ಇಂಡಿ: ಹದಗೆಟ್ಟ ತಾಲೂಕು ಆಸ್ಪತ್ರೆ ರಸ್ತೆ

ಇಂಡಿ: ನಗರದ ಸಾರ್ವಜನಿಕ ತಾಲೂಕು ಆಸ್ಪತ್ರೆಗೆ ಹೋಗುವ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ಇಲ್ಲಿ ಚಿಕಿತ್ಸೆ ಪಡೆದುಕೊಳ್ಳುವ ಸುಮಾರು ಜನ ಬಡವರು, ಕೂಲಿಕಾರ್ಮಿಕರು, ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರಿದ್ದಾರೆ. ಎಲ್ಲ ತರಹದ ಚಿಕಿತ್ಸೆ ಲಭ್ಯ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಚಿಕಿತ್ಸೆ ಪಡೆಯಲು ಬರುತ್ತಾರೆ. ಆದರೆ ವಿಪರ್ಯಾಸ ಏನೆಂದರೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ರಸ್ತೆ ಅಭಿವೃದ್ಧಿ ಕಡೆಗೆ ಗಮನ ಹರಿಸುತ್ತಿಲ್ಲ. ಗರ್ಭಿಣಿಯರು, ವೃದ್ಧ ರೋಗಿಗಳು ಕಷ್ಟ ಯಾರ ಬಳಿ ಹೇಳಿಕೊಳ್ಳಬೇಕು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಡಿಸೆಂಬರ್‌ನಲ್ಲಿ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಪಲ್ಸ್ ಪೋಲಿಯೋ ಲಸಿಕೆ ಉದ್ಘಾಟನೆ ಕಾರ್ಯಕ್ರಮದಲ್ಲಿ ರಸ್ತೆ ನಿರ್ಮಿಸಲು ಶಾಸಕ ಯಶವಂತರಾಯಗೌಡ ಪಾಟೀಲ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಆದರೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳೂ ಮುತುವರ್ಜಿ ವಹಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನರಿಗೆ ಚಿಕಿತ್ಸೆ ನೀಡಬೇಕಾದ ಆಸ್ಪತ್ರೆ ಎದುರೇ ಇರುವ ಹಾಳಾದ ರಸ್ತೆಯಿಂದ ಏಳುವ ಧೂಳಿನಿಂದಾಗಿ ಆರೋಗ್ಯ ಸಂಬಂಧಿಸಿದ ಸಮಸ್ಯೆಗಳು ಉಂಟಾಗುತ್ತಿವೆ ಎಂದು ರೋಗಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಈಗಲಾದರೂ ಜನರ ಕಷ್ಟ ಅರಿತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ರಸ್ತೆ ಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದ್ದು, ಸರ್ಕಾರ ಸ್ಪಂದಿಸುತ್ತದೆಯಾ ಎಂದು ಕಾಯ್ದುನೋಡಬೇಕಿದೆ.
ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ಹಾಗೆ ಶಾಸಕರು ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದಿದ್ದಾರೆ. ಆದಷ್ಟು ಬೇಗ ರಸ್ತೆ ನಿರ್ಮಾಣ ಕಾರ್ಯ ಲೋಕೋಪಯೋಗಿ ಇಲಾಖೆ ಮಾಡಲಿದೆ.
-ಡಾ.ರಾಜೇಶ್ ಕೋಳೆಕಾರ, ತಾಲೂಕು ಆರೋಗ್ಯಾಧಿಕಾರಿ







