ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯ ಕೋಚಿಂಗ್ ಕಾರ್ಯಕ್ರಮ ಟೆಂಡರ್ನಲ್ಲಿ ಕಾನೂನು ಉಲ್ಲಂಘನೆ ಆರೋಪ

ಸಾಂದರ್ಭಿಕ ಚಿತ್ರ Photo: chatgpt
ಬೆಂಗಳೂರು : ರಾಜ್ಯ ಸರಕಾರದ ಅಲ್ಪಸಂಖ್ಯಾತರ ನಿರ್ದೇಶನಾಲಯದ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಸಿಎಲ್ಎಟಿ)ಯ ಕೋಚಿಂಗ್ ಕಾರ್ಯಕ್ರಮದ ಟೆಂಡರ್ ಪ್ರಕ್ರಿಯೆಯಲ್ಲಿ ಕಾನೂನು ಹಾಗೂ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿ, ಆಯ್ದ ಕೆಲವರಿಗೆ ಅನುಕೂಲ ಕಲ್ಪಿಸಲು ಟೆಂಡರ್ ರೂಪಿಸಲಾಗಿದೆಯೇ ಎಂಬ ಗಂಭೀರ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಪ್ರೈಮ್ ಲಾ ಅಸೋಸಿಯೇಟ್ಸ್ನ ವಕೀಲ ಸೈಯದ್ ಅಕ್ಮಲ್ ರಝ್ವಿ ಅವರು ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕರಿಗೆ ಗುರುವಾರ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
ಟೆಂಡರ್ ದಾಖಲೆಗಳನ್ನು ‘ಸ್ಪಷ್ಟವಾಗಿ ಮನಬಂದಂತೆ ರೂಪಿಸಲ್ಪಟ್ಟಿದ್ದು, ತಾರತಮ್ಯಪೂರ್ಣ, ಪಾರದರ್ಶಕತೆಯಿಲ್ಲದ ಹಾಗೂ ಪರಸ್ಪರ ವಿರೋಧಾಭಾಸಗಳಿಂದ ಕೂಡಿವೆ’ ಎಂದು ಆರೋಪಿಸಿರುವ ಅವರು, ಕರ್ನಾಟಕ ಸಾರ್ವಜನಿಕ ಖರೀದಿಗಳ ಪಾರದರ್ಶಕತೆ ಕಾಯ್ದೆ ಹಾಗೂ ನಿಯಮಗಳ ಉಲ್ಲಂಘನೆ ನಡೆದಿದೆ ಎಂದು ದೂರಿದ್ದಾರೆ.
ಅಧ್ಯಯನ ಸಾಮಗ್ರಿಗಳ ಗುಣಮಟ್ಟಕ್ಕೆ 10 ಅಂಕಗಳನ್ನು ನೀಡುವ ಅಧಿಕಾರವಿರುವ ಸಂಸ್ಥೆಯ ಹೆಸರನ್ನೇ ಬಹಿರಂಗಪಡಿಸದ ಸಮಿತಿಗೆ ನೀಡಲಾಗಿದೆ. ಆದರೆ, ಅದರ ಮೌಲ್ಯಮಾಪನ ಮಾನದಂಡ, ಅರ್ಹತೆ ಅಥವಾ ಅಂಕ ನೀಡುವ ವಿಧಾನವನ್ನು ಪ್ರಕಟಿಸಿಲ್ಲ. ಇದರಿಂದ ವಸ್ತುನಿಷ್ಠ ಮಾನದಂಡಗಳಲ್ಲಿ ಮುಂಚೂಣಿಯಲ್ಲಿದ್ದ ಬಿಡ್ದಾರರೂ ಕಾಣದ ಹಾಗೂ ಪ್ರಶ್ನಿಸಲಾಗದ ನಿರ್ಧಾರದಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ನೋಟಿಸ್ನಲ್ಲಿ ಆರೋಪಿಸಲಾಗಿದೆ.
ಹಳೆಯ ಗುತ್ತಿಗೆದಾರರಿಗೆ ಮಾತ್ರ ಅನುಕೂಲ?: ಹಿಂದೆ ಸರಕಾರದ ಸಿಎಲ್ಎಟಿ ಕೋಚಿಂಗ್ ಗುತ್ತಿಗೆ ನಿರ್ವಹಿಸಿದ ಸಂಸ್ಥೆಗಳಿಗೆ ಮಾತ್ರ ಹೆಚ್ಚುವರಿ ಅಂಕಗಳನ್ನು ನೀಡುವ ಷರತ್ತು ಸೇರಿಸಲಾಗಿದೆ. ಇದರಿಂದ ಹೊಸ ಹಾಗೂ ಅರ್ಹ ಸಂಸ್ಥೆಗಳು ಸ್ಪರ್ಧೆಯಿಂದ ಹೊರಗುಳಿಯುವಂತಾಗಿದೆ. ಇದೇ ಸಂಸ್ಥೆಗಳು ಪದೇ ಪದೇ ಗುತ್ತಿಗೆ ಪಡೆಯುವಂತೆ ಮಾಡುವ ‘ಸ್ವಯಂ ಬಲಪಡಿಸುವ ವ್ಯವಸ್ಥೆ’ ಇದಾಗಿದೆ ಎಂದು ನೋಟಿಸ್ನಲ್ಲಿ ಟೀಕಿಸಲಾಗಿದೆ. ಟೆಂಡರ್ನಲ್ಲೇ ಪರಸ್ಪರ ವಿರೋಧಾಭಾಸ: ಒಂದು ವಿಭಾಗದಲ್ಲಿ 24 ಪರಿಣಿತ ಬೋಧಕರನ್ನು ಕಡ್ಡಾಯಗೊಳಿಸಿದರೆ, ಮತ್ತೊಂದು ವಿಭಾಗದಲ್ಲಿ 18 ಬೋಧಕರು ಸಾಕು ಎಂದು ಹೇಳಲಾಗಿದೆ. ಇದು ಕೇವಲ ಮುದ್ರಣ ದೋಷವಲ್ಲ; ಭವಿಷ್ಯದಲ್ಲಿ ವಿವಾದ, ನ್ಯಾಯಾಂಗ ಹೋರಾಟ ಹಾಗೂ ಕೋಚಿಂಗ್ ಕಾರ್ಯಕ್ರಮದ ಅಸ್ತವ್ಯಸ್ತತೆಗೆ ಕಾರಣವಾಗಬಹುದು ಎಂದು ಎಚ್ಚರಿಸಲಾಗಿದೆ. ಅಪೀಲು ಸಲ್ಲಿಸಲು ಅವಕಾಶವಿಲ್ಲ: ಟೆಂಡರ್ ಮೌಲ್ಯಮಾಪನದ ವಿರುದ್ಧ ದೂರು ಅಥವಾ ಆಕ್ಷೇಪ ಸಲ್ಲಿಸಲು ಯಾವುದೇ ವ್ಯವಸ್ಥೆಯನ್ನು ಟೆಂಡರ್ ದಾಖಲೆಗಳಲ್ಲಿ ಒದಗಿಸಿಲ್ಲ. ಆದರೆ ಕಾನೂನಿನ ಪ್ರಕಾರ ಬಿಡ್ದಾರರಿಗೆ ನ್ಯಾಯಸಮ್ಮತ ಆಕ್ಷೇಪ ಸಲ್ಲಿಸುವ ಹಕ್ಕು ಇದೆ ಎಂದು ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ.
ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲೇಖ: ಇತ್ತೀಚಿನ ಗಿiಟಿishmಚಿ ಖಿeಛಿhಟಿoಟogies vs. Sಣಚಿಣe oಜಿ ಅhhಚಿಣಣisgಚಿಡಿh ತೀರ್ಪನ್ನು ನೋಟಿಸ್ನಲ್ಲಿ ಉಲ್ಲೇಖಿಸಿರುವ ವಕೀಲರು, ಒಳಗಿನವರಿಗೆ ಅನುಕೂಲವಾಗುವ ರೀತಿಯಲ್ಲಿ ರೂಪಿಸಲಾದ ಟೆಂಡರ್ಗಳನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ ಎಂದು ಹೇಳಿದ್ದಾರೆ. ಈ ದೋಷಗಳನ್ನು ಸರಿಪಡಿಸದೇ ಮುಂದುವರಿದರೆ ಸಂಬಂಧಿತ ಅಧಿಕಾರಿಗಳು ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆಯ ಆರೋಪ ಎದುರಿಸಬೇಕಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ನೋಟಿಸ್ನ ಪ್ರತಿಯನ್ನು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಹಾಗೂ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಿಗೂ ಕಳುಹಿಸಲಾಗಿದೆ. ಪೂರ್ವ-ಬಿಡ್ ಸಭೆ ನಡೆಯುವ ಮುನ್ನವೇ ಈ ಸಂಬಂಧ ತಿದ್ದುಪಡಿ ಅಧಿಸೂಚನೆ (ಛಿoಡಿಡಿigeಟಿಜum) ಹೊರಡಿಸಬೇಕೆಂದು ಆಗ್ರಹಿಸಲಾಗಿದೆ.
ನಾನು ವಕೀಲನಾಗಿದ್ದು, ನನ್ನ ಇಬ್ಬರು ಮಕ್ಕಳು ಸಿಎಲ್ಎಟಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕಾನೂನು ಶಿಕ್ಷಣ ಪಡೆದಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಪ್ರತಿನಿಧಿತ್ವ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯಗಳಲ್ಲಿ ಅತ್ಯಂತ ಕಡಿಮೆಯಾಗಿದೆ. ಆದುದರಿಂದ, ಅವರಿಗೆ ಸೂಕ್ತ ತರಬೇತಿಯ ಅವಶ್ಯಕತೆ ಇದೆ. ಕಳೆದ ಕೆಲವು ವರ್ಷಗಳ ಫಲಿತಾಂಶಗಳು ಅತ್ಯಂತ ನಿರಾಶಾದಾಯಕವಾಗಿದ್ದು, ನನ್ನ ತಿಳುವಳಿಕೆಯ ಪ್ರಕಾರ ಹಿಂದಿನ ಟೆಂಡರ್ಗಳ ಅಡಿಯಲ್ಲಿ ತರಬೇತಿ ಪಡೆದ ಒಬ್ಬ ವಿದ್ಯಾರ್ಥಿಯೂ ಸಿಎಲ್ಎಟಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿಲ್ಲ. ರಾಜ್ಯ ಸರಕಾರದ ಅಲ್ಪಸಂಖ್ಯಾತರ ನಿರ್ದೇಶನಾಲಯವು ಹೊರಡಿಸಿರುವ ಮೇಲ್ಕಂಡ ಸಿಎಲ್ಎಟಿ ಕೋಚಿಂಗ್ ಕಾರ್ಯಕ್ರಮದ ಟೆಂಡರ್ ಈ ಹಿಂದಿನವರಿಗೆ ಅನುಕೂಲವಾಗುವಂತೆ ರೂಪಿಸಲಾಗಿದೆ ಎಂಬುದು ನನಗೆ ಆಘಾತ ತಂದಿದೆ. ಹಿಂದಿನ ಟೆಂಡರ್ ವಿರುದ್ಧ ನಾನು ಕಾನೂನು ನೋಟಿಸ್ ನೀಡಿದ್ದೆ. ಟೆಂಡರ್ನಲ್ಲಿದ್ದ ಸ್ಪಷ್ಟ ದೋಷಗಳ ಕಾರಣದಿಂದ ಆ ಟೆಂಡರ್ ರದ್ದುಗೊಂಡಿತ್ತು. ಗುಣಮಟ್ಟದ ತರಬೇತಿ ಕಾರ್ಯಕ್ರಮದಿಂದ ವಂಚಿತರಾಗುತ್ತಿರುವ ಅಲ್ಪಸಂಖ್ಯಾತ ಸಮುದಾಯದ ಹಿತಾಸಕ್ತಿಯೇ ನನ್ನ ಮುಖ್ಯ ಕಾಳಜಿಯಾಗಿದೆ.
-ಸೈಯದ್ ಅಕ್ಮಲ್ ರಝ್ವಿ, ವಕೀಲರು






