ದರಖಾಸ್ತು ಮಂಜೂರಾತಿ ಜಮೀನು ಪಡೆದ ರೈತರ ಗೋಳು

ಶಿವಮೊಗ್ಗ: ಹಲವಾರು ವರ್ಷಗಳಿಂದ ಸರಕಾರದಿಂದಲೇ ದರಖಾಸ್ತು ಮೂಲಕ ಭೂ ಮಂಜೂರಾತಿ ಪಡೆದು ಸಾಗುವಳಿ ಮಾಡುತ್ತಿರುವ ರೈತರು ತಮ್ಮ ಜಮೀನಿನ ಪೋಡಿ ಮಾಡಿಸಲು ಹೆಣಗಾಡಬೇಕಾದ ಪರಿಸ್ಥಿತಿ ಇನ್ನೂ ತಪ್ಪಿಲ್ಲ.
ರಾಜ್ಯ ಸರಕಾರ ರೈತರ ಜಮೀನಿನ ದಾಖಲೆಗಳೆಲ್ಲವನ್ನೂ ಡಿಜಿಟಲೀಕರಣ ಮಾಡಿ ರೈತರ ಮನೆ ಬಾಗಿಲಿಗೆ ತಲುಪಿಸುತ್ತೇವೆ ಎಂದು ಹೇಳಿಕೊಳ್ಳುತ್ತಿದೆ. ಆದರೆ ಅದು ಕೇವಲ ಹೇಳಿಕೆಗೆ ಮಾತ್ರ ಸೀಮಿತವಾಗಿದೆಯೇ ಹೊರತು ನಿಜವಾಗಿ ಅನುಷ್ಠಾನಕ್ಕೆ ಬಂದಿಲ್ಲ.
ರಾಜ್ಯ ಸರಕಾರವು ‘ಭೂಮಿ’ ತಂತ್ರಾಂಶಕ್ಕೆ ಮಾಡಿದ ಒಂದು ತಾಂತ್ರಿಕ ಯಡವಟ್ಟು, ರಾಜ್ಯದ ಸಾವಿರಾರು ರೈತರನ್ನು ಕಳೆದ ಆರೆಂಟು ತಿಂಗಳಿಂದಲೂ ಕಚೇರಿಗಳಿಗೆ ಅಲೆದಾಡುವಂತೆ ಮಾಡಿದೆ.
ಸರ್ವೇ ಇಲಾಖೆಯು ದರಖಾಸ್ತು ಜಮೀನುಗಳ ಪೋಡಿ ದುರಸ್ತಿ ಮಾಡಿ, ಅವುಗಳಿಗೆ ಹೊಸ ಸರ್ವೇ ನಂಬರ್ ನೀಡಿ, ನಕ್ಷೆ- ಆಕಾರ್ ಬಂದ್ ಎಲ್ಲವನ್ನೂ ಬದಲಾಯಿಸಿಕೊಟ್ಟರೂ ಭೂ ಮಾಲಕರ ಕೈಗೆ ಮಾತ್ರ ಹೊಸ ಪಹಣಿ ಸಿಗುತ್ತಿಲ್ಲ. ತಂತ್ರಾಂಶದ ಸಣ್ಣದೊಂದು ತಾಂತ್ರಿಕ ದೋಷ ಇಡೀ ವ್ಯವಸ್ಥೆಯನ್ನು ಲಾಕ್ ಮಾಡಿದ್ದು, ಸರಕಾರ ತಕ್ಷಣ ಎಚ್ಚೆತ್ತುಕೊಳ್ಳದಿದ್ದರೆ ರಾಜ್ಯಾದ್ಯಂತ ರೈತರ ಆಕ್ರೋಶದ ಕಟ್ಟೆ ಒಡೆಯುವುದು ಗ್ಯಾರಂಟಿ.
ಸರ್ವೇ ಇಲಾಖೆಯು ಪೋಡಿ ದುರಸ್ತಿ ಮಾಡಿದ ರೈತರಿಗೆ ಸಂಬಂಧಿಸಿದ ಸರ್ವೇ ಕಡತಗಳನ್ನು ಹೊಸ ಸ.ನಂ. ಪಹಣಿ ಸೃಜನೆ ಮಾಡಲು ಮುಂದಿನ ಪ್ರಕ್ರಿಯೆಗಾಗಿ ತಹಶೀಲ್ದಾರ್ ಕಚೇರಿಗೆ ಕಳುಹಿಸಿಕೊಡುತ್ತಿದೆ. ಆದರೆ, ಅಲ್ಲಿಂದ ಆರಂಭವಾಗುವ ಕಡತಗಳ ಓಡಾಟ ರೈತರನ್ನು ಹೈರಾಣಾಗಿಸುತ್ತಿದೆ. ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ಈ ಕಡತಗಳನ್ನು ಉಪ ವಿಭಾಗಾಧಿಕಾರಿ ಕಚೇರಿಗೆ ರವಾನಿಸುತ್ತಿದ್ದಾರೆ. ಅಲ್ಲಿಂದ ಇವು ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪುತ್ತಿವೆ. ಜಿಲ್ಲಾಧಿಕಾರಿಗಳ ಕಚೇರಿಯಿಂದ ಮತ್ತೆ ತಹಶೀಲ್ದಾರ್ ಕಚೇರಿಗೆ ಪತ್ರಗಳು ಹಿಂತಿರುಗುತ್ತಿದ್ದು, ಆನ್ಲೈನ್ ಮೂಲಕವೇ ಪೋಡಿ ಮಾಡಬೇಕೆಂದು ಡಿಸೆಂಬರ್ 2025ರಲ್ಲಿ ಸ್ಪಷ್ಟ ಆದೇಶವಿದ್ದರೂ, ಇವುಗಳನ್ನು ‘ಮ್ಯಾನ್ಯುವಲ್’ ಆಗಿ ಮಾಡಿದ್ದೇಕೆ? ಎಂದು ವಿವರಣೆ ಕೇಳಲಾಗುತ್ತಿದೆ. ಈ ಕಚೇರಿಗಳ ನಡುವಿನ ಗೊಂದಲದಿಂದಾಗಿ ಕಡತಗಳು ಮೇಲಿಂದ ಕೆಳಗೆ, ಕೆಳಗಿಂದ ಮೇಲೆ ಅಲೆಯುತ್ತಿವೆಯೇ ಹೊರತು ರೈತನ ಕೈಗೆ ಹೊಸ ಸ.ನಂ.ನ ಆರ್ಟಿಸಿ ಮಾತ್ರ ಸಿಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಈ ಇಡೀ ಗೊಂದಲಕ್ಕೆ ಮತ್ತು ಕಡತಗಳ ವರ್ಗಾವಣೆಗೆ ಅಸಲಿ ಕಾರಣ ಏನೆಂದು ಕೆದಕಿದರೆ ಸಿಗುವುದು ‘ಭೂಮಿ’ ಸಾಫ್ಟ್ವೇರ್ನ ತಾಂತ್ರಿಕ ಮಿತಿ. ಕಳೆದ ವರ್ಷ ಕಂದಾಯ ಇಲಾಖೆಯು ಭೂಮಿ ತಂತ್ರಾಂಶದಲ್ಲಿ ಮಹತ್ತರ ಬದಲಾವಣೆಗಳನ್ನು ತಂದಿತ್ತು. ಈ ಹೊಸ ಅಪ್ಡೇಟ್ನ ಪ್ರಕಾರ, ಮ್ಯಾನ್ಯುವಲ್ ಆಗಿ ಪೋಡಿ ಮಾಡಲಾಗಿರುವ ಭೂಮಿಯ ಪಹಣಿಯನ್ನು ಗಣಕೀಕೃತಗೊಳಿಸಲು ಅಂದರೆ ಆನ್ಲೈನ್ನಲ್ಲಿ ಇಂಡೀಕರಣ ಮಾಡಲು ಸಾಫ್ಟ್ವೇರ್ನಲ್ಲಿ ಅವಕಾಶವೇ ಇಲ್ಲದಂತಾಗಿದೆ. ಸರ್ವೇ ಇಲಾಖೆಯು ಹಳೇ ಪದ್ಧತಿಯಂತೆ ಮ್ಯಾನ್ಯುವಲ್ ಆಗಿ ಪ್ರಕ್ರಿಯೆ ಮುಗಿಸಿ ಕಳುಹಿಸಿದರೆ, ಇತ್ತ ಕಂದಾಯ ಇಲಾಖೆಯ ಕಂಪ್ಯೂಟರ್ ಆಪರೇಟರ್ಗಳು ಅದನ್ನು ಸಿಸ್ಟಂಗೆ ಅಪ್ಲೋಡ್ ಮಾಡಲು ತಾಂತ್ರಿಕವಾಗಿ ಸಾಧ್ಯವಾಗುತ್ತಿಲ್ಲ.
ಇದಕ್ಕೆ ಮತ್ತೊಂದು ಪ್ರಮುಖ ತಾಂತ್ರಿಕ ತೊಡಕಾಗಿ ಕಾಡುತ್ತಿರುವುದು ದರಖಾಸ್ತು ಮಂಜೂರಾತಿ ಭೂಮಿಯ ವಿಸ್ತೀರ್ಣ. ಈ ಹಿಂದೆ ಮಂಜೂರಾದ ದರಖಾಸ್ತು ಜಮೀನುಗಳ ವಿಸ್ತೀರ್ಣವು ಮೂಲ ದಾಖಲೆಗಳಲ್ಲಿ ‘ಖರಾಬು’ ಜಮೀನೆಂದು ದಾಖಲಾಗಿರುತ್ತದೆ. ಇಂತಹ ಜಮೀನುಗಳ ಪೋಡಿ ಪ್ರಕ್ರಿಯೆ ಮುಗಿದು, ಹೊಸ ಸರ್ವೇ ನಂಬರ್ ಜಾರಿಯಾಗಿದ್ದರೂ, ಭೂಮಿ ತಂತ್ರಾಂಶವು ಖರಾಬು ಜಮೀನಿನ ವ್ಯಾಪ್ತಿಯಲ್ಲಿ ಹೊಸ ಪಹಣಿ ಸೃಜಿಸಲು ಒಪ್ಪುತ್ತಿಲ್ಲ. ತಂತ್ರಾಂಶದಲ್ಲಿರುವ ಈ ತಾಂತ್ರಿಕ ದಿಗ್ಬಂಧನದಿಂದಾಗಿ, ಅಧಿಕಾರಿಗಳು ಬಯಸಿದರೂ ರೈತರಕ್ಕೆ ಹೊಸ ಆರ್ಟಿಸಿ ನೀಡಲು ತಾಂತ್ರಿಕವಾಗಿ ಕೈಕಟ್ಟಿ ಹಾಕಿದಂತಾಗಿದೆ.
ಇದು ಕೇವಲ ಒಂದು ತಾಲೂಕು ಅಥವಾ ಜಿಲ್ಲೆಯ ಸಮಸ್ಯೆಯಲ್ಲ. ರಾಜ್ಯಾದ್ಯಂತ ಹರಡಿರುವ ತಾಂತ್ರಿಕ ಅಡಚಣೆಯಾಗಿದೆ. ಸಾವಿರಾರು ಮಂದಿ ತಮ್ಮ ಸ್ವಂತ ಜಮೀನಿನ ಹೊಸ ಪಹಣಿ ಪಡೆಯಲು ದಿನನಿತ್ಯ ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಬ್ಯಾಂಕ್ ಸಾಲ ಪಡೆಯಲು, ಸರಕಾರದ ಸವಲತ್ತುಗಳನ್ನು ಪಡೆದುಕೊಳ್ಳಲು ಅಥವಾ ಜಮೀನಿನ ವಾರಸಾ ಹಕ್ಕು ಬದಲಾಯಿಸಲು ಪಹಣಿ ಅತ್ಯಗತ್ಯವಾಗಿದ್ದು, ಪರೋಕ್ಷವಾಗಿ ಭಾರೀ ಪರಿಣಾಮ ಬೀರುತ್ತಿದೆ.
ಪ್ರಸಕ್ತ ಪರಿಸ್ಥಿತಿಯಲ್ಲಿ ಕಂದಾಯ ಮತ್ತು ಸರ್ವೇ ಇಲಾಖೆಯ ಕೆಳಹಂತದ ಅಧಿಕಾರಿಗಳು ಅಸಹಾಯಕರಾಗಿದ್ದಾರೆ. ಮೇಲಧಿಕಾರಿಗಳು ಕೇಳುವ ವಿವರಣೆಗೆ ಉತ್ತರಿಸಲಾಗದೆ, ಇತ್ತ ಜನರ ಆಕ್ರೋಶಕ್ಕೆ ಮುಖಕೊಡಲಾಗದೆ ಸಿಬ್ಬಂದಿ ತೊಳಲಾಡುತ್ತಿದ್ದಾರೆ. ಕ್ಷೇತ್ರ ಮಟ್ಟದಲ್ಲಿ ಈಗಾಗಲೇ ಪೋಡಿ ದುರಸ್ತಿ ಕಾರ್ಯಗಳು ಮುಗಿದು, ನಕ್ಷೆಗಳು ಸಿದ್ಧವಿರುವುದರಿಂದ ಭೂ ಮಾಲಕರ ಕಡೆಯಿಂದ ಯಾವುದೇ ತಪ್ಪಾಗಿಲ್ಲ. ಕೇವಲ ತಂತ್ರಾಂಶದ ಅಪ್ಗ್ರೆಡೇಷನ್ ಸಮಯದಲ್ಲಿ ಉಂಟಾದ ತಾಂತ್ರಿಕ ಲೋಪವೇ ಇಷ್ಟೆಲ್ಲಾ ಗೊಂದಲಗಳಿಗೆ ಮತ್ತು ಕಡತಗಳ ವಿಳಂಬಕ್ಕೆ ನೇರ ಕಾರಣವಾಗಿದೆ.
ಇದಕ್ಕೆ ಹೊಸದಾಗಿ ಕಂದಾಯ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿರುವ ಸಚಿವ ಡಾ.ಜಿ.ಪರಮೇಶ್ವರ ಅವರಾದರೂ ಗಮನಹರಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ.
ಶಿವಮೊಗ್ಗ ತಾಲೂಕು ಹಸೂಡಿ ಗ್ರಾಮದ ಸ.ನಂ.134ರ ನಮ್ಮ ಜಮೀನು ಪೋಡಿಗೆ ನಾಲ್ಕು ವರ್ಷಗಳಿಂದ ಓಡಾಡಿ 2025ರ ಡಿಸೆಂಬರ್ನಲ್ಲಿ ಸರ್ವೇ ಇಲಾಖೆ ಪೋಡಿ ಪ್ರಕ್ರಿಯೆ ಮುಗಿಸಿ 5 ಖಾತೆದಾರರ ಜಮೀನಿಗೆ ಹೊಸ ಸ.ನಂ.322-326 ರವರೆಗೆ ನೀಡಿದೆ. ಆದರೆ ಭೂಮಿ ತಂತ್ರಾಂಶದ ಸಮಸ್ಯೆ ನೆಪದಲ್ಲಿ ತಹಶೀಲ್ದಾರ್, ಉಪವಿಭಾಗಾಧಿಕಾರಿ, ಡಿಸಿ ಕಚೇರಿಗೆ ಫೈಲ್ ರವಾನಿಸಿ ನಮ್ಮನ್ನು ಅಲೆಸುತ್ತಿದ್ದಾರೆ.
-ಸಿ.ಶಿವಮೂರ್ತಿ, ಶಿವಮೊಗ್ಗ
ಕರೆ ಕಡಿತಗೊಳಿಸಿದ ಅಧಿಕಾರಿ
ದರಖಾಸ್ತು ಮೂಲಕ ಮಂಜೂರಾದ ಜಮೀನುಗಳು ಪೋಡಿಯಾದರೂ ಭೂಮಿ ತಂತ್ರಾಂಶದ ತಾಂತ್ರಿಕ ಯಡವಟ್ಟಿನಿಂದ ಹೊಸ ಸ.ನಂ ಪಹಣಿ ಆಗುತ್ತಿಲ್ಲ ಎಂಬ ಬಗ್ಗೆ ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯ ಅವರ ಗಮನಕ್ಕೆ ತರಲು ಶಿವಮೊಗ್ಗ ಜಿಲ್ಲಾ ವರದಿಗಾರರು ಪ್ರಯತ್ನಿಸಿದ್ದರು. ಆದರೆ ಕರೆ ಸ್ವೀಕರಿಸಿದ ಅಧಿಕಾರಿ ಸಮಸ್ಯೆ ಆಲಿಸುವ ಕನಿಷ್ಠ ವ್ಯವದಾನ ತೋರದೆ ಕರೆಯನ್ನು ಕಟ್ ಮಾಡಿದರು. ಇಂತಹ ಗಂಭೀರ ಸಮಸ್ಯೆ ಆಲಿಸುವಲ್ಲಿ ಉನ್ನತ ಅಧಿಕಾರಿಯೊಬ್ಬರು ತೋರಿದ ನಿರ್ಲಕ್ಷ್ಯವನ್ನು ಜನರು ಪ್ರಶ್ನಿಸುವಂತಾಗಿದೆ.






