ಅತ್ತಾವರ ಯೆಲ್ಲಪ್ಪ ಎಂಬ ಕ್ರಾಂತಿಯ ಧ್ರುವತಾರೆ: ಇವರಾರೂ ಕ್ಷಮೆ ಯಾಚಿಸಲಿಲ್ಲ!

ಭಾಗ - 20
ಕರಾವಳಿಯ ಪ್ರಾತಃ ಸ್ಮರಣೀಯ
ಅತ್ತಾವರ ಯೆಲ್ಲಪ್ಪ ಮೇ 4, 1912ರಂದು ಅತ್ತಾವರದ ಬಾಲಣ್ಣ ಮತ್ತು ವೆಂಕಮ್ಮ ದಂಪತಿಯ ಹಿರಿಯ ಮಗನಾಗಿ ಅತ್ತಾವರದಲ್ಲಿ ಜನಿಸಿದರು.
ಸೈಂಟ್ ಮಿಲಾಗ್ರಿಸ್ ಶಾಲೆಯಲ್ಲಿ ಆರಂಭಿಕ ಶಿಕ್ಷಣ ಪಡೆದ ಯೆಲ್ಲಪ್ಪ, ಮಂಗಳೂರಿನ ಸರಕಾರಿ ಕಾಲೇಜಲ್ಲಿ ಇಂಟರ್ ಮೀಡಿಯೆಟ್ ಶಿಕ್ಷಣ ಮುಗಿಸಿ ಸೈಂಟ್ ಅಲೋಶಿಯಸ್ ಕಾಲೇಜಲ್ಲಿ ಬಿ.ಎ. (ಆನರ್ಸ್) ಪದವಿ ಗಳಿಸಿದರು. ಮದ್ರಾಸ್‌ನಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವಾಗ ಒಂದು ಅಪಘಾತದಲ್ಲಿ ಘಾಸಿಗೊಂಡರು. ಈ ಅಪಘಾತಕ್ಕೆ ಕಾರಣನಾಗಿದ್ದ ಬ್ರಿಟಿಷನೊಬ್ಬ ಅನುಕಂಪದಿಂದ ದೊಡ್ಡ ಪ್ರಮಾಣದ ಪರಿಹಾರವನ್ನು ನೀಡಿದನಂತೆ. ಈ ಪರಿಹಾರದ ಮೊತ್ತವನ್ನು ತನ್ನ ಬದುಕಿನ ಗುರಿಯಾಗಿದ್ದ ಇಂಗ್ಲೆಂಡ್‌ನಲ್ಲಿ ಬ್ಯಾರಿಸ್ಟರ್ ಪದವಿ ಪಡೆಯುವುದಕ್ಕೆ ಯೆಲ್ಲಪ್ಪ ಬಳಸಿದರು.
ಇಂಗ್ಲೆಂಡ್‌ನಿಂದ ಮರಳಿದ ಯೆಲ್ಲಪ್ಪ ಅವರಿಗೆ ಅವರ ಹೆತ್ತವರು ಸೀತಮ್ಮ ಎಂಬಾಕೆಯೊಂದಿಗೆ ವಿವಾಹ ಮಾಡಿಸಿದರು. ವಿವಾಹವಾದ 17 ದಿನಕ್ಕೇ ಸಿಂಗಾಪುರದ ಕಾನೂನು ಸಂಸ್ಥೆಯೊಂದರಲ್ಲಿ ಕೆಲಸ ದೊರೆತು ಯೆಲ್ಲಪ್ಪ ಸಿಂಗಾಪುರಕ್ಕೆ ಪಯಣಿಸಿದರು.
ನೇತಾಜಿ ಐ.ಎನ್.ಎ. ಅರಂಭಿಸುವವರೆಗೂ ಯೆಲ್ಲಪ್ಪ ಭಾರತದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಅಷ್ಟೇನೂ ಆಸ್ಥೆ ವಹಿಸಿದ ಪುರಾವೆ ಇಲ್ಲ. ಅವರಿಗೆ ಬ್ರಿಟಿಷ್ ಮತ್ತು ಜಪಾನ್ ಎರಡರ ಬಗ್ಗೆಯೂ ಹೇವರಿಕೆ ಇತ್ತು. ಆದರೆ ನೇತಾಜಿಯವರು ಐ.ಎನ್.ಎ. ಆರಂಭಿಸಿದಾಗ ಯೆಲ್ಲಪ್ಪ ಹೋರಾಟದೆಡೆಗೆ ಸೆಳೆಯಲ್ಪಟ್ಟರು. ಐ.ಎನ್.ಎ. ನೇತೃತ್ವವನ್ನು ಸುಭಾಸ್‌ಚಂದ್ರ ಬೋಸ್ ವಹಿಸಿಕೊಂಡ ಮೇಲೆ ಸಿಂಗಾಪುರಕ್ಕೆ ಅವರು ಬಂದಾಗ ಯೆಲ್ಲಪ್ಪ ಅವರು ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದರು. ಅಲ್ಲಿಂದಾಚೆಗೆ ಅವರು ನೇತಾಜಿಯವರ ಬಲಗೈಯಾಗಿ ಕೆಲಸ ಮಾಡಿದರು. ಅಕ್ಷರಶಃ ಐ.ಎನ್.ಎ.ಗೆ ನಿಧಿ ಸಂಗ್ರಹಿಸುವ ಪೂರ್ಣ ಜವಾಬ್ದಾರಿ ಯೆಲ್ಲಪ್ಪ ನಿರ್ವಹಿಸಿದರು. ಅವರ ಸಾಮರ್ಥ್ಯ ಎಷ್ಟಿತ್ತೆಂದರೆ ಅವರನ್ನು ಐ.ಎನ್.ಎ.ಯ ಕುಬೇರ ಎಂದೇ ಕರೆಯಲಾಗುತ್ತಿತ್ತು.
ಆ ಮಟ್ಟದ ಸಂಪರ್ಕ, ಪ್ರಭಾವ ಮನ ಒಲಿಸುವ ಸಾಮರ್ಥ್ಯ ಅವರಿಗೆ ಹೇಗೆ ಪ್ರಾಪ್ತವಾಯಿತು ಎಂಬುದೇ ವಿಸ್ಮಯಕಾರಿ. ಯಾವ ಕೆಲಸ ಕೊಟ್ಟರೂ ಅಚ್ಚುಕಟ್ಟಾಗಿ ಅದನ್ನು ಪೂರೈಸಿ ಮುಂದಿನ ಜವಾಬ್ದಾರಿಯನ್ನು ಯಲ್ಲಪ್ಪ ಎದುರು ನೋಡುತ್ತಿದ್ದರು.
ಮಹಿಳಾ ರೆಜಿಮೆಂಟನ್ನು ಆರಂಭಿಸುವ ಪ್ರಸ್ತಾವವೂ ಯೆಲ್ಲಪ್ಪನವರೇ ಮಾಡಿದ್ದು. ನೇತಾಜಿಯವರಿಗೆ ಈ ಚಿಂತನೆ ಇತ್ತು. ಆದರೆ ಜಪಾನೀಯರು ಸುತಾರಾಂ ಈ ಪ್ರಸ್ತಾವವನ್ನು ಒಪ್ಪಿರಲಿಲ್ಲ. ಅದಕ್ಕೆ ಸೊಪ್ಪು ಹಾಕದೆ ಆಗ ಸಿಂಗಾಪುರದಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮೀ ಸೆಹಗಲ್ ಅವರೊಂದಿಗೆ ಚರ್ಚಿಸಿದ್ದ ಯೆಲ್ಲಪ್ಪ, ನೇತಾಜಿ ಬಂದಾಗ ಮಹಿಳಾ ತುಕಡಿಯಿಂದ ಅವರಿಗೆ ಗೌರವ ರಕ್ಷೆ ಕೊಡಿಸಿದ್ದರು. ಸೀರೆ ಉಟ್ಟ ಮಹಿಳೆಯರು ಈ ಗೌರವ ರಕ್ಷೆ ನೀಡಿದ್ದರು! ಇದಾದ ಅನತಿ ಕಾಲದಲ್ಲಿ ಈ ಮಹಿಳಾ ರೆಜಿಮೆಂಟ್ ಠಿಡಿoಠಿeಡಿ ಮಿಲಿಟರಿ ಉಡುಗೆ ಸಹಿತ ತರಬೇತಿ ಪಡೆಯಲು ಆರಂಭಿಸಿತ್ತು. ಇವರಿಗಾಗಿ ಸಿಂಗಾಪುರದ ಹಳೆ ಬಂಗಲೆ ಹುಡುಕಿ ಅದನ್ನು ರಿಪೇರಿ ಮಾಡಿ ಅದಕ್ಕೆ ತಂತಿ ಬೇಲಿ ಹಾಕಿ ಕಾವಲಿಗೆ ಕಾವಲುಗಾರರನ್ನೂ ಯೆಲ್ಲಪ್ಪ ಕೆಲವೇ ದಿವಸಗಳಲ್ಲಿ ವ್ಯವಸ್ಥೆ ಮಾಡಿ ಕೊಟ್ಟಿದ್ದರು.
ಐ.ಎನ್.ಎ.ಯ ಆಝಾದ್ ಹಿಂದ್ ಬ್ಯಾಂಕ್‌ನ್ನು ಆರಂಭಿಸುವ ಯೋಜನೆ ಚರ್ಚೆಗೆ ಬಂದಾಗ ಇದಕ್ಕೆ ಬೇಕಾದ ಎಲ್ಲಾ ಬಲ ತುಂಬಿದ್ದೂ ಯೆಲ್ಲಪ್ಪ ಅವರೇ. ಇಷ್ಟರಲ್ಲಾಗಲೇ ಅವರು ಐ.ಎನ್.ಎ.ಯ ಸಲಹೆಗಾರರಲ್ಲೊಬ್ಬರಾಗಿದ್ದರು. ಐ.ಎನ್.ಎ.ಗೆ ಆರಂಭಿಕವಾಗಿ ಜಪಾನ್ ಸಾಲದ ರೂಪದಲ್ಲಿ ನಿಧಿ ಒದಗಿಸಿತಾದರೂ, ಸ್ವಾಭಿಮಾನಿಯಾಗಿದ್ದ ಯೆಲ್ಲಪ್ಪ ಅಲ್ಲಿನ ಭಾರತೀಯರಿಂದ ಹಣ ಸಂಗ್ರಹಿಸಿ ಜಪಾನ್ ನೀಡಿದ್ದ ಸಾಲವನ್ನು ಮರುಪಾವತಿಸಿದರು.
ಮಲಯಾ, ಸಿಂಗಾಪುರಗಳನ್ನು ಜಪಾನ್‌ಆಕ್ರಮಿಸಿದ ಬಳಿಕ ಭಾರತಕ್ಕೆ ಹತ್ತಿರ ಎಂಬ ಕಾರಣಕ್ಕೆ ಐ.ಎನ್.ಎ.ಯ ಕಾರ್ಯಾಚರಣೆಯನ್ನು ರಂಗೂನಿಗೆ ಸ್ಥಳಾಂತರಿಸಲಾಯಿತು. ರಂಗೂನಿನಲ್ಲೇ ಆಝಾದ್ ಹಿಂದ್ ಬ್ಯಾಂಕನ್ನು ಸ್ಥಾಪಿಸಲಾಯಿತು. ಐ.ಎನ್.ಎ.ಯ ಹಣಕಾಸು ಅಷ್ಟೇ ಅಲ್ಲ, ಪೂರೈಕೆಗಳನ್ನೂ ಯೆಲ್ಲಪ್ಪ ನಿರ್ವಹಿಸುತ್ತಿದ್ದರು. ಈ ಬ್ಯಾಂಕ್‌ಗೆ ಆ ಕಾಲದಲ್ಲೇ ಪಾಲು ಬಂಡವಾಳವಾಗಿ 50 ಲಕ್ಷ ರೂಪಾಯಿ ಹರಿದು ಬಂದಿತ್ತು. ಸಿರಿವಂತ ಭಾರತೀಯರಿಂದ ನಿಧಿ ಸಂಗ್ರಹ ಯಾವ ಮಟ್ಟಿಗೆ ಇತ್ತೆಂದರೆ ಬ್ಯಾಂಕು ಆರಂಭವಾದಾಗ ಐ.ಎನ್.ಎ. ಠೇವಣಿ 20 ಕೋಟಿ ರೂಪಾಯಿಗಳಷ್ಟಿತ್ತು.
ಒಂದೇ ವಾರದಲ್ಲಿ ಹಗಲಿರುಳು ಕೆಲಸ ಮಾಡಿ ಬ್ಯಾಂಕು ಸ್ಥಾಪನೆಯ ಎಲ್ಲಾ ತಾಂತ್ರಿಕ ಕೆಲಸಗಳನ್ನೂ ಪೂರೈಸಿದ್ದಷ್ಟೇ ಅಲ್ಲ; ಬ್ಯಾಂಕ್ ಕಾರ್ಯ ನಿರ್ವಹಿಸಲು ಬೇಕಾದ ದೊಡ್ಡ ಕಟ್ಟಡವನ್ನೂ ಪಡೆದು ಅದನ್ನು ಸಜ್ಜುಗೊಳಿಸಿದ್ದರು. ನೇತಾಜಿ ರಂಗೂನಿಗೆ ಬಂದು ಅಲ್ಲಿನ ಭಾರತೀಯರಲ್ಲಿ ಅದರಲ್ಲೂ ಸಿರಿವಂತರನ್ನುದ್ದೇಶಿಸಿ ಮಾಡಿದ್ದ ಭಾಷಣ ಅದೆಷ್ಟು ಪ್ರಭಾವಿಯಾಗಿತ್ತೆಂದರೆ ಅಲ್ಲಿನ ಗಣ್ಯ ಮುಸ್ಲಿಮ್ ವ್ಯಾಪಾರಿ ತನ್ನ ಸರ್ವಸ್ವವನ್ನೂ ನೇತಾಜಿಗೆ ನೀಡಿದ್ದರು. ಹತ್ತಿರ ಹತ್ತಿರ 3 ಕೋಟಿ ರೂಪಾಯಿ!!
ನೇತಾಜಿಯವರ ಕೊನೆಯ ಪ್ರಯಾಣದಲ್ಲಿ ಯೆಲ್ಲಪ್ಪ ಅವರೊಂದಿಗೆ ಪ್ರಯಾಣಿಸಬೇಕಿತ್ತು. ಆದರೆ ಸ್ಥಳೀಯ ಅಗತ್ಯಗಳು, ಮುಂದಿನ ಹೆಜ್ಜೆ ಹಾದಿಗಳನ್ನು ನಿರ್ದೇಶಿಸಲು ಯೆಲ್ಲಪ್ಪ ಉಳಿಯಬೇಕಾಯಿತು. ಝಾನ್ಸಿ ರೆಜಿಮೆಂಟಿನ ಲಕ್ಷ್ಮೀ ಸೆಹಗಲ್ ಕೂಡಾ ಗಾಯಗೊಂಡ ಐ.ಎನ್.ಎ. ಸೈನಿಕರ ಶುಶ್ರೂಷೆಗಾಗಿ ಉಳಿಯಬೇಕಾಗಿ ಬಂದಿತು.
ಆ ವೇಳೆಗೆ ಜಪಾನ್ ಹಲವು ಕಡೆ ಸೋಲುಂಡು ಇಂಫಾಲಕ್ಕೆ ಐ.ಎನ್.ಎ. ಪಡೆ ತಲುಪುವ ವೇಳೆಗೆ ಜಪಾನ್ ಹಿಂದೆ ಸರಿಯಿತು. ಬ್ರಿಟಿಷ್ ಯುದ್ಧ ವಿಮಾನಗಳ ದಾಳಿಗೆ ಆಝಾದ್ ಫೌಜ್ ಅಪಾರ ಸಾವು ನೋವು ಅನುಭವಿಸಿತು. ಅಂತಹ ಸಂದರ್ಭದಲ್ಲೂ ನೇತಾಜಿಯವರು ತಾನೇ ಮುಂದೆ ನಿಂತು ಮಹಿಳಾ ರೆಜಿಮೆಂಟಿನಲ್ಲಿದ್ದವರನ್ನು ಸುರಕ್ಷಿತ ತಾಣಕ್ಕೊಯ್ಯುವ ಸಾಹಸ ಮಾಡಿದ್ದರು.
ಇತ್ತ ಭಾರತದ ನೆಲದಲ್ಲಿ ಹೋರಾಡುತ್ತಿದ್ದ ಐ.ಎನ್.ಎ. ಸೈನ್ಯದೊಂದಿಗಿದ್ದ ಯೆಲ್ಲಪ್ಪ ಅವರು ಯುದ್ಧ ವಿಮಾನಗಳ ಗುಂಡೇಟಿನಿಂದ ಗಾಯಗೊಂಡರು.
ಝಾನ್ಸಿ ರೆಜಿಮೆಂಟಿನ ಮುಖ್ಯಸ್ಥೆ ಕ್ಯಾ. ಲಕ್ಷ್ಮೀ ಸೆಹಗಲ್ ಅವರ ಹೇಳಿಕೆ ಪ್ರಕಾರ ಸೈನ್ಯದಲ್ಲಿ ಔಷಧಿಗಳ ಪ್ರಮಾಣ ಶೋಚನೀಯವಾಗಿ ಕಡಿಮೆ ಇತ್ತು. ಅವರ ಕಾಲಿಗೆ ತಗಲಿದ ಗುಂಡಿನ ಚರೆಯ ಏಟು ಅಷ್ಟೇನೂ ಅಪಾಯಕಾರಿಯಾಗಿ ಕಂಡಿರಲಿಲ್ಲ. ಅವರೂ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಒಂದೆರಡು ದಿನಗಳಲ್ಲಿ ಅಪಾಯಕಾರಿ ಗಾಯವಾಗಿಬಿಟ್ಟಿತ್ತು. ಅವರನ್ನು ಹೊತ್ತುಕೊಂಡು ಅರು ಗಂಟೆಗಳ ಕಾಲ ನಡೆದೇ ಸುರಕ್ಷಿತ ತಾಣವೊಂದಕ್ಕೆ ಕರೆದುಕೊಂಡು ಬರಲಾಯಿತು. ಈ ವೇಳೆಗೆ ಹಠಾತ್ತಾಗಿ ನಡೆದ ಬ್ರಿಟಿಷ್‌ಗೂರ್ಖಾ ದಾಳಿಯಲ್ಲಿ ಲಕ್ಷ್ಮೀ ಸೆಹಗಲ್ ಮತ್ತು ಅವರ ಸಹಚರರು ಸೆರೆಯಾಳುಗಳಾದರು. ಗಾಯಗೊಂಡಿದ್ದ ಯೆಲ್ಲಪ್ಪ ಅವರನ್ನು ಒಂದು ಗುಡಿಸಲಲ್ಲಿ ಅವರ ಇನ್ನೊಬ್ಬ ಸಂಗಾತಿಯೊಂದಿಗೆ ಬಿಟ್ಟು ಬರಬೇಕಾಯಿತು.
ಇದಾದ ಎರಡು ದಿನಗಳಲ್ಲಿ ಈ ಗುಡಿಸಲಿನಿಂದ ಹೊಗೆ ಬರುತ್ತಿದ್ದುದನ್ನು ಗಮನಿಸಿದ ಗೂರ್ಖಾ ಪಡೆ ಜಪಾನೀಯರಿರಬಹುದು ಎಂದು ಗುಂಡು ಮತ್ತು ಬಾಂಬು ದಾಳಿ ನಡೆಸಿದ್ದರಲ್ಲಿ ಯೆಲ್ಲಪ್ಪ ಪ್ರಾಯಶಃ ಬೆಂಕಿಯಲ್ಲೇ ಸುಟ್ಟು ಹೋಗಿರಬೇಕು.
ಹೀಗೆ ಒಬ್ಬ ಧೀರೋದಾತ್ತ ಹೋರಾಟಗಾರನ ಅಂತ್ಯವಾಯಿತು. ಯೆಲ್ಲಪ್ಪನವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅವರ ಪತ್ನಿ ಸೀತಮ್ಮ, ಮನೆ ಪಕ್ಕದ ದೇವಸ್ಥಾನದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರು. ನಮ್ಮ ಎದೆ ಕಲಕುವ ಕಥನ ಇದು.
ಅಂದ ಹಾಗೆ ನೆಹರೂ-ಸುಭಾಸ್ ನಡುವೆ ಕಡ್ಡಿ ಇಟ್ಟು ಅಪಪ್ರಚಾರ ನಡೆಸುತ್ತಿರುವ ಆರೆಸ್ಸೆಸ್ ಪ್ರೇರಿತ ಮಂದಿಗೆ ಕೆಲವು ಚಾರಿತ್ರಿಕ ಸಂಗತಿಗಳು ಹೇಳಬೇಕು. 1945ರ ಉತ್ತರಾರ್ಧಕ್ಕೆ ಆಝಾದ್ ಹಿಂದ್ ಫೌಜ್‌ನ ಎಲ್ಲರೂ ಬಂಧನಕ್ಕೊಳಗಾಗಿದ್ದರು. ನೇತಾಜಿ ಸತ್ತಿದ್ದಾರೆ ಎಂಬ ಅಧಿಕೃತ ವಾರ್ತೆ ಜಪಾನಿನ ಮೂಲಗಳಿಂದ ಬಂದರೂ ಭಾರತದ ಯಾವ ನಾಯಕರೂ ಅದನ್ನು ಪೂರ್ತಿ ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಈ ಕ್ರಾಂತಿಕಾರಿ ಸೈನ್ಯಕ್ಕೆ ತಕ್ಕ ಪಾಠ ಕಲಿಸಲು ಬ್ರಿಟಿಷರು ಪ್ರೇಮ್ ಕುಮಾರ್ ಸೆಹಗಲ್, ಶಾ ನವಾಝ್ ಖಾನ್ ಹಾಗೂ ಗುರುಭಕ್ಷ್ ಸಿಂಗ್ ಧಿಲ್ಲಾನ್ (ಒಬ್ಬ ಹಿಂದೂ, ಒಬ್ಬ ಮುಸ್ಲಿಮ್ ಮತ್ತು ಒಬ್ಬ ಸಿಖ್ ಹೀರೋಗಳನ್ನೇ ಆರಿಸಿ) ಇವರ ಮೇಲೆ ದೇಶದ್ರೋಹದ ಆರೋಪ ಹೊರಿಸಿ ವಿಚಾರಣೆ ನಡೆಸಿತು. ತಾವು ತ್ಯಜಿಸಿದ್ದ ವಕೀಲಿಕೆಯ ಕೋಟನ್ನು ಮರು ಧರಿಸಿ ನೆಹರೂ ಇವರ ಪರವಾಗಿ ಕೆಂಪುಕೋಟೆಯಲ್ಲಿ ವಾದಿಸಿದರು. ಈ ವಿಚಾರಣೆ ದೇಶಾದ್ಯಂತ ವಿದ್ಯುತ್ಸಂಚಾರ ಉಂಟು ಮಾಡಿತು. ನೆಹರೂ ಅವರ ಬದ್ಧತೆ ಮತ್ತು ಪ್ರಭಾವ ಹೇಗಿತ್ತೆಂದರೆ ವರ್ಷಾಂತ್ಯಕ್ಕೆ ಈ ಮೂವರಿಗೂ ಬ್ರಿಟಿಷ್ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದರೂ ಆದರೆ 1946ರ ಜನವರಿ 3ರಂದು ವೈಸರಾಯ್ ಇವರ ಶಿಕ್ಷೆಯನ್ನು ರದ್ದು ಮಾಡಿ ಅವರನ್ನು ಬಿಡುಗಡೆ ಮಾಡಬೇಕಾಯಿತು.
ಬಹುತೇಕ ಆಝಾದ್ ಹಿಂದ್ ಫೌಜಿನ ಕ್ರಾಂತಿನಾಯಕರಿಗೆ ಸ್ವತಂತ್ರ ಭಾರತದಲ್ಲಿ ರಾಷ್ಟ್ರ ಕಟ್ಟುವ ಕಾಯಕದ ದೊಡ್ಡ ಹುದ್ದೆ ನೀಡಿ ಗೌರವಿಸಲಾಯಿತು. ಹಲವರು ಭಾರತದ ರಾಯಭಾರಿಗಳಾಗಿಯೂ ಕೆಲಸ ಮಾಡಿದ್ದರು.
ಕೆಲವರು ನೇತಾಜಿ ಸ್ಥಾಪಿಸಿದ್ದ ಫಾರ್ವರ್ಡ್ ಬ್ಲಾಕ್ ಪಕ್ಷ ಸೇರಿ ಅಲ್ಲಿ ಕೆಲಸ ಮಾಡಿದರು. ಕ್ಯಾ. ಲಕ್ಷ್ಮೀ ಸೆಹಗಲ್ ಎಡಪಕ್ಷದ ಕಡೆ ಒಲವು ತೋರಿದ್ದರು. ಒಬ್ಬನೇ ಒಬ್ಬ ಆಝಾದ್ ಹಿಂದ್ ಫೌಜಿನ ಸೈನಿಕನಾಗಲೀ ನಾಯಕನಾಗಲೀ ಹಿಂದೂ ಮಹಾಸಭಾ/ಆರೆಸ್ಸೆಸ್/ಸಾವರ್ಕರ್ ಟೆಂಟು ಸೇರಲಿಲ್ಲ!
ನೇತಾಜಿ ಬಗ್ಗೆ ಇಷ್ಟೆಲ್ಲಾ ಮೊಸಳೆ ಕಣ್ಣಿರು ಸುರಿಸುವ ಭಾಜಪ, ಇದೇ ಲಕ್ಷ್ಮೀ ಸೆಹಗಲ್ ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಿದಾಗ ಅವರನ್ನು ಸೋಲಿಸಿತು!







