ಧೈರ್ಯ ತುಂಬಿದ ಫಾತಿಮಾ; ರಜಾಕಾರರ ವಿರುದ್ಧ ತೊಡೆತಟ್ಟಿದ ಬೈರಪ್ಪಗೌಡ

ಕಲಬುರಗಿ: ದೇಶಕ್ಕೆ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ದೊರೆತರೆ, ಹೈದರಾಬಾದ್ ಕರ್ನಾಟಕ ಪ್ರಾಂತ್ಯಕ್ಕೆ 1948ರ ಸೆಪ್ಟೆಂಬರ್ 17ರಂದು ವಿಮೋಚನೆ ದೊರೆಯಿತು. ಹೈದರಾಬಾದ್ ನಿಜಾಮ ಸಂಸ್ಥಾನ ಭಾರತ ಒಕ್ಕೂಟಕ್ಕೆ ಸೇರಲು ಹಿಂದೇಟು ಹಾಕುತ್ತಿದ್ದ ಸಂದರ್ಭದಲ್ಲಿ, ಈ ಭಾಗದ ಅನೇಕ ಯುವಕರು ಪ್ರತಿರೋಧದ ಹೋರಾಟಕ್ಕೆ ಧುಮುಕಿದರು. ಅವರಲ್ಲಿ ಆಳಂದ ತಾಲೂಕಿನ ಭೂಸನೂರ ಗ್ರಾಮದ ವೀರ ಬೈರಪ್ಪಗೌಡ ಪಾಟೀಲರೂ ಒಬ್ಬರು.
ಭೂಸನೂರಿನ ಬೈರಪ್ಪಗೌಡ ಎಂದರೆ ಆಳಂದ, ಅಫಜಲಪುರ ಹಾಗೂ ಮಹಾರಾಷ್ಟ್ರದ ಗಡಿ ಭಾಗದಲ್ಲಿ ಇಂದಿಗೂ ಪರಿಚಿತ ಹೆಸರು. ಅವರ ಸಾಹಸ, ಸಂಘಟನಾ ಶಕ್ತಿ ಹಾಗೂ ಹೋರಾಟದ ನೆನಪುಗಳು ಈ ಭಾಗದ ಜನರ ಮನದಲ್ಲಿ ಇನ್ನೂ ಜೀವಂತವಾಗಿವೆ.ಎತ್ತರದ ನಿಲುವು, ಎದೆಗಾರಿಕೆ ಹಾಗೂ ನಿರ್ಭೀತ ಸ್ವಭಾವಕ್ಕೆ ಹೆಸರಾಗಿದ್ದ ಬೈರಪ್ಪಗೌಡರು, ತಮ್ಮ ಕುಟುಂಬದ ಮೇಲೆ ನಡೆದ ಅಹಿತಕರ ಘಟನೆಯ ಬಳಿಕ ರಜಾಕಾರರ ವಿರುದ್ಧ ತೊಡೆತಟ್ಟಿದ ಧೀರ. ಬಾಲ್ಯದಿಂದಲೇ ಧೈರ್ಯವನ್ನು ಮೈಗೂಡಿಸಿಕೊಂಡಿದ್ದ ಅವರು, ಯೌವನದಲ್ಲಿ ನಿಜಾಮನ ಪರವಾಗಿದ್ದ ರಜಾಕಾರರ ವಿರುದ್ಧ ಪ್ರತಿರೋಧ ಸಂಘಟಿಸಿದರು. ಹಳ್ಳಿ ಹಳ್ಳಿಗಳಿಗೆ ತೆರಳಿ ಯುವಕರಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿಸಿದರು.
ಸೈಬಣ್ಣಗೌಡ ಪಾಟೀಲ ಹಾಗೂ ರೇವಮ್ಮ ಗೌಡತಿ ದಂಪತಿಯ ಪುತ್ರರಾದ ಬೈರಪ್ಪಗೌಡರು 1896ರ ಮಾರ್ಚ್ 27ರಂದು ಆಳಂದ ತಾಲೂಕಿನ ಭೂಸನೂರ ಗ್ರಾಮದಲ್ಲಿ ಜನಿಸಿದರು. ಚನ್ನಬಸಮ್ಮ ಅವರನ್ನು ವಿವಾಹವಾದ ಅವರಿಗೆ ನಿಂಗನಗೌಡ, ಸಿದ್ಧನಗೌಡ ಹಾಗೂ ಗುಂಡೇರಾವ್ ಎಂಬ ಮೂವರು ಪುತ್ರರು. ಅವರ ಪುತ್ರ ಗುಂಡೇರಾವ್ (87) ಅವರು ಇಂದಿಗೂ ಜೀವಂತವಾಗಿದ್ದು, ತಂದೆಯ ಹೋರಾಟದ ಹಲವು ನೆನಪುಗಳನ್ನು ಹಂಚಿಕೊಳ್ಳುತ್ತಾರೆ. ಇಂದು ಬೈರಪ್ಪಗೌಡರ ಕುಟುಂಬ ಮೊಮ್ಮಕ್ಕಳು ಹಾಗೂ ಮರಿಮೊಮ್ಮಕ್ಕಳಿಂದ ವಿಸ್ತಾರವಾಗಿದೆ.
ಭೈರ್ಯಗೆ ಧೈರ್ಯ ಕೊಟ್ಟ ಫಾತಿಮಾ: ಬೈರಪ್ಪಗೌಡರ ಹೆಸರು ಕೇಳಿದರೆ ಸಾಕು, ರಜಾಕಾರರ ಪಡೆಯ ಸೇನಾಪತಿ ಎನಿಸಿಕೊಂಡಿದ್ದ ಪಠಾಣರು ಎಚ್ಚರಿಕೆಯಿಂದ ಗಸ್ತು ತಿರುಗುತ್ತಿದ್ದರು ಎಂಬ ನೆನಪುಗಳು ಈ ಭಾಗದಲ್ಲಿ ಕೇಳಿಬರುತ್ತವೆ. ಗೆರಿಲ್ಲಾ ಮಾದರಿಯ ತಂತ್ರಗಳನ್ನು ಬಳಸುತ್ತಿದ್ದ ಬೈರಪ್ಪಗೌಡರು ಹಲವು ಸಂದರ್ಭಗಳಲ್ಲಿ ರಜಾಕಾರರ ಪಡೆಗೆ ಸವಾಲು ಹಾಕಿದ್ದರು ಎಂದು ಅವರ ಹೋರಾಟದ ಸಹಚರರು ಹೇಳುತ್ತಾರೆ.
ರಜಾಕಾರರಿಂದ ರೈಫಲ್‌ಗಳನ್ನು ವಶಪಡಿಸಿಕೊಂಡು, ಅವುಗಳನ್ನೇ ಪ್ರತಿರೋಧ ಹೋರಾಟದಲ್ಲಿ ಬಳಸಿದ ಘಟನೆಗಳೂ ನಡೆದಿವೆ ಎನ್ನಲಾಗಿದೆ. ಇಂತಹ ಘಟನೆಗಳಿಂದಾಗಿ ಬೈರಪ್ಪಗೌಡರ ಹೆಸರು ರಜಾಕಾರರಲ್ಲಿ ಭೀತಿಯ ಸಂಕೇತವಾಗಿತ್ತು. ಅವರು ಬಂದರೆ ‘ಭೈರ್ಯ ಆಯಾರೇ... ಭಾಗೋರೇ...’ ಎಂಬ ಕೂಗು ಕೇಳಿಬರುತ್ತಿತ್ತು ಎಂದು ಈ ಭಾಗದ ಹಿರಿಯರು ನೆನಪಿಸಿಕೊಳ್ಳುತ್ತಾರೆ. ಆದರೆ ಇಂತಹ ಧೈರ್ಯಶಾಲಿ ವ್ಯಕ್ತಿತ್ವದ ಹಿಂದೆ ಬಾಲ್ಯದಲ್ಲೇ ಒಬ್ಬ ಮುಸ್ಲಿಮ್ ಮಹಿಳೆಯ ಪ್ರೇರಣೆಯೂ ಇತ್ತು ಎಂಬುದು ವಿಶೇಷ.
ಬೈರಪ್ಪಗೌಡರು ತಮ್ಮ ಮೂರನೇ ವಯಸ್ಸಿನಲ್ಲೇ ತಾಯಿ ರೇವಮ್ಮ ಅವರನ್ನು ಕಳೆದುಕೊಂಡರು. ಬಳಿಕ ಅವರನ್ನು ಸಾಕಿ ಬೆಳೆಸಿದ್ದು ಫಾತಿಮಾ ಎಂಬ ಮುಸ್ಲಿಮ್ ಮಹಿಳೆ. ಬಾಲ್ಯದಲ್ಲಿ ಯಾರಾದರೂ ಹಲ್ಲೆ ಮಾಡಿದಾಗ, ನಿನ್ನ ತಪ್ಪಿಲ್ಲದಿದ್ದರೆ ಎದುರಿಸಿ ನಿಲ್ಲಬೇಕು ಎಂದು ಫಾತಿಮಾ ನೀಡುತ್ತಿದ್ದ ಧೈರ್ಯವೇ ಬೈರಪ್ಪಗೌಡರ ವ್ಯಕ್ತಿತ್ವ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು ಎಂದು ಕುಟುಂಬಸ್ಥರು ಹೇಳುತ್ತಾರೆ.
ಬಾಲ್ಯದಲ್ಲಿ ಫಾತಿಮಾ ನೀಡಿದ ಆ ಧೈರ್ಯ ಮುಂದೆ ಅವರ ಬದುಕಿನ ಹೋರಾಟಕ್ಕೂ ಪ್ರೇರಣೆಯಾಯಿತು. ಇದೇ ಕಾರಣಕ್ಕೆ ಬೈರಪ್ಪಗೌಡರ ಕುಟುಂಬಕ್ಕೂ ಮುಸ್ಲಿಮ್ ಸಮುದಾಯಕ್ಕೂ ಬೆಳೆದ ಬಾಂಧವ್ಯ ಇಂದಿಗೂ ಮುಂದುವರಿದಿದೆ ಎಂಬುದು ಕುಟುಂಬದವರ ನೆನಪು.
ದುಧನಿ, ಗೌಡಗಾಂವ್ ಕ್ಯಾಂಪ್‌ಗಳ ನೇತೃತ್ವ: ಬ್ರಿಟಿಷರ ಆಳ್ವಿಕೆಯಿಂದ ಭಾರತ ಸ್ವಾತಂತ್ರ್ಯ ಪಡೆದರೂ ಹೈದರಾಬಾದ್ ಸಂಸ್ಥಾನ ಭಾರತ ಒಕ್ಕೂಟಕ್ಕೆ ವಿಲೀನಗೊಳ್ಳಲು ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ನಿಜಾಮನ ಆಡಳಿತದ ವಿರುದ್ಧ ನಡೆದ ಪ್ರತಿರೋಧ ಹೋರಾಟದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಭೈರಪ್ಪ ಗೌಡರ ನೇತೃತ್ವದಲ್ಲಿ ಅನೇಕ ಯುವಕರು ಪಾಲ್ಗೊಂಡಿದ್ದರು. ಈರಣ್ಣ ಕಾಶಿರಾಯ ಚೌಲ, ಸಿದ್ದಣ್ಣ ಪ್ಯಾಟಿ, ವಿರೂಪಾಕ್ಷಪ್ಪ, ಶರಣಗೌಡ ಪಾಟೀಲ, ಸೇರಿದಂತೆ ಹಲವು ಮಂದಿ ಅವರೊಂದಿಗೆ ಹೋರಾಟ ನಡೆಸಿದ್ದರು ಎಂದು ಕುಟುಂಬಸ್ಥರು ಹಾಗೂ ಸಹಚರರು ನೆನಪಿಸಿಕೊಳ್ಳುತ್ತಾರೆ.
ರಜಾಕಾರರನ್ನು ಎದುರಿಸಲು ಹೈದರಾಬಾದ್ ಕರ್ನಾಟಕದ ಗಡಿ ಭಾಗಗಳಲ್ಲಿ ಪ್ರತಿರೋಧ ಶಿಬಿರಗಳನ್ನು ಸ್ಥಾಪಿಸಲಾಗಿತ್ತು. ಅವುಗಳಲ್ಲಿ ದುಧನಿ ಹಾಗೂ ಗೌಡಗಾಂವ್ ಕ್ಯಾಂಪ್ ಗಳು ಪ್ರಮುಖವಾಗಿದ್ದವು. ಈ ಎರಡೂ ಕ್ಯಾಂಪ್ ಗಳ ನೇತೃತ್ವ ವಹಿಸಿದ್ದ ಬೈರಪ್ಪಗೌಡರು ಹೋರಾಟಗಾರರನ್ನು ಸಂಘಟಿಸಿ, ಹೋರಾಟಕ್ಕೆ ಮಾರ್ಗದರ್ಶನ ನೀಡಿದ್ದರು. ನೇತಾಜಿ ಸುಭಾಷ್ ಚಂದ್ರ ಬೋಸ್, ಸರ್ದಾರ್ ವಲ್ಲಭಭಾಯಿ ಪಟೇಲ್ ಹಾಗೂ ಭಗತ್ ಸಿಂಗ್ ಅವರ ಹೋರಾಟದ ಬದುಕು ಬೈರಪ್ಪಗೌಡರಿಗೆ ಸ್ಫೂರ್ತಿಯಾಗಿತ್ತು ಎಂದು ಅವರ ಕುಟುಂಬಸ್ಥರು ಹೇಳುತ್ತಾರೆ.
ರಜಾಕಾರರ ಬೆಂಬಲಿಗರ ವಿರುದ್ಧ ಪ್ರತಿರೋಧ: ಬೈರಪ್ಪಗೌಡರು ಹಾಗೂ ಅವರ ಸಂಗಡಿಗರು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡಿರಲಿಲ್ಲ. ರಜಾಕಾರರಿಗೆ ಬೆಂಬಲ ನೀಡುತ್ತಿದ್ದರೆಂದು ಆರೋಪಿಸಲಾದ ಕೆಲವರ ವಿರುದ್ಧವೇ ಪ್ರತಿರೋಧ ನಡೆಸಿದ್ದರು. ಮಾಶಾಳ, ಯಳಸಂಗಿ ಸೇರಿದಂತೆ ಹಲವು ಕಡೆಗಳಲ್ಲಿ ಗೌಡರ ಮನೆಗಳು ಸೇರಿದಂತೆ ರಜಾಕಾರರ ಬೆಂಬಲಿಗರೆಂದು ಹೇಳಲಾದ ಹಲವರ ಮನೆಗಳಿಗೆ ಬೆಂಕಿ ಹಚ್ಚಿದ ಘಟನೆಗಳು ನಡೆದಿವೆ. ಜೇವರ್ಗಿ (ಬಿ) ಗ್ರಾಮದಲ್ಲಿ ಪೊಲೀಸ್ ಪಾಟೀಲ ವಿಠ್ಠಪ್ಪಗೌಡರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂಬ ಮಾಹಿತಿಯೂ ಇದೆ. ಅವರು ಅಫಜಲಪುರ ತಾಲೂಕಿನ ಶಿವೂರ ಗ್ರಾಮದಲ್ಲಿ ಕ್ಯಾಂಪ್ ಹಾಕುತ್ತಿದ್ದರು. ಆ ಕ್ಯಾಂಪ್ ಹಾಕಿರುವ ಸ್ಥಳವನ್ನು ಈಗಲೂ ಬೈರಪ್ಪಗೌಡ ಹೊಲ ಎಂದು ಹೇಳುತ್ತಾರೆ ಎಂದು ಬೈರಪ್ಪಗೌಡರ ಮೊಮ್ಮಗ ಬಾಬುಗೌಡ ಹೇಳಿದ್ದಾರೆ.
ರಜಾಕಾರರ ರೈಲಿಗೆ ನುಗ್ಗಿದ್ದ ಹೋರಾಟಗಾರರು: ದುಧನಿ ಕ್ಯಾಂಪ್ ಮೇಲೆ ರಜಾಕಾರರು ದಾಳಿ ನಡೆಸಲು ಮುಂದಾಗುತ್ತಿರುವ ಮಾಹಿತಿ ಹೋರಾಟಗಾರರಿಗೆ ದೊರೆತಿತ್ತು. ಈ ಹಿನ್ನೆಲೆಯಲ್ಲಿ ರಜಾಕಾರರು ಪ್ರಯಾಣಿಸುತ್ತಿದ್ದ ರೈಲಿಗೆ ನುಗ್ಗಿ ದಾಳಿ ನಡೆಸಿದ್ದಾಗಿ ಬೈರಪ್ಪಗೌಡರ ಸಹಚರರಾಗಿದ್ದ, ಇತ್ತೀಚೆಗೆ ನಿಧನರಾದ ಈರಣ್ಣ ಕಾಶಿರಾಯ ಚೌಲ ಅವರು ತಮ್ಮ ಜೀವನದ ಕೊನೆಯ ದಿನಗಳಲ್ಲಿ ನೆನಪಿಸಿಕೊಂಡಿದ್ದರು.
ರೈಲಿನ ಮೇಲಿನ ದಾಳಿಯ ಬಳಿಕ ಮೃತದೇಹಗಳನ್ನು ಸಮೀಪದ ಪಾಳುಬಾವಿಯಲ್ಲಿ ಹೂತು, ರಜಾಕಾರರ ಸಮವಸ್ತ್ರಗಳನ್ನು ಧರಿಸಿ ಅಲ್ಲಿಂದ ತಪ್ಪಿಸಿಕೊಂಡಿದ್ದೆವು. ರಜಾಕಾರರ ಸಮವಸ್ತ್ರ ಧರಿಸಿದ್ದ ಕಾರಣ ಹಲವು ಸಂದರ್ಭಗಳಲ್ಲಿ ತಮ್ಮ ಚಲನವಲನಗಳ ಬಗ್ಗೆ ಯಾರಿಗೂ ಅನುಮಾನ ಬರುತ್ತಿರಲಿಲ್ಲ. ಇದೇ ಅವಕಾಶ ಬಳಸಿಕೊಂಡು ಹಲವು ಕಡೆಗಳಲ್ಲಿ ಸಂಚರಿಸುತ್ತಿದ್ದೆವು ಎಂದು ಅವರು ನೆನಪಿಸಿಕೊಂಡಿದ್ದರು.
ಶಸ್ತ್ರಾಸ್ತ್ರಗಳನ್ನು ಗೋವಾ ಸೇರಿದಂತೆ ವಿವಿಧ ಪ್ರದೇಶಗಳಿಂದ ರೈಲಿನ ಮೂಲಕ ತರಿಸಿ, ಕುಲಾಲಿ ರೈಲು ನಿಲ್ದಾಣದಲ್ಲಿ ಇಳಿಸಿಕೊಳ್ಳುತ್ತಿದ್ದೆವು. ಅಲ್ಲಿಂದ ಅವುಗಳನ್ನು ಭೂಸನೂರಿಗೆ ರವಾನಿಸಲಾಗುತ್ತಿತ್ತು ಎಂದು ಅವರು ಹೇಳಿದ್ದರು. ರಜಾಕಾರರ ವಿರುದ್ಧ ಮುಸ್ಲಿಮ್ ಸಮುದಾಯದ ಹಲವಾರು ಜನರು ವಿರೋಧ ವ್ಯಕ್ತಪಡಿಸಿ ತಮ್ಮೊಂದಿಗೆ ಹೋರಾಟ ನಡೆಸಿದ್ದರು ಎಂಬುದನ್ನು ಚೌಲ ಅವರು ತಮ್ಮ ನೆನಪುಗಳಲ್ಲಿ ದಾಖಲಿಸಿದ್ದರು.
ನಿಂಬರ್ಗಾ ಪೊಲೀಸ್ ಠಾಣೆ ಮೇಲೂ ದಾಳಿ ನಡೆಸಿ, ಅಲ್ಲಿದ್ದ ಬಂದೂಕುಗಳನ್ನು ವಶಪಡಿಸಿಕೊಂಡು ಠಾಣೆಗೆ ಬೆಂಕಿ ಹಚ್ಚಿ ಪರಾರಿ ಆಗಿದ್ದೆವು. ಇದಕ್ಕೆ ಪ್ರತಿಯಾಗಿ ಮಲ್ಲಪ್ಪ, ಸಿದ್ರಾಮಪ್ಪ ಪ್ಯಾಟಿ ಹಾಗೂ ಕಲ್ಯಾಣಗೌಡ ಪ್ಯಾಟಿ ವಿರುದ್ಧ ನಿಜಾಮ ಸರಕಾರ ಬಂಧನದ ವಾರೆಂಟ್ ಜಾರಿಗೊಳಿಸಿತ್ತು ಎಂದು ಅವರು ನೆನಪಿಸಿಕೊಂಡಿದ್ದರು.
ದುಧನಿ, ಮಾಶಾಳ, ಯಳಸಂಗಿ, ಕುಲಾಲಿ, ಆಳಂದ ಹಾಗೂ ಭೂಸನೂರ ಸೇರಿದಂತೆ ಹಲವು ಕಡೆಗಳಲ್ಲಿ ಬೈರಪ್ಪಗೌಡ ಮತ್ತು ರಜಾಕಾರರ ನಡುವೆ ಗುಂಡಿನ ಕಾಳಗ ನಡೆದಿತ್ತು ಎಂದು ಕುಟುಂಬಸ್ಥರು ಹಾಗೂ ಸಹಚರರು ಹೇಳುತ್ತಾರೆ.
ಬೈರಪ್ಪಗೌಡರು ಸೂರ್ಯನಂತೆ ಇದ್ದರು. ಈಗ ಅವರಂತಹ ಮನುಷ್ಯ ಹುಟ್ಟುವುದಿಲ್ಲ. ಅವರ ಮನೆಯಲ್ಲೇ ನಮ್ಮ ಕುಟುಂಬದ ಹತ್ತು ಮಂದಿ ಇದ್ದೆವು. ಬಟ್ಟರಗಾದ ರುಕ್ಮೊದ್ದಿನ್ ಮುತ್ಯಾ ತೀರಿಕೊಂಡಾಗ ಬೇಧಭಾವ ಮರೆತು ಸಾವಿರಾರು ಜನರಿಗೆ ಊಟ ಉಣಿಸಿದ್ದರು. ಅವರ ಜೊತೆಗೆ ಬಿಳಿ ಕುದುರೆ ಹಾಗೂ ಬಂದೂಕು ಕಡ್ಡಾಯವಾಗಿರುತ್ತಿತ್ತು. ಕುದುರೆಯನ್ನು ಖಾದರ್ ನೋಡಿಕೊಳ್ಳುತ್ತಿದ್ದ. ಬೈರಪ್ಪಗೌಡ ಹಾಗೂ ಖಾದರ್ ನಡುವೆ ಖಾಸ್ ದೋಸ್ತಿ ಇತ್ತು. ವಿಮೋಚನೆಯಾದ ಬಳಿಕ ನಾನೇ ಗೌಡರ ಗೋಪುರದ ಮೇಲೇರಿ ತಿರಂಗಾ ನೆಟ್ಟಿದ್ದೆ ಎಂದು ಬೈರಪ್ಪಗೌಡರೊಂದಿಗೆ ಒಡನಾಡಿದ್ದ ಹಾಗೂ ಅವರ ದನಗಳನ್ನು ಸಾಕುತ್ತಿದ್ದ ಖಾಜಾಲಾಲ್ ಭಗವಾನ್ ಅವರು ನೆನಪಿಸಿಕೊಳ್ಳುತ್ತಾರೆ.
ಹೈದರಾಬಾದ್ ಕರ್ನಾಟಕ ಪ್ರದೇಶ ವಿಮೋಚನೆಯಾದ ಬಳಿಕವೂ ಕೊನೆಯವರೆಗೂ ತಮ್ಮ ಹೋರಾಟದ ಬದುಕಿನ ನೆನಪುಗಳನ್ನು ಹೊತ್ತು ಬದುಕಿದ ಬೈರಪ್ಪಗೌಡರು 1988ರ ಜನವರಿ 22ರಂದು ನಿಧನರಾದರು.
ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟದ ಇತಿಹಾಸದಲ್ಲಿ ಅನೇಕ ಹೆಸರುಗಳು ದಾಖಲಾಗಿವೆ. ಆದರೆ ಭೂಸನೂರಿನ ಬೈರಪ್ಪಗೌಡರ ಕಥೆ ಕೇವಲ ರಜಾಕಾರರ ವಿರುದ್ಧ ನಡೆದ ಪ್ರತಿರೋಧದ ಕಥೆಯಲ್ಲ. ಅದು ಧೈರ್ಯ, ಶೂರ, ಸಂಘಟನೆ, ತ್ಯಾಗ ಹಾಗೂ ಸಂಕಷ್ಟದ ಸಂದರ್ಭದಲ್ಲಿ ಮಾನವೀಯ ಸಂಬಂಧಗಳು ಹೇಗೆ ಗಟ್ಟಿಯಾಗಿ ನಿಂತಿದ್ದವು ಎಂಬುದನ್ನು ನೆನಪಿಸುವ ಬದುಕಿನ ಕಥೆಯೂ ಹೌದು. ಅವರ ಕುಟುಂಬಸ್ಥರು ಈಗಲೂ ಅವರ ಮನೆ ಎದುರು ಸೆಪ್ಟಂಬರ್ 17ರಂದು ಧ್ವಜಾರೋಹಣ ನೆರವೇರಿಸುತ್ತಾ ಬಂದಿದ್ದಾರೆ. ಇಂತಹ ಹೋರಾಟಗಾರರ ತ್ಯಾಗ ಮತ್ತು ಕೊಡುಗೆಗಳ ಕುರಿತು ಇತಿಹಾಸಕಾರರು ಹಾಗೂ ಸಂಶೋಧಕರು ಇನ್ನಷ್ಟು ಗಮನ ಹರಿಸಬೇಕಿದೆ.
ಬೈರಪ್ಪಗೌಡರ ಕುಟುಂಬವನ್ನು ರಕ್ಷಿಸಿದ ಮುಸ್ಲಿಮ್ ಕುಟುಂಬ
ಬೈರಪ್ಪಗೌಡರು ಕೇವಲ ಹೋರಾಟಗಾರರಷ್ಟೇ ಅಲ್ಲ, ವಿವಿಧ ಸಮುದಾಯಗಳೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದ ವ್ಯಕ್ತಿಯಾಗಿದ್ದರು. ನಿಜಾಮರ ಕಾಲದಲ್ಲಿ ಅವರ ಮನೆಯಲ್ಲಿ ಮುಸ್ಲಿಮ್ ಸಮುದಾಯದ ಹಲವು ಮಂದಿ ವಾಸಿಸುತ್ತಿದ್ದರು ಹಾಗೂ ಕೆಲಸ ಮಾಡುತ್ತಿದ್ದರು. ರಜಾಕಾರರ ವಿರುದ್ಧ ಭೈರಪ್ಪ ಗೌಡರು ಸಿಡಿದೆದ್ದಿದ್ದರಿಂದ, ಅವರನ್ನು ಹತ್ಯೆ ಮಾಡಲು ಪಠಾಣರು ಹಲವು ಬಾರಿ ಹೊಂಚು ಹಾಕಿದ್ದರು ಎನ್ನಲಾಗಿದೆ. ಒಮ್ಮೆ ದಿಢೀರ್ ದಾಳಿ ನಡೆದ ಸಂದರ್ಭದಲ್ಲಿ ಬೈರಪ್ಪಗೌಡರ ಕುಟುಂಬವನ್ನು ಸುರಕ್ಷಿತವಾಗಿಸೋಲಾಪುರಕ್ಕೆ ಕರೆದೊಯ್ದು ರಕ್ಷಣೆ ನೀಡಿದ್ದು ಲಾಲು ಎಲಿಗಾರ ಎಂಬವರ ಮುಸ್ಲಿಮ್ ಕುಟುಂಬ ಎಂದು ಬೈರಪ್ಪಗೌಡರ ಪುತ್ರ ಗುಂಡೇರಾವ್ ನೆನಪಿಸಿಕೊಳ್ಳುತ್ತಾರೆ.
ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟದ ‘ಆಪರೇಷನ್ ಪೋಲೋ-ಆಳಂದ ಸೆಕ್ಟರ್’ನಲ್ಲಿ ಅವರದ್ದು ದೊಡ್ಡ ಪಾತ್ರವಿದೆ. ಅವರು ವಾಸವಿದ್ದ ಮನೆ ಹಾಗೂ ವೀಕ್ಷಣಾ ಗೋಪುರವನ್ನು ನಾವು ನವೀಕರಿಸಿದ್ದೇವೆ. ಈ ಭಾಗಕ್ಕೆ ಅವರು ನೀಡಿದ ಕೊಡುಗೆ ಅನನ್ಯ. ಅವರ ಹೆಸರಿನಲ್ಲಿ ಸರಕಾರವೇ ಅಧ್ಯಯನ ಪೀಠ ಸ್ಥಾಪಿಸಿ, ಅವರ ಹೋರಾಟ ಹಾಗೂ ಈ ಭಾಗದ ವಿಮೋಚನಾ ಚಳವಳಿಯ ಕುರಿತು ಸಮಗ್ರ ಸಂಶೋಧನೆ ನಡೆಸಬೇಕು.
-ಸುನೀಲ್ ಪಾಟೀಲ
ಬೈರಪ್ಪಗೌಡರ ಮರಿಮೊಮ್ಮಗ






