ಸರಕಾರಿ ಆಸ್ಪತ್ರೆಯಲ್ಲಿ ಔಷಧಿ ಕೊರತೆ: ರೋಗಿಗಳ ಪರದಾಟ

ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆ ಪಟ್ಟಣದಲ್ಲಿರುವ 100 ಹಾಸಿಗೆಗಳ ಸರಕಾರಿ ಆಸ್ಪತ್ರೆಯಲ್ಲಿ ಕಳೆದ ನಾಲ್ಕೈದು ತಿಂಗಳಿಂದ ಅಗತ್ಯ ಔಷಧಿಗಳ ಪೂರೈಕೆ ಸಮರ್ಪಕವಾಗಿ ಆಗದಿರುವುದರಿಂದ ರೋಗಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರಕಾರದ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಮತ್ತು ಔಷಧಿಗಳ ನಿರೀಕ್ಷೆಯೊಂದಿಗೆ ಬರುವ ಬಡ ಹಾಗೂ ಮಧ್ಯಮ ವರ್ಗದ ಜನರು ಇದೀಗ ಹೊರಗಡೆ ದುಡ್ಡು ನೀಡಿ ಔಷಧಿ ಖರೀದಿಸುವ ಅನಿವಾರ್ಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.
ಮೂಲಗಳ ಪ್ರಕಾರ, ಈ ಹಿಂದೆ ಬಳ್ಳಾರಿಯ ಸರಕಾರಿ ಮೆಡಿಸಿನ್ ಹೌಸ್‌ನಿಂದ ಆಸ್ಪತ್ರೆಗೆ ನಿಯಮಿತವಾಗಿ ಔಷಧಿಗಳು ಪೂರೈಕೆಯಾಗುತ್ತಿದ್ದವು. ಆದರೆ ಕಳೆದ ನಾಲ್ಕೈದು ತಿಂಗಳಿಂದ ಆ ಪೂರೈಕೆ ಬಹುತೇಕ ಸ್ಥಗಿತಗೊಂಡಿದ್ದು, ಅನೇಕ ಅಗತ್ಯ ಔಷಧಿಗಳು ಆಸ್ಪತ್ರೆಯಲ್ಲಿ ಲಭ್ಯವಿಲ್ಲ ಎನ್ನಲಾಗಿದೆ.
ಆಸ್ಪತ್ರೆಯ ವೈದ್ಯರು ರೋಗಿಗಳ ಆರೋಗ್ಯದ ದೃಷ್ಟಿಯಿಂದ ಲಭ್ಯವಿಲ್ಲದ ಔಷಧಿಗಳ ಹೆಸರುಗಳನ್ನು ಹೊರಗಿನ ಮೆಡಿಕಲ್ ಅಂಗಡಿಗಳಿಂದ ಖರೀದಿ ಮಾಡುವಂತೆ ಚೀಟಿಯಲ್ಲಿ ಬರೆದು ಕೊಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಇದರಿಂದ ಆರ್ಥಿಕವಾಗಿ ಹಿಂದುಳಿದ ರೋಗಿಗಳು ಹೆಚ್ಚುವರಿ ಹೊರೆ ಅನುಭವಿಸುವಂತಾಗಿದೆ.
ಖಾಸಗಿ ಸಂಸ್ಥೆಗಳ ಔಷಧಿಗಳಿಂದ ತಾತ್ಕಾಲಿಕ ನಿರ್ವಹಣೆ: ಸರಕಾರದಿಂದ ಔಷಧಿ ಪೂರೈಕೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಟೆಂಡರ್ ಮೂಲಕ ಖಾಸಗಿ ಸಂಸ್ಥೆಗಳಿಂದ ಬಂದಿರುವ ಕೆಲವು ಔಷಧಿಗಳ ನೆರವಿನಿಂದ ಆಸ್ಪತ್ರೆ ಆಡಳಿತ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸುತ್ತಿದೆ ಎನ್ನಲಾಗಿದೆ. ಆದರೆ ಎಲ್ಲ ರೀತಿಯ ಔಷಧಿಗಳು ಲಭ್ಯವಿಲ್ಲದ ಕಾರಣ ರೋಗಿಗಳ ಸಮಸ್ಯೆಗೆ ಸಂಪೂರ್ಣ ಪರಿಹಾರ ದೊರಕಿಲ್ಲ.
ಆಸ್ಪತ್ರೆಯಲ್ಲಿ ಉಂಟಾಗಿರುವ ಈ ಔಷಧಿ ಕೊರತೆಯ ಬಗ್ಗೆ ಹಿರಿಯ ಆರೋಗ್ಯಾಧಿಕಾರಿಗಳ ಗಮನಕ್ಕೂ ವಿಷಯ ಬಂದಿದ್ದರೂ, ಇದುವರೆಗೆ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.
ಕೆಟ್ಟು ನಿಂತ ಎಕ್ಸ್‌ರೇ ಯಂತ್ರ: ರೋಗಿಗಳಿಗೆ ಹೆಚ್ಚುವರಿ ವೆಚ್ಚ
ಇದರ ನಡುವೆಯೇ ಆಸ್ಪತ್ರೆಯಲ್ಲಿದ್ದ ಎಕ್ಸ್‌ರೇ ಯಂತ್ರವೂ ಕಳೆದ ಎರಡು-ಮೂರು ದಿನಗಳಿಂದ ಕೆಟ್ಟು ಹೋಗಿರುವುದರಿಂದ ಮತ್ತೊಂದು ಸಮಸ್ಯೆ ತಲೆದೋರಿದೆ. ಪ್ರತಿದಿನ ಸುಮಾರು 15 ರಿಂದ 20 ರೋಗಿಗಳು ಎಕ್ಸ್‌ರೇ ಸೇವೆಯನ್ನು ಪಡೆಯುತ್ತಿದ್ದರು. ಆದರೆ ಯಂತ್ರ ದುರಸ್ತಿಯಾಗದ ಕಾರಣ ರೋಗಿಗಳು ಖಾಸಗಿ ಕೇಂದ್ರಗಳಿಗೆ ತೆರಳಿ ಹಣ ಪಾವತಿಸಿ ಎಕ್ಸ್‌ರೇ
ಮಾಡಿಸಿಕೊಂಡು ವರದಿ ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ವಿಶೇಷವಾಗಿ ಅಪಘಾತ ಪ್ರಕರಣಗಳು, ಮೂಳೆ ಸಂಬಂಧಿತ ಸಮಸ್ಯೆಗಳು ಹಾಗೂ ಎದೆ ಭಾಗದ ತಪಾಸಣೆಗಾಗಿ ಬರುವ ರೋಗಿಗಳಿಗೆ ಇದರಿಂದ ತೊಂದರೆ ಹೆಚ್ಚಾಗಿದೆ. ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಸಿಗಬೇಕಿದ್ದ ಸೇವೆಗಾಗಿ ಖಾಸಗಿ ಕೇಂದ್ರಗಳಲ್ಲಿ ಹಣ ಖರ್ಚು ಮಾಡಬೇಕಾಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಉಚಿತ ಆರೋಗ್ಯ ಸೇವೆ ಎಲ್ಲಿದೆ?
ಸರಕಾರವು ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಬಲಪಡಿಸುವ ಬಗ್ಗೆ ನಿರಂತರವಾಗಿ ಘೋಷಣೆಗಳನ್ನು ಮಾಡುತ್ತಿರುವ ಸಂದರ್ಭದಲ್ಲೇ, ಜಿಲ್ಲಾ ಕೇಂದ್ರದ ಪ್ರಮುಖ ಸರಕಾರಿ ಆಸ್ಪತ್ರೆಯಲ್ಲಿ ಔಷಧಿಗಳ ಕೊರತೆ ಮತ್ತು ವೈದ್ಯಕೀಯ ಉಪಕರಣಗಳ ನಿರ್ವಹಣೆಯಲ್ಲಿನ ನಿರ್ಲಕ್ಷ್ಯ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಸರಕಾರಿ ಆಸ್ಪತ್ರೆಗೆ ಬಂದರೂ ಔಷಧಿ ಹೊರಗಡೆ ತೆಗೆದುಕೊಳ್ಳಬೇಕು, ಎಕ್ಸ್‌ರೇ ಕೂಡ ಖಾಸಗಿಯಾಗಿ ಮಾಡಿಸಿಕೊಳ್ಳಬೇಕು ಎಂದಾದರೆ ಬಡ ಜನರು ಎಲ್ಲಿಗೆ ಹೋಗಬೇಕು? ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.
ತಕ್ಷಣ ಕ್ರಮಕ್ಕೆ ಆಗ್ರಹ
ಆಸ್ಪತ್ರೆಯಲ್ಲಿ ಅಗತ್ಯ ಔಷಧಿಗಳ ಸಮರ್ಪಕ ಪೂರೈಕೆಯನ್ನು ಪುನರಾರಂಭಿಸುವುದು, ಕೆಟ್ಟು ನಿಂತಿರುವ ಎಕ್ಸ್‌ರೇ ಯಂತ್ರವನ್ನು ತುರ್ತಾಗಿ ದುರಸ್ತಿ ಮಾಡಿ ಸೇವೆ ಆರಂಭಿಸುವುದು ಹಾಗೂ ಆಸ್ಪತ್ರೆಯ ಮೂಲಸೌಕರ್ಯ ಸಮಸ್ಯೆಗಳನ್ನು ಪರಿಹರಿಸುವಂತೆ ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳು ಆರೋಗ್ಯ ಇಲಾಖೆಯನ್ನು ಆಗ್ರಹಿಸಿವೆ.
ಜನರ ವಿಶ್ವಾಸ ಉಳಿಸಿಕೊಳ್ಳಬೇಕಾದರೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಹೊಸಪೇಟೆಯ ಸರಕಾರಿ ಆಸ್ಪತ್ರೆಯಲ್ಲಿ ಕಳೆದ ಹಲವು ತಿಂಗಳಿಂದ ಔಷಧಿಗಳ ಕೊರತೆ ಉಂಟಾಗಿರುವುದು ಹಾಗೂ ಎಕ್ಸ್‌ರೇ ಯಂತ್ರ ಕೆಟ್ಟು ಸೇವೆ ಸ್ಥಗಿತಗೊಂಡಿರುವುದು ಅತ್ಯಂತ ದುರದೃಷ್ಟಕರ ಬೆಳವಣಿಗೆ. ಪ್ರತಿನಿತ್ಯ ಸಾವಿರಾರು ಬಡ, ಕಾರ್ಮಿಕ ಹಾಗೂ ಆಟೋ ಚಾಲಕರ ಕುಟುಂಬಗಳು ಸರಕಾರಿ ಆಸ್ಪತ್ರೆಯನ್ನೇ ಅವಲಂಬಿಸಿರುತ್ತವೆ. ಆಸ್ಪತ್ರೆಯಲ್ಲಿ ಔಷಧಿ ಸಿಗದೆ ಹೊರಗಡೆ ಖರೀದಿಸಬೇಕಾದ ಪರಿಸ್ಥಿತಿ ಮತ್ತು ಎಕ್ಸರೇಗಾಗಿ ಖಾಸಗಿ ಕೇಂದ್ರಗಳಿಗೆ ತೆರಳಿ ಹಣ ಖರ್ಚು ಮಾಡಬೇಕಾಗಿರುವುದು ಜನಸಾಮಾನ್ಯರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಆಗುತ್ತಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಅಗತ್ಯ ಔಷಧಿಗಳ ಪೂರೈಕೆ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಕೆಟ್ಟು ನಿಂತಿರುವ ಎಕ್ಸ್‌ರೇ ಯಂತ್ರವನ್ನು ತುರ್ತಾಗಿ ದುರಸ್ತಿ ಮಾಡಿ ಸಾರ್ವಜನಿಕರ ಆರೋಗ್ಯ ಹಿತಾಸಕ್ತಿಯನ್ನು ಕಾಪಾಡಬೇಕು. ಸಮಸ್ಯೆ ಪರಿಹಾರವಾಗದಿದ್ದರೆ ಜನರೊಂದಿಗೆ ಸೇರಿ ಹೋರಾಟ ರೂಪಿಸುವ ಬಗ್ಗೆ ಚಿಂತಿಸಲಾಗುವುದು.
-ಹುಲುಗಪ್ಪ
ಅಧ್ಯಕ್ಷರು, ರಕ್ಷಣಾ ವೇದಿಕೆ ಆಟೋ ಸಂಘ ಅಧ್ಯಕ್ಷರು, ರಕ್ಷಣಾ ವೇದಿಕೆ ಆಟೋ ಸಂಘ
ಸರಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳ ಕೊರತೆ ಉಂಟಾಗಿರುವುದು ಹಾಗೂ ಎಕ್ಸ್‌ರೇ ಯಂತ್ರದಂತಹ ಮೂಲಭೂತ ವೈದ್ಯಕೀಯ ಸೌಲಭ್ಯಗಳು ಸ್ಥಗಿತಗೊಂಡಿರುವುದು ಅತ್ಯಂತ ಕಳವಳಕಾರಿ ಸಂಗತಿ. ಆರೋಗ್ಯ ಸೇವೆಗಳು ಜನರ ಮೂಲಭೂತ ಹಕ್ಕಾಗಿದ್ದು, ಬಡ ಮತ್ತು ಮಧ್ಯಮ ವರ್ಗದ ಜನರು ಸರಕಾರಿ ಆಸ್ಪತ್ರೆಗಳನ್ನೇ ಅವಲಂಬಿಸಿರುತ್ತಾರೆ. ಔಷಧಿಗಳ ಕೊರತೆಯಿಂದ ರೋಗಿಗಳು ಹೊರಗಡೆ ಹಣ ಖರ್ಚು ಮಾಡಿ ಔಷಧಿ ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿರುವುದು ಆರೋಗ್ಯ ವ್ಯವಸ್ಥೆಯ ವೈಫಲ್ಯವನ್ನು ತೋರಿಸುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ ಅಗತ್ಯ ಔಷಧಿಗಳ ಪೂರೈಕೆಯನ್ನು ಖಚಿತಪಡಿಸಬೇಕು. ಹಾಗೂ ಕೆಟ್ಟು ನಿಂತಿರುವ ಎಕ್ಸ್‌ರೇ ಯಂತ್ರವನ್ನು ತುರ್ತಾಗಿ ದುರಸ್ತಿ ಮಾಡಿ ಸಾರ್ವಜನಿಕರಿಗೆ ನಿರಂತರ ಆರೋಗ್ಯ ಸೇವೆ ಒದಗಿಸಬೇಕು. ಈ ಕುರಿತು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳ ಗಮನಕ್ಕೆ ವಿಷಯವನ್ನು ತರಲಾಗುವುದು.
-ಯೋಗಲಕ್ಷ್ಮೀ
ನಾಮ ನಿರ್ದೇಶಕಿ, ಸುರಕ್ಷಾ ಆರೋಗ್ಯ ಇಲಾಖೆ ನಾಮ ನಿರ್ದೇಶಕಿ, ಸುರಕ್ಷಾ ಆರೋಗ್ಯ ಇಲಾಖೆ






