ಜೆಸ್ಕಾಂ ಎಇಇ ಕಚೇರಿ ಕಟ್ಟಡ ನಿರ್ಮಾಣಕ್ಕೆ ಗ್ರಹಣ

ಕಂಪ್ಲಿ : ತಾಲೂಕು ಕೇಂದ್ರವಾದ ಬಹುದಿನಗಳ ನಂತರ ಸ್ಥಳೀಯ ಶಾಸಕರ ಮುತುವರ್ಜಿಯಿಂದಾಗಿ ಪಟ್ಟಣದಲ್ಲಿ ಜೆಸ್ಕಾಂ ಎಇಇ ಕಛೇರಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ಸಿಕ್ಕಿದೆ. ಆದರೆ, ಅಡಿಗಲ್ಲು ಪೂಜೆ ಸಲ್ಲಿಸಿ, ಒಂದು ತಿಂಗಳು ಗತಿಸುತ್ತಾ ಬಂದರೂ ಕಾಮಗಾರಿ ಮಾತ್ರ ಇನ್ನೂ ಆರಂಭಗೊಳ್ಳದೆ ಗ್ರಹಣ ಹಿಡಿದಿದೆ.
ಜೆಸ್ಕಾಂ ಎಇಇ ಕಚೇರಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು, ಶಾಸಕ ಜೆ.ಎನ್.ಗಣೇಶ್ ಭೂಮಿಪೂಜೆ ನೆರವೇರಿಸಿದ್ದಾರೆ. ಆದರೂ ಕಂಪ್ಲಿ ಜೆಸ್ಕಾಂ ಉಪ ವಿಭಾಗ(ಎಇಇ)ದ ಕಚೇರಿ ಕಟ್ಟಡ ಕಾಮಗಾರಿ ಆರಂಭಗೊಳ್ಳಲು ಸ್ಥಳದಲ್ಲಿರುವ 10 ಮರಗಿಡಗಳು ತಡೆಗೋಡೆಯಾಗಿ ನಿಂತಿದ್ದು, ಅರಣ್ಯ ಇಲಾಖೆಯ ಅನುಮತಿಗಾಗಿ ಕಾಮಗಾರಿ ನೆನಗುದಿಗೆ ಬಿದ್ದಿದೆ. ಜೆಸ್ಕಾಂ ಕಚೇರಿ ಉನ್ನತೀಕರಣಗೊಂಡು ಎರಡು ವರ್ಷ ಕಳೆದರೂ ಜೆಸ್ಕಾಂ ಉಪವಿಭಾಗದ ಕಚೇರಿಗೆ ಸ್ವಂತ ಕಟ್ಟಡ ಭಾಗ್ಯ ಮಾತ್ರ ಕೂಡಿ ಬಂದಿಲ್ಲ.
2024ರ ಆ.9ರಂದು ಸ್ಥಳೀಯ ಜೆಸ್ಕಾಂ ಸಹಾಯಕ ಇಂಜಿನಿಯರ್(ವಿ) ಕಾರ್ಯಪಾಲನಾ ಶಾಖೆಯನ್ನು ಉಪವಿಭಾಗ (ಎಇಇ) ಕಚೇರಿಯಾಗಿ ಉನ್ನತೀಕರಿಸಲಾಗಿತ್ತು. ಆದರೆ, ಉನ್ನತೀಕರಣಗೊಂಡು ಎರಡು ವರ್ಷಗಳಾದರೂ ಎಇಇ ಕಚೇರಿಗೆ ಪ್ರತ್ಯೇಕ ಕಟ್ಟಡ ಇಲ್ಲದ ಕಾರಣ ಸಹಾಯಕ ಇಂಜಿನಿಯರ್ ಕಾರ್ಯಪಾಲನಾ ಕಚೇರಿ ಕಟ್ಟಡದಲ್ಲಿಯೇ ಕಾರ್ಯ ನಿರ್ವಹಿಸುತ್ತಿದೆ. ಕಂಪ್ಲಿ ಜೆಸ್ಕಾಂ ಇಲಾಖೆಗೆ ಪ್ರತ್ಯೇಕ ಎಇಇ ಕಚೇರಿ ನಿರ್ಮಾಣದ ಅಗತ್ಯತೆಯನ್ನು ಅರಿತ ಶಾಸಕರಾದ ಜೆ.ಎನ್.ಗಣೇಶ್ 2025-26ನೇ ಸಾಲಿನ ಜೆಸ್ಕಾಂ ಅನುದಾನ ಯೋಜನೆಯಡಿಯಲ್ಲಿ 1.50.ಕೋಟಿ ರೂ ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ 2026ರ ಎ.18ರಂದು ಭೂಮಿಪೂಜೆ ನೆರವೇರಿಸಿದ್ದರು. ಉತ್ತಮ ಗುಣಮಟ್ಟದ ಕಟ್ಟಡವನ್ನು ನಿಗದಿತ ಸಮಯದಲ್ಲಿ ನಿರ್ಮಿಸುವಂತೆ ಗುತ್ತಿಗೆದಾರರಿಗೆ ಶಾಸಕರು ಸೂಚಿಸಿದ್ದರು. ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದರೂ, ಭೂಮಿಪೂಜೆ ನಡೆದು ತಿಂಗಳಾದರೂ ಸಹ ಅರಣ್ಯ ಇಲಾಖೆಯ ನಿಧಾನಗತಿಯಿಂದಾಗಿ ಕಟ್ಟಡ ಕಾಮಗಾರಿ ಮಾತ್ರ ಆರಂಭವಾಗಿಲ್ಲ.
ಎಇಇ ಕಚೇರಿ ಕಟ್ಟಡ ನಿರ್ಮಿಸಲು ಉದ್ದೇಶಿಸಿರುವ ಜೆಸ್ಕಾಂ ಕಚೇರಿ ಆವರಣದಲ್ಲಿ ಹತ್ತು ಮರಗಿಡಗಳು ಬೆಳೆದು ನಿಂತಿದ್ದು, ಅವುಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಯ ಅನುಮತಿ ಕಡ್ಡಾಯವಾಗಿದೆ. ಈಗಾಗಲೇ ಜೆಸ್ಕಾಂ ಕಚೇರಿಯಿಂದ ಮರಗಿಡಗಳ ತೆರವಿಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಲಾಗಿದೆಯಾದರೂ ಇನ್ನೂ ಪರವಾನಿಗೆ ದೊರೆತಿಲ್ಲ ಎಂದು ತಿಳಿದು ಬಂದಿದೆ.
ಜೆಸ್ಕಾಂ ಕಚೇರಿ ಆವರಣದಲ್ಲಿ ಎಇಇ ಕಚೇರಿ ಕಟ್ಟಡ ನಿರ್ಮಾಣ ಮಾಡುವಲ್ಲಿ ಹತ್ತು ಮರಗಿಡಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಯ ಒಪ್ಪಿಗೆ ಅಗತ್ಯವಿದೆ. ಮರಗಿಡಗಳ ತೆರವಿಗೆ ಜೆಸ್ಕಾಂ ಕಚೇರಿಯಿಂದ ಪ್ರಸ್ತಾವ ಸಲ್ಲಿಸಲಾಗಿದ್ದು, ಮರಗಿಡಗಳನ್ನು ತೆರವುಗೊಳಿಸಿದಲ್ಲಿ ಎಇಇ ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಗೊಳ್ಳಲಿದೆ.
-ಕೆ.ಶ್ರೀನಿವಾಸ ಪ್ರಸಾದ್
ಎಇಇ ಜೆಸ್ಕಾಂ ಕಂಪ್ಲಿ
ಕಂಪ್ಲಿ ಜೆಸ್ಕಾಂ ಕಚೇರಿ ಆವರಣದಲ್ಲಿನ ಮರಗಿಡಗಳನ್ನು ತೆರವುಗೊಳಿಸಲು ಜೆಸ್ಕಾಂ ಇಲಾಖೆಯಿಂದ ಪ್ರಸ್ತಾವ ಬಂದಿದ್ದು, ಶೀಘ್ರದಲ್ಲಿ ಮರಗಿಡಗಳ ತೆರವಿಗೆ ಟೆಂಡರ್ ಕರೆದು ಮರಗಿಡಗಳನ್ನು ತೆರವುಗೊಳಿಸಲಾಗುವುದು.
-ಕೌಶಿಕ್ ದಳವಾಯಿ
ವಲಯ ಅರಣ್ಯಾಧಿಕಾರಿ ಹೊಸಪೇಟೆ
ಜೆಸ್ಕಾಂನಲ್ಲಿ ಎಇಇ ಕಛೇರಿ ಕಟ್ಟಡ ನಿರ್ಮಾಣ ಶೀಘ್ರವೇ ಆರಂಭಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಿ. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು.
-ಬಳೆ ಮಲ್ಲಿಕಾರ್ಜುನ
ಅಧ್ಯಕ್ಷ, ಕರವೇ ತಾಲೂಕು ಘಟಕ, ಕಂಪ್ಲಿ






