ನಾಗರಿಕರ ಅಸಡ್ಡೆ: ಪ್ಲಾಸ್ಟಿಕ್ ತಿನ್ನುತ್ತಿರುವ ಜಾನುವಾರುಗಳು

ಯಡ್ರಾಮಿ: ಪುಟ್ಟ ಮಗು ಚಾಕ್ಲೆಟ್ಟೋ, ಐಸ್‌ಕ್ರೀಮೋ ತಿನ್ನುತ್ತ ಬಾಯಿಗೆ ಸ್ವಲ್ಪ ಕಾಗದ ಅಥವಾ ಪ್ಲಾಸ್ಟಿಕ್ ಹೋದರೆ ಪ್ರಳಯವಾದಂತೆ ವರ್ತಿಸುವ ಮನುಷ್ಯನ ಈ ಸೂಕ್ಷ್ಮತೆ ರಸ್ತೆ ಪಕ್ಕ ಪ್ಲಾಸ್ಟಿಕ್‌ನಲ್ಲಿ ಆಹಾರ ಸುತ್ತಿ ಬಿಸಾಡುವಾಗ ಅದೆಲ್ಲಿ ಅಡಗಿರುತ್ತದೋ ಗೊತ್ತಿಲ್ಲ. ಸಗರ ನಾಡು ಎಂದೇ ಖ್ಯಾತಿ ಪಡೆದಿರುವ ಯಡ್ರಾಮಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ರಾಶಿ ರಾಶಿ ಪ್ಲಾಸ್ಟಿಕ್ ಚೀಲ, ಬಾಟಲ್‌ಗಳು ಕಣ್ಣಿಗೆ ರಾಚುತ್ತಿವೆ.
ಸ್ವಚ್ಛಂದವಾಗಿ ಹುಲ್ಲುಗಾವಲಿನಲ್ಲಿ ತಿರುಗಾಡಿಕೊಂಡಿದ್ದ ನಾಯಿ, ಹಂದಿ, ಹಸುಗಳ ಹೊಟ್ಟೆಯಲ್ಲೂ ಈಗೀಗ ಮೂಟೆಗಟ್ಟಲೇ ಪ್ಲಾಸ್ಟಿಕ್ ಪತ್ತೆಯಾಗುತ್ತಿದೆ. ಆದರೆ, ಇದಕ್ಕೆ ದೂಷಿಸಬೇಕಾದುದು ಪ್ಲಾಸ್ಟಿಕ್ ನ್ನು ಅಲ್ಲ. ಬದಲಾಗಿ, ಅದನ್ನು ವೈಜ್ಞಾನಿಕವಾಗಿ ನಿರ್ವಹಿಸದೇ ಎಲ್ಲೆಂದರಲ್ಲಿ ಬಿಸಾಡುವ ನಾಗರಿಕರ ಅಸಡೆಯನ್ನು. ಮನೆಯಲ್ಲಿ ಉಳಿದ ಆಹಾರ, ಕೊಳೆತ ತರಕಾರಿ, ಹಾಳಾದ ಹಣ್ಣುಗಳನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಿ ರಸ್ತೆ ಪಕ್ಕ ಎಸೆಯುವ ಜನರಿಂದಾಗಿ ಈ ಸಮಸ್ಯೆ ಸೃಷ್ಟಿಯಾಗಿದೆ.
ಜಾನುವಾರುಗಳು ಆಹಾರವನ್ನು ತಿನ್ನುವ ಧಾವಂತದಲ್ಲಿ ಪ್ಲಾಸ್ಟಿಕ್ ಕೂಡಾ ಅವುಗಳ ಹೊಟ್ಟೆ ಸೇರುತ್ತಿವೆ. ಜೀರ್ಣವಾಗಿ ಹೊರ ಹೋಗದೆ, ಆ ಪ್ಲಾಸ್ಟಿಕ್ ಗಳು ಹೊಟ್ಟೆಯಲ್ಲಿಯೇ ಉಳಿದುಕೊಳ್ಳುತ್ತದೆ. ಪ್ರಾಣಿಗಳ ಹೊಟ್ಟೆಯಲ್ಲಿ ಶೇ.75ರಷ್ಟು ಪ್ಯಾಸ್ಟಿಕ್ ತುಂಬುವವರೆಗೆ ಗೊತ್ತಾಗುವುದಿಲ್ಲ. ಯಾವುದೇ ಲಕ್ಷಣಗಳು ಸಹ ಗೋಚರಿಸುವುದಿಲ್ಲ ಜಾನುವಾರುಗಳಲ್ಲಿ ನಾಲ್ಕು ಉದರಗಳಿದ್ದು ಅದರಲ್ಲಿ ತುಂಬ ದೊಡ್ಡದಾದ ರುಮೇನ್‌ನಲ್ಲಿ ಪ್ಲಾಸ್ಟಿಕ್ ಸಂಗ್ರಹವಾಗುತ್ತದೆ. ದೊಡ್ಡ ಜಾನುವಾರುಗಳ ದೊಡ್ಡ ಹೊಟ್ಟೆಯು 150 ಕೆ.ಜಿ.ವರೆಗೆ ಇದ್ದು ಇದರ ಬಹುಭಾಗ ಪ್ಲಾಸ್ಟಿಕ್ ಆಕ್ರಮಿಸಿಕೊಳ್ಳುತ್ತದೆ. ಶಸ್ತ್ರ ಚಿಕಿತ್ಸೆಯ ಮೂಲಕ 40 ರಿಂದ 80 ಕೆ.ಜಿವರೆಗೆ ದನಗಳ ಹೊಟ್ಟೆಯಿಂದ ಪ್ಲಾಸ್ಟಿಕ್ ಹೊರತೆಗೆದ ಉದಾಹರಣೆಗಳೂ ಇವೆ.
ನಿರಂತರವಾಗಿ ಆಹಾರದ ಮುಖಾಂತರ ಪ್ಲಾಸ್ಟಿಕ್ ಹೊಟ್ಟೆ ಸೇರುವುದರಿಂದ ನಿಧಾನವಾಗಿ ಲಿವರ್ ಕಿಡ್ನಿಯಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆಗ ಲಕ್ಷಣಗಳು ಗೋಚರವಾಗುತ್ತವೆ. ಅಲ್ಲಿಯವರೆಗೆ ಆರೋಗ್ಯದಲ್ಲೇನೂ ಸಮಸ್ಯೆ ಉಂಟಾಗುವುದಿಲ್ಲ. ದನ-ಕರುಗಳಿಗೆ ಚಿಕಿತ್ಸೆ ನೀಡಿ ಹೊಟ್ಟೆಯಿಂದ ಪ್ಲಾಸ್ಟಿಕ್ ತೆಗೆಯಬಹುದು. ಆದರೆ ವನ್ಯಜೀವಿಗಳಿಗೆ ಈ ಅದೃಷ್ಟ ಕಡಿಮೆ. ಅವುಗಳಲ್ಲಿ ಯಾವುದೇ ರೋಗ ಕಾಣಿಸಿಕೊಂಡರೂ ಗೊತ್ತಾಗುವುದಿಲ್ಲ. ಹೀಗಾಗಿ ಸಾವೊಂದೇ ಅವುಗಳ ಮುಂದಿರುವ ಆಯ್ಕೆ. ಅಪ್ಪಿತಪ್ಪಿ ಸತ್ತಿದ್ದು ಗಮನಕ್ಕೆ ಬಂದಾಗ ಪರೀಕ್ಷೆ ವೇಳೆ ಅವುಗಳ ಹೊಟ್ಟೆಯಲ್ಲೂ ಪ್ಲಾಸ್ಟಿಕ್ ಇರುವುದು ಪತ್ತೆಯಾಗಿದೆ ಎನ್ನುತ್ತಾರೆ ಹಿರಿಯ ಪಶುವೈದ್ಯರು.
ಪ್ಲಾಸ್ಟಿಕ್ ಸಮಸ್ಯೆಯಲ್ಲ. ಅದನ್ನು ಎಲ್ಲೆಂದರಲ್ಲಿ ವಿಲೇವಾರಿ ಮಾಡುವುದರಿಂದ ಸಮಸ್ಯೆಗಳಾಗುತ್ತಿವೆ. ಅದರಲ್ಲೂ ಪ್ಲಾಸ್ಟಿಕ್‌ನಲ್ಲಿ ಆಹಾರ ಪದಾರ್ಥಗಳನ್ನು ಸುತ್ತಿ ಬಿಸಾಡುವುದರಿಂದ ಅವುಗಳನ್ನು ಸೇವಿಸುವ ಪ್ರಾಣಿಗಳ ಹೊಟ್ಟೆಗೆ ಪ್ಲಾಸ್ಟಿಕ್ ಸೇರಿ ಆರೋಗ್ಯದ ಸಮಸ್ಯೆ ಆಗುತ್ತಿದೆ. ಪೌಷ್ಟಿಕಾಂಶ ಕೊರತೆಯಿಂದ ಜಾನುವಾರುಗಳು ಪ್ಲಾಸ್ಟಿಕ್, ಬಟ್ಟೆ, ಹಗ್ಗ ಇತ್ಯಾದಿಗಳನ್ನು ತಿನ್ನುತ್ತವೆ. ರೈತರು ಪಟ್ಟಣ ಪ್ರದೇಶಗಳಲ್ಲಿ ಜಾನುವಾರುಗಳನ್ನು ಬಿಡಾಡಿಯಾಗಿ ಬಿಡದೇ ಮನೆಯಲ್ಲಿ ಪೋಷಿಸಬೇಕು. ಜಾನುವಾರು ಪ್ಲಾಸ್ಟಿಕ್ ವಸ್ತುಗಳನ್ನು ತಿನ್ನದಂತೆ ನೋಡಿಕೊಳ್ಳಬೇಕು.
<ಡಾ. ಪ್ರಭು ಕಲ್ಲೂರ, ಮುಖ್ಯ ಪಶು ವೈದ್ಯಾಧಿಕಾರಿ, ಆಡಳಿತ ಪಶು ಆಸ್ಪತ್ರೆ, ಯಡ್ರಾಮಿ






