ವಾರದ ಸಂತೆಯಲ್ಲಿ ಹರಿಯುತ್ತಿದೆ ಚರಂಡಿ ನೀರು..!

ಶಹಾಪುರ: ತಾಲೂಕಿನ ಅತಿ ದೊಡ್ಡ ಗ್ರಾಮ ಪಂಚಾಯತಿಯಾಗಿರುವ ಮೂಡಬೂಳ ಗ್ರಾಮದಲ್ಲಿ ವಾರದ ಸಂತೆ ನಡೆಯುವ ಪ್ರದೇಶದಲ್ಲೇ ಚರಂಡಿ ನೀರು ಹರಿಯುತ್ತಿರುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಈ ಕುರಿತು ದೂರು ಸಲ್ಲಿಸಿದರೂ ಪಂಚಾಯತಿ ಆಡಳಿತ ಸ್ಪಂದಿಸುತ್ತಿಲ್ಲ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ಮೂಡಬೂಳ ಗ್ರಾಮದಲ್ಲಿ ಪ್ರತಿ ಸೋಮವಾರ ವಾರದ ಸಂತೆ ನಡೆಯುತ್ತಿದ್ದು, ಸಾವಿರಾರು ಗ್ರಾಮಸ್ಥರು ಹಾಗೂ ಸುತ್ತಮುತ್ತಲ ಹಳ್ಳಿಗಳ ಜನರು ಸಂತೆಗಾಗಿ ಆಗಮಿಸುತ್ತಾರೆ. ಆದರೆ ಸಂತೆ ನಡೆಯುವ ಪ್ರದೇಶದಲ್ಲೇ ಕೊಳಚೆ ಮತ್ತು ಚರಂಡಿ ನೀರು ಹರಿಯುತ್ತಿರುವುದರಿಂದ ದುರ್ವಾಸನೆ
ಆವರಿಸಿದ್ದು, ವ್ಯಾಪಾರಿಗಳು ಹಾಗೂ ಗ್ರಾಹಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಇದರಿಂದ ಸೋಂಕು ರೋಗಗಳ ಭೀತಿ ಹೆಚ್ಚಾಗಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಪಂಚಾಯತಿ ಆಡಳಿತದ ನಿರ್ಲಕ್ಷ್ಯದಿಂದ ಗ್ರಾಮದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು, ಗ್ರಾಮೀಣ ಜನತೆಗೆ ಅಗತ್ಯವಾದ ಮೂಲಭೂತ ಸೌಲಭ್ಯ ಒದಗಿಸುವ ಜವಾಬ್ದಾರಿಯನ್ನು ವಹಿಸಲು ಪಂಚಾಯಿತಿ ವಿಫಲವಾಗಿದೆ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಧಿನಿಯಮದ ಆಶಯಗಳೇ ಈ ಗ್ರಾಮದಲ್ಲಿ ಪಾಲನೆಯಾಗುತ್ತಿಲ್ಲ ಎಂಬ ಟೀಕೆಗಳೂ ವ್ಯಕ್ತವಾಗಿವೆ. ಈ ವಿಚಾರಕ್ಕೆ ಸರ್ಕಾರ ಕೂಡಲೇ ಗಮನಹರಿಸಿ ಸಂಬಂಧಿಸಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಜೊತೆಗೆ ಸಂತೆ ನಡೆಯುವ ಪ್ರದೇಶದಲ್ಲಿನ ಚರಂಡಿ ಹಾಗೂ ಕೊಳಚೆ ಸಮಸ್ಯೆಯನ್ನು ತಕ್ಷಣ ಪರಿಹರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಸಮಸ್ಯೆ ನಮ್ಮ ಗಮನಕ್ಕೆ ಬಂದಿದೆ. ನಮ್ಮ ಗ್ರಾಮ ಪಂಚಾಯತ್ನ ಕಾರ್ಮಿಕರಿಗೆ ಹೇಳಿ ಸ್ವಚ್ಛತಾ ಕಾರ್ಯ ಮಾಡಿಸುತ್ತೇವೆ.
-ಅಜಿತ್ ಕುಮಾರ್, ಪಿಡಿಒ
ಸಲ್ಲಿಸಿರುವ ಮನವಿಗೆ ತ್ವರಿತ ಸ್ಪಂದನೆ ದೊರೆಯದಿದ್ದಲ್ಲಿ, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕರ್ತವ್ಯಲೋಪ ಆರೋಪದಡಿ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗುವುದು.
-ಶ್ರೀಶೈಲ್ ಮೂಡಬೂಳ ಜಿಲ್ಲಾ ಉಪಾಧ್ಯಕ್ಷರು, ರಾಷ್ಟ್ರೀಯ ಹಿಂದ ಸಂಘಟನೆ







