ಐತಿಹಾಸಿಕ ‘ನೂರಾ ಒಂದು ಬಾಗಿಲು’ ಕಟ್ಟಡ ಶಿಥಿಲ

ಲಿಂಗಸುಗೂರು: ಪಟ್ಟಣದ ಹೃದಯ ಭಾಗದಲ್ಲಿದ್ದ ಐತಿಹಾಸಿಕ ‘ನೂರಾ ಒಂದು ಬಾಗಿಲು’ ಕಟ್ಟಡದ ಒಂದು ಭಾಗ ಕುಸಿದು ಬಿದ್ದಿದ್ದು, ಪಾರಂಪರಿಕ ಕಟ್ಟಡಗಳ ಸಂರಕ್ಷಣೆಯಲ್ಲಿ ತಾಲೂಕು ಆಡಳಿತದ ನಿರ್ಲಕ್ಷ್ಯ ಬೆಳಕಿಗೆ ಬಂದಿದೆ.
ಶತಮಾನಗಳ ಇತಿಹಾಸ ಹೊಂದಿದ್ದ ಈ ಕಟ್ಟಡ ಅವಶೇಷಗಳ ನಡುವೆ ಅಸ್ತಿತ್ವ ಕಾಪಾಡಿಕೊಳ್ಳಲು ಹೋರಾಟ ನಡೆಸುತ್ತಿರುವುದು ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ.
ಕಟ್ಟಡದ ಮೇಲ್ಛಾವಣಿಯ ಒಂದೆರಡು ಭಾಗಗಳು ಕುಸಿದು ಬಿದ್ದು ವರ್ಷಗಳೇ ಕಳೆದಿವೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿರಲಿಲ್ಲ ಎನ್ನಲಾಗಿದೆ. ಆದರೆ ಸ್ಥಳೀಯರು ಮತ್ತು ಇತಿಹಾಸಾಸಕ್ತರು ಇದನ್ನು ‘‘ಆಡಳಿತದ ನಿರ್ಲಕ್ಷ್ಯದ ದುರಂತ’’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ರಿಟಿಷರ ಕಾಲದಲ್ಲಿ ಈ ಕಟ್ಟಡ ಪಟ್ಟಣದ ವೈಭವದ ಸಂಕೇತವಾಗಿತ್ತು. ವಿಶಿಷ್ಟ ವಾಸ್ತುಶಿಲ್ಪ, ನೂರಕ್ಕೂ ಹೆಚ್ಚು ಮರದ ಬಾಗಿಲುಗಳು, ಭವ್ಯ ಆವರಣ ಹಾಗೂ ಐತಿಹಾಸಿಕ ಹಿನ್ನೆಲೆಯಿಂದ ಈ ಕಟ್ಟಡ ಜನರನ್ನು ಆಕರ್ಷಿಸುತ್ತಿತ್ತು. ಈ ಕಟ್ಟಡದಲ್ಲಿ ಸಹಾಯಕ ಆಯುಕ್ತರ ಕಚೇರಿ ಇದೆ. ಈ ಹಿಂದೆ ತಹಶೀಲ್ದಾರರ ಕಚೇರಿಯೂ ಇದೇ ಕಟ್ಟಡದಲ್ಲಿತ್ತು. ತಹಶೀಲ್ದಾರರ ಕಚೇರಿ ಮಿನಿವಿಧಾನ ಸೌಧಕ್ಕೆ ಸ್ಥಳಾಂತರಗೊಂಡ ಬಳಿಕ ನಿರ್ವಹಣೆ ಕೊರೆತೆಯಿಂದ ಶಿಥಿಲಗೊಂಡಿದೆ. ಈ ಕಟ್ಟಡವನ್ನು ಸಂರಕ್ಷಿಸಬೇಕೆಂಬ ಬೇಡಿಕೆ ವರ್ಷಗಳಿಂದ ಕೇಳಿಬರುತ್ತಿದ್ದರೂ, ಅಧಿಕಾರಿಗಳು ಕಡತಗಳಲ್ಲೇ ವಿಚಾರವನ್ನು ಸೀಮಿತಗೊಳಿಸಿದ್ದಾರೆ ಎಂದು ನಾಗರಿಕರು ದೂರಿದ್ದಾರೆ.
ಸ್ಥಳೀಯ ಇತಿಹಾಸ ಸಂಶೋಧಕರ ಪ್ರಕಾರ, ಈ ಕಟ್ಟಡಕ್ಕೆ ಕನಿಷ್ಠ ನೂರು ವರ್ಷಗಳಿಗಿಂತ ಹೆಚ್ಚಿನ ಇತಿಹಾಸವಿದ್ದು, ಪುರಾತತ್ವ ಇಲಾಖೆಯ ಅಧೀನಕ್ಕೆ ತೆಗೆದುಕೊಂಡು ಸಂರಕ್ಷಣೆ ಮಾಡಬೇಕಾಗಿತ್ತು. ಆದರೆ ಇಲಾಖೆಗಳ ಮಧ್ಯೆ ಸಮನ್ವಯದ ಕೊರತೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಟ್ಟಡ ಹಾಳಾಗುತ್ತಾ ಬಂದಿದೆ. ಅನಧಿಕೃತ ಬಳಕೆ, ನಿರ್ವಹಣೆಯ ಕೊರತೆ ಮತ್ತು ಮಳೆ ನೀರು ನುಗ್ಗುವುದರಿಂದ ಕಟ್ಟಡದ ಸ್ಥಿತಿ ಮತ್ತಷ್ಟು ದುರ್ಬಲಗೊಂಡಿದೆ.
‘‘ಪಟ್ಟಣದ ಐತಿಹಾಸಿಕ ಸ್ಮಾರಕಗಳು ಒಂದೊಂದಾಗಿ ಕುಸಿಯುತ್ತಿವೆ. ಅಧಿಕಾರಿಗಳು ಪರಿಶೀಲನೆ ನಡೆಸಿ ತೆರಳುವುದರ ಹೊರತು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆದರೆ ಪಟ್ಟಣದ ಸೌಂದರ್ಯೀಕರಣದ ಹೆಸರಲ್ಲಿ ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸಿರುವ ತಾಲೂಕು ಆಡಳಿತ, ಐತಿಹಾಸಿಕ ಕಟ್ಟಡದ ರಕ್ಷಣೆ ಮುಂದಾಗುತ್ತಿಲ್ಲ. ಸಂಪೂರ್ಣ ಕಟ್ಟಡ ಕುಸಿದ ನಂತರವೇ ಎಚ್ಚರವಾಗಲಿದೆಯೇ?’’ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಪಟ್ಟಣದ ಐತಿಹಾಸಿಕ ಪರಂಪರೆಯನ್ನು ಉಳಿಸಬೇಕಾದ ಜವಾಬ್ದಾರಿ ಹೊಂದಿರುವ ಆಡಳಿತ ವ್ಯವಸ್ಥೆ ಕಣ್ಮುಚ್ಚಿ ಕುಳಿತಿರುವುದರಿಂದ ‘‘ನೂರಾ ಒಂದು ಬಾಗಿಲು’’ ಕಟ್ಟಡದ ಕುಸಿತವು ಇತಿಹಾಸದ ನಿರ್ಲಕ್ಷ್ಯದ ಪ್ರತೀಕವಾಗಿ ಪರಿಣಮಿಸಿದೆ.
ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದಂತಹ ನೂರಾ ಒಂದು ಬಾಗಿಲುಗಳನ್ನು ಹೊಂದಿರುವ ಐತಿಹಾಸಿಕ ಕಟ್ಟಡ ನಿರ್ವಹಣೆ ಕೊರತೆ ಹಾಗೂ ನಿರ್ಲಕ್ಷ್ಯದಿಂದ ಕುಸಿಯುತ್ತಿದೆ. ಪ್ರಾಚ್ಯವಸ್ತು ಇಲಾಖೆ ಹಾಗೂ ತಾಲೂಕು ಆಡಳಿತ ಜಂಟಿಯಾಗಿ ಐತಿಹಾಸಿಕ ಕಟ್ಟಡವನ್ನು ಸಂರಕ್ಷಿಸಿ ಜೀರ್ಣೋದ್ಧಾರ ಮಾಡಬೇಕು.
-ಮಹಾದೇವಪ್ಪ ನಾಗರಹಾಳ
ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು ಲಿಂಗಸುಗೂರು ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು ಲಿಂಗಸುಗೂರು






