಲ್ಲೂ ಹೆಚ್ಚು ಇಲ್ಲ ಕಡಿಮೆಯೂ ಇಲ್ಲ ಎಂಬಂತೆ ಆ ಒಂದು ಕೈಬೆರಳ ಸಂಖ್ಯೆಯಲ್ಲಿಯೇ ಉಳಿದುಕೊಂಡು ಬಂದಿರುವುದು ವಿಧಿತವಾಗುವುದು, ಹೊಸ ತಲೆಮಾರಿನವರಿಗಿಂತಲೂ ಆರಂಭದ ತಲೆಮಾರಿನವರು ಸಂಖ್ಯೆಯಲ್ಲಿ ಹೆಚ್ಚಾಗಿ ಸಾಹಿತ್ಯ ಸೃಷ್ಟಿಸಿದ್ದಾರೆ.
ಜಯದೇವಿ ತಾಯಿ ಲಿಗಾಡೆ, ಡಾ. ಶೈಲಜಾ ಉಡಚಣ, ಡಾ.ವಿಜಯಶ್ರೀ ಸಬರದ, ಅನೀತಾ ಕೆ. ಗೋತಗಿ, ಸುಮಿನಯಜುರ್ವೇದಿ, ಕೆ.ನೀಲಾ, ಜ್ಯೋತಿ ಬಿ. ಕಿಲಕರ್ಣಿ, ಡಾ.ಪ್ರೇಮಾ ಸಿರ್ಸೆ, ವಜ್ರಾ ಪಾಟೀಲ್, ಕಲಾವತಿ ಎಸ್. ಬಿರಾದಾರ, ಚನ್ನಮ್ಮ ವಲ್ಲೇಪುರೆ, ಮಲ್ಲೇಶ್ವರಿ ಉದಯಗಿರಿ, ಇಂದುಮತಿ ಬಂಡಿ, ಮಲ್ಲಮ್ಮ ಆರ್., ಪಾಟೀಲ್, ಮಂಗಳ, ವಿ. ಕಪರೆ, ಟಿ.ಎಸ್.ರಶ್ಮಿ, ಎಚ್.ಎಸ್.ಮುಕ್ತಾಯಕ್ಕ, ಲಕ್ಷ್ಮೀದೇವಿ ಶಾಸ್ತ್ರೀ, ಬಸಮ್ಮಾ ಹಿರೇಮಠ, ರಾಜಶ್ರೀ ಕಿಶೋರ, ಪದ್ಮ ಬಸವರಾಜ, ಸುಮಂಗಲಾ ಡಿ. ಬಾದರ್ಲಿ, ಮಧುಪಾಂಡೆ, ವಿಮಲಾ ಇನಾಮದಾರ, ಶಾಂತಾದೇವಿ ಹಿರೇಮಠ, ವಿಜಯಲಕ್ಷ್ಮೀ ಎಂ.ಕೆ., ರತ್ನಾಬಾಯಿ ಟಿ. ಪವಾರ, ಗೀತಾ ವೇಣುಗೋಪಾಲ ಜೋಶಿ, ಜಯಲಕ್ಷ್ಮೀ, ಶ್ವೇತಾ ರಾಣಿ ದೇಶಮುಖ, ಪ್ರಮೀಳಾ ಜಾನಪ್ಪಗೌಡ, ಭಾಗ್ಯಲತಾ, ಶಿಕಾಂತಾ ಎಸ್., ಸರಸ್ವತಿ ಬಿ. ಪಾಟೀಲ, ಶಶಿಕಲಾ ಸ್ವಾಮಿ, ಶಾಂತಾ ಪಸ್ತಾಪೂರ, ವಿಮಲಾ ಆರ್., ದಯಾಮಣಿ ರಾಜಪ್ಪ, ರೇವತಿ ಸಿದ್ಧರಾಮ ಉಪ್ಪಿನ, ಸುಧಾ ಉಮರಗಿರ, ಜಯದೇವಿ ಗಾಯಕವಾಡ, ಡಾ. ಪ್ರೇಮಾ ಅಪಚಂದ, ಸೀತಾ ಮಲ್ಲಬಾದಿ, ಸಮಾಧಾನ ಬಲ್ಲೂರ, ಸರಸಿಜಾ ಹಿರೇಮಠ, ಡಾ. ಪ್ರೇಮಾ ಹೂಗಾರ, ಸತ್ಯಪ್ರಭಾ ಗರ್ಜೆ, ಸವಿತಾ ಸಿರಗೋಜಿ, ನೀಲಾಂಬಿಕಾ ಪೋಲಿಸ ಪಾಟೀಲ ಮೊದಲಾದವರು. ಇವರಲ್ಲಿ ಆಶುಕವಯಿತ್ರಿಯರು, ಧಾರ್ಮಿಕ ಮನೋಭಾವದವರು ಇದ್ದಾರೆ. ಇವರ ಕಾವ್ಯಕ್ಕೆ ಮೂಲ ಆಕರ ಅವರಿಗೆ ದೊರೆತ ದೈವೀ ಪ್ರೇರಣೆಯೇ ಆಗಿದೆ. ಹೆಚ್ಚಾಗಿ ಕನ್ನಡದ ಮಟ್ಟಗಳಲ್ಲಿಯೇ ಕಾವ್ಯಗಳು ರಚನೆಯಾಗಿವೆ.
ಇತ್ತೀಚಿನ ಮಹಿಳಾ ಕಾವ್ಯವಂತೂ ಸಮಕಾಲೀನ ಸಾಮಾಜಿಕ ಕಾಳಜಿಯೊಂದಿಗೆ ಕಾವಾತ್ಮಕ ಕಾಳಜಿಯನ್ನು ಪ್ರಮುಖವಾಗಿ ಹೊಂದಿದೆ. ಹೊಸಗನ್ನಡ ಸಾಹಿತ್ಯದಲ್ಲಿ 21ನೆ ಶತಮಾನದ ಕೊನೆಯ ಘಟ್ಟದಲ್ಲಿ ಮಹಿಳಾ ಕಾವ್ಯ ತನ್ನ ದಿಟ್ಟ ಹೆಜ್ಜೆಗಳನ್ನು ಇಡುತ್ತಿರುವುದನ್ನು ಕಾಣುತ್ತೇವೆ.
ಕರ್ನಾಟಕದಲ್ಲಿಯೇ ಕಲ್ಯಾಣ ಕರ್ನಾಟಕವು ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಶ್ರೀಮಂತವಾದ ಪ್ರದೇಶವಾಗಿದೆ. ಇದಕ್ಕೆ ಮೊಗಲಾರು ಪ್ರಾಂತವೆಂದು ಹೆಸರು. ನಿಜಾಮರು ಆಳ್ವಿಕೆ ಮಾಡಿದ್ದರಿಂದ ಈ ರೀತಿ ಕರೆಯುತ್ತಾರೆ. ಅಂತೆಯೇ ಹೈದರಾಬಾದ್ ಕರ್ನಾಟಕವೆಂಬ ನಾಮಧೇಯವು ಇತ್ತು. ಕರ್ನಾಟಕದಲ್ಲಿ ಮದ್ರಾಸ ಪ್ರಾಂತ್ಯ, ಮುಂಬೈ ಪ್ರಾಂತ್ಯ, ಮೈಸೂರು ಪ್ರಾಂತ್ಯದಂತೆ ಹೈದರಾಬಾದ್ ಪ್ರಾಂತ್ಯವು ಸಹ ಪ್ರಮುಖವಾದುದು. 1956ರ ನವೆಂಬರ 1ರಂದು ಭಾಷಾವಾರು ಪ್ರಾಂತ್ಯ ರಚನೆಯಾಗಿ ಸಮಗ್ರ ಕರ್ನಾಟಕದ ಹಿತದೃಷ್ಟಿಯಿಂದ ‘ಕರ್ನಾಟಕ’ ವೆಂದು ನಾಮಕರಣ ಮಾಡಲಾಯಿತು. ಹೀಗೆ ಮಾಡಿದರೂ ಮತ್ತೆ ಮೈಸೂರು ಕರ್ನಾಟಕ, ಮುಂಬೈ ಕರ್ನಾಟಕ, ಮದ್ರಾಸ ಕರ್ನಾಟಕ, ಮತ್ತು ಹೈದರಾಬಾದ್ ಕರ್ನಾಟಕವೆಂಬ ಹೆಸರುಗಳು ಹಾಗೇ ಉಳಿದುಕೊಂಡು ಬಂದಿವೆ. ಇದಕ್ಕೆ ತನ್ನದೇ ಆದ ಪ್ರಾಚೀನ ವೈಶಿಷ್ಟ್ಯ ಇರುವುದರಿಂದ ಇಂತಹ ಮೂಲಗುಣ ಹಾಗೇ ಉಳಿದುಕೊಂಡು ಬಂದಿದೆ. ಇತ್ತೀಚಿನ ದಿನಗಳಲ್ಲಿ ಇದಕ್ಕೆ ‘ಕಲ್ಯಾಣ ಕರ್ನಾಟಕ’ ವೆಂತಲೂ, ಈಶಾನ್ಯ ಕರ್ನಾಟಕವೆಂತಲೂ ಕರೆಯುತ್ತಾರೆ. ಆದರೆ ಇಂದು ಕಲ್ಯಾಣ ಕರ್ನಾಟಕವೆಂದೇ ಕರೆಯುವುದು ಹೆಚ್ಚು ರೂಢಿಗತವಾಗಿದೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎಂದು ಎರಡು ರೀತಿ ಭಾಗ ಮಾಡಿದಾಗಲೂ ಉತ್ತರ ಕರ್ನಾಟಕದಲ್ಲಿ ‘ಕಲ್ಯಾಣ ಕರ್ನಾಟಕ’ದ ಪ್ರತ್ಯೇಕತೆಯನ್ನು ಗಮನಿಸುತ್ತೇವೆ.







