ನೂಲು ಬಿಚ್ಚಣಿಕೆದಾರರ ಬದುಕು ದುಸ್ತರ-ನೆರವು ನೀಡದ ರೇಷ್ಮೆ ಇಲಾಖೆ: ಆರೋಪ

ಹೊಸಕೋಟೆ : ರೇಷ್ಮೆ ಹುಳ ಸೃಷ್ಟಿಸಿದ ಗೂಡನ್ನು ಕೈ ಸುಡುವ ಹಬೆ ನೀರಲ್ಲಿ ಎಳೆ ಎಳೆ ನೂಲು ಬಿಚ್ಚುವುದನ್ನೇ ಬದುಕಾಗಿಸಿಕೊಂಡಿರುವವರ ಬದುಕು ಈಗ ಬೀದಿಗೆ ಬರುವಂತಾಗಿದೆ.
ಹೊಸಕೋಟೆ ತಾಲೂಕಿನಲ್ಲಿ ಸರಕಾರಿ ರೇಷ್ಮೆ ಮಾರುಕಟ್ಟೆ ಇಲ್ಲದಿರುವ ಕಾರಣದಿಂದಾಗಿ ರೇಷ್ಮೆ ಗೂಡು ದಿನೇ ದಿನೇ ಕಡಿಮೆಯಾಗುತ್ತಿರುವ ನಡುವೆಯೇ ತಾಲೂಕಿನಲ್ಲಿ ಸುಮಾರು 50 ರೀಲರ್‌ಗಳು ಕಷ್ಟ ಅನುಭವಿಸುತ್ತಿದ್ದಾರೆ.
ಕೈ ಹಿಡಿಯದ ಕಸುಬು: ಪ್ರಸಕ್ತ ದಿನಗಳಲ್ಲಿ ಬಿಚ್ಚಣಿಕೆದಾರರು ಹಣದ ಕೊರತೆಯಿಂದ ಕಸುಬು ನಡೆಸಲು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ ರೇಷ್ಮೆ ಇಲಾಖೆ ಕಿಂಚಿತ್ತು ಸಹಾಯ ಹಸ್ತ ಚಾಚಿಲ್ಲ. ನೂಲು ಬಿಚ್ಚುವ ಕಾರ್ಮಿಕ ವರ್ಗದ ಮೇಲೂ ಇದರ ಪರಿಣಾಮ ಬಿದ್ದಿವೆ. ಇದರಿಂದ ರೀಲರ್‌ಗಳು ತಮ್ಮ ಕಸುಬು ನಿಲ್ಲಿಸಿ ಬಿಡುವ ಮಟ್ಟಿಗೆ ರೋಸಿ ಹೋಗಿದ್ದಾರೆ.
ಆವಕ ಕಡಿಮೆ: ತಾಲೂಕಿನಲ್ಲಿ ರೇಷ್ಮೆಮಾರುಕಟ್ಟೆ ಇಲ್ಲದಿರುವ ಕಾರಣ ರೈತರು ಬೆಳೆದಿರುವ ರೇಷ್ಮೆಯನ್ನು (ಜಿಲ್ಲುಗೂಡನ್ನು ಕೆ.ಜಿ.ಗೆ 150 ರೂ.ಗೆ ಖರೀದಿಸಿಕೊಂಡು ಬರುತ್ತಾರೆ. ಬಹುತೇಕ ರೀಲರ್‌ಗಳಲ್ಲಿ ಕೆಲವೇ ಮಂದಿಗೆ ಗೂಡು ಸಿಗುತ್ತಿದೆ. ಉಳಿದವರು ರಾಮನಗರ, ತುಮಕೂರು, ಶಿಡ್ಲಘಟ್ಟ, ಎಚ್ ಕ್ರಾಸ್, ವಿಜಯಪುರ ಮಾರುಕಟ್ಟೆ ಸಹಿತ ಅನೇಕ ಕಡೆಗಳಿಗೆ ರೇಷ್ಮೆ ಗೂಡು ತರಲು ತೆರಳಬೇಕಾಗಿದೆ. ಇದಕ್ಕೆಲ್ಲ ಸಾಗಾಟದ ಖರ್ಚು ಕೂಡ ರೀಲರ್‌ಗಳಿಗೆ ದುಂದು ವೆಚ್ಚವಾಗುತ್ತಿದೆ.
ಹಳೆ ಯಂತ್ರ ಬಳಕೆ: ರೇಷ್ಮೆ ನೂಲು ಬಿಚ್ಚುವ ಕಸುಬನ್ನು ನಡೆಸಿಕೊಂಡು ಬರುತ್ತಿರುವ ರೀಲರ್‌ಗಳು ಇನ್ನೂ ಹಳೆ ಕಾಲದ ಯಂತ್ರಗಳ ಬಳಕೆ ಮಾಡುತ್ತಿದ್ದಾರೆ. ಇದರಿಂದ ಕೆಲಸ ಮಂದಗತಿಯಲ್ಲಿ ಸಾಗುತ್ತಿದೆ. ರೇಷ್ಮೆ ಇಲಾಖೆ ಬಿಚ್ಚಣಿಕೆದಾರರಿಗೆ ಕನಿಷ್ಠ ಸರಕಾರದಿಂದ ವಿದ್ಯುತ್ ಚಾಲಿತ ಯಂತ್ರಗಳನ್ನು ಕೊಡಿಸುವ ಕೆಲಸ ಮಾಡಿಲ್ಲ ಎಂಬುದು ರೀಲರ್‌ಗಳ ಆರೋಪವಾಗಿದೆ.
ವಿದ್ಯುನ್ಮಾನ ಯಂತ್ರಕ್ಕೆ 5 ಲಕ್ಷ ರೂ.: ನೂಲು ತೆಗೆಯಲು ವಿದ್ಯುನ್ಮಾನ ರಾಟೆಗಳನ್ನು ಬಳಸಲು ಸುಮಾರು 5 ಲಕ್ಷ ರೂ. ಖರ್ಚಾಗುತ್ತದೆ. ಅಷ್ಟೊಂದು ಹಣ ನಮ್ಮ ಬಳಿ ಇಲ್ಲ, ಯಂತ್ರಗಳನ್ನು ಕೊಳ್ಳಲು ಬ್ಯಾಂಕ್‌ಗಳಲ್ಲಿ ಸಾಲ ಸಿಗುತ್ತಿಲ್ಲ. ಕಾರ್ಮಿಕರು ಕೆಲಸ ಮಾಡಲು ಒಬ್ಬರಿಗೆ ಕನಿಷ್ಠ 50 ಸಾವಿರ ರೂ. ಮುಂಗಡ ಹಣ ಪಾವತಿಸಬೇಕು. ಇಷ್ಟೆಲ್ಲ ಕಷ್ಟಗಳಿದ್ದರೂ ರೇಷ್ಮೆ ಇಲಾಖೆ ಸ್ಪಂದಿಸುತ್ತಿಲ್ಲ ಎಂಬುದು ರೀಲರ್‌ಗಳ ಅಳಲು.
ಅನನುಕೂಲ ಹೆಚ್ಚು: ಶಿಡ್ಲಘಟ್ಟ ರೇಷ್ಮೆ ಮಾರುಕಟ್ಟೆಯಲ್ಲಿ ಇ-ಹರಾಜು ವ್ಯವಸ್ಥೆ ಜಾರಿಗೆ ತರಲಾಗಿದ್ದು, ಇದು ರೈತರಿಗೆ ಅನುಕೂಲಕ್ಕಿಂತ ಅನನು ಕೂಲವೇ ಹೆಚ್ಚು. ಇಲಾಖೆ ಅಧಿಕಾರಿಗಳು ಮಾರುಕಟ್ಟೆಗೆ ಭೇಟಿ ನೀಡಿ ರೀಲರ್‌ಗಳ ಸಮಸ್ಯೆ ಆಲಿಸದೆ, ಇಲಾಖೆಯ ಕೊಠಡಿಗೆ ಸೀಮಿತರಾಗಿದ್ದಾರೆ.
ಸ್ಥಳೀಯ ಡೀಲರ್‌ಗಳು ಬೆಂಗಳೂರಿನ ನಂಬಿಕಸ್ಥ ವ್ಯಕ್ತಿಗಳಿಗೆ ನೂಲು ಮಾರಾಟ ಮಾಡುತ್ತಾರೆ. ಮಾರಿದ ನೂಲಿಗೆ ಯಾವುದೇ ದಾಖಲೇ ನೀಡುವುದಿಲ್ಲ. ಜತೆಗೆ ಮಾರಾಟ ಮಾಡಿದ ನೂಲಿಗೆ ಒಂದು ತಿಂಗಳ ಬಳಿಕ ಹಣ ಕೈ ಸೇರುತ್ತದೆ. ನಿತ್ಯ ಕೆಸಕ್ಕೆ ಒಂದು ಲಾಟು ಗೂಡು ಖರೀದಿಸಲು 50 ರಿಂದ 60 ಸಾವಿರ ರೂ. ಬೇಕಾಗುತ್ತದೆ. ಇಷ್ಟೊಂದು ಹಣವನ್ನು ಬಡ್ಡಿಗೆ ಪಡೆದು ರೇಷ್ಮೆ ಗೂಡು ಖರೀದಿಸಿ ಕಸಬು ನಡೆಸುತ್ತಿದ್ದೇವೆ ಎನ್ನುತ್ತಾರೆ ರೀಲರ್‌ಗಳು.
ನನಗೆ ನೂಲು ತೆಗೆಯುವುದು ಬಿಟ್ಟರೆ ಬೇರೆ ಯಾವುದೇ ಕೆಲಸ ತಿಳಿದಿಲ್ಲ. ಈ ಕೆಲಸ ನಿಂತರೆ ಮುಂದೇನು? ಎಂಬ ಪ್ರಶ್ನೆ ಕಾಡುತ್ತಿದೆ. ರಾಜ್ಯ, ಕೇಂದ್ರ ಸರಕಾರ ಎಲ್ಲ ವರ್ಗದ ಕುಲ ಕಸಬಿಗೆ ಒಂದೊಂದು ಯೋಜನೆ ನೀಡಿದೆ. ಆದರೆ ನಮ್ಮ ಕಸಬನ್ನು ಕಡೆಗಣಿಸಿದೆ. ರೇಷ್ಮೆ ಇಲಾಖೆಯ ಅಧಿಕಾರಿಗಳು ನಮ್ಮನ್ನು ಮರೆತ್ತಿದ್ದಾರೆ. ಜಿಲ್ಲಾಡಳಿತವಾದರೂ ಬಿಚ್ಚಣಿಕೆದಾರರನ್ನು ಪ್ರೋತ್ಸಾಹಿಸಲಿ.
-ಮುಮ್ತಾಝ್ ಸೂಲಿಬೆಲೆ,
ರೇಷ್ಮೆನೂಲು ಬಿಚ್ಚಣಿಕೆದಾರರು
ಕೆಮ್ಮು, ಮೈ ಕೈ ನೋವು, ಕಫ, ನೆಗಡಿ ಬೆನ್ನುನೋವು ಕಾರ್ಮಿಕರಲ್ಲಿ ಸಾಮಾನ್ಯವಾಗಿ ಕಾಡುವ ಕಾಯಿಲೆಗಳಾಗಿವೆ. ಮಹಿಳಾ ಕಾರ್ಮಿಕರು ಅಪೌಷ್ಟಿಕತೆಯಿಂದ ಬಳಲುವ ಸಮಸ್ಯೆಗಳನ್ನು ಕಂಡಿದ್ದೇವೆ, ಸೂಕ್ತ ಔಷಧೋಪಚಾರ, ಆಹಾರ ಸೇವನೆಯಿಂದ ರೋಗ ಶಮನಗೊಳ್ಳಬಹುದು.
- ಡಾ.ಕಿರಣ್ ಕುಮಾರ್, ವೈದ್ಯ






