ಅಕ್ರಮ ಹೋಮ್‌ಸ್ಟೇಗೆ ಅಧಿಕಾರಿಗಳೇ ಬೆನ್ನೆಲುಬು?

ಹೊಸಪೇಟೆ: ಯುನೆಸ್ಕೋ ಮಾನ್ಯತೆ ಪಡೆದ ವಿಶ್ವ ಪಾರಂಪರಿಕ ತಾಣವಾದ ಹಂಪಿಯಲ್ಲಿ ಸಂರಕ್ಷಣಾ ನಿಯಮಗಳನ್ನು ಉಲ್ಲಂಘಿಸಿ ಅಕ್ರಮ ಹೋಮ್‌ಸ್ಟೇ, ವಾಣಿಜ್ಯ ಚಟುವಟಿಕೆ ಹಾಗೂ ಅನಧಿಕೃತ ನಿರ್ಮಾಣಗಳಿಗೆ ಅವಕಾಶ ಕಲ್ಪಿಸಿರುವ ಗಂಭೀರ ಆರೋಪಗಳು ಇದೀಗ ಉಪಲೋಕಾಯುಕ್ತರ ಅಂಗಳ ತಲುಪಿವೆ.
ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಸ್ವಯಂಪ್ರೇರಿತವಾಗಿ (ಸುವೋ ಮೋಟೋ) ದೂರು ದಾಖಲಿಸಿಕೊಂಡು ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.
ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ನಿಯಮಗಳು ಹಾಗೂ ಯುನೆಸ್ಕೋ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಕೋರ್ ರೆನ್,ಬಫರ್ ರೆನ್ ಹಾಗೂ ಪರಿಧಿ ವಲಯಗಳಲ್ಲಿ ನಿಷೇಧಿತ ಹೋಮ್‌ಸ್ಟೇ, ವಾಣಿಜ್ಯ ಚಟುವಟಿಕೆ ಮತ್ತು ನಿರ್ಮಾಣಗಳು ನಿರಾತಂಕವಾಗಿ ನಡೆಯುತ್ತಿರುವುದು ಅಧಿಕಾರಿಗಳ ಕರ್ತವ್ಯಲೋಪವೇ ಅಥವಾ ನಿಯಮಬಾಹಿರ ಸಮ್ಮತಿಯ ಫಲವೇ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.
ಈ ಹಿನ್ನೆಲೆಯಲ್ಲಿ ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು, ಸಹಾಯಕ ಆಯುಕ್ತರು, ತಹಶೀಲ್ದಾರರು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಹೊಸಪೇಟೆ ಮತ್ತು ಕೊಪ್ಪಳ ತಾಲೂಕಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ವಿವರಣೆ ಸಲ್ಲಿಸುವಂತೆ ಉಪಲೋಕಾಯುಕ್ತರು ನೋಟಿಸ್ ನೀಡಿದ್ದಾರೆ.
ಯುನೆಸ್ಕೋ ನಿಯಮಾವಳಿಗಳ ಪ್ರಕಾರ ಹಂಪಿಯ ಕೋರ್ ಹಾಗೂ ಬಫರ್ ರೆನ್‌ಗಳಲ್ಲಿ ಯಾವುದೇ ರೀತಿಯ ಅನಧಿಕೃತ ವಾಣಿಜ್ಯ ಕಟ್ಟಡ, ರೆಸಾರ್ಟ್, ಹೋಮ್‌ಸ್ಟೇ ಅಥವಾ ವಾಣಿಜ್ಯ ಚಟುವಟಿಕೆಗೆ ಅವಕಾಶವಿಲ್ಲ. ಆದರೂ ಇಂತಹ ಚಟುವಟಿಕೆಗಳು ವರ್ಷಗಳಿಂದ ನಡೆಯುತ್ತಿದ್ದರೂ ಸಂಬಂಧಪಟ್ಟ ಇಲಾಖೆಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರಲ್ಲಿ ಅನುಮಾನಕ್ಕೆ ಕಾರಣವಾಗಿದೆ.
ಅಧಿಕಾರಿಗಳು ತಮ್ಮ ಕಾನೂನುಬದ್ಧ ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆಯೇ, ನಿಯಮ ಉಲ್ಲಂಘನೆಗೆ ಮೌನ ಸಮ್ಮತಿ ಸೂಚಿಸಿದ್ದಾರೆಯೇ ಅಥವಾ ಅಧಿಕಾರ ದುರುಪಯೋಗ ನಡೆದಿದೆಯೇ ಎಂಬ ಅಂಶಗಳ ಕುರಿತು ಉಪಲೋಕಾಯುಕ್ತರು ಸಮಗ್ರ ತನಿಖೆ ಆರಂಭಿಸಿದ್ದಾರೆ.
ವಿಶ್ವ ಪಾರಂಪರಿಕ ತಾಣದ ಸಂರಕ್ಷಣೆಯ ಹೊಣೆ ಹೊತ್ತ ಅಧಿಕಾರಿಗಳ ಮೇಲೆಯೇ ಈಗ ತನಿಖೆಯ ಕತ್ತಿ ತೂಗುತ್ತಿದ್ದು, ತನಿಖೆಯ ಅಂತ್ಯದಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗುವ ಸಾಧ್ಯತೆ ಇದೆ. ಈ ಬೆಳವಣಿಗೆ ರಾಜ್ಯ ಮಟ್ಟದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಹಂಪಿ ಪ್ರಾಧಿಕಾರ ಸೇರಿ ಅಧಿಕಾರಿಗಳ ವಿರುದ್ಧ ಉಪಲೋಕಾಯುಕ್ತ ವೀರಪ್ಪ ಸ್ವಯಂಪ್ರೇರಿತ ದೂರು ಹಂಪಿಯಂತಹ ವಿಶ್ವ ಪಾರಂಪರಿಕ ತಾಣದ ಸಂರಕ್ಷಣೆಯ ವಿಚಾರದಲ್ಲಿ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿರುವುದು ಸ್ವಾಗತಾರ್ಹ ಬೆಳವಣಿಗೆ. ತನಿಖೆಯನ್ನು ಸಂಪೂರ್ಣ ನಿಷ್ಪಕ್ಷಪಾತವಾಗಿ ನಡೆಸಿ, ವಿಜಯನಗರ ಸಾಮ್ರಾಜ್ಯದ ವೈಭವದ ಪ್ರತೀಕವಾಗಿರುವ ಹಂಪಿಯ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಪಾರಂಪರಿಕ ಮಹತ್ವಕ್ಕೆ ಧಕ್ಕೆ ತಂದವರ ವಿರುದ್ಧ ಯಾವುದೇ ಒತ್ತಡಕ್ಕೂ ಮಣಿಯದೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ದೇಶ?ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಗೆ ಮೂಲಸೌಕರ್ಯ, ಶಿಸ್ತುಬದ್ಧ ವ್ಯವಸ್ಥೆ ಹಾಗೂ ಪಾರಂಪರಿಕ ತಾಣದ ಘನತೆಗೆ ತಕ್ಕ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳು ಪರಿಣಾಮಕಾರಿ ಕ್ರಮಗಳನ್ನು ಜಾರಿಗೊಳಿಸಬೇಕು.
- ಗುಜ್ಜಲ್ ಗಣೇಶ್
ಉಪಾಧ್ಯಕ್ಷರು, ಕರುನಾಡ ಕಲಿಗಳ ಕ್ರಿಯಾಶೀಲ ಸಮಿತಿ, ಹೊಸಪೇಟೆ






