ರಾಯಚೂರಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ಸ್ಥಾನ ನೀಡಲು ಒತ್ತಡ

ರಾಯಚೂರು: ರಾಜ್ಯ ಸಚಿವ ಸಂಪುಟದಲ್ಲಿ ರಾಯಚೂರು ಜಿಲ್ಲೆಗೆ ಯಾವುದೇ ಪ್ರಾತಿನಿಧ್ಯ ದೊರೆಯದ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿರುವ ಬೆನ್ನಲ್ಲೇ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅಧ್ಯಕ್ಷ ಸ್ಥಾನವನ್ನು ಜಿಲ್ಲೆಯ ಶಾಸಕರೊಬ್ಬರಿಗೆ ನೀಡಬೇಕು ಎಂಬ ಒತ್ತಾಯ ಕಾಂಗ್ರೆಸ್‌ನ ಒಂದು ಬಣದಿಂದ ಕೇಳಿಬಂದಿದೆ.
ಜಿಲ್ಲೆಯಲ್ಲಿ ಕಾಂಗ್ರೆಸ್‌ನ ನಾಲ್ವರು ಶಾಸಕರು ಹಾಗೂ ನಾಲ್ವರು ವಿಧಾನ ಪರಿಷತ್ ಸದಸ್ಯರಿದ್ದರೂ ಸಚಿವ ಸ್ಥಾನ ಸಿಗದಿರುವುದು ಜಿಲ್ಲೆಯ ಮೇಲಿನ ಮಲತಾಯಿ ಧೋರಣೆಗೆ ಸಾಕ್ಷಿಯಾಗಿದೆ ಎಂದು ಮುಖಂಡರು ಆರೋಪಿಸಿದ್ದಾರೆ. ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳು ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಜಿಲ್ಲೆಗಳ ಪಟ್ಟಿಯಲ್ಲಿದ್ದು, ಇಂತಹ ಜಿಲ್ಲೆಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡದಿರುವುದು ಅನ್ಯಾಯ ಎಂದು ಅವರು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ, ಸಚಿವ ಸ್ಥಾನದಿಂದ ವಂಚಿತವಾಗಿರುವ ರಾಯಚೂರಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಸಮತೋಲನ ಸಾಧಿಸಬೇಕು ಎಂಬ ಒತ್ತಾಯ ಬಲಗೊಳ್ಳುತ್ತಿದೆ. ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಅವರಿಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಅವರ ಬೆಂಬಲಿಗರು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ರಾಯಚೂರಿಗೆ ಸಿಗದ ಅಧ್ಯಕ್ಷ ಸ್ಥಾನ
ಸಂವಿಧಾನದ 371(ಜೆ) ವಿಧಿಯಡಿ 2013ರಲ್ಲಿ ಹೈದರಾಬಾದ್-ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ) ರಚನೆಯಾಗಿದ್ದು, ನಂತರ ಅದನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಎಂದು ಮರುನಾಮಕರಣ ಮಾಡಲಾಯಿತು. ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿರುವ ಈ ಮಂಡಳಿಗೆ ರಾಜ್ಯ ಬಜೆಟ್‌ನಲ್ಲಿ ಪ್ರತಿ ವರ್ಷ ಸುಮಾರು 5,000 ಕೋಟಿ ರೂ. ಅನುದಾನ ಮೀಸಲಾಗುತ್ತದೆ. ಈ ಅನುದಾನದ ಮೂಲಕ ಮೂಲ ಸೌಕರ್ಯ, ಶಿಕ್ಷಣ, ಆರೋಗ್ಯ ಹಾಗೂ ಪ್ರಾದೇಶಿಕ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತದೆ. ಆದರೆ, ಮಂಡಳಿ ಅಸ್ತಿತ್ವಕ್ಕೆ ಬಂದ ನಂತರ ಇದುವರೆಗೆ ಆರು ಮಂದಿ ಅಧ್ಯಕ್ಷರಾಗಿದ್ದು, ಅವರಲ್ಲಿ ನಾಲ್ವರು ಕಲಬುರಗಿ ಜಿಲ್ಲೆಯವರು, ಒಬ್ಬರು ಕೊಪ್ಪಳ ಹಾಗೂ ಮತ್ತೊಬ್ಬರು ಬೀದರ್ ಜಿಲ್ಲೆಯವರು. ರಾಯಚೂರು, ಯಾದಗಿರಿ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಯಾವುದೇ ಜನಪ್ರತಿನಿಧಿಗೆ ಅಧ್ಯಕ್ಷ ಸ್ಥಾನ ಸಿಕ್ಕಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.
ಸಚಿವ ಸಂಪುಟದಲ್ಲೂ ಅಸಮತೋಲನದ ಆರೋಪ
ಪ್ರಸ್ತುತ ಸಚಿವ ಸಂಪುಟದಲ್ಲಿ ಕಲಬುರಗಿ ಜಿಲ್ಲೆಗೆ ಮೂರು ಸಚಿವ ಸ್ಥಾನಗಳು, ಕೊಪ್ಪಳಕ್ಕೆ ಎರಡು ಸಚಿವ ಸ್ಥಾನಗಳು ಹಾಗೂ ಬೀದರ್, ವಿಜಯಪುರ ಮತ್ತು ಬಳ್ಳಾರಿ ಜಿಲ್ಲೆಗಳಿಗೆ ತಲಾ ಒಂದು ಸಚಿವ ಸ್ಥಾನ ದೊರೆತಿದೆ. ಆದರೆ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಿಗೆ ಯಾವುದೇ ಸಚಿವ ಸ್ಥಾನ ಸಿಕ್ಕಿಲ್ಲ. ಹೀಗಾಗಿ ಕೆಕೆಆರ್‌ಡಿಬಿ ಅಧ್ಯಕ್ಷ ಸ್ಥಾನವನ್ನಾದರೂ ರಾಯಚೂರು ಜಿಲ್ಲೆಗೆ ನೀಡಬೇಕು ಎಂದು ಮುಖಂಡರು ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ನಾಲ್ವರು ಶಾಸಕರು ಹಾಗೂ ನಾಲ್ವರು ವಿಧಾನ ಪರಿಷತ್ ಸದಸ್ಯರಿದ್ದರೂ ಸಚಿವ ಸ್ಥಾನ ನೀಡದಿರುವುದಕ್ಕೆ ದಲಿತಪರ, ಪ್ರಗತಿಪರ ಹಾಗೂ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಆಗಸ್ಟ್ 15ರಂದು ಜಿಲ್ಲೆಗೆ ಹೊರಜಿಲ್ಲೆಯ ಸಚಿವರು ಉಸ್ತುವಾರಿಯಾಗಿ ಧ್ವಜಾರೋಹಣಕ್ಕೆ ಬಂದರೆ ಪ್ರತಿಭಟನೆ ನಡೆಸುವುದಾಗಿ ಈಗಾಗಲೇ ಎಚ್ಚರಿಕೆ ನೀಡಿವೆ. ಇದರ ಜೊತೆಗೆ, ಸಚಿವ ಸ್ಥಾನದಿಂದ ವಂಚಿತವಾಗಿರುವ ಜಿಲ್ಲೆಗೆ ವಿವಿಧ ನಿಗಮ-ಮಂಡಳಿಗಳಲ್ಲೂ ಹೆಚ್ಚಿನ ಸ್ಥಾನಮಾನ ನೀಡಬೇಕು ಎಂಬ ಒತ್ತಾಯವೂ ಕೇಳಿಬರುತ್ತಿದೆ.
ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹಂಪನಗೌಡ ಬಾದರ್ಲಿ ಅವರಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದೇವೆ. ಅವರಿಗೆ ಅವಕಾಶ ಸಿಗುವ ನಿರೀಕ್ಷೆಯಿದೆ. ಪಕ್ಷವೇ ಸೂಕ್ತ ತೀರ್ಮಾನ ಕೈಗೊಳ್ಳಲಿದೆ.
-ಎ. ವಸಂತಕುಮಾರ
ವಿಧಾನ ಪರಿಷತ್ ಸದಸ್ಯ
ಪ್ರೊ. ನಂಜುಂಡಪ್ಪ ವರದಿಯ ಪ್ರಕಾರ ಕಲ್ಯಾಣ ಕರ್ನಾಟಕ ಭಾಗಕ್ಕೆ ಶೇ. 25ರಷ್ಟು, ಅಂದರೆ 10 ಸಚಿವ ಸ್ಥಾನಗಳು ದೊರೆಯಬೇಕಾಗಿತ್ತು. ಆದರೆ ಪ್ರಸ್ತುತ ಕೇವಲ ಏಳು ಸಚಿವರಿದ್ದಾರೆ. ರಾಯಚೂರು, ಯಾದಗಿರಿ ಹಾಗೂ ವಿಜಯನಗರ ಜಿಲ್ಲೆಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡಬೇಕು. ನೀರಾವರಿ ಸಮಸ್ಯೆಗಳ ಹಿನ್ನೆಲೆಯಲ್ಲಿ ನೀರಾವರಿ ಸಚಿವ ಸ್ಥಾನವೂ ಈ ಭಾಗಕ್ಕೆ ಸಿಗಬೇಕು. ನಿಗಮ-ಮಂಡಳಿಗಳಲ್ಲೂ ಹೆಚ್ಚಿನ ಸ್ಥಾನಮಾನ ನೀಡಬೇಕು. ಈ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದು ಮನವಿ ಮಾಡಲಾಗುವುದು. ಅನ್ಯಾಯ ಮುಂದುವರಿದರೆ ಮುಂದಿನ ಚುನಾವಣೆಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಿ ಪ್ರಜಾಪ್ರಭುತ್ವದ ರೀತಿಯಲ್ಲಿ ತಕ್ಕ ಉತ್ತರ ನೀಡಲಾಗುವುದು.
-ರಾಘವೇಂದ್ರ ಕುಷ್ಠಗಿ
ಸಂಚಾಲಕ, ಕಲ್ಯಾಣ ಕರ್ನಾಟಕ
ಪ್ರದೇಶಾಭಿವೃದ್ಧಿ ಹೋರಾಟ ಸಮಿತಿ






