‘ಎಸ್‌ಐಆರ್’ ಅರ್ಹ ಮತದಾರರನ್ನು ಹೊರಗಿಡುವ ಹುನ್ನಾರವೇ?

ಬೆಂಗಳೂರು, ಆ.5: ಮತಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್)ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರಿದ್ದರೂ ‘ಮತಕ್ಷೇತ್ರ ಬಿಟ್ಟು, ಬೇರೆ ಕ್ಷೇತ್ರದಲ್ಲಿ ವಾಸ’ ಅಥವಾ ‘ಮದುವೆಯಾಗಿ ಸ್ಥಳಾಂತರ’ ಗೊಂಡಿದ್ದಾರೆ ಎಂಬ ಕಾರಣ ನೀಡಿ ಗಣತಿ ನಮೂನೆ ನೀಡಲು ನಿರಾಕರಿಸುತ್ತಿರುವ ಪ್ರಕರಣಗಳು ಹೆಚ್ಚಾಗಿವೆ.
ಮತದಾರರ ಪಟ್ಟಿಯಲ್ಲಿ ಹೆಸರು ಮುಂದುವರಿದಿದ್ದರೂ ಗಣತಿ ನಮೂನೆ ಸಿಗದಿದ್ದರೆ ಅಂತಹ ಮತದಾರರ ಹೆಸರು ಅಂತಿಮ ಮತಪಟ್ಟಿಯಲ್ಲಿ ಉಳಿಯುತ್ತದೆಯೇ?. ಈ ಎಸ್‌ಐಆರ್ ಪ್ರಕ್ರಿಯೆ ಅರ್ಹ ಮತದಾರರನ್ನು ಮತಪಟ್ಟಿಯಿಂದ ಹೊರಗಿಡುವ ಧಿಕ್ಕಿನಲ್ಲಿ ಸಾಗುತ್ತಿದೆಯೇ? ಎಂಬ ಗಂಭೀರ ಪ್ರಶ್ನೆಗಳು ಸಂತ್ರಸ್ತ ಮತದಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರಿನ ಸಿ.ವಿ.ರಾಮನ್ ನಗರ ವಿಧಾನಸಭಾ ಕ್ಷೇತ್ರದ ಬೂತ್ ಸಂಖ್ಯೆ 193ರ ಮತದಾರರಾದ ಅನ್ನಪೂರ್ಣಮ್ಮ ಅವರ ಹೆಸರು ಮತಪಟ್ಟಿಯಲ್ಲಿದೆ. ಆದರೆ ಅವರು ತಮ್ಮ ಪುತ್ರ ಮತ್ತು ಸೊಸೆಯೊಂದಿಗೆ ಕೆಂಗೇರಿಯಲ್ಲಿ ವಾಸಿಸುತ್ತಿರುವ ಕಾರಣ, ಬಿಎಲ್‌ಒ ಹಾಗೂ ಎಇಆರ್‌ಒ ಇಬ್ಬರೂ ಮತದಾರರಿಗೆ ಗಣತಿ ನಮೂನೆ ನೀಡಲು ನಿರಾಕರಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಅನ್ನಪೂರ್ಣಮ್ಮ ಅವರಿಗೆ ರಾಜ್ಯದ ಬೇರೆ ಯಾವುದೇ ಕ್ಷೇತ್ರದಲ್ಲಿ ಮತದಾರರ ಗುರುತಿನ ಚೀಟಿ ಇಲ್ಲ. ಅವರ ಪುತ್ರ ಮತ್ತು ಸೊಸೆ ಇದೇ ಕ್ಷೇತ್ರದ ಮತದಾರರಾಗಿದ್ದು, ಆನ್‌ಲೈನ್ ಮೂಲಕ ಗಣತಿ ನಮೂನೆ ಸಲ್ಲಿಸಿದ್ದಾರೆ. ಆದರೆ, ತಾಂತ್ರಿಕ ಕಾರಣದಿಂದ ಅನ್ನಪೂರ್ಣಮ್ಮ ಅವರ ನಮೂನೆಯನ್ನು ಆನ್‌ಲೈನ್‌ನಲ್ಲಿ ಸಲ್ಲಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಬಿಎಲ್‌ಒ ಮೂಲಕ ನಮೂನೆ ಪಡೆಯಲು ಪ್ರಯತ್ನಿಸಿದಾಗ ನಿರಾಶದಾಯಕ ಪ್ರತಿಕ್ರಿಯೆ ದೊರಕಿದೆ ಎಂದು ಸಂತ್ರಸ್ತರು ‘ವಾರ್ತಾಭಾರತಿ’ ಪತ್ರಿಕೆಗೆ ತಿಳಿಸಿದ್ದಾರೆ.
ಸಿ.ವಿ.ರಾಮನ್ ನಗರ ಕ್ಷೇತ್ರದ ಬಿಎಲ್‌ಒ ಮತ್ತು ಎಇಆರ್‌ಒ ಅವರನ್ನು ಪ್ರಶ್ನಿಸಿದಾಗ, ‘ಬೇರೆ ಕ್ಷೇತ್ರದಲ್ಲಿ ವಾಸ ಮಾಡುತ್ತಿರುವವರಿಗೆ ಗಣತಿ ನಮೂನೆ ನೀಡಬಾರದು ಎಂದು ಮೇಲಧಿಕಾರಿಗಳಿಂದ ಮಾರ್ಗದರ್ಶನವಿದೆ. ಹಾಗಾಗಿ ನಾವು ಯಾವುದೇ ಕಾರಣಕ್ಕೂ ನಮೂನೆ ನೀಡುವುದಿಲ್ಲ. ಅಷ್ಟೇ ಅಲ್ಲದೇ, ಇಂತಹ ಪ್ರಕರಣಗಳನ್ನು ಕಿತ್ತುಹಾಕಲೆಂದೆ ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿರುವುದು’ ಎಂದು ಎಇಆರ್‌ಒ ಪ್ರತಿಕ್ರಿಯಿಸಿದ್ದಾರೆ.
ಇದೇ ರೀತಿಯ ಮತ್ತೊಂದು ಭಿನ್ನವಾದ ಪ್ರಕರಣ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಕ್ಷೇತ್ರದ ಬೂತ್ ಸಂಖ್ಯೆ 141ರಲ್ಲಿ ವರದಿಯಾಗಿದೆ. ಮತದಾರರಾದ ಸುಮಾ ವಿ. ಅವರು ಮದುವೆಯಾದ ಬಳಿಕ ಗಂಡನ ಊರಿಗೆ ತೆರಳಿದ್ದರೂ, ಅವರ ಹೆಸರು ಇನ್ನೂ ಚಿಂತಾಮಣಿ ಕ್ಷೇತ್ರದ ಮತಪಟ್ಟಿಯಲ್ಲೇ ಇದೆ. 2023 ಹಾಗೂ 2024ರ ಚುನಾವಣೆಯಲ್ಲೂ ಇದೇ ಕ್ಷೇತ್ರದಲ್ಲಿ ಮತ ಚಲಾಯಿಸಿದ್ದಾರೆ. ಆದರೆ, ಬಿಎಲ್‌ಒ ‘ಮದುವೆಯಾಗಿ ಬೇರೆ ಊರಿಗೆ ಸ್ಥಳಾಂತರಗೊಂಡಿದ್ದಾರೆ’ ಎಂಬ ಕಾರಣ ನೀಡಿ ಗಣತಿ ನಮೂನೆ ನೀಡಲು ನಿರಾಕರಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಇಂತಹ ಪ್ರಕರಣಗಳು ನಾಗರಿಕ ಸಮಾಜದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮತಪಟ್ಟಿಯಲ್ಲಿ ಹೆಸರು ಹೊಂದಿರುವ ಮತದಾರರಿಗೂ ಗಣತಿ ನಮೂನೆ ಸಿಗದಿದ್ದರೆ, ಎಎಸ್‌ಆರ್‌ನ ಮೂಲ ಉದ್ದೇಶವೇ ಪ್ರಶ್ನೆಗೆ ಒಳಗಾಗುತ್ತದೆ. ಇಂತಹ ಪ್ರಕರಣಗಳ ಕುರಿತು ಚುನಾವಣಾ ಆಯೋಗ ತಕ್ಷಣ ಸ್ಪಷ್ಟನೆ ನೀಡಿ, ಎಲ್ಲ ಅರ್ಹ ಮತದಾರರಿಗೂ ನಮೂನೆ ತಲುಪಿಸುವ ಕೆಲಸ ಮಾಡಬೇಕು ಎಂದು ನಾಗರಿಕ ಮತಕಾವಲು ಸಮಿತಿ ವಕ್ತಾರ ಸರೋವರ ಬೆಂಕಿಕೆರೆ ತಿಳಿಸಿದ್ದಾರೆ.
ಮಹಿಳೆಯರು ಮದುವೆಯಾದ ತಕ್ಷಣವೇ ಮತಕ್ಷೇತ್ರ ಬದಲಾಯಿಸುವುದು ಕಡ್ಡಾಯವಲ್ಲ. ಹೊಸ ಕ್ಷೇತ್ರದಲ್ಲಿ ಹೆಸರು ಸೇರುವವರೆಗೆ ಅವರು ಹಳೆಯ ಕ್ಷೇತ್ರದ ಮತದಾರರಾಗಿಯೇ ಪರಿಗಣಿಸಲ್ಪಡುತ್ತಾರೆ. ಇಂತಹ ಸಂದರ್ಭದಲ್ಲಿ ಗಣತಿ ನಮೂನೆ ನಿರಾಕರಿಸುವುದು, ಮಹಿಳೆಯರ ಮತದಾನದ ಹಕ್ಕಿನ ಮೇಲೆಯೇ ಪರಿಣಾಮ ಬೀರುವ ಸಾಧ್ಯತೆ ಇದೆ.
<ಮಮತಾ, ಪದಾಧಿಕಾರಿ, ಮಹಿಳಾ ಮುನ್ನಡೆ






