ಯಾದಗಿರಿ: ಪಾರ್ಕಿಂಗ್ ಕೇಂದ್ರವಾದ ಮುಖ್ಯ ರಸ್ತೆ

ಯಾದಗಿರಿ: ನಗರದ ಹಳೆ ಕೋರ್ಟ್ ಮುಂಭಾಗದ ಮುಖ್ಯ ರಸ್ತೆ ಇದೀಗ ಸಾರ್ವಜನಿಕ ಸಂಚಾರ ಮಾರ್ಗಕ್ಕಿಂತ ಖಾಸಗಿ ವಾಹನಗಳ ಪಾರ್ಕಿಂಗ್ ಕೇಂದ್ರವಾಗಿಮಾರ್ಪಟ್ಟಿದೆ. ರಸ್ತೆ ಎರಡೂ ಬದಿಗಳಲ್ಲೂ ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾದ ವಾಹನಗಳ ಸಾಲಿನಿಂದ ಸವಾರರು ಹಾಗೂ ಪಾದಚಾರಿಗಳು ಪ್ರತಿದಿನ ಸಂಕಷ್ಟ ಅನುಭವಿಸುವಂತಾಗಿದೆ.
ಪ್ರತಿದಿನ ನೂರಾರು ಜನರು ತಮ್ಮ ವಿವಿಧ ಕೆಲಸಗಳಿಗಾಗಿ ಹಳೆ ಕೋರ್ಟ್‌ಗೆ ಬರುತ್ತಾರೆ. ಆದರೆ ರಸ್ತೆ ಬದಿಗಳನ್ನೇ ಖಾಸಗಿ ಪಾರ್ಕಿಂಗ್ ಸ್ಥಳವನ್ನಾಗಿ ಬಳಸುತ್ತಿರುವ ಪರಿಣಾಮ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ವಾಹನಗಳಿಗೆ ದಾರಿ ಸಿಗದೇ ಕೆಲವೊಮ್ಮೆ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಇದೇ ರಸ್ತೆಯಲ್ಲಿ ಕೆಲ ವಾಹನಗಳು ರಾಂಗ್ ರೂಟ್ ಲ್ಲಿಯೂ ಸಂಚರಿಸುತ್ತಿರುವುದು ಸಮಸ್ಯೆಯನ್ನು ಮತ್ತಷ್ಟು ಹೆಚ್ಚಾಗಿಸಿದೆ. ಬೈಕ್ ಸವಾರರು ರಸ್ತೆ ಮಧ್ಯಭಾಗಕ್ಕೆ ಬಂದು ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದ್ದು, ಅಪಘಾತದ ಭೀತಿ ಹೆಚ್ಚಾಗಿದೆ.
ಈ ಸಮಸ್ಯೆ ಹಲವು ದಿನಗಳಿಂದ ಮುಂದುವರಿದಿದ್ದರೂ ಸಂಬಂಧಪಟ್ಟ ಇಲಾಖೆಗಳಿಂದ ಶಾಶ್ವತ ಕ್ರಮ ಕೈಗೊಳ್ಳಲಾಗಿಲ್ಲ. ರಸ್ತೆ ಬದಿಯಲ್ಲಿ ‘ನೋ ಪಾರ್ಕಿಂಗ್’ ಸೂಚನಾ ಫಲಕಗಳಿಲ್ಲದಿರುವುದು ಹಾಗೂ ಸಮರ್ಪಕ ಟ್ರಾಫಿಕ್ ನಿಯಂತ್ರಣದ ಕೊರತೆಯಿಂದ ನಿಯಮ ಉಲ್ಲಂಘನೆ ಹೆಚ್ಚಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ನಗರಸಭೆ ಹಾಗೂ ಪೊಲೀಸ್ ಇಲಾಖೆ ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸದಿರುವುದರಿಂದ ಈ ಸಮಸ್ಯೆ ದಿನದಿಂದ ದಿನಕ್ಕೆ ಇಂತಹ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ನ್ಯಾಯಾಲಯದಂತಹ ಪ್ರಮುಖ ಸಾರ್ವಜನಿಕ ಸ್ಥಳದ ಎದುರಿನ ರಸ್ತೆಯೇ ಅವ್ಯವಸ್ಥೆಯ ಕೇಂದ್ರವಾಗಿರುವುದು ಆಡಳಿತದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಅನಧಿಕೃತ ಪಾರ್ಕಿಂಗ್ ತೆರವುಗೊಳಿಸಿ, ರಸ್ತೆ ಬದಿಯಲ್ಲಿ ಸೂಚನಾಫಲಕ ಅಳವಡಿಕೆ, ಟ್ರಾಫಿಕ್ ಸಿಬ್ಬಂದಿ ನಿಯೋಜನೆ ಹಾಗೂ ಕಠಿಣ ದಂಡ ವಿಧಿಸುವ ಕ್ರಮ ಜಾರಿಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸಂಬಂಧಪಟ್ಟ ಸ್ಥಳದಲ್ಲಿ ಒಂದು ಪಾಯಿಂಟ್ ಗುರುತಿಸಿ, ಇನ್ನು ಮುಂದೆ ಖಾಸಗಿ ವಾಹನಗಳು ನಿಲ್ಲಿಸದಂತೆ ಸೂಚನಾ ಫಲಕ ಹಾಕಲಾಗುತ್ತದೆ. ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೆವೆ.
-ಪೃಥ್ವಿಕ್ ಶಂಕರ್ ಎಸ್ಪಿ, ಯಾದಗಿರಿ
ಹಳೆ ಕೋರ್ಟ್ ಮುಂಭಾಗದಲ್ಲಿ ಖಾಸಗಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಿರುವುದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಸಂಚಾರ ಸಮಸ್ಯೆ ಉಂಟಾಗುತ್ತಿದೆ. ಸುತ್ತಮುತ್ತ ಆಸ್ಪತ್ರೆ ಮತ್ತು ಬ್ಯಾಂಕುಗಳು ಇರುವ ಕಾರಣ ದಿನನಿತ್ಯ ವಾಹನಗಳ ಸಂಚಾರ ಹೆಚ್ಚಿರುತ್ತದೆ. ಟ್ರಾಫಿಕ್ ಪೊಲೀಸರು ಈ ಸ್ಥಳದಲ್ಲಿ ವಾಹನ ನಿಲುಗಡೆ ನಿಯಂತ್ರಣಕ್ಕೆ ಕ್ರಮ ಕೈಗೊಂಡು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು.
-ಟಿ.ಎನ್. ಭೀಮುನಾಯಕ
ಕರವೇ ಯಾದಗಿರಿ ಜಿಲ್ಲಾ ಅಧ್ಯಕ್ಷ
ನಾವು ಪ್ರತಿದಿನ ಈ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿದ್ದೇವೆ. ಸ್ವಲ್ಪ ಆಟೋ ತಗುಲಿದರೂ ಸಾಕು, ಅನೇಕ ಬಾರಿ ಗಲಾಟೆಗಳು ನಡೆದಿವೆ. ಇಲ್ಲಿ ಇಪ್ಪತ್ತು-ಮೂವತ್ತು ಕಾರುಗಳು ಮತ್ತು ಬೈಕ್‌ಗಳನ್ನು ರಸ್ತೆ ಮೇಲೆಯೇ ನಿಲ್ಲಿಸುತ್ತಿರುವುದರಿಂದ ಆಟೋ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಮುಖ್ಯ ರಸ್ತೆಯ ಮೇಲೆಯೇ ವಾಹನ ನಿಲುಗಡೆ ಮಾಡುವುದು ಸರಿಯಲ್ಲ.
-ಸಾಂಗ್ಲಿಯಾನ ಈಟೇ
ಕರ್ನಾಟಕ ಆಟೋ ಚಾಲಕರ ಒಕ್ಕೂಟ ಸಂಘಟನೆ ಜಿಲ್ಲಾಧ್ಯಕ್ಷ






