ಚಿತ್ರಸಂತೆಯಲ್ಲಿ ಕಲಾ ಆಸಕ್ತರಿಗೆ ರಸದೌತಣ..!

ಬೆಂಗಳೂರು : ರಾಜಧಾನಿ ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ 23ನೇ ಚಿತ್ರಸಂತೆಯಲ್ಲಿ ಈ ಬಾರಿ ನಿರೀಕ್ಷೆಗೂ ಮೀರಿ ಕಲಾ ಆಸಕ್ತರು ಜಮಾವಣೆಗೊಂಡಿದ್ದು ಮಾತ್ರವಲ್ಲದೇ, ಇಡೀ ದಿನ ಬಣ್ಣದ ಲೋಕವೇ ಅಲ್ಲಿ ಮೈದಳೆದಿತ್ತು.
ಈ ಬಾರಿ ಪೂರ್ತಿಯಾಗಿ ‘ಪರಿಸರ ಸಂರಕ್ಷಣೆಗೆ ಒತ್ತು ನೀಡಿ’ ಎಂದು ಅರ್ಪಿಸಲಾಗಿದ್ದ ಚಿತ್ರಸಂತೆಗೆ ನಿರೀಕ್ಷೆ ಮೀರಿ ನಾನಾ ಕಡೆಯಿಂದ ಜನರು ಆಗಮಿಸಿದರು. ಎಲ್ಲಿ ನೋಡಿದರಲ್ಲಿ ನಾನಾ ಬಗೆಯ ಕಲಾಕೃತಿಗಳು, ಕುತೂಹಲದಿಂದ ವೀಕ್ಷಿಸಿದ ಕಲಾಸಕ್ತರ ದೃಶ್ಯ ಕಂಡಿತು. ಅದರಲ್ಲೂ, 22 ರಾಜ್ಯ ಹಾಗೂ 4 ಕೇಂದ್ರಾಡಳಿತ ಪ್ರದೇಶದ ಸುಮಾರು 1,532 ಕಲಾವಿದರು ಒಂದು ಕಡೆ ಜಮಾವಣೆಗೊಂಡು ಕಲಾ ಆಸಕ್ತರ ಸಂತೋಷಕ್ಕೆ ಕಾರಣವಾದರು.
ರವಿವಾರ ಬೆಳಗ್ಗೆ ನಸುಕಿನ ವೇಳೆಗೆ ಕಲಾವಿದರು ತಮಗೆ ಮಂಜೂರಾಗಿದ್ದ ಮಳಿಗೆಗಳಲ್ಲಿ ತಮ್ಮ ಕಲಾಕೃತಿಗಳನ್ನು ಜೋಡಿಸಲು ಆರಂಭಿಸಿದರು. ಬೆಳಗ್ಗೆ 8ರ ವೇಳೆಗೆ ಸಂತೆ ಕಳೆಗಟ್ಟಿತ್ತು. ಚಿತ್ರಸಂತೆಗೆ ಈ ಬಾರಿ 3 ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ಕೊಟ್ಟಿದ್ದರು. 3 ಕೋಟಿ ರೂ.ಗೂ ಅಧಿಕ ವಹಿವಾಟು ನಡೆದಿದೆ ಎನ್ನಲಾಗಿದೆ.
ಹಿರಿಯ ಕಲಾವಿದರು ಹಾಗೂ ಅಂಗವಿಕಲರಿಗೆ ಆಯ್ದ ಸ್ಥಳದಲ್ಲಿ ಅಗತ್ಯ ಸೌಲಭ್ಯ ಒದಗಿಸಿಕೊಡಲಾಗಿತ್ತು. ಪರಿಷತ್‌ನ ಆವರಣದ ಸಂಚಾರಿ ಎಟಿಎಂ ಸಹ ಕಂಡುಬಂತು. ಚಿತ್ರಸಂತೆಯಲ್ಲಿ 100 ರಿಂದ ಲಕ್ಷಾಂತರ ರೂ.ಮೌಲ್ಯದ ಕಲಾಕೃತಿಗಳನ್ನು ಕಲಾವಿದರಿಂದ ನೇರವಾಗಿ ಕಲಾಕೃತಿಗಳನ್ನು ಖರೀದಿಸುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂತು.
ಮೈಸೂರು ಸಾಂಪ್ರ ದಾಯಿಕ ಶೈಲಿ ರಾಜಸ್ಥಾನಿ ಶೈಲಿ ಮಧುಬನಿಯ ಶೈಲಿ, ತೈಲ ಮತ್ತು ಜಲವರ್ಣದ ಕಲಾಕೃತಿಗಳು ಚಿತ್ರ ಸಂತೆಯ ವಿಶೇ ಷವಾಗಿತ್ತು. ಇವಲ್ಲದೆ ಅಕ್ರಲಿಕ್ ಕೊಲಾಜ್ ಲಿಥೋಗ್ರಾಫ್ ಮೊದಲಾದ ಪ್ರಕಾರಗಳ ಕಲಾಕೃತಿಗಳು ನೋಡುಗರ ಗಮನ ಸೆಳೆಯಿತು.
ಗಾಜಿನ ಮೇಲೆ ಬಿಡಿಸಿರುವ ಚಿತ್ರಗಳು, ಕೊಲಾಜ್, ಲಿಥೋಗ್ರಾಫ್, ಡೂಡಲ್, ಎಂಬೋಸಿಂಗ್, ವಿಡಿಯೋ ಕಲೆ, ಗ್ರಾಫಿಕ್ ಕಲೆ, ಶಿಲ್ಪ ಕಲೆ, ಇನ್ ಸ್ಟಾಲೇಷನ್ (ಪ್ರತಿಧಿಷ್ಠಾಧಿಪನಾ ಕಲೆ), ಪಧಿರ್ಫಾರ್ಮೆನ್ಸ್ ಕಲೆ, ಮಿಶ್ರ ಮಾಧ್ಯಮ, ಫೋಟೊಗ್ರಫಿ...! ಹೀಗೆ ಹಲವು ಬಗೆಯ ಕಲಾ ಪ್ರಕಾರದ ಚಿತ್ರಗಳು ಒಂದೇ ಸೂರಿನಡಿ ನೋಡುಗರ ಗಮನ ಸೆಳೆದವು.
ಇತ್ತ ಚಿತ್ರಸಂತೆಯಲ್ಲಿ ವ್ಯಂಗ್ಯ ಚಿತ್ರ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಕುಂಚ ಅಥವಾ ಪೆನ್ಸಿಲ್‌ಗಳಿಂದ ಕಲಾರಸಿಕರ ಭಾವಚಿತ್ರಗಳನ್ನು ಸ್ಥಳದಲ್ಲಿಯೇ ರಚಿಸಿಕೊಡುವ ಕಲಾವಿದರು ದಂಡೇ ಇತ್ತು.
ಯಾವುದೇ ಅಹಿತಕರ ಘಟನೆ, ಅವ್ಯವಸ್ಥೆಗಳು ನಡೆಯದಂತೆ ಅತ್ಯಂತ ಸುಸಜ್ಜಿ
ತವಾಗಿ ಚಿತ್ರಸಂತೆ ಆಯೋಜನೆ ಮಾಡಲಾಗಿತ್ತು. ಫುಡ್‌ಕೋರ್ಟ್ ಪ್ರತ್ಯೇಕವಾಗಿತ್ತು. ಬಿಗಿ ಪೊಲೀಸ್ ಸಹ ಕಂಡುಬಂದಿದ್ದು ಮಾತ್ರವಲ್ಲದೆ, ಶಂಕೆ ಮೇರೆಗೆ ಹಲವರ ಬ್ಯಾಗ್‌ಗಳನ್ನು ಪರಿಶೀಲನೆ ಮಾಡಲಾಯಿತು.
ಕುಮಾರಕೃಪಾ ರಸ್ತೆಯಲ್ಲಿ ರವಿವಾರ ಚಿತ್ರಸಂತೆ ನಡೆಯುವ ಹಿನ್ನೆಲೆಯಲ್ಲಿ ವಿಂಡ್ಸರ್ ಮ್ಯಾನರ್ ವೃತ್ತದಿಂದ ಶಿವಾನಂದ ವೃತ್ತದವರೆಗೆ ಎರಡೂ ಬದಿಯಲ್ಲೂ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಆದರೆ, ರೈಲ್ವೆ ಪ್ಯಾರಲಲ್ ರಸ್ತೆ, ಕ್ರೆಸೆಂಟ್ ರಸ್ತೆಯಲ್ಲಿ, ಗುರುರಾಜ ಕಲ್ಯಾಣ ಮಂಟಪದಿಂದ ಹೋಟೆಲ್ ಜನಾರ್ದನವರೆಗೆ ರಸ್ತೆಯ ಪಶ್ಚಿಮ ಭಾಗಕ್ಕೆ ನಿಲುಗಡೆಗೆ ಅವಕಾಶ ನೀಡಲಾಗಿತ್ತು.
ವಿದ್ಯಾರ್ಥಿ ವೇತನ
ಕರ್ನಾಟಕ ಚಿತ್ರಕಲಾ ಪರಿಷತ್ ಪ್ರತೀ ವರ್ಷ ಐವರು ಖ್ಯಾತ ಸಾಧಕ ಕಲಾವಿದರಿಗೆ ಚಿತ್ರಕಲಾ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸುತ್ತಿತ್ತು. ಆದರೆ, ಈ ವರ್ಷದಿಂದ ಆ ಹಣದಿಂದ ಚಿತ್ರಕಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪ್ರಕಟಿಸಿದೆ.
ಬಗೆಬಗೆಯ ಕಲಾಕೃತಿಗಳು
ಮೈಸೂರು ಮತ್ತು ತಂಜಾವೂರು ಶೈಲಿಯ ಪರಂಪರೆಯ ಚಿತ್ರಕಲೆ, ರಾಜಸ್ಥಾನಿ, ಮಧುಬನಿ ಶೈಲಿಯ ಕಲಾಕೃತಿಗಳು ಹಾಗೂ ಜಲವರ್ಣ, ತೈಲವರ್ಣ, ಅಕ್ರಿಲಿಕ್, ಪೆನ್ಸಿಲ್, ಮಷಿ ರೇಖಾಚಿತ್ರಗಳು, ಗ್ರಾಫಿಕ್ ಮಾಧ್ಯಮ ಕೃತಿಗಳು ಸೇರಿದಂತೆ ವಿವಿಧ ಪರಂಪರೆಯ ಆಧುನಿಕ ಮತ್ತು ಸಮಕಾಲೀನ ಶೈಲಿಯ ಕಲಾಕೃತಿಗಳು ಚಿತ್ರಸಂತೆಯಲ್ಲಿ ವೀಕ್ಷಣೆ ಮಾತ್ರವಲ್ಲದೆ, ಭಾರೀ ಪ್ರಮಾಣದಲ್ಲಿ ಮಾರಾಟವಾದವು.
ಫೀಡರ್ ಬಸ್ ವ್ಯವಸ್ಥೆ
ಚಿತ್ರಸಂತೆಗೆ ಆಗಮಿಸುವವರಿಗೆ ಅನುಕೂಲವಾಗುವಂತೆ ಮೆಜೆಸ್ಟಿಕ್ ಮೆಟ್ರೊ ನಿಲ್ದಾಣ, ಮಂತ್ರಿ ಮಾಲ್ ಮೆಟ್ರೊ ನಿಲ್ದಾಣ, ವಿಧಾನಸೌದ ಮೆಟ್ರೊ ನಿಲ್ದಾಣಗಳಿಂದ ಶಿವಾನಂದ ವೃತ್ತದವರೆಗೆ ಫೀಡರ್ ಬಸ್ ವ್ಯವಸ್ಥೆ ಮಾಡಲಾಗಿತ್ತು. ಪ್ರತೀ 10 ನಿಮಿಷಕ್ಕೊಂದರಂತೆ ಬಿಎಂಟಿಸಿ ಬಸ್‌ಗಳು ಲಭ್ಯ ಇದ್ದವು. ಸಾರ್ವಜನಿಕರಿಗೆ ಆಯ್ದ ಸ್ಥಳಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಆಹಾರ ಮಳಿಗೆಗಳ ವ್ಯವಸ್ಥೆ, ಪ್ರಥಮ ಚಿಕಿತ್ಸೆ ಮತ್ತು ಆ್ಯಂಬುಲೆನ್ಸ್ ಸೌಲಭ್ಯ, ಭದ್ರತಾ ಉದ್ದೇಶಕ್ಕಾಗಿ ಸಿಸಿಟಿವಿ ಕ್ಯಾಮರಾಗಳ ವ್ಯವಸ್ಥೆ ಮಾಡಿದ್ದು ಕಂಡುಬಂದಿತು.







