ರ್ಯಾವಣಕಿ ಸರಕಾರಿ ಪ್ರೌಢಶಾಲೆಗೆ ಭದ್ರತೆಯ ಕೊರತೆ!

ಕುಕನೂರು: ಮಕ್ಕಳ ಭವಿಷ್ಯ ರೂಪಿಸುವ ಶಾಲೆಗಳು ಸುರಕ್ಷಿತವಾಗಿರಬೇಕು ಎಂಬುದು ಎಲ್ಲರ ಸಹಜ ನಿರೀಕ್ಷೆ. ಆದರೆ ತಾಲೂಕಿನ ರ್ಯಾವಣಕಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಅಗತ್ಯವಾದ ಕನಿಷ್ಠ ಭದ್ರತೆಯೇ ಇಲ್ಲದಿರುವುದು ಗಂಭೀರ ಚಿಂತೆಗೆ ಕಾರಣವಾಗಿದೆ. ಕಾಂಪೌಂಡ್ ಗೋಡೆ ಹಾಗೂ ಮುಖ್ಯ ದ್ವಾರವಿಲ್ಲದೆ ಶಾಲೆ ಕಾರ್ಯನಿರ್ವಹಿಸುತ್ತಿರುವುದು ಶಿಕ್ಷಣ ವ್ಯವಸ್ಥೆಯ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತಿದೆ.
ಮಂಗಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಈ ಪ್ರೌಢಶಾಲೆಯ ಸುತ್ತಲೂ ಕಾಂಪೌಂಡ್ ನಿರ್ಮಾಣಕ್ಕೆ ಎಂನರೇಗಾದಡಿ ಒಂದು ವರ್ಷ ಹಿಂದೆಯೇ 10 ಲಕ್ಷ ರೂ. ವೆಚ್ಚದ ಆಡಳಿತಾತ್ಮಕ ಅನುಮೋದನೆ ಹಾಗೂ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದರೂ, ಕಾಮಗಾರಿ ಆರಂಭವಾಗಿಲ್ಲ. ಅನುಮೋದನೆ ಕಾಗದದಲ್ಲೇ ಉಳಿದು, ಮಕ್ಕಳು ಅಪಾಯದ ನಡುವೆ ದಿನ ಕಳೆಯುತ್ತಿದ್ದಾರೆ. ಶಾಲಾ ಆವರಣಕ್ಕೆ ಯಾವುದೇ ತಡೆಗೋಡೆ ಇಲ್ಲ. ಬಿಡುವಿನ ಸಮಯದಲ್ಲಿ ಮಕ್ಕಳು ಆಟವಾಡುತ್ತಾ ಅರಿಯದೆ ರಸ್ತೆಯತ್ತ ಹೋಗುವ ಸಾಧ್ಯತೆ ಹೆಚ್ಚಿದೆ. ವಾಹನ ಸಂಚಾರವಿರುವ ಪ್ರದೇಶದಲ್ಲಿ ಇದು ಅಪಘಾತಗಳಿಗೆ ಆಹ್ವಾನ ನೀಡುವ ಪರಿಸ್ಥಿತಿ ನಿರ್ಮಿಸಿದೆ. ಒಂದು ಕ್ಷಣದ ನಿರ್ಲಕ್ಷ್ಯ ದೊಡ್ಡ ದುರಂತಕ್ಕೆ ಕಾರಣವಾಗಬಹುದು ಎನ್ನುವುದು ಪೋಷಕರ ಆತಂಕ.
ಗೇಟ್ ಇಲ್ಲದ ಶಾಲೆ, ಅಪರಿಚಿತರಿಗೆ ಮುಕ್ತ ಪ್ರವೇಶ: ಶಾಲೆಗೆ ಗೇಟ್ ಇಲ್ಲದ ಕಾರಣ ಶಾಲಾ ಅವಧಿಯಲ್ಲೂ, ಅನಂತರವೂ ಅಪರಿಚಿತರು, ಕಿಡಿಗೇಡಿಗಳು ನಿರ್ಬಂಧವಿಲ್ಲದೆ ಆವರಣ ಪ್ರವೇಶಿಸುತ್ತಿದ್ದಾರೆ. ಇದರಿಂದ ಶಾಲೆಯ ಶಿಸ್ತು ಮಾತ್ರವಲ್ಲ, ಮಕ್ಕಳ ಮಾನಸಿಕ ಭದ್ರತೆಯೂ ಕುಸಿಯುತ್ತಿದೆ. ಶಿಕ್ಷಕರು ತಮ್ಮ ಪಾಠದ ಜೊತೆಗೆ ಮಕ್ಕಳ ರಕ್ಷಣೆಯ ಜವಾಬ್ದಾರಿಯನ್ನೂ ಹೊತ್ತುಕೊಳ್ಳುವಂತಾಗಿದೆ.
ಕರಡಿ ದಾಳಿ ನಡೆದ ಪ್ರದೇಶದಲ್ಲಿ ಶಾಲೆ: ಈ ಶಾಲೆ ಇರುವ ಪ್ರದೇಶದ ಸಮೀಪದ ಹೊಲದಲ್ಲಿ ಕಳೆದ ವರ್ಷ ರೈತನ ಮೇಲೆ ಕರಡಿ ದಾಳಿ ನಡೆದ ಘಟನೆ ಇಂದಿಗೂ ಗ್ರಾಮಸ್ಥರನ್ನು ಕಾಡುತ್ತಿದೆ. ಇಂತಹ ಅಪಾಯಕರ ಪ್ರದೇಶದಲ್ಲಿ ಶಾಲೆಗೆ ಕಾಂಪೌಂಡ್ ಇಲ್ಲದಿರುವುದು ಮಕ್ಕಳ ಜೀವದೊಂದಿಗೆ ಚೆಲ್ಲಾಟವಾಡುವಂತಾಗಿದೆ. ಬೀದಿನಾಯಿಗಳು, ದನಕರುಗಳು ಶಾಲಾ ಕೊಠಡಿಗಳವರೆಗೂ ಬರುತ್ತಿರುವುದರಿಂದ ಶಾಲೆಯ ಪರಿಸರ ದುರ್ನಾತ ಬೀರುತ್ತಿದೆ.
ಪ್ರೌಢಶಾಲೆ ಸ್ಥಳಾಂತರಗೊಂಡು ಸುಮಾರು ಒಂದು ವರ್ಷವಾದರೂ ಶೌಚಾಲಯವಿಲ್ಲದೆ ವಿದ್ಯಾರ್ಥಿಗಳು ಪರದಾಡಿದ್ದರು. ಇತ್ತೀಚೆಗಷ್ಟೇ ಶೌಚಾಲಯ ನಿರ್ಮಾಣಗೊಂಡಿದೆ ಎನ್ನಲಾಗಿದೆ. ಈ ಶಾಲೆಯಲ್ಲಿ 8ರಿಂದ 10ನೆ ತರಗತಿವರೆಗೆ 55 ಹೆಣ್ಣು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಅವರಿಗೆ ಋತುಚಕ್ರದ ಸಮಯದಲ್ಲಿ ಖಾಸಗಿತನ, ವಿಲೇವಾರಿ ವ್ಯವಸ್ಥೆ (ಇನ್ಸಿನರೇಟರ್) ಇಲ್ಲದಿರುವುದು ಅವರ ಆರೋಗ್ಯ ಮತ್ತು ಹಾಜರಾತಿ ಮೇಲೆ ನೇರ ಪರಿಣಾಮ ಬೀರಿದೆ.
ಕಾಮಗಾರಿ ಏಕೆ ನಿಂತಿದೆ?:
ಕಾಂಪೌಂಡ್ ಕಾಮಗಾರಿ ವಿಳಂಬಕ್ಕೆ ಗುತ್ತಿಗೆದಾರರ ನಿರಾಸಕ್ತಿ ಪ್ರಮುಖ ಕಾರಣ ಎಂದು ತಿಳಿದು ಬಂದಿದೆ. ಎಂನರೇಗಾದಡಿ ಹಣ ಬಿಡುಗಡೆ ವಿಳಂಬವಾಗುತ್ತಿದೆ ಎಂಬ ಕಾರಣ ನೀಡಿ ಗುತ್ತಿಗೆದಾರರು ಹಿಂದೆ ಸರಿಯುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಇದರ ಹೊರೆ ಮಾತ್ರ ಮಕ್ಕಳ ಮೇಲೆಯೇ ಬೀಳುತ್ತಿದೆ.
ಶಾಲೆಯ ಕಾಂಪೌಂಡ್ ಹಾಗೂ ಶೌಚಾಲಯದ ಕುರಿತು ಮಾಹಿತಿ ಪಡೆದುಕೊಂಡಿದ್ದೇವೆ. ಶೀಘ್ರದಲ್ಲೇ ಕಾಂಪೌಂಡ್ ನಿರ್ಮಾಣಕ್ಕೆ ತಾಲೂಕು ಪಂಚಾಯತ್ ಆಡಳಿತಕ್ಕೆ ಸೂಚನೆ ನೀಡಲಾಗುವುದು.
-ಸೋಮಶೇಖರಗೌಡ ಪಾಟೀಲ್‌ಡಿಡಿಪಿಐ,
ಪೋಷಕರು ಮತ್ತು ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ಕಾಂಪೌಂಡ್ ನಿರ್ಮಾಣದ ಬಗ್ಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಸ್ಪಂದನೆ ಇಲ್ಲ ಎಂಬ ಆರೋಪ ಕೇಳಿಬಂದಿದೆ.
-ಸಾರ್ವಜನಿಕರ ಆಕ್ರೋಶ
ಯಾವುದೇ ಅಹಿತಕರ ಘಟನೆ ನಡೆಯದಂತೆ ಶಿಕ್ಷಕರು ಹೆಚ್ಚಿನ ಜಾಗ್ರತೆ ವಹಿಸುತ್ತಿದ್ದಾರೆ. ಕಾಂಪೌಂಡ್ ಕುರಿತು ಶಿಕ್ಷಣ ಇಲಾಖೆ ಹಾಗೂ ತಾಲೂಕು ಪಂಚಾಯತ್‌ಗೆ ಹಲವು ಬಾರಿ ಮನವಿ ಮಾಡಿದ್ದೇವೆ.
-ಶರಣಪ್ಪ ಮೂಗನವರ್, ಮುಖ್ಯಶಿಕ್ಷಕರು, ಸರಕಾರಿ ಪ್ರೌಢಶಾಲೆ ರ್ಯಾವಣಕಿ







