ಮಕ್ಕಾದ ಐತಿಹಾಸಿಕ ಪರ್ವತ ಜಬಲ್ ಅಲ್ ನೂರ್!

ಉಮ್ರಾ ಯಾತ್ರೆ ತೆರಳುವ ಯಾತ್ರಾರ್ಥಿಗಳಿಗೆ ಮಕ್ಕಾ ಮಸೀದಿಯಿಂದ ಈಶಾನ್ಯಕ್ಕೆ ಸುಮಾರು ನಾಲ್ಕು ಮೀಟರ್ ದೂರದಲ್ಲಿರುವ ಐತಿಹಾಸಿಕ ಪರ್ವತ ‘ಜಬಲ್ ಅಲ್ ನೂರ್’ ಏರುವ ಅವಕಾಶ ದೊರೆಯುತ್ತದೆ. ಬಾನೆತ್ತರದ ಈ ಬೆಳಕಿನ ಬೆಟ್ಟವನ್ನು ಏರುವಾಗ ಚಾರಣದ ಜೊತೆ ವಿಶಿಷ್ಟ ಧಾರ್ಮಿಕ ಅನುಭವ ಕೂಡ ಸಿಗುತ್ತದೆ.
ಸೌದಿ ಅರಬಿಯ ದೇಶದಲ್ಲಿರುವ ಪವಿತ್ರ ಮಕ್ಕಾಕ್ಕೆ ಉಮ್ರಾ ಯಾತ್ರೆ ತೆರಳುವ ಬಹುತೇಕ ಯಾತ್ರಾರ್ಥಿಗಳು ಈ ಪವರ್ತಕ್ಕೆ ಭೇಟಿ ನೀಡುತ್ತಾರೆ. ಇಲ್ಲಿನ ಹಿರಾ ಗುಹೆ(ಗಾರ್-ಎ-ಹಿರಾ)ಯಲ್ಲೇ ಪವಿತ್ರ ಕುರ್‌ಆನ್‌ನ ಮೊದಲ ವಚನಗಳು ಅವತೀರ್ಣವಾದವು.
ಪ್ರವಾದಿ ಮುಹಮ್ಮದ್(ಸ.) ಅವರಿಗೆ ಮೊದಲ ದಿವ್ಯ ಸಂದೇಶ ದೊರೆತ ಗುಹೆ ಇದೇ ಆಗಿದೆ. ಪ್ರವಾದಿಯವರು ಪ್ರವಾದಿತ್ವವನ್ನು ಪಡೆಯುವ ಮೊದಲು, ಆರಾಧನೆಗಾಗಿ ಈ ಗುಹೆಗೆ ತೆರಳುತ್ತಿದ್ದರು. ಹೀಗಾಗಿ ಈ ಪರ್ವತ ಹಾಗೂ ಗುಹೆ ಧಾರ್ಮಿಕವಾಗಿ ಹೆಚ್ಚು ಮಹತ್ವ ಪಡೆದಿದೆ. ಯಾತ್ರಾರ್ಥಿಗಳ ಪ್ರಮುಖ ಭೇಟಿಯ ತಾಣಗಳಲ್ಲೂ ಒಂದಾಗಿದೆ.
ಜಬಲ್ ಅಲ್ ನೂರ್ ಮತ್ತು ಹಿರಾ ಗುಹೆಯು ಮಕ್ಕಾದ ಅತ್ಯಂತ ಪ್ರಸಿದ್ಧ ಪರ್ವತಗಳಲ್ಲಿ ಒಂದಾಗಿದ್ದು, ಮಸ್ಜಿದುಲ್ ಹರಾಮ್‌ನ ಪೂರ್ವ ದಿಕ್ಕಿನಲ್ಲಿ ಇದೆ. ಈ ಪರ್ವತ ಮಕ್ಕಾದ ಎತ್ತರದ ಪರ್ವತಗಳಲ್ಲಿ ಒಂದಾಗಿದೆ.
ಸುಮಾರು 642(2,106 ಅಡಿ) ಮೀಟರ್ ಎತ್ತರ ಇರುವ ಈ ಪರ್ವತವು ಸಾಕಷ್ಟು ಕಡಿದಾದ ಮೆಟ್ಟಿಲುಗಳನ್ನು ಹೊಂದಿದೆ.
ಪರ್ವತದಲ್ಲಿರುವ ಗುಹೆಯನ್ನು ತಲುಪಬೇಕಾದರೆ ಸುಮಾರು 1,200- 1,300 ಮೆಟ್ಟಿಲುಗಳನ್ನು ಏರಬೇಕಾಗುತ್ತದೆ. ಸಾಮಾನ್ಯವಾಗಿ ಒಂದರಿಂದ ಒಂದೂವರೆ ಗಂಟೆಯ ಅವಧಿ ಬೇಕಾಗುತ್ತದೆ. ಈ ಪರ್ವತದ ಶಿಖರವು ದೂರದಲ್ಲಿ ಒಂಟೆಯ ಹುಬ್ಬಿನ ಆಕಾರವನ್ನು ಹೋಲುತ್ತದೆ. ಮಕ್ಕಾದಲ್ಲಿ ಈ ರೀತಿಯಂತೆ ಕಾಣುವ ಮತ್ತೊಂದು ಪರ್ವತ ಇಲ್ಲ ಎನ್ನುತ್ತಾರೆ ಸ್ಥಳೀಯರು.
ಮಕ್ಕಾದಿಂದ ಈ ಪರ್ವತದ ಬಳಿಗೆ ತೆರಳಲು ಸುಸಜ್ಜಿತ ರಸ್ತೆ ವ್ಯವಸ್ಥೆ ಇದ್ದು, ಸ್ವಂತ ವಾಹನ ಅಥವಾ ಪ್ರವಾಸಿ ಬಸ್‌ಗಳಲ್ಲೂ ಇಲ್ಲಿಗೆ ತೆರಳ ಬಹುದು. ಮಕ್ಕಾದಿಂದ ಇಲ್ಲಿಗೆ ತೆರಳಲು ಸಾಕಷ್ಟು ಪ್ರವಾಸಿ ಬಸ್ ಹಾಗೂ ಟ್ಯಾಕ್ಸಿಗಳ ವ್ಯವಸ್ಥೆ ಇದೆ. ಈ ಪರ್ವತದ ತಳದವರೆಗೆ ಮಾತ್ರ ವಾಹನಗಳ ವ್ಯವಸ್ಥೆಗಳಿದ್ದು, ಅಲ್ಲಿಂದ ಪರ್ವತವನ್ನು ಕಾಲ್ನಡಿಗೆಯಲ್ಲೇ ಏರಬೇಕಾಗುತ್ತದೆ. ಇದೊಂದು ವಿಶಿಷ್ಟ ಅನುಭವ ನೀಡುತ್ತದೆ. ಮರಳುಗಾಡಿನಲ್ಲಿ ಟ್ರಕ್ಕಿಂಗ್ ಅನುಭವದ ಜೊತೆಗೆ ಧಾರ್ಮಿಕ ಮಹತ್ವವನ್ನು ಸಾರಿ ಹೇಳುತ್ತದೆ.
ಒಂದೆಡೆ ಬಿಸಿಲಿನ ಬೇಗೆ, ಇನ್ನೊಂದೆಡೆ ಎತ್ತರಕ್ಕೆ ಏರುವ ಕಡಿದಾದ ದಾರಿಯು ನಮ್ಮಲ್ಲಿನ ಶ್ರಮವನ್ನು ಅಪೇಕ್ಷಿಸುತ್ತದೆ. ಬೇಸಿಗೆಯಲ್ಲಿ ಈ ಪರ್ವತವನ್ನು ಏರಲು ಸಂಜೆ ಅಥವಾ ಮುಂಜಾನೆ ಸೂಕ್ತ ಸಮಯವಾಗಿದೆ. ಪರ್ವತ ಏರುವಾಗ ನಮ್ಮಲ್ಲಿ ನೀರಿನ ಬಾಟಲಿ ಇಟ್ಟುಕೊಳ್ಳುವುದು ಅತೀ ಅಗತ್ಯವಾಗಿದೆ. ಯಾಕೆಂದರೆ ಪ್ರತೀ ಹಂತದಲ್ಲೂ ಬಾಯಾರಿಕೆ ಸಾಕಷ್ಟು ಕಾಡುತ್ತಿರುತ್ತದೆ.
ಪರ್ವತದ ತುತ್ತತುದಿ ತಲುಪಿದಾಗ ಸಿಗುವ ಮಾನಸಿಕ ಖುಷಿ ವರ್ಣಿಸಲು ಸಾಧ್ಯ ಇಲ್ಲ. ತುದಿ ಯಲ್ಲಿ ನಿಂತು ಸುತ್ತ ಕಣ್ಣು ಹಾಯಿಸಿದರೆ ಮರ ಗಿಡಗಳಿಲ್ಲದ ಬಂಡೆಗಳಿಂದ ಕೂಡಿದ ನೂರಾರು ಪರ್ವತ ಶಿಖರಗಳು ಗೋಚರಿಸುತ್ತವೆ. ಅದೇ ರೀತಿ ಸಂಜೆ ಹೊತ್ತಿಗೆ ಪರ್ವತ ಏರಿದವರಿಗೆ ತುದಿಯಿಂದ ಸೂರ್ಯಾಸ್ತಮದ ವಿಹಂಗಮ ನೋಟದ ಭಾಗ್ಯ ದೊರೆಯುತ್ತದೆ.
ಪರ್ವತಗಳ ನಡುವೆ ನಗರಗಳು, ನಗರದಲ್ಲಿನ ಕಟ್ಟಡಗಳು, ದೂರದ ಮಕ್ಕಾದ ಕ್ಲಾಕ್ ಟವರ್ ಅತ್ಯಂತ ಸುಂದರವಾಗಿ ಕಣ್ಣಿಗೆ ರಾಚುತ್ತವೆ. ತುದಿ ಏರಿದ ಬಳಿಕ ಗುಹೆ ತಲುಪಬೇಕಾದರೆ ಇನ್ನೊಂದು ಬದಿಗೆ ಮತ್ತೆ ಇಳಿಯಬೇಕು. ಅದು ಕೂಡ ಅಪಾಯಕಾರಿ ದಾರಿ. ಇಲ್ಲಿಗೂ ಮೆಟ್ಟಿಲುಗಳಿವೆ. ಅಲ್ಲಿಂದ ಕಲ್ಲು ಬಂಡೆಗಳ ಮಧ್ಯೆ ಹರಸಾಹಸ ಪಟ್ಟು ಗುಹೆ ತಲುಪಬಹುದಾಗಿದೆ.
ಧಾರ್ಮಿಕ ಪಾವಿತ್ರ್ಯ ಇರುವ ತಾಣಕ್ಕೆ ನಾನಾ ದೇಶಗಳ ಯಾತ್ರಾರ್ಥಿಗಳು ಆಗಮಿಸುತ್ತಾರೆ. ಈ ಪರ್ವತದ ತುದಿಯಲ್ಲೂ ಸಣ್ಣಮಟ್ಟದ ವ್ಯಾಪಾರ ವಹಿವಾಟು ನಡೆಯುತ್ತವೆ. ಅಲ್ಲಿ ಬಹುತೇಕ ಅಫ್ಘಾನಿಸ್ತಾನಿಯರು, ಕಾಶ್ಮೀರಿಗಳು ಸೇರಿದಂತೆ ನಾನಾ ದೇಶದ ವ್ಯಾಪಾರಸ್ಥರು ಜಪಮಾಲೆ, ನೀರು, ಜ್ಯೂಸ್, ಹಣ್ಣುಗಳು, ಆಟಿಕೆ ಸೇರಿದಂತೆ ವಿವಿಧ ವ್ಯಾಪಾರ ಮಾಡುತ್ತಿದ್ದಾರೆ. ಅವುಗಳನ್ನೆಲ್ಲ ಅವರು ತಲೆಯ ಮೇಲೆ ಹೊತ್ತು ಕೊಂಡೇ ಪರ್ವತವನ್ನೇರಿ ವ್ಯಾಪಾರ ನಡೆಸುತ್ತಾರೆ.
ಇದೀಗ ಈ ಸ್ಥಳವನ್ನು ಧಾರ್ಮಿಕ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಲಾಗಿದೆ. ಪ್ರತೀ ವರ್ಷ ಸಾವಿರಾರು ಯಾತ್ರಿಕರು ಹಾಗೂ ಉಮ್ರಾ ನಿರ್ವಹಿಸುವವರು ಇಲ್ಲಿಗೆ ಭೇಟಿ ನೀಡುತ್ತಿರುವುದರಿಂದ ಕೆಲವೊಂದು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇದು ಕೇವಲ ಒಂದು ಪರ್ವತವಲ್ಲ. ದೈವಿಕ ಸಂದೇಶಕ್ಕೆ ಸಾಕ್ಷಿಯಾದ ಜೀವಂತ ಸ್ಥಳವಾಗಿ ಗುರುತಿ ಸಿಕೊಂಡಿದೆ.
ಪರ್ವತ ಏರುವ ಮುನ್ನ ಇಲ್ಲೊಂದು ಪ್ರದರ್ಶ ನಾಲಯ ಗಮನ ಸೆಳೆಯುತ್ತದೆ. ಇದು ಶ್ರಾವ್ಯ ಹಾಗೂ ದೃಶ್ಯ ಮಾಧ್ಯಮಗಳ ಮೂಲಕ ಸಮೃದ್ಧ ಅನುಭವವನ್ನು ನೀಡುವ ಪ್ರದರ್ಶನಾಲಯವಾಗಿದೆ. ಇದರಲ್ಲಿ ಪವಿತ್ರ ಕುರ್‌ಆನ್ ಅವತೀರ್ಣವಾಗಿರುವ ಚಿತ್ರಣ ಹಾಗೂ ಇಸ್ಲಾಮಿನ ಆರಂಭಿಕ ಜೀವನವನ್ನು ಪ್ರದರ್ಶಿಸಲಾಗುತ್ತದೆ. ಇದು ಹಿರಾ ಗುಹೆಯ ಮಹತ್ವ ಮತ್ತು ಪಾವಿತ್ರ್ಯವನ್ನು ಅರಿಯಲು ನೆರವಾಗುತ್ತದೆ. ಯಾತ್ರಾರ್ಥಿಗಳಿಗೆ ಮನಮೋಹಕ ಅನುಭವ ನೀಡುತ್ತದೆ.






