ಅಲೆಮಾರಿ ಸಮುದಾಯಗಳಿಗೆ ಬೇಕಿದೆ ಮೂಲಭೂತ ಸೌಲಭ್ಯ

ಯಾದಗಿರಿ : ಹೊಟ್ಟೆಪಾಡಿಗಾಗಿ ಉದ್ಯೋಗ ಹುಡುಕಿ ನಗರಗಳಿಗೆ ವಲಸೆ ಬಂದ ಅಲೆಮಾರಿ ಸಮುದಾಯಗಳು ಇಂದು ಸರಕಾರದ ನಿರ್ಲಕ್ಷ್ಯದ ಪರಿಣಾಮ ಇನ್ನೂ ಅವರ ಬದುಕು ಗುಡಿಸಲುಗಳಲ್ಲೆ ಸೀಮಿತವಾಗಿದೆ.
ವರ್ಷಗಳ ಕಾಲ ನಗರಗಳಲ್ಲಿ ನೆಲೆಸಿದರೂ ಇವರಿಗೆ ಮನೆ, ನಿವೇಶನ ಸೇರಿದಂತೆ ಯಾವುದೇ ಮೂಲಭೂತ ಸೌಲಭ್ಯಗಳು ಇನ್ನೂ ದೊರಕಿಲ್ಲ. ಎಸ್‌ಸಿ ಸಮುದಾಯದೊಳಗಿನ ಅಲೆಮಾರಿ ಬುಡಕಟ್ಟು ಜನಾಂಗದ ಅತ್ಯಂತ ಹಿಂದುಳಿದ ಸಮುದಾಯಗಳಾಗಿ ಗುರುತಿಸಲ್ಪಟ್ಟಿರುವ ಈ ಒಂದು ಬುಡಗಜಂಗಮ, ಶೀಳ್ಯಕ್ಯಾತ, ಸಿಂದೋಳಿ, ಚನ್ನದಾಸರ ಸೇರಿದಂತೆ ಒಟ್ಟು 49 ಜಾತಿಗಳು ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ದಶಕಗಳಿಂದ ವಂಚಿತವಾಗಿವೆ.
ಯಾದಗಿರಿ ನಗರದ ವಿವಿಧ ಪ್ರದೇಶಗಳಲ್ಲಿ ಅಲೆಮಾರಿ ಸಮುದಾಯದ ಕುಟುಂಬಗಳು ಸಣ್ಣ ಮಕ್ಕಳೊಂದಿಗೆ ಗುಡಿಸಿಲುಗಳಲ್ಲಿ ವಾಸಿಸುತ್ತಿದ್ದು, ಅವರ ಬದುಕು ಕಷ್ಟಕರವಾಗಿದೆ. ರಾತ್ರಿ ವೇಳೆ ಹುಳು, ಉಟ್ರಿ ಹಾಗೂ ವಿಷಜಂತುಗಳ ಭಯ ಎದುರಾಗುತ್ತಿದ್ದು, ಮಳೆಗಾಲದಲ್ಲಿ ಗುಡಿಸಿಲುಗಳಿಗೆ ನೀರು ನುಗ್ಗುವ ಕಾರಣ ವಾಸಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ. ಚಳಿಗಾಲದಲ್ಲಿ ತೀವ್ರ ತಾಪಮಾನದಿಂದ ಮಕ್ಕಳು ಮತ್ತು ವೃದ್ಧರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಹಲವು ವರ್ಷಗಳಾದರೂ ಇವರಿಗೆ ಸರಕಾರದಿಂದ ಶಾಶ್ವತ ಸೂರಿನ ವ್ಯವಸ್ಥೆ ಕಲ್ಪಿಸಲಾಗಿಲ್ಲ. ಈ ಹಿನ್ನೆಲೆಯಲ್ಲಿ ದಿನನಿತ್ಯದ ಬದುಕನ್ನು ಗುಡಿಸಿಲುಗಳಲ್ಲಿ ನಡೆಸುವುದು ಕಷ್ಟಕರವಾಗಿದೆ ಎಂದು ಅಲೆಮಾರಿ ಸಮುದಾಯದ ಮಹಿಳೆಯರು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.
ಬುಡಗಜಂಗಮ ಹಾಗೂ ಶೀಳ್ಯಕ್ಯಾತ ಸಮುದಾಯಗಳು ಮೀನಿನ ಬೇಟೆ, ತೊಗಲು ಗೊಂಬೆಯಾಟ, ಕೌದಿ ಒಲೆಯುವುದು ಮೊದಲಾದ ಪರಂಪರಾಗತ ಕಾಯಕಗಳನ್ನೇ ಅವಲಂಬಿಸಿಕೊಂಡಿವೆ. ಸಿಂದೋಳಿ ಸಮುದಾಯದವರು ಮೈಮೇಲೆ ಚಾಟಿ ಒಡೆದುಕೊಳ್ಳುವ ಭಿಕ್ಷಾಟನೆಯ ಮೂಲಕ ಬದುಕು ಸಾಗಿಸುತ್ತಿದ್ದರೆ, ಚನ್ನದಾಸರ ಸಮುದಾಯದವರು ಮನೆಮನೆ ತಂಬೂರಿ ವಾದಿಸಿ ಭಿಕ್ಷೆ ಬೇಡುವುದೇ ಇವರ ಕಾಯಕವಾಗಿದೆ.
ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಭಿಕ್ಷೆ ಬೇಡುವುದನ್ನೇ ಕಾಯಕ ಮಾಡಿಕೊಂಡಿರುವ ಅಲೆಮಾರಿಗಳಿಗೆ ದುಡಿದು ತಿನ್ನುವ ಸ್ಥಿರ ಉದ್ಯೋಗವೇ ಇಲ್ಲ. ಕೆಲವರು ಪ್ಲಾಸ್ಟಿಕ್ ಹಾಗೂ ಚಿಂದಿ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದರೆ, ಇನ್ನೂ ಕೆಲವರು ಭಿಕ್ಷೆಯನ್ನೇ ಅವಲಂಬಿಸಿದ್ದಾರೆ. ಚಿಂದಿ ಬಟ್ಟೆಗಳಿಂದ ನಿರ್ಮಿಸಿದ ಗುಡಿಸಲಲ್ಲಿ ಮಕ್ಕಳೊಂದಿಗೆ ಜೀವನ ನಡೆಸುತ್ತಿರುವ ಇವರ ಬಗ್ಗೆ ಸರಕಾರ ಗಮನಹರಿಸಬೇಕಿದೆ. ಈ ಸಮುದಾಯಗಳಿಗೆ ಸ್ವಂತ ನೆಲ, ಮನೆ, ಹೊಲ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವಲ್ಲಿ ಸರಕಾರದ ಮುಂದಾಗಬೇಕು.
ಹೊಸಹಳ್ಳಿ ತಾಂಡದ ಹತ್ತಿರ ಅಲೆಮಾರಿ ಸಮುದಾಯಕ್ಕೆ 2016ರಲ್ಲಿ ಅಂದಿನ ಜಿಲ್ಲಾಧಿಕಾರಿ ಕಾಳಿಜಿ ವಹಿಸಿ 124 ಮನೆಗಳನ್ನು ಮಂಜೂರು ಮಾಡಿದ್ದಾರೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಮನೆಗಳು ಇಂದಿಗೂ ಅರ್ಧದಲ್ಲೇ ನಿಂತಿವೆ. ಕಬ್ಬಿಣದ ರಾಡುಗಳು ಕೊಳೆಯುತ್ತಿದ್ದು, ಗೋಡೆಗಳು ಶಿಥಿಲವಾಗಿವೆ. ಅನಿವಾರ್ಯವಾಗಿ ಪಕ್ಕದಲ್ಲಿ ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ರಾತ್ರಿ ಆಯ್ತು ಅಂದ್ರೆ ನಿದ್ರೆಗಿಂತ ಭಯ ಜಾಸ್ತಿ ಸರ್, ಮಳೆ ಬಂದರೆ ಗುಡಿಸಲಲ್ಲಿ ನೀರು, ಹಾವು ಚೇಳು ಬರುತ್ತವೆ. ಏನ್ ಮಾಡೋದು ನಮಗೆ ಸರಕಾರ ನೆರವು ನೀಡಬೇಕು. ಚುನಾವಣಾ ಸಂದರ್ಭದಲ್ಲಿ ಬರುತ್ತಾರೆ. ಮುಗಿದ ಮೇಲೆ ಯಾರು ಈಕಡೆಗೆ ಬರಲ್ಲ, ನಮ್ಮ ಕಷ್ಟ ಕೇಳೊರು ಯಾರು.?
-ಭೀಮವ್ವ, ಅಲೆಮಾರಿ ಸಮುದಾಯದ ಮಹಿಳೆ
ನಮ್ಮ ಸಮುದಾಯ 2006ರಿಂದ 2016ರವರೆಗೆ ನಿರಂತರವಾಗಿ ಹೋರಾಟ ನಡೆಸಿದೆ. ಅದರ ಫಲವಾಗಿ ಅಂದಿನ ಜಿಲ್ಲಾಧಿಕಾರಿ 124 ಮನೆಗಳನ್ನು ಮಂಜೂರು ಮಾಡಿದರು. ಆದರೆ ಆಡಳಿತಾತ್ಮಕ ನಿರ್ಲಕ್ಷ್ಯದಿಂದ ಅವುಗಳ ನಿರ್ಮಾಣ ಅರ್ಧದಲ್ಲೇ ನಿಂತಿದೆ. ಪರಿಣಾಮ ಇಂದಿಗೂ ಬಹುತೇಕ ಕುಟುಂಬಗಳು ಗುಡಿಸಲುಗಳಲ್ಲಿ ವಾಸಿಸುತ್ತಿವೆ. ಸರಕಾರದ ವಸತಿ ಹಾಗೂ ಮೂಲಭೂತ ಸೌಲಭ್ಯಗಳಿಂದ ನಮ್ಮ ಸಮುದಾಯ ವಂಚಿತವಾಗಿದೆ. ಸೌಲಭ್ಯಗಳಿಂದ ಸಂಪೂರ್ಣವಾಗಿ ವಂಚಿತರಾಗಿರುವ ನಮ್ಮತ್ತ ಸರಕಾರ ಗಮನ ಹರಿಸಬೇಕು
-ಆಂಜನೇಯ, ಅಲೆಮಾರಿ ಬುಡಗಜಂಗಮ ಹಕ್ಕುಗಳ ಹೋರಾಟ ಸಮಿತಿ ರಾಜ್ಯಾಧ್ಯಕ್ಷ







