ಕಲಬುರಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಯಾರಿಗೆ?

ಕಲಬುರಗಿ: ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಕಾಂಗ್ರೆಸ್ ಪಕ್ಷ ಸಂಘಟನಾ ವೀಕ್ಷಕರನ್ನು ನೇಮಿಸಿ ನೂತನ ಜಿಲ್ಲಾಧ್ಯಕ್ಷರ ಬದಲಾವಣೆ ಜತೆಗೆ ಸಮಿತಿಯಲ್ಲಿ ಸಂಘಟನಾ ಪುನರಚನಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಕಲಬುರಗಿ ಜಿಲ್ಲೆಯ ಎಐಸಿಸಿ ವೀಕ್ಷಕರಾಗಿ ವಿಶ್ವಜಿತ್ ಕದಮ್ ಅವರನ್ನು ನೇಮಕ ಮಾಡಲಾಗಿದೆ. ಎಲ್ಲಾ ಜಿಲ್ಲೆಗಳಂತೆ ಕಲಬುರಗಿಯಲ್ಲೂ ಹೊಸ ಅಧ್ಯಕ್ಷರ ಆಯ್ಕೆ ಕುರಿತು ಪಕ್ಷದ ವಲಯದಲ್ಲಿ ಚರ್ಚೆಗಳು ಜೋರಾಗಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಕಲಬುರಗಿ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿರುವ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ತವರು ಜಿಲ್ಲೆಯಾಗಿರುವ ಕಾರಣ, ಸ್ಥಳೀಯ ಸಂಘಟನೆಗೆ ಚುರುಕು ನೀಡಬಲ್ಲ, ಎಲ್ಲ ಗುಂಪುಗಳನ್ನು ಒಗ್ಗೂಡಿಸುವ ಹಾಗೂ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಪಕ್ಷವನ್ನು ಸಜ್ಜುಗೊಳಿಸುವ ನಾಯಕನ ಆಯ್ಕೆ ಮಹತ್ವದ್ದಾಗಿ ಎನ್ನಿಸಿಕೊಂಡಿದೆ.
ಜಗದೇವ್ ಗುತ್ತೇದಾರ್ ವಿಧಾನ ಪರಿಷತ್ ನೇಮಕಗೊಂಡ ನಂತರ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಹಲವು ಹಿರಿಯ ನಾಯಕರ ಹೆಸರು ಚರ್ಚೆಯಲ್ಲಿದವು. ಇದೀಗ ಹಿರಿಯ ನಾಯಕರು ಸೇರಿದಂತೆ ಯುವ ನಾಯಕರ ಹೆಸರು ಚರ್ಚೆಯಲ್ಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಅಧಿಕೃತವಾಗಿ ಇನ್ನೂ ಯಾವುದೇ ಹೆಸರು ಅಂತಿಮಗೊಂಡಿಲ್ಲ. ಆದರೆ ಪಕ್ಷದಲ್ಲಿ ಎಲ್ಲ ಗುಂಪುಗಳನ್ನು ಒಗ್ಗೂಡಿಸುವ ಸಾಮರ್ಥ್ಯ, ಬೂತ್ ಮಟ್ಟದಲ್ಲಿ ಸಂಘಟನೆ ಬಲಪಡಿಸಿದ ಅನುಭವ, ಯುವಕರು ಹಾಗೂ ಮಹಿಳೆಯರಿಗೆ ಅವಕಾಶ ಕಲ್ಪಿಸುವ ಮನೋಭಾವ, ಸ್ಥಳೀಯ ಸಂಸ್ಥೆ ಮತ್ತು ವಿಧಾನಸಭೆ ಚುನಾವಣೆಯನ್ನು ಸಮರ್ಥವಾಗಿ ಮುನ್ನಡೆಸುವ ನಾಯಕತ್ವ, ಪಕ್ಷದ ಹೈಕಮಾಂಡ್ ಜೊತೆ ಸಮನ್ವಯ ಸಾಧಿಸುವ ಸಾಮರ್ಥ್ಯ ಹೊಂದಿರುವವರನ್ನು ಆಯ್ಕೆ ಮಾಡಬೇಕೆಂಬ ನಿರೀಕ್ಷೆ ಪಕ್ಷದ ಕಾರ್ಯಕರ್ತರಲ್ಲಿ ಇದೆ.
ಪ್ರಿಯಾಂಕ್ ಖರ್ಗೆ ಅಭಿಪ್ರಾಯವು ಮಹತ್ವ; ಇತ್ತೀಚೆಗೆ ಪ್ರಿಯಾಂಕ್ ಖರ್ಗೆ ಅವರಿಗೆ ತವರು ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭವ್ಯ ಸ್ವಾಗತ ಕೋರಿದ್ದು ಜಿಲ್ಲೆಯಲ್ಲಿನ ಸಂಘಟನಾ ಚಟುವಟಿಕೆಗಳಿಗೆ ಹೊಸ ಚೈತನ್ಯ ತಂದುಕೊಟ್ಟಿದೆ. ಸಂಘಟನೆಯ ವಿಷಯದಲ್ಲಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ಅವರ ಅಭಿಪ್ರಾಯ ಮಹತ್ವದ್ದಾಗಿದೆ ಎನ್ನಲಾಗುತ್ತಿದೆ.
ಹೈಕಮಾಂಡ್ ನಿರ್ಧಾರವೇ ಅಂತಿಮ: ಅಧ್ಯಕ್ಷ ಸ್ಥಾನಕ್ಕಾಗಿ ಹಲವು ಆಕಾಂಕ್ಷಿಗಳು ಇದ್ದು, ಯಾರು ಮುಂದಿನ ಅಧ್ಯಕ್ಷರಾಗಬಹುದು ಎಂಬುದು ಸ್ಪಷ್ಟವಾಗಿಲ್ಲ. ಸ್ಥಳೀಯ ನಾಯಕರ ಅಭಿಪ್ರಾಯ ಮತ್ತು ಎಐಸಿಸಿ ವೀಕ್ಷಕರ ವರದಿ ಹಾಗೂ ಕೆಪಿಸಿಸಿ, ಎಐಸಿಸಿ ನಾಯಕತ್ವದ ಚರ್ಚೆಯ ಬಳಿಕವೇ ಕಲಬುರಗಿ ಜಿಲ್ಲಾ ಕಾಂಗ್ರೆಸ್‌ನ ನೂತನ ಅಧ್ಯಕ್ಷರ ಹೆಸರನ್ನು ಪ್ರಕಟಿಸುವ ಸಾಧ್ಯತೆ ಇದೆ.
ನೂತನ ಸಾರಥಿಯ ಎದುರು ಇರುವ ಸವಾಲುಗಳು;: ನೂತನವಾಗಿ ಆಯ್ಕೆಯಾಗುವ ಜಿಲ್ಲಾ ಅಧ್ಯಕ್ಷರ ಮುಂದೆ ಪಕ್ಷದಲ್ಲಿ ಇರುವ ಭಿನ್ನಮತ ಶಮನ, ವಿಶೇಷ ಮತದಾರ ಪಟ್ಟಿ ಪರಿಷ್ಕರಣೆ ಆಧಾರದಲ್ಲಿ ಬೂತ್ ಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸುವುದು, ಪಕ್ಷದ ವಿವಿಧ ಘಟಕಗಳ ನಡುವೆ ಸಮನ್ವಯ ಸಾಧಿಸುವುದು ಹಾಗೂ ಸ್ಥಳೀಯ ಸಂಸ್ಥೆಗಳ ಹಾಗೂ ವಿಧಾಸಭಾ ಚುನಾವಣೆ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಪ್ರಮುಖ ಸವಾಲಾಗಲಿದೆ.
ಅಧ್ಯಕ್ಷ ಸ್ಥಾನಕ್ಕಾಗಿ ಕಿರಣ ದೇಶಮುಖ, ನಿಲಕಂಠ ರಾವ್ ಮುಲಗೆ, ಶಿವನಂದ ಪಾಟೀಲ್, ಜೇಬಾ ತಬ್ಬಸೂಮ್, ಮಲ್ಲಿನಾಥ್ ಪಾಟೀಲ್ ಸ್ವಂತ, ಮಹಾಂತಪ್ಪ ಸಂಗಾವಿ, ಲಾಲ್ ಅಹ್ಮದ್, ವಾಣಿಶ್ರೀಸಾಗರಕರ್ ಅರ್ಜಿ ಸಲ್ಲಿಸಿದ್ದಾರೆ.
ಜಿಲ್ಲೆಯ ಎಲ್ಲ ಕ್ಷೇತ್ರಗಳಿಗೆ ಓಡಾಡಿ ಪ್ರತಿನಿಧಿಗಳ, ಶಾಸಕರ, ಸಚಿವರ, ಹಿರಿಯ ಮುಖಂಡರು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ, ಬ್ಲಾಕ್ ಅಧ್ಯಕ್ಷರ ಹಾಗೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ, ಆ.೧೬ರೊಳಗೆ ಆಕಾಂಕ್ಷಿಗಳ ಅಂತಿಮ ಪಟ್ಟಿ ಸಿದ್ಧಪಡಿಸಲಾಗುವುದು. ಬಳಿಕ ಅರ್ಹರಾದ ಆರು ಹೆಸರುಗಳನ್ನು ಪಕ್ಷದ ವರಿಷ್ಠರಿಗೆ ಶಿಫಾರಸು ಮಾಡಲಾಗುವುದು.
-ಡಾ. ವಿಶ್ವಜಿತ್ ಕದಮ್
ಎಐಸಿಸಿ ವೀಕ್ಷಕ
ಇಲ್ಲಿಯವರೆಗೆ ಅಧ್ಯಕ್ಷರಾದವರು
ಜಗದೇವ್ ಗುತ್ತೇದಾರ್ ಕಾಳಗಿ, ಡಾ.ಶರಣ ಪ್ರಕಾಶ್ ಪಾಟೀಲ್, ಅಲ್ಲಮಪ್ರಭು ಪಾಟೀಲ್, ಚಂದ್ರಶೇಖರ ಪಾಟೀಲ್ ಮಹಾಗಾಂವ್, ಬಿ. ಎಸ್. ಪಾಟೀಲ್, ಕಲ್ಯಾಣರಾವ ಮರಗುತ್ತಿ, ಧರ್ಮರಾವ ಅಫಜಲಪುರ, ಶಾಂತಮಲ್ಲಪ್ಪ ಪಾಟೀಲ್, ಎನ್. ಧರಂಸಿಂಗ್, ವಿಜಯಿ ದೇಸಾಯಿ, ಶಿವಣ್ಣ ಸಾವೂರ, ಡಾ.ಸುಬ್ಬಯ್ಯ, ಇಟ್ಬಾಲ್ ಅಹ್ಮದ್ ಸರಡಗಿ, ಜಿ.ರಾಮಕೃಷ್ಣ, ಗುಂಡಪ್ಪ ಕೋರವಾರ, ಸಿದ್ದರಾಮಪ್ಪ ಐರೆಡ್ಡಿ, ಭಾಗಣ್ಣಗೌಡ.






