ನಾಗಮಾರಪಳ್ಳಿ ಆರೋಗ್ಯ ಉಪಕೇಂದ್ರದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ಸಾರ್ವಜನಿಕರ ಪರದಾಟ

ಬೀದರ್: ಔರಾದ್ (ಬಿ) ತಾಲೂಕಿನ ಚಿಂತಾಕಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವ ನಾಗಮಾರಪಳ್ಳಿ ಗ್ರಾಮದ ಆರೋಗ್ಯ ಉಪಕೇಂದ್ರದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ತೀವ್ರವಾಗಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ.
ನಾಗಮಾರಪಳ್ಳಿ ಗ್ರಾಮದಲ್ಲಿ ಸುಸಜ್ಜಿತ ಆರೋಗ್ಯ ಉಪಕೇಂದ್ರದ ಕಟ್ಟಡವನ್ನು 2014ರಲ್ಲಿ ಉದ್ಘಾಟಿಸಲಾಗಿದೆ ಎನ್ನಲಾಗುತ್ತಿದೆ. ಆದರೆ, ಯಾವ ಯೋಜನೆಯಡಿ, ಎಷ್ಟು ವೆಚ್ಚದಲ್ಲಿ ಈ ಕಟ್ಟಡ ನಿರ್ಮಿಸಲಾಗಿದೆ ಎಂಬ ಮಾಹಿತಿ ಫಲಕ ಅಳವಡಿಸಲಾಗಿಲ್ಲ. ಉದ್ಘಾಟನೆಯಾಗಿ ಹಲವು ವರ್ಷಗಳಾದರೂ ಕಟ್ಟಡದ ಸ್ಥಿತಿ ಹದಗೆಟ್ಟಿದ್ದು, ಹೆಸರಿಗೆ ಮಾತ್ರ ಆರೋಗ್ಯ ಉಪಕೇಂದ್ರ ಎಂಬಂತಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಆರೋಗ್ಯ ಉಪಕೇಂದ್ರಕ್ಕೆ ನಾಗಮಾರಪಳ್ಳಿ, ಮಾನುರ್, ನಂದ್ಯಾಳ್, ಜಕನಾಳ್ ಹಾಗೂ ಇಡಿಗ್ಯಾಳ್ ಸೇರಿ ಐದು ಗ್ರಾಮಗಳು ಅವಲಂಬಿತವಾಗಿವೆ. ಈ ಗ್ರಾಮಗಳ ಜನರು ಆರೋಗ್ಯ ತಪಾಸಣೆ ಹಾಗೂ ಪ್ರಾಥಮಿಕ ಚಿಕಿತ್ಸೆಗೆ ಇಲ್ಲಿಗೆ ಬರಬೇಕಾಗಿದೆ.
ಆದರೆ, ಕಟ್ಟಡದಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳಿಲ್ಲದ ಕಾರಣ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಮಳೆ ಬಂದರೆ ಕಟ್ಟಡದ ಕೆಲವು ಕೊಠಡಿಗಳಲ್ಲಿ ನೀರು ನಿಲ್ಲುತ್ತದೆ. ಕಟ್ಟಡದ ಸುತ್ತಲೂ ಗಿಡಗಂಟಿಗಳು ಬೆಳೆದು ನಿಂತಿವೆ. ಕಿಟಕಿಯ ಗಾಜುಗಳು ಒಡೆದಿದ್ದು, ಹೊರಗಡೆಯಿಂದ ಬೆಳೆದಿರುವ ಗಿಡಗಳು ಕಿಟಕಿಯ ಒಳಭಾಗಕ್ಕೂ ನುಗ್ಗಿವೆ. ಇದರಿಂದ ಹಾವು, ಚೇಳು ಹಾಗೂ ಇತರೆ ವಿಷಕಾರಿ ಕೀಟಗಳು ಒಳನುಗ್ಗುವ ಅಪಾಯವಿದ್ದು, ರೋಗಿಗಳು ಮತ್ತು ಸಿಬ್ಬಂದಿ ಆತಂಕದಲ್ಲೇ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ರೋಗಿಗಳಿಗೆ ಬೆಡ್, ಕುಡಿಯುವ ನೀರಿಲ್ಲ ಆರೋಗ್ಯ ಉಪಕೇಂದ್ರಕ್ಕೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಸಮರ್ಪಕ ಬೆಡ್‌ಗಳ ವ್ಯವಸ್ಥೆ ಇಲ್ಲ. ರೋಗಿಗಳು ನೆಲದ ಮೇಲೆ ಮಲಗಿ ಅಥವಾ ಕುರ್ಚಿಯಲ್ಲಿ ಕುಳಿತು ಚಿಕಿತ್ಸೆ ಪಡೆಯಬೇಕಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬಂದರೆ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆಯೂ ಇಲ್ಲ.ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲದಿರುವುದರಿಂದ ರೋಗಿಗಳು ಹಾಗೂ ಅವರ ಸಂಬಂಧಿಕರು ಪರದಾಡುವಂತಾಗಿದೆ.
ಗಬ್ಬೆದ್ದು ನಾರುತ್ತಿರುವ ಶೌಚಾಲಯ, ವಿದ್ಯುತ್ ಸಮಸ್ಯೆ: ಕಟ್ಟಡದಲ್ಲಿ ಶೌಚಾಲಯವಿದ್ದರೂ ಅದು ಗಬ್ಬೆದ್ದು ನಾರುತ್ತಿದೆ. ಶೌಚಾಲಯಕ್ಕೆ ಬಾಗಿಲು ಇಲ್ಲದಿರುವುದರಿಂದ ರೋಗಿಗಳು ಮತ್ತು ಸಿಬ್ಬಂದಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕಟ್ಟಡದಲ್ಲಿ ಸಮರ್ಪಕ ವಿದ್ಯುತ್ ವ್ಯವಸ್ಥೆಯೂ ಇಲ್ಲ.
ಇದರಿಂದ ಕತ್ತಲಲ್ಲೇ ಕೆಲಸ ನಿರ್ವಹಿಸ ಬೇಕಾದ ಪರಿಸ್ಥಿತಿ ಇದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಯೋಗ ಕೇಂದ್ರ ಇದ್ದರೂ ಉಪಯೋಗವಿಲ್ಲ ಆರೋಗ್ಯ ಉಪಕೇಂದ್ರದ ಗೇಟ್ ಮುರಿದು ಬಿದ್ದಿದ್ದು, ಯಾರೂ ಬೇಕಾದರೂ ಆವರಣಕ್ಕೆ ಪ್ರವೇಶಿಸುವಂತಾಗಿದೆ. ಆವರಣದ ಒಂದು ಭಾಗದಲ್ಲಿ ಯೋಗ ಕೇಂದ್ರಕ್ಕಾಗಿ ಶೆಡ್ ನಿರ್ಮಾಣ ಮಾಡಲಾಗಿದ್ದರೂ ಅದರ ಸುತ್ತಮುತ್ತಲೂ ಹುಲ್ಲು, ಗಿಡಗಳು ಬೆಳೆದಿವೆ. ಯೋಗ ಮಾಡುವ ಸ್ಥಳದಲ್ಲಿ ನಾಯಿಗಳು ಗಲೀಜು ಮಾಡಿರುವುದರಿಂದ ಅದು ಬಳಕೆಗೆ ಅಯೋಗ್ಯವಾಗಿದೆ. ಆಸ್ಪತ್ರೆ ಕಟ್ಟಡದ ಜೊತೆಗೆ ಯೋಗ ಕೇಂದ್ರವೂ ನಿರ್ವಹಣೆ ಕೊರತೆಯಿಂದ ಹಾಳಾಗುತ್ತಿದೆ.
ಸಿಬ್ಬಂದಿ, ಔಷಧಿ ಕೊರತೆ ಆರೋಪ ಈ ಆರೋಗ್ಯ ಉಪ ಕೇಂದ್ರದಲ್ಲಿ ಇಬ್ಬರು ಸಿಬ್ಬಂದಿ ಇದ್ದರೂ ವಾರದಲ್ಲಿ 2-3ದಿನ ಮಾತ್ರ ಬರುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಗತ್ಯ ಔಷಧಿಗಳ ಲಭ್ಯತೆಯೂ ಇಲ್ಲದಿರುವುದರಿಂದ ರೋಗಿಗಳು ಈ ಕೇಂದ್ರಕ್ಕೆ ಬರಲು ಹಿಂಜರಿಯುತ್ತಿದ್ದಾರೆ. ಬಹುತೇಕ ರೋಗಿಗಳು ಚಿಕಿತ್ಸೆಗಾಗಿ ತಾಲೂಕು ಕೇಂದ್ರವಾದ ಔರಾದ್ ಪಟ್ಟಣಕ್ಕೆ ತೆರಳುವಂತಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಆರೋಗ್ಯ ಉಪಕೇಂದ್ರವು ಸಮಸ್ಯೆಗಳ ಗೂಡಾಗಿದ್ದು, ಗರ್ಭಿಣಿಯರು, ಹಿರಿಯ ನಾಗರಿಕರು, ಮಕ್ಕಳು ಹಾಗೂ ಸಾಮಾನ್ಯ ರೋಗಿಗಳು ಪ್ರಾಥಮಿಕ ಆರೋಗ್ಯ ಸೇವೆಯಿಂದ ವಂಚಿತರಾಗುತ್ತಿದ್ದಾರೆ. ಸ್ವಚ್ಛತೆ ಕುರಿತು 2025ರಲ್ಲಿ ಗ್ರಾಮ ಪಂಚಾಯತ್‌ಗೆ ಆರೋಗ್ಯ ಇಲಾಖೆಯಿಂದ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ನಾಗಮಾರಪಳ್ಳಿ ಆರೋಗ್ಯ ಉಪಕೇಂದ್ರದಲ್ಲಿ ವಿದ್ಯುತ್, ಕುಡಿಯುವ ನೀರು, ಸ್ವಚ್ಛತೆ, ಬೆಡ್, ಶೌಚಾಲಯ, ಔಷಧಿ ಹಾಗೂ ಸಿಬ್ಬಂದಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಶೀಘ್ರ ಒದಗಿಸಬೇಕು. ಗುಣಮಟ್ಟದ ಆರೋಗ್ಯ ಸೇವೆ ನೀಡಲು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ನಾಗಮಾರಪಳ್ಳಿ ಆರೋಗ್ಯ ಉಪಕೇಂದ್ರದಲ್ಲಿ ವಿದ್ಯುತ್, ಕುಡಿಯುವ ನೀರು, ಸ್ವಚ್ಛತೆ, ಬೆಡ್, ಶೌಚಾಲಯ ಸೇರಿದಂತೆ ಹಲವಾರು ಸಮಸ್ಯೆಗಳಿವೆ. ಸಿಬ್ಬಂದಿ ಕೊರತೆಯೂ ಇದೆ. ಇಬ್ಬರು ಸಿಬ್ಬಂದಿ ಇದ್ದರೂ ವಾರದಲ್ಲಿ ಎರಡು-ಮೂರು ದಿನ ಮಾತ್ರ ಬರುತ್ತಾರೆ. ಯಾವುದೇ ಸೌಲಭ್ಯ ಇಲ್ಲದ ಕಾರಣ ರೋಗಿಗಳು ಈ ಕೇಂದ್ರಕ್ಕೆ ಬರುವುದೇ ಇಲ್ಲ. ಬಂದರೂ ಸರಿಯಾದ ಚಿಕಿತ್ಸೆ ಸಿಗುವುದಿಲ್ಲ. ಇಲ್ಲಿ ಎಲ್ಲ ಸೌಲಭ್ಯಗಳನ್ನು ಒದಗಿಸಿದರೆ ಸಣ್ಣಪುಟ್ಟ ಕಾಯಿಲೆಗಳಿಗೆ ಸ್ಥಳೀಯವಾಗಿಯೇ ಚಿಕಿತ್ಸೆ ಪಡೆಯಬಹುದು.
-ಧನರಾಜ್ ಕಾಂಬಳೆ, ಸ್ಥಳೀಯ ನಿವಾಸಿ
ಇಂಥ ಸಮಸ್ಯೆಗಳು ನಮ್ಮ ಗಮನಕ್ಕೆ ಬಂದಾಗ ಮಾತ್ರ ನಾವು ಕ್ರಮ ಕೈಗೊಳ್ಳಲು ಸಾಧ್ಯ. ನಾಗಮಾರಪಳ್ಳಿ ಆರೋಗ್ಯ ಉಪಕೇಂದ್ರದ ಬಗ್ಗೆ ಪರಿಶೀಲನೆ ಮಾಡುತ್ತೇನೆ. ಅಲ್ಲಿಗೆ ಭೇಟಿ ನೀಡಿ, ಸ್ಥಳೀಯ ಅಧಿಕಾರಿಗಳೊಂದಿಗೆ ಮಾತನಾಡಿ ವರದಿ ತಯಾರಿಸುತ್ತೇನೆ.
-ಡಾ. ಅನಿಲ್ ಏಕಲೂರೆ
ತಾಲೂಕು ಆರೋಗ್ಯ ಅಧಿಕಾರಿ, ಔರಾದ್
ನಾಗಮಾರಪಳ್ಳಿ ಗ್ರಾಮ ಪಂಚಾಯತ್‌ನಲ್ಲಿ ನಾನು ಅಧಿಕಾರ ವಹಿಸಿಕೊಂಡು ಸುಮಾರು ಎರಡು ತಿಂಗಳಷ್ಟೇ ಆಗಿದೆ. ಅಲ್ಲಿನ ಸಮಸ್ಯೆಗಳ ಬಗ್ಗೆ ಆರೋಗ್ಯ ಇಲಾಖೆಯಿಂದ ನನಗೆ ಯಾವುದೇ ಮಾಹಿತಿ ಬಂದಿಲ್ಲ. ಅಲ್ಲಿ ವಿದ್ಯುತ್ ಸಮಸ್ಯೆ ಇದೆ ಎಂದು ಗೊತ್ತಾಗಿದೆ. ಆದಷ್ಟು ಬೇಗ ವಿದ್ಯುತ್ ಸಮಸ್ಯೆ ನಿವಾರಣೆ ಮಾಡಲಾಗುವುದು. ಸ್ವಚ್ಛತೆಯನ್ನೂ ಮಾಡಿಸಲಾಗುವುದು. ಆದರೆ, ಈ ಕಾಮಗಾರಿಗಳಿಗೆ ಅನುದಾನದ ಕೊರತೆಯೂ ಇದೆ.
-ಂಗೀತಾ, ಪಿಡಿಒ ನಾಗಮಾರಪಳ್ಳಿ






