ಕಸವೇ ಸಂಪತ್ತು: ರಾಯಚೂರಿನಲ್ಲಿ ನವೀನ ನಿರ್ವಹಣಾ ಮಾದರಿ

ರಾಯಚೂರು: ಇದುವರೆಗೆ ನಗರದ ಮೂಲೆ ಮೂಲೆಗಳಲ್ಲಿ ತಲೆನೋವಾಗಿದ್ದ ಕಸ ಸಮಸ್ಯೆಯನ್ನು ಈಗ ಸಂಪನ್ಮೂಲವನ್ನಾಗಿ ಪರಿವರ್ತಿಸುವ ಹೊಸ ಪ್ರಯತ್ನಕ್ಕೆ ರಾಯಚೂರು ಮಹಾನಗರ ಪಾಲಿಕೆ ಮುಂದಾಗಿದೆ.
ಕೇವಲ ಕಸ ವಿಲೇವಾರಿ ಮಾಡುವ ವ್ಯವಸ್ಥೆಯಷ್ಟೇ ಅಲ್ಲದೆ, ‘ಕಸದಿಂದ ಆದಾಯ-ಕಸದಿಂದ ಪರಿಸರ ಸಂರಕ್ಷಣೆ’ ಎಂಬ ಪರಿಕಲ್ಪನೆಯನ್ನು ಆಧರಿಸಿ ನಗರದಲ್ಲಿ ಸುಸ್ಥಿರ ಘನ-ತ್ಯಾಜ್ಯ ನಿರ್ವಹಣಾ ಮಾದರಿಯನ್ನು ಜಾರಿಗೆ ತರಲಾಗುತ್ತಿದೆ.
ನಗರದಲ್ಲಿ ಪ್ರತಿದಿನ ಟನ್‌ಗಟ್ಟಲೆ ಸಂಗ್ರಹವಾಗುತ್ತಿರುವ ಘನ ತ್ಯಾಜ್ಯವನ್ನು ಸಂಪೂರ್ಣವಾಗಿ ಡಂಪ್‌ಯಾರ್ಡ್‌ಗೆ ಸಾಗಿಸುವ ಬದಲು, ಅದರಲ್ಲಿ ಮರುಬಳಕೆ ಸಾಧ್ಯವಿರುವ ವಸ್ತುಗಳನ್ನು ಪ್ರತ್ಯೇಕಿಸಿ ಪುನರ್ಬಳಕೆಗೆ ಕಳುಹಿಸುವ ವ್ಯವಸ್ಥೆಯನ್ನು ಮಹಾನಗರ ಪಾಲಿಕೆ ರೂಪಿಸಿದೆ. ಇದರಿಂದ ಕಸದ ಪ್ರಮಾಣ ಕಡಿಮೆಯಾಗುವುದರ ಜೊತೆಗೆ ಪರಿಸರ ಮಾಲಿನ್ಯ ನಿಯಂತ್ರಣಕ್ಕೂ ನೆರವಾಗಲಿದೆ.
‘ಬಳಕೆಯಿಲ್ಲದ್ದು’ ಮತ್ತೊಬ್ಬರಿಗೆ ಉಪಯೋಗ ನಗರದಲ್ಲಿ ಆರಂಭವಾಗುತ್ತಿರುವ ಟ್ರಿಪಲ್‌ಆರ್ (ಡಿeಜuಛಿe-ಡಿeuse-ಡಿeಛಿಥಿಛಿಟe) ಸೆಂಟರ್‌ಗಳು ಈ ಯೋಜನೆಯ ಪ್ರಮುಖ ಆಕರ್ಷಣೆ. ಜನರು ಬಳಸದೆ ಉಳಿದ ಹಳೆಯ ಬಟ್ಟೆ, ಆಟಿಕೆ, ಪುಸ್ತಕ, ಶೂ, ಪ್ಲಾಸ್ಟಿಕ್ ವಸ್ತುಗಳು, ಗೃಹೋಪಯೋಗಿ ಸಾಮಗ್ರಿಗಳನ್ನು ಇಲ್ಲಿ ನೀಡಬಹುದು. ಅವುಗಳನ್ನು ಅಗತ್ಯವಿರುವವರು ಪಡೆದು ಮರುಬಳಕೆ ಮಾಡಿಕೊಳ್ಳಬಹುದು.
ಇದು ಕೇವಲ ಕಸ ನಿರ್ವಹಣೆಯಲ್ಲ; ಬಡ ಮತ್ತು ಅಗತ್ಯವಿರುವ ಕುಟುಂಬಗಳಿಗೆ ಸಹಾಯ ಮಾಡುವ ಸಾಮಾಜಿಕ ವ್ಯವಸ್ಥೆಯೂ ಆಗಲಿದೆ.
ಚಿಂದಿ ಆಯುವವರಿಗೆ ಗೌರವಯುತ ಬದುಕು: ಕಸದ ಗುಡ್ಡಗಳಲ್ಲಿ ಜೀವನ ಸಾಗಿಸುತ್ತಿದ್ದ ಚಿಂದಿ ಆಯುವವರನ್ನು ಈಗ ಅಧಿಕೃತ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯ ಭಾಗವಾಗಿಸಲಾಗುತ್ತಿದೆ. ‘ಹಸಿರು ದಳ’ ಸಂಸ್ಥೆಯ ಸಹಯೋಗದಲ್ಲಿ ಸುಮಾರು 80 ಮಂದಿಯನ್ನು ಗುರುತಿಸಿ, ತ್ಯಾಜ್ಯ ವಿಂಗಡಣೆ ಮತ್ತು ಸಂಗ್ರಹ ಕಾರ್ಯದಲ್ಲಿ ತೊಡಗಿಸಲಾಗುತ್ತಿದೆ. ಇದರಿಂದ ಇವರಿಗೆ ಸ್ಥಿರ ಆದಾಯದ ಜೊತೆಗೆ ಸಾಮಾಜಿಕ ಭದ್ರತೆಯ ಅವಕಾಶವೂ ಸಿಗಲಿದೆ. ನಗರ ಸ್ವಚ್ಛತೆಗೆ ಇವರ ಪಾತ್ರಕ್ಕೂ ಮಾನ್ಯತೆ ದೊರಕುತ್ತಿದೆ.
ಆರ್‌ಆರ್‌ಆರ್ ಸೆಂಟರ್‌ಗಳು, ಎಂಆರ್‌ಎಫ್ ಹಾಗೂ ಎಸ್‌ಎಲ್‌ಎಫ್‌ನ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿವೆ. ಶೀಘ್ರದಲ್ಲಿಯೇ ಅಂತರ್‌ರಾಷ್ಟ್ರೀಯ ಗುಣಮಟ್ಟದಲ್ಲಿ ಕಸ ವಿಲೇವಾರಿ ಪ್ರಕ್ರಿಯೆಯನ್ನು ಆರಂಭಿಸಲಾಗುವುದು.
-ಜುಬಿನ್ ಮೊಹಾಪಾತ್ರ ಆಯುಕ್ತರು ಮಹಾನಗರ ಪಾಲಿಕೆ
ಎಲ್ಲೆಲ್ಲಿ ಸ್ಥಾಪನೆ?:
ಆರ್‌ಆರ್ ಸೆಂಟರ್‌ಗಳನ್ನು ಕಾರ್ಯಾರಂಭ ಮಾಡುವುದರ ಜೊತೆಗೆ ಯಾವ ರೀತಿಯಾಗಿ ಅವುಗಳನ್ನು ನಿರ್ವಹಿಸಬೇಕು ಎನ್ನುವುದರ ಕುರಿತು ರಾಯಚೂರು ಮಹಾನಗರ ಪಾಲಿಕೆಯು ಆಳವಾದ ಅಧ್ಯಯನ ನಡೆಸಿ ಯೋಜನೆಯನ್ನು ರೂಪಿಸಿ ಕಾರ್ಯಗತಗೊಳಿಸಿದೆ. ಆರಂಭದಲ್ಲಿ ರಾಯಚೂರು ನಗರದ ವಾರ್ಡ್ ನಂ.5ರ ವ್ಯಾಪ್ತಿಗೆ ಬರುವ ನಿಜಲಿಂಗಪ್ಪ ಕಾಲನಿಯಲ್ಲಿ ಅದೇ ರೀತಿ ವಾರ್ಡ್ ನಂ.26 ಗಂಜ್‌ಏರಿಯಾದಲ್ಲಿ ಈ ಟ್ರಿಪಲ್‌ಆರ್ ಸೆಂಟರ್‌ಗಳನ್ನು ಸ್ಥಾಪಿಸಿದೆ. ಮುಂದಿನ ಮೂರು ತಿಂಗಳಲ್ಲಿ ನಗರದ ವ್ಯಾಪ್ತಿಯಲ್ಲಿರುವ ಹತ್ತು ಪ್ಯಾಕೇಜ್‌ಗಳಲ್ಲಿ ಪ್ರತಿ ಮೂರು ವಾರ್ಡ್‌ಗಳಿಗೆ ಒಂದರಂತೆ ಈ ಆರ್‌ಆರ್‌ಆರ್ ಕೇಂದ್ರಗಳನ್ನು ಆರಂಭಿಸಲು ನೀಲನಕ್ಷೆಯನ್ನು ರೂಪಿಸಿಕೊಂಡಿದೆ.
ಮಹಾನಗರ ಪಾಲಿಕೆಯು ಘನ-ತ್ಯಾಜ್ಯದ ವಿಲೇವಾರಿ, ವಿಂಗಡಣೆ, ಮರುಬಳಕೆ, ಹೆಚ್ಚಿನ ಪ್ರಮಾಣದಲ್ಲಿ ಕಸ ಸಂಗ್ರಹವಾಗದಂತೆ ಮುನ್ನೆಚ್ಚರಿಕೆ ಹಾಗೂ ನೈರ್ಮಲ್ಯದಡಿ ನಿವಾಸಿಗಳ ಆರೋಗ್ಯ, ಪರಿಸರ ಸಂರಕ್ಷಣೆಯ ಸದುದ್ದೇಶವನ್ನು ಹೊಂದಿ ಅಂತರ್‌ರಾಷ್ಟ್ರೀಯ ಗುಣಮಟ್ಟದ ಸುಸ್ಥಿರ ತ್ಯಾಜ್ಯ ನಿರ್ವಹಣೆಗೆ ಮುಂದಾಗಿದೆ. ಇದಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು, ಸಂಘ-ಸಂಸ್ಥೆಗಳು ಮುಖ್ಯವಾಗಿ ನಾಗರಿಕರು ಸಹಕಾರ ನೀಡಬೇಕಿದೆ.
ಯಕ್ಲಾಸಪುರ ಡಂಪ್ ಯಾರ್ಡ್‌ಗೆ ಹೊಸ ರೂಪ
ಇದುವರೆಗೆ ಕೇವಲ ಕಸ ಸುರಿಯುವ ಪ್ರದೇಶವಾಗಿದ್ದ ನಗರದ ಹೊರ ವಲಯದ ಯಕ್ಲಾಸಪುರ ಡಂಪ್‌ಯಾರ್ಡ್ ಈಗ ಅತ್ಯಾಧುನಿಕ ತ್ಯಾಜ್ಯ ಸಂಸ್ಕರಣಾ ಕೇಂದ್ರವಾಗಿ ರೂಪುಗೊಳ್ಳುತ್ತಿದೆ. ಸುಮಾರು 5.40 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಎಂಆರ್‌ಎಫ್ ಘಟಕದಲ್ಲಿ ಕಸವನ್ನು ಯಾಂತ್ರಿಕವಾಗಿ ವಿಂಗಡಿಸಿ ಪ್ಲಾಸ್ಟಿಕ್, ಕಾಗದ, ಲೋಹಗಳನ್ನು ಮರುಬಳಕೆಗೆ ಕಳುಹಿಸಲಾಗುತ್ತದೆ. ಉಳಿದ ಹಸಿ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸಲಾಗುತ್ತದೆ. ಮರುಬಳಕೆ ಸಾಧ್ಯವಿಲ್ಲದ ಕಸವನ್ನು ವೈಜ್ಞಾನಿಕ ವಿಧಾನದಲ್ಲಿ ಸ್ಯಾನಿಟರಿ ಲ್ಯಾಂಡ್‌ಫೀಲ್‌ನಲ್ಲಿ ಹೂಳಲಾಗುತ್ತದೆ.
ಸಾಮಾನ್ಯವಾಗಿ ನಗರಗಳಲ್ಲಿ ಕಸ ಸಮಸ್ಯೆ ಎಂದರೆ ಡಂಪ್‌ಯಾರ್ಡ್, ದುರ್ವಾಸನೆ ಮತ್ತು ಮಾಲಿನ್ಯದ ಚಿತ್ರಣ ಮೂಡುತ್ತದೆ. ಆದರೆ ರಾಯಚೂರಿನಲ್ಲಿ ‘ಕಸವೇ ಸಂಪತ್ತು’ ಎಂಬ ಪರಿಕಲ್ಪನೆಯಡಿ ಪರಿಸರ ಸ್ನೇಹಿ ನಗರ ನಿರ್ಮಾಣದತ್ತ ಹೆಜ್ಜೆ ಇಡಲಾಗುತ್ತಿದೆ. ಯೋಜನೆ ಯಶಸ್ವಿಯಾದರೆ ರಾಯಚೂರು ಕಲ್ಯಾಣ ಕರ್ನಾಟಕ ಭಾಗದಲ್ಲೇ ಸುಸ್ಥಿರ ಘನ-ತ್ಯಾಜ್ಯ ನಿರ್ವಹಣೆಯ ಮಾದರಿ ನಗರವಾಗಿ ಹೊರಹೊಮ್ಮುವ ಸಾಧ್ಯತೆ ಇದೆ.






