ಅವಾಂತರ ತಂದಿಟ್ಟ ಜೋಗ ಚೆಕ್ ಡ್ಯಾಮ್; ಮನೆ-ಹೊಲಗಳಿಗೆ ನೀರು ನುಗ್ಗಿ ಅಪಾರ ನಷ್ಟ

ಸಂಡೂರು: ಜನರ ತೀವ್ರ ವಿರೋಧದ ನಡುವೆಯೇ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಜೋಗ ಗ್ರಾಮದಲ್ಲಿ ನಿರ್ಮಿಸಿದ ಚೆಕ್ ಡ್ಯಾಮ್ ಇದೀಗ ಗ್ರಾಮಸ್ಥರಿಗೆ ದೊಡ್ಡ ಅನಾಹುತ ತಂದಿಟ್ಟಿದೆ. ಶನಿವಾರ ರಾತ್ರಿ ಸುರಿದ ಭಾರೀ ಮಳೆಯಿಂದ ಚೆಕ್ ಡ್ಯಾಮ್ ಬಳಿ ನೀರು ತಡೆದು ನಿಂತ ಪರಿಣಾಮ ಹೊಲಗಳು ಮತ್ತು ಮನೆಗಳಿಗೆ ಮಳೆ ನೀರು ನುಗ್ಗಿ ಅಪಾರ ಹಾನಿ ಉಂಟಾಗಿದೆ.
ಎಮ್ಮೆ ಮೃತ್ಯು: ಮಳೆಯಿಂದಾಗಿ ಚೆಕ್ ಡ್ಯಾಮ್‌ನಲ್ಲಿ ಶೇಖರಣೆಯಾಗಿದ್ದ ಕೆಸರಿನಲ್ಲಿ ಗ್ರಾಮದ ಕಾಗೆರ ಚೆನ್ನವೀರಪ್ಪ ಅವರ ಸಾಕು ಎಮ್ಮೆ ಮೃತಪಟ್ಟ ದುರ್ಘಟನೆ ನಡೆದಿದೆ. ಸುಮಾರು 60 ಸಾವಿರಕ್ಕೆ ಈ ಎಮ್ಮೆ ಖರೀದಿಸಲಾಗಿತ್ತು. ಕೆಲವೇ ದಿನಗಳಲ್ಲಿ ಅದು ಮರಿ ಹಾಕಲಿತ್ತು.
ಕೊಚ್ಚಿಹೋದ ಕೋಳಿಗಳು: ಇದೇ ವೇಳೆ ಸಮಗ್ರ ಕೃಷಿ ಯೋಜನೆಯಡಿ ಕೋಳಿ ಸಾಕಾಣಿಕೆ ಮಾಡಿಕೊಂಡಿದ್ದ ಹಲವು ರೈತರು ಕೂಡ ಭಾರೀ ನಷ್ಟ ಅನುಭವಿಸಿದ್ದಾರೆ. ಗ್ರಾಮದ ಹೊನ್ನೂರಪ್ಪ, ಬಳ್ಳಾರಿ ಸಣ್ಣ ಯಂಕಪ್ಪ, ಎ.ಕೆ. ಅಂಜನಿ, ಬಳ್ಳಾರಿ ಹೊನ್ನೂರಸ್ವಾಮಿ ಹಾಗೂ ಬಿ. ಶರಣ ಸೇರಿದಂತೆ ಹಲವರ ನೂರಾರು ಕೋಳಿಗಳು ಮಳೆಯ ನೀರಿನಲ್ಲಿ ಕೊಚ್ಚಿಹೋಗಿವೆ. ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಕಳೆದ ನಾಲ್ಕು ತಿಂಗಳ ಹಿಂದೆ ಸಮಗ್ರ ಕೃಷಿ ಯೋಜನೆಯಡಿ ನೀಡಿದ್ದ ಕೋಳಿಗಳು ಇದೀಗ ಆದಾಯ ನೀಡುವ ಹಂತಕ್ಕೆ ಬಂದಿದ್ದವು. ಆದರೆ ಪ್ರಕೃತಿ ವಿಕೋಪದಿಂದ ಕೋಳಿ, ಕುರಿ, ಸಾಕು ನಾಯಿಗಳು ಸಿಲುಕಿದ ಅನಾಹುತದ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಸಮಸ್ಯೆಯನ್ನು ತಕ್ಷಣ ಸರಿಪಡಿಸುವುದಾಗಿ ಭರವಸೆ ನೀಡಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಮೊದಲ ಮಳೆಯಲ್ಲೇ ಇಷ್ಟೊಂದು ಹಾನಿ ಸಂಭವಿಸಿರುವುದರಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಅನಾಹುತ ಸಂಭವಿಸಬಹುದೆಂಬ ಭಯ ಗ್ರಾಮಸ್ಥರಲ್ಲಿ ಮನೆಮಾಡಿದೆ.
ಗ್ರಾಮಕ್ಕೆ ಗಂಡಾಂತರವಾಗಿರುವ ಈ ಚೆಕ್ ಡ್ಯಾಮ್ ಅಡ್ಡಗೋಡೆಯನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಮಾಡಬೇಕು. ಜೊತೆಗೆ ಮಳೆ ಅನಾಹುತದಿಂದ ನಷ್ಟ ಅನುಭವಿಸಿರುವ ಸಂತ್ರಸ್ತರಿಗೆ ತಕ್ಷಣ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಚೆಕ್ ಡ್ಯಾಮ್ ಕಾಮಗಾರಿಯ ಗುಣಮಟ್ಟ ಹಾಗೂ ಯೋಜನೆ ರೂಪಿಸುವ ವೇಳೆ ಸುರಕ್ಷತಾ ಕ್ರಮಗಳನ್ನು ಪಾಲಿಸಲಾಯಿತೇ ಎಂಬ ಪ್ರಶ್ನೆಗಳು ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಅಧಿಕಾರಿಗಳ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನರ ವಿರೋಧವನ್ನೇ ಲೆಕ್ಕಿಸದೆ ನಿರ್ಮಿಸಿದ ಚೆಕ್ ಡ್ಯಾಮ್ ಇಂದು ಗ್ರಾಮಸ್ಥರ ಬದುಕನ್ನೇ ಸಂಕಷ್ಟಕ್ಕೆ ತಳ್ಳಿದೆ. ಮೊದಲ ಮಳೆಯಲ್ಲೇ ಮನೆ, ಹೊಲ,ಜಾನುವಾರುಗಳಿಗೆ ಹಾನಿಯಾಗಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಇನ್ನಷ್ಟು ಅನಾಹುತ ಸಂಭವಿಸುವ ಮುನ್ನ ಚೆಕ್ ಡ್ಯಾಮ್ ಅಡ್ಡಗೋಡೆಯನ್ನು ತೆರವುಗೊಳಿಸಿ ಸಂತ್ರಸ್ತರಿಗೆ ತಕ್ಷಣ ಪರಿಹಾರ ನೀಡಬೇಕು.
<ಕಾಗೇರ ಆಂಜಿನಪ್ಪ, ಸ್ಥಳೀಯ ನಿವಾಸಿ






