ಕಾಡಿನ ಚಿತ್ರಣದ ‘ಹುಲಿ ಮಂಡ್ಲಕೊಡ್ಲು ಅರಣ್ಯ ಜಾಂಬೂರಿ’

ಬೈಂದೂರು: ಇತ್ತೀಚೆಗೆ ಬೈಂದೂರಿನಲ್ಲಿ ನಡೆದ ‘ಬೈಂದೂರು ಉತ್ಸವ’ದಲ್ಲಿ ಅರಣ್ಯ ಇಲಾಖೆಯ ದೂರದೃಷ್ಟಿಯ ಚಿಂತನೆಯಲ್ಲಿ ಮೂಡಿ ಬಂದ ‘ಹುಲಿ ಮಂಡ್ಲಕೊಡ್ಲು ಅರಣ್ಯ ಜಾಂಬೂರಿ’ ಸಾರ್ವಜನಿಕರಿಗೆ ಅರಣ್ಯದ ಮಾಹಿತಿ, ಮಹತ್ವದ ಬಗ್ಗೆ ಅರಿವು ಮೂಡಿ ಸಲು ಸಹಕಾರಿಯಾಗಿದೆ.
ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಬಂಧ ವನ್ನು ಸಜೀವ ರೀತಿ ಪರಿಣಾಮಕಾರಿಯಾಗಿ ಪರಿಚಯಿ ಸಿದ ಈ ವಿಶಿಷ್ಟ ಕಲ್ಪನೆ, ಉತ್ಸವದ ಪ್ರಮುಖ ಆಕರ್ಷಣೆ ಯಾಗಿ ಹೊರಹೊಮ್ಮಿದೆ. ಉತ್ಸವದ ಮೂರು ದಿನಗಳಲ್ಲಿ ಲಕ್ಷಾಂತರ ಮಂದಿ ಇದನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಬಾರಿ ಅರಣ್ಯ ಇಲಾಖೆ ಹುಲಿಗಳ ಬಗ್ಗೆ ಹೆಚ್ಚಿ ನ ಒತ್ತು ನೀಡಿ ಈ ವಿಶೇಷ ಜಾಂಬೂರಿ ಪ್ರದರ್ಶನ ನಡೆ ದಿದ್ದು, ‘ಹುಲಿ ಮಂಡ್ಲಕೊಡ್ಲು’ ಎಂದು ಹೆಸರಿಡಲಾಗಿತ್ತು. ಗ್ರಾಮೀಣ ಪ್ರದೇಶದಲ್ಲಿ ಹುಲಿ ಓಡಾಟದ ದುರ್ಗಮ ಹಾದಿಗೆ ಹೀಗೆ ಕರೆಯುತ್ತಾರೆ. ಕಾಡು ಹಾಗೂ ಅರಣ್ಯ ಇಲಾಖೆಗೆ ಒಳಪಡುವ ಎಲ್ಲವನ್ನು ಒಂದೇ ಕಡೆ ಸೀಮಿತ ಪ್ರದೇಶದಲ್ಲಿ ನಿರ್ಮಿಸಿ ಪ್ರಾತ್ಯಕ್ಷಿಕೆ ನೀಡುವುದಕ್ಕೆ ‘ಅರಣ್ಯ ಜಾಂಬೂರಿ’ ಎಂದು ವಿಶ್ಲೇಷಿಸಲಾಗಿದೆ.
ಏನಿದರ ಉದ್ದೇಶ?: ಆಧುನಿಕ ಜೀವನಶೈಲಿಯ ಪರಿಣಾಮವಾಗಿ ದಿನೇ ದಿನೇ ನಾಶವಾ ಗುತ್ತಿರುವ ಅರಣ್ಯ ಸಂಪತ್ತು, ಅರಣ್ಯ ದೊಂದಿಗೆ ಕಡಿದು ಹೋಗು ತ್ತಿರುವ ಮಾನವನ ನಂಟು ಹಾಗೂ ಅದರ ಪರಿಣಾಮಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಅರಣ್ಯ ಇಲಾಖೆ ಮಂಗಳೂರು ವೃತ್ತದ ಕುಂದಾಪುರ ವಿಭಾಗ, ಬೈಂದೂರು ವಲಯದ ಸಹಕಾರದೊಂದಿಗೆ ‘ಹುಲಿ ಮಂಡ್ಲಕೊಡ್ಲು’ ಎಂಬ ಹೆಸರಿನಲ್ಲಿ ಅರಣ್ಯ ಲೋಕವನ್ನು ಸೃಷ್ಟಿಸಲಾಗಿತ್ತು. ಅರಣ್ಯ ದಲ್ಲಿರುವ ಜೀವಜಾಲ, ಸಹಜ ಪ್ರಕ್ರಿಯೆಗಳು ಪ್ರಕೃತಿಗೆ ಮಾತ್ರವಲ್ಲದೆ, ಮಾನವನ ಜೀವನ, ಕೃಷಿ ಹಾಗೂ ಪರಿಸರ ಸಮತೋಲನಕ್ಕೆ ಹೇಗೆ ಸಹಕಾರಿಯಾಗಿವೆ ಎಂಬ ಸಂದೇಶವನ್ನು ಇದು ಸಾರುವಂತಿತ್ತು.
ಕಾಡಿನ ನೈಜ್ಯತೆ: ಈ ಕೃತಕ ಕಾಡಿನೊಳಗೆ ಕಾಲಿಟ್ಟ ಕ್ಷಣದಿಂದಲೇ ನಿಜ ಅರಣ್ಯದೊಳಗೆ ಸಂಚರಿಸುತ್ತಿರುವ ಅನುಭವ ಮೂಡುವಂತಿತ್ತು. ಮುಂಭಾಗದಲ್ಲೇ ಕಾಣಸಿಗುವ ವೃಕ್ಷಮಾತೆ ಸಾಲುಮರದ ತಿಮ್ಮಕ್ಕರ ಪ್ರತಿಕೃತಿ ಕಾಡಿನ ಮಹತ್ವ ವನ್ನು ಜನರಿಗೆ ಸಾಕ್ಷೀಕರಿಸಿದ್ದು, ಒಳಭಾಗದಲ್ಲಿ ಕೃತಕಜಲಪಾತ ಗಳು, ಹರಿಯುವ ನದಿ, ಆನೆಗಳ ಘೀಳು, ಹುಲಿಯ ಘರ್ಜನೆ, ಜಿಂಕೆ-ಜಿರಾಫೆ ಗಳು, ಪಕ್ಷಿಗಳ ಕಲರವ ಅರಣ್ಯದ ಜೀವಂತ ಚಿತ್ರಣ ನೀಡುತ್ತಿದ್ದವು. ಅರಣ್ಯದೊಳಗೆ ಗುಹೆಯ ಮಾದರಿ ರಚಿಸಿದ್ದು ಜನರನ್ನು ಆಕರ್ಷಿಸಿತ್ತು.
ಕೊಲ್ಲೂರು ಮೂಕಾಂಬಿಕಾ ಅಭಯಾ ರಣ್ಯ, ಕೊಡಚಾದ್ರಿ ಬೆಟ್ಟದ ಕಾಡಿನ ದೃಶ್ಯ ಗಳನ್ನು ಯಥಾವತ್ತಾಗಿ ತೋರಿಸಲಾಗಿದೆ. ಅರಣ್ಯ ಇಲಾ ಖೆಯ ಕಾರ್ಯವ್ಯಾಪ್ತಿಯನ್ನು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ನಾಟಾ ಸಂಗ್ರಹಾಲಯ, ಸಸ್ಯಪಾಲನಾ ಕ್ಷೇತ್ರ, ವಲಯಾಧಿಕಾರಿಗಳ ಕಚೇರಿ, ಗ್ರಾಮ ಅರಣ್ಯ ಸಮಿತಿ, ವೀಕ್ಷಣಾ ಗೋಪುರದ ಮಾದರಿಗಳನ್ನು ಒಂದೇ ಸೂರಿನಡಿ ಪ್ರದರ್ಶಿಸಲಾಗಿದೆ. ಇದರಿಂದ ಅರಣ್ಯ ಸಂರಕ್ಷಣೆ, ವನ್ಯಜೀವಿ ರಕ್ಷಣೆ ಹಾಗೂ ಪರಿಸರ ಸಮತೋಲನದಲ್ಲಿ ಇಲಾಖೆ ಹಾಗೂ ಜನರ ಬದ್ಧತೆಯನ್ನು ಎಳೆಎಳೆಯಾಗಿ ರೂಪಿಸಲಾಗಿತ್ತು.
ಈ ಪ್ರದರ್ಶನದಲ್ಲಿ ಕಾಡಿನ ವಾತಾವರಣವನ್ನು ನಾಡಿಗೆ ತಂದು ಪರಿಚಯಿಸಲಾಗಿತ್ತು. ಕಾಡನ್ನೇ ನೋಡದಿರುವ ಇಂದಿನ ಯುವಪೀಳಿಗೆಗೆ ಕಾಡಿನ ಪ್ರತ್ಯಕ್ಷ ದರ್ಶನವಾಗಿದೆ. ವನ್ಯ ಪರಿಸರದಲ್ಲಿ ಬಂದ ಅನುಭವವಾಯಿತು ಎಂದು ವಿದ್ಯಾರ್ಥಿ ತನ್ಮಯ್ ಗಡಿಯಾರ್ ತಿಳಿಸಿದರು.
ಅರಣ್ಯ ಇಲಾಖೆಯವರು ರಚಿಸಿದ ಕೃತಕ ಅರಣ್ಯದ ಸೃಷ್ಟಿ ತುಂಬಾ ಅದ್ಭುತವಾಗಿದೆ. ಕಾಡಿನ ಸಂಪೂರ್ಣ ಚಿತ್ರಣವನ್ನು ಒಂದೆಡೆ ಪರಿಚಯಿಸಲಾಗಿದೆ ಎಂದು ರತನ್ ಬಿಜೂರ್ ಅಭಿಪ್ರಾಯಪಟ್ಟರು.
ರಾಜ್ಯ ಅರಣ್ಯ ಸಚಿವರ ಆದೇಶದಂತೆ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಹುಲಿ ಮಂಡ್ಲಕೊಡ್ಲು ಜಾಂಬೂರಿ ರಚಿಸಲಾಗಿತ್ತು. ಅಭಿವೃದ್ಧಿ ಹೆಸರಿನಲ್ಲಿ ನಾಶವಾಗುತ್ತಿರುವ ಅರಣ್ಯಗಳ ಸಂರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಯತ್ನವಿದು. ಸಮಗ್ರ ಅರಣ್ಯ ಅನುಭವ ನೀಡುವ ಪ್ರಯತ್ನ ಇದಾಗಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಪರಿಸರ ಪ್ರಜ್ಞೆ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ.
-ಜ್ಯೋತಿ ಸಂದೇಶ್ ಕುಮಾರ್, ಬೈಂದೂರು ವಲಯ ಅರಣ್ಯಾಧಿಕಾರಿ
ಬುಡಕಟ್ಟು ಜನಾಂಗ ಸಹಿತ ಅರಣ್ಯಕ್ಕೆ ಸಂಬಂಧಿಸಿದ ಹಲವು ವಿಚಾರಗಳನ್ನು ಮನಮುಟ್ಟುವಂತೆ ಚಿತ್ರಿಸಲಾಗಿದ್ದು, ಕಾಡಿನ ಬಗ್ಗೆ ಆಸಕ್ತಿ ಹಾಗೂ ಅರಿವು ಮೂಡಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
-ನ್ಯಾನ್ಸಿ ಫೆರ್ನಾಂಡಿಸ್, ಗೃಹಿಣಿ
ಕೃತಕ ಗುಹೆಯೊಳಗೆ ಕುಟುಂಬ ದವರೊಂದಿಗೆ ಹೋಗಿದ್ದು, ಇದು ಉತ್ತಮ ಅನುಭವ. ಕಾಲೇಜಿನ ದಿನಗಳಲ್ಲಿ ಟ್ರೆಕ್ಕಿಂಗ್ ಹೋಗುತ್ತಿದ್ದ ಅನುಭವ ಮತ್ತೆ ಆಗಿದೆ. ಅರಣ್ಯ ಇಲಾಖೆ ಕಾರ್ಯ ಶ್ಲಾಘನೀಯ.
-ಇಬ್ರಾಹೀಂ ಗಂಗೊಳ್ಳಿ, ಸಮಾಜ ಸೇವಕ
ಕಾಡಿನೊಂದಿಗೆ ಆದಿವಾಸಿಗಳ ನಂಟಿನ ಚಿತ್ರಣ
ಕಾಡಿನಲ್ಲಿ ವಾಸಿಸುವ ಬುಡಕಟ್ಟು ಜನಾಂಗ, ಆದಿವಾಸಿಗಳು ಮತ್ತವರ ಬದುಕು, ಗ್ರಾಮದಂಚಿನ ಮನೆಗಳು, ಕೃಷಿ ಚಟುವಟಿಕೆಗಳು, ಕಂಬಳ. ಅರಣ್ಯದಲ್ಲಿ ಬೆಳೆಯುವ ವಿವಿಧ ಗಿಡಗಳು, ಔಷಧೀಯ ಸಸ್ಯಗಳ ಮಾಹಿತಿ, ನಾಡು-ಕಾಡಿನ ಅವಿಭಾಜ್ಯ ಸಂಬಂಧ, ಗದ್ದೆ, ಕಡಲ ತೀರದ ಸಂರಕ್ಷಣೆ, ಕಡಲಾಮೆಗಳ ರಕ್ಷಣೆ, ಔಷಧೀಯ ವೃಕ್ಷಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಹಲವಾರು ದೃಶ್ಯಗಳು ಈ ಜಾಂಬೂರಿಯ ಪ್ರಮುಖ ಆಕರ್ಷಣೆಯ ಅಂಶಗಳೆನಿಸಿದ್ದವು.
ಮಂಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಕರಿಕಾಲನ್, ಕುಂದಾಪುರ ವಿಭಾಗದ ಉಪ ಸಂರಕ್ಷಣಾಧಿಕಾರಿ ರುತ್ರನ್ ಪಿ., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಪೂಜಾರಿ ಮಾರ್ಗದರ್ಶನದಲ್ಲಿ ಬೈಂದೂರು ವಲಯ ಅರಣ್ಯಾಧಿಕಾರಿ ಜ್ಯೋತಿ ಸಂದೇಶ್ ಹಾಗೂ ಸಿಬ್ಬಂದಿ ಈ ಚಟುವಟಿಕೆಯಲ್ಲಿ ತೊಡಸಿಕೊಂಡರು.







