ಸಾರ್ವಜನಿಕರ ಅಸಡ್ಡೆ: ತಿಪ್ಪೆಗುಂಡಿಯಾದ ‘ಜ್ಞಾನದೇಗುಲ’!

ವಿಜಯಪುರ: ಜ್ಞಾನಾರ್ಜನೆಗೆ ದೇಗುಲವಾಗಬೇಕಾದ ಸರಕಾರಿ ಪ್ರಥಮ ದರ್ಜೆ ಕಾಲೇಜು ಇಂದು ಕಸದ ರಾಶಿ, ಮಳೆ ನೀರು ಮತ್ತು ಚರಂಡಿ ನೀರಿನ ಮಧ್ಯೆ ನಲುಗುತ್ತಿರುವುದು ದುರಂತಕರ ಚಿತ್ರಣವಾಗಿದೆ. ವಿಜಯಪುರ ನಗರದ ನವಬಾಗ ಪ್ರದೇಶದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಕಸ ಸಂಗ್ರಹಗೊಂಡು ಗಬ್ಬು ವಾಸನೆ ಹರಡಿದ್ದು, ಇದರಿಂದ ಸಾವಿರಾರು ವಿದ್ಯಾರ್ಥಿಗಳ ಆರೋಗ್ಯ ಹಾಗೂ ಭವಿಷ್ಯ ಅಪಾಯದಲ್ಲಿದೆ.
ಈ ಕಾಲೇಜಿನಲ್ಲಿ ಒಟ್ಟು 1,411 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, ಹೆಚ್ಚಿನವರು ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಾಗಿದ್ದಾರೆ. ಖಾಸಗಿ ಕಾಲೇಜುಗಳಲ್ಲಿ ಓದಲು ಸಾಧ್ಯವಾಗದ ಬಡ ವಿದ್ಯಾರ್ಥಿಗಳಿಗೆ ಇದು ಪ್ರಮುಖ ವಿದ್ಯಾ ಕೇಂದ್ರವಾಗಿದೆ. ಕೆಲ ವಿದ್ಯಾರ್ಥಿಗಳು ರಾತ್ರಿ ಹೊಟೇಲ್, ಅಂಗಡಿಗಳಲ್ಲಿ ಕೆಲಸ ಮಾಡಿಕೊಂಡು ಶಿಕ್ಷಣ ಮುಂದುವರಿಸುತ್ತಿದ್ದಾರೆ. ಆದರೆ ಇಂತಹ ವಿದ್ಯಾರ್ಥಿಗಳ ಬದುಕು ಇಂದು ಕಸದ ರಾಶಿಗಳ ಮಧ್ಯೆ ಸಿಲುಕಿರುವುದು ಮನಕಲಕುವ ಸಂಗತಿಯಾಗಿದೆ.
ಕಲುಷಿತ ನೀರಿನಿಂದ ನಡುಗಡ್ಡೆಯಾದ ಆವರಣ
ಕಾಲೇಜಿನ ವಿಶಾಲ ಕಟ್ಟಡಗಳ ಸುತ್ತ ಮಳೆ ಹಾಗೂ ಚರಂಡಿ ನೀರು ನಿಂತಿದ್ದು, ಆವರಣ ಸಂಪೂರ್ಣವಾಗಿ ಕಲುಷಿತಗೊಂಡಿದೆ. ನೀರು ಹೊರಹಾಕುವ ವ್ಯವಸ್ಥೆ ಇಲ್ಲದ ಕಾರಣ ಸೊಳ್ಳೆಗಳ ಕಾಟ ಹೆಚ್ಚಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಮನೆಮಾಡಿದೆ. ಕೆಲ ವಿದ್ಯಾರ್ಥಿಗಳು ಕಲುಷಿತ ವಾತಾವರಣದ ಕಾರಣ ಕಾಲೇಜಿಗೆ ಬರಲು ಹಿಂಜರಿಯುತ್ತಿದ್ದಾರೆ.
ಕಸದ ವಾಹನವೇ ಕಾರಣ?
ಸ್ಥಳೀಯ ನಿವಾಸಿಗಳ ಪ್ರಕಾರ, ಮಹಾನಗರ ಪಾಲಿಕೆಯ ಕಸದ ವಾಹನಗಳು ಸರಿಯಾದ ಸಮಯಕ್ಕೆ ಬರುವುದಿಲ್ಲ. ಮೂರು ದಿನಕ್ಕೆ ಒಮ್ಮೆ ಮಾತ್ರ ವಾಹನ ಬರುತ್ತದೆ. ಅಷ್ಟರವರೆಗೆ ಕಸ ಮನೆಯಲ್ಲಿ ಇಟ್ಟುಕೊಳ್ಳಲು ಆಗುವುದಿಲ್ಲ. ಅನಿವಾರ್ಯವಾಗಿ ಕಾಲೇಜು ಆವರಣದಲ್ಲಿ ಹಾಕಬೇಕು ಎಂದು ನಿವಾಸಿಗಳು ಹೇಳುತ್ತಾರೆ. ಸಣ್ಣ ರಸ್ತೆಗಳಿರುವ ಬಡಾವಣೆಗಳಿಗೆ ವಾಹನ ಹೋಗದಿರುವುದೂ ಸಮಸ್ಯೆಗೆ ಕಾರಣವಾಗಿದೆ.
ಸಿಸಿ ಕ್ಯಾಮೆರಾಗಳಿಗೂ ಕಲ್ಲು
ಕಸ ಹಾಕುವುದನ್ನು ತಡೆಯಲು ಕಾಲೇಜು ಆಡಳಿತ ಕಾಂಪೌಂಡ್ ಬಳಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದಾಗ, ಅವುಗಳಿಗೆ ಕಲ್ಲು ಹೊಡೆದು ಒಡೆದು ಹಾಕಿರುವ ಘಟನೆಗಳು ನಡೆದಿವೆ. ಇದರಿಂದಾಗಿ ಶುಚಿತ್ವ ಕಾಪಾಡುವುದು ಇಲ್ಲಿ ಸವಾಲಾಗಿ.
ಕಾಲೇಜು ಹೆಸರು ಹೇಳಲು ಮುಜುಗರ
ಕಾಲೇಜಿನ ಪರಿಸ್ಥಿತಿ ಇಷ್ಟರ ಮಟ್ಟಿಗೆ ಹದಗೆಟ್ಟಿದೆ ಎಂದರೆ, ಇಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ತಾವು ಯಾವ ಕಾಲೇಜಿನಲ್ಲಿ ಓದುತ್ತಿದ್ದೇವೆ ಎಂದು ಹೇಳಲು ಕೂಡ ಮುಜುಗರಪಡುವಂತಾಗಿದೆ.
‘‘ನಾವು ನವಬಾಗ್ ಕಾಲೇಜು ಎಂದರೆ, ಅದೇ ಕಸದ ಕಾಲೇಜಾ ಎಂದು ಕೆಲವರು ನಗುತ್ತಾರೆ. ಅದಕ್ಕೇ ಕಾಲೇಜು ಹೆಸರು ಹೇಳುವುದೇ ಬೇಡ ಎಂದುಕೊಳ್ಳುತ್ತೇವೆ,’’ ಎಂದು ವಿದ್ಯಾರ್ಥಿಗಳು ನೋವು ತೋಡಿಕೊಂಡಿದ್ದಾರೆ.
ಕಸದ ತೊಟ್ಟಿಯಾದ ಕಾಲೇಜು ಆವರಣ
‘ಊರ ಕಸ ಮನೆ ಮುಂದೆ’ ಎನ್ನುವ ಗಾದೆ ಮಾತಿನಂತೆ, ಸುತ್ತಮುತ್ತಲ ಬಡಾವಣೆಗಳ ಜನರು ಕಾಲೇಜು ಕಾಂಪೌಂಡ್ ಅನ್ನು ಕಸದ ತೊಟ್ಟಿಯಾಗಿ ಬಳಸುತ್ತಿದ್ದಾರೆ. ಕಸ ಹಾಕಬೇಡಿ ಎಂದು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಹಲವು ಬಾರಿ ಜಾಗೃತಿ ಅಭಿಯಾನ ನಡೆಸಿದರೂ ಪ್ರಯೋಜನವಾಗಿಲ್ಲ. ತಿಂಗಳಲ್ಲಿ ಒಮ್ಮೆ ಸ್ವಚ್ಛತೆ ಮಾಡಿದರೂ ಕೆಲವೇ ದಿನಗಳಲ್ಲಿ ಮತ್ತೆ ಕಸದ ರಾಶಿಗಳು ಕಾಣಿಸಿಕೊಳ್ಳುತ್ತಿವೆ.
ಸುತ್ತಮುತ್ತಲ ನಿವಾಸಿಗಳು ಮನವಿ ಮಾಡಿದರೂ ಕಸ ಹಾಕುವುದನ್ನು ನಿಲ್ಲಿಸುತ್ತಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದೇನೆ. ಶಾಸಕರಿಗೂ ಮನವಿ ಮಾಡಿದ್ದು, ಅವರು ಅಧಿವೇಶನದಿಂದ ಬಂದ ಬಳಿಕ ಸಮಸ್ಯೆ ಪರಿಹಾರಕ್ಕೆ ಭರವಸೆ ನೀಡಿದ್ದಾರೆ.
- ಡಾ.ಎ.ಐ.ಹಂಜಗಿ, ಕಾಲೇಜು ಪ್ರಾಂಶುಪಾಲರು
ಸೊಳ್ಳೆಗಳ ಕಾಟ ಮತ್ತು ಗಬ್ಬು ವಾಸನೆಯಲ್ಲಿ ಓದುವುದು ಅಸಾಧ್ಯವಾಗಿದೆ. ಚಳಿಯಲ್ಲೂ ಫ್ಯಾನ್ ನಿರಂತರವಾಗಿ ಚಾಲೂ ಇಡಬೇಕಾಗಿದೆ.
-ವಿಕಾಶ ತೊಳೆ, ವಸತಿ ನಿಲಯದ ವಿದ್ಯಾರ್ಥಿ
ಈ ಹಿಂದೆ ಕಸದ ವಾಹನ ಸರಿಯಾಗಿ ಬರುತ್ತಿತ್ತು. ಈಗ ಯಾವ ಸಮಯಕ್ಕೆ ಬರುತ್ತದೆ ಎನ್ನುವುದೇ ಗೊತ್ತಿಲ್ಲ. ಅನಿವಾರ್ಯವಾಗಿ ಜನ ಕಾಲೇಜು ಆವರಣದಲ್ಲಿ ಕಸ ಹಾಕುತ್ತಿದ್ದಾರೆ.
-ಹಾಜಿ ಮನಿಹಾರ, ನವಬಾಗ ನಿವಾಸಿ







