ಕುಡಿಯುವ ನೀರಿನ ಕೆರೆಗೆ ಕನ್ನ: ಅಧಿಕಾರಿಗಳ ಮೌನಕ್ಕೆ ಜನಾಕ್ರೋಶ

ಕನಕಗಿರಿ : ಪಟ್ಟಣದ ಜೀವನಾಡಿ ಲಕ್ಷ್ಮೀದೇವಿ ಕೆರೆಯ ಹಿಂಭಾಗದಲ್ಲಿ ಕಳೆದ ಒಂದು ತಿಂಗಳಿಂದ ಅಕ್ರಮ ಮರಂ ಗಣಿಗಾರಿಕೆ ರಾಜಾರೋಷವಾಗಿ ನಡೆಯುತ್ತಿದ್ದರೂ, ಸಣ್ಣ ನೀರಾವರಿ, ಕಂದಾಯ, ಪೊಲೀಸ್ ಇಲಾಖೆಗಳು ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ತುಂಗಭದ್ರಾ ನದಿಯಿಂದ ಪೈಪೆಲೈನ್ ಮೂಲಕ ನೀರು ತುಂಬಿಸಿ ಪಟ್ಟಣದ ಕುಡಿಯುವ ನೀರಿಗೆ ಬಳಕೆಯಾಗುವ ಈ ಕೆರೆಯ ಹಿಂದಿನ ಸಣ್ಣ ಕೆರೆಯಲ್ಲಿ ರಾತ್ರಿಯಾದರೆ ಸಾಕು ಜೆಸಿಬಿ, ಟಿಪ್ಪರ್‌ಗಳ ಅಬ್ಬರ. ಈಗಾಗಲೇ 3-4 ಎಕರೆ ಪ್ರದೇಶದಲ್ಲಿ 8-10 ಅಡಿ ಆಳ ಗುಂಡಿ ತೋಡಿ ಮರಂ ಸಾಗಿಸಲಾಗಿದೆ. ಹತ್ತಾರು ವರ್ಷ ಹಿಂದೆ ಅರಣ್ಯ ಇಲಾಖೆ ಬೆಳೆಸಿದ್ದ ನೀಲಗಿರಿ ಗಿಡಗಳನ್ನೂ ಕಿತ್ತೆಸೆದು ಅಗೆಯಲಾಗಿದೆ.
ಅಪಾಯದ ಭೀತಿ: ಕೆರೆ ದಡ, ರಸ್ತೆ ಪಕ್ಕದಲ್ಲೇ ಮನಸೋ ಇಚ್ಛೆ ಗುಂಡಿ ತೋಡಿರುವುದರಿಂದ ಮಳೆಗಾಲದಲ್ಲಿ ಕೆರೆ ತುಂಬಿದಾಗ ಜಾನುವಾರು, ಮಕ್ಕಳು ಬಿದ್ದು ಪ್ರಾಣಾಪಾಯ ಸಂಭವಿಸುವ ಭೀತಿ ಇದೆ. ಅಪಘಾತವಾದರೆ ಹೊಣೆ ಯಾರು? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ವನ್ಯಜೀವಿಗಳಿಗೆ ಸಂಕಷ್ಟ: ಕುರುಚಲು ಕಾಡಿನ ಈ ಪ್ರದೇಶ ನವಿಲು, ನರಿ, ಮೊಲಗಳ ಆವಾಸ. ರಾತ್ರಿಯ ಜೆಸಿಬಿ ಸದ್ದಿಗೆ ಪ್ರಾಣಿ-ಪಕ್ಷಿಗಳ ನಿದ್ದೆಗೆ ಭಂಗವಾಗಿದೆ.
ತಹಶೀಲ್ದಾರ್ ಆದೇಶಕ್ಕೆ ಕಿಮ್ಮತ್ತಿಲ್ಲ: ಅಕ್ರಮ ಮರಳು ದಂಧೆ ತಡೆಗೆ ಕೆರೆ, ಹಳ್ಳ, ನದಿ ದಂಡೆ ಪ್ರವೇಶ ನಿಷೇಧಿಸಿ ತಹಶೀಲ್ದಾರ್ ಆದೇಶಿಸಿದ್ದಾರೆ. ಆದರೆ ಧಿಕ್ಕರಿಸಿ ವಾಹನ ಸಮೇತ ನುಗ್ಗಿ ಮರಂ ಲೂಟಿ ಮಾಡುತ್ತಿರುವುದು ಆಡಳಿತದ ವೈಫಲ್ಯಕ್ಕೆ ಸಾಕ್ಷಿ ಎಂದು ಗ್ರಾಪಂ ಮಾಜಿ ಸದಸ್ಯ ನಿಂಗಪ್ಪ ಪೂಜಾರ ಹೇಳುತ್ತಾರೆ.
ಸರಕಾರಿ ಆಸ್ತಿ ಲೂಟಿ ಆಗುತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದೆ. ದಂಧೆಕೋರರಿಗೆ ಯಾರ ಅಭಯ? ಕುಡಿಯುವ ನೀರಿನ ಕೆರೆ ಲೂಟಿ ಆಗುತ್ತಿದೆ. ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಉಗ್ರ ಪ್ರತಿಭಟನೆ ನಡೆಸುತ್ತೇವೆ.
-ಪಾಮಣ್ಣ ಅರಳಿಗನೂರು,
ಪ್ರಗತಿಪರ ಚಿಂತಕರು ಕನಕಗಿರಿ
ಲಕ್ಷ್ಮೀದೇವಿ ಕೆರೆ ದಡದಲ್ಲಿ ಅಕ್ರಮ ಮರಂ ಗಣಿಗಾರಿಕೆ ನಡೆಯುತ್ತಿರುವ ಮಾಹಿತಿ ಇಲ್ಲಿಯವರೆಗೆ ನಮಗೆ ತಲುಪಿರಲಿಲ್ಲ. ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವುದು ಗಂಭೀರ ಅಪರಾಧ. ಕೂಡಲೇ ಸ್ಥಳ ಪರಿಶೀಲಿಸಿ, ಅಕ್ರಮದಲ್ಲಿ ತೊಡಗಿರುವವರನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಲಾಗುವುದು.
-ವಿ.ನಾರಾಯಣ, ಪಿಐ ಕನಕಗಿರಿ






