ಅಂಗನವಾಡಿ ಮಕ್ಕಳ ತಟ್ಟೆಯಲ್ಲಿ ಪೌಷ್ಟಿಕಾಂಶಕ್ಕೆ ಬರ
ತರಕಾರಿಗೆ 50 ಪೈಸೆ ನಿಗದಿಪಡಿಸಿದ ಸರಕಾರ; ನಿಗದಿತ ಪ್ರಮಾಣದಲ್ಲಿ ಪೂರೈಕೆಯಾಗದ ಸಾಮಗ್ರಿ

ಲಿಂಗಸುಗೂರು: ದುಬಾರಿಯಾಗುತ್ತಿರುವ ಅಗತ್ಯ ವಸ್ತುಗಳ ಬೆಲೆ, ಸರಕಾರ ನಿಗದಿಪಡಿಸಿರುವ ಅನುದಾನದ ಮಿತಿಯಿಂದಾಗಿ ತಾಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಸಮರ್ಪಕ ಪೌಷ್ಟಿಕ ಆಹಾರ ಒದಗಿಸುವಲ್ಲಿ ಸವಾಲು ತಂದೊಡ್ಡಿದೆ ಎಂಬ ಆರೋಪ ಕೇಳಿಬಂದಿದೆ.
ಬೆಲೆ ಏರಿಕೆ ನಡುವೆ ಅನುದಾನದ ಸಂಕಷ್ಟ:
ಸರಕಾರದ ಮೆನುವಿನಲ್ಲಿ ವಾರಕ್ಕೆ ಎರಡು ಮೊಟ್ಟೆ, ಹಾಲು, ಬಾಳೆಹಣ್ಣು, ಸೊಪ್ಪು, ತರಕಾರಿ ಹಾಗೂ ಬೇಳೆ ಸೇರಿದಂತೆ ಪೌಷ್ಟಿಕಾಂಶಯುಕ್ತ ಆಹಾರ ನೀಡಬೇಕೆಂದು ಸೂಚಿಸಲಾಗಿದೆ. ಆದರೆ, ದಿನೇದಿನೇ ಏರುತ್ತಿರುವ ಬೆಲೆಗಳ ನಡುವೆ ನಿಗದಿತ ಅನುದಾನದಲ್ಲಿ ಮೆನುವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದು ಕಷ್ಟವಾಗುತ್ತಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಕೆಲವು ಅಂಗನವಾಡಿ ಕಾರ್ಯಕರ್ತೆಯರು ತಿಳಿಸಿದ್ದಾರೆ.
‘50 ಪೈಸೆಯಲ್ಲಿ ತರಕಾರಿ ಹೇಗೆ?’
ತರಕಾರಿ ಖರೀದಿಗೆ ನಿಗದಿಪಡಿಸಿರುವ ಅತ್ಯಲ್ಪ ಮೊತ್ತದಲ್ಲಿ ಪ್ರಸ್ತುತ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಅಗತ್ಯ ಪ್ರಮಾಣದ ತರಕಾರಿ ಖರೀದಿಸುವುದು ಕಷ್ಟವಾಗಿದೆ.
ಒಂದು ಹೊತ್ತಿನ ಊಟಕ್ಕೆ ನಿಗದಿಪಡಿಸಿರುವ ಹಣದಲ್ಲೇ ಅಕ್ಕಿ, ಬೇಳೆ, ತರಕಾರಿ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಖರೀದಿಸಬೇಕಿರುವುದರಿಂದ ಗುಣಮಟ್ಟದ ಆಹಾರ ನೀಡಲು ತೊಂದರೆಯಾಗುತ್ತಿದೆ ಎಂಬುದು ಕಾರ್ಯಕರ್ತೆಯರ ಅಳಲು.
ಆಹಾರ ಸಾಮಗ್ರಿ ಪ್ರಮಾಣ, ಗುಣಮಟ್ಟದ ಬಗ್ಗೆಯೂ ದೂರು: ಅಂಗನವಾಡಿ ಕೇಂದ್ರಗಳಿಗೆ ಪೂರೈಕೆಯಾಗುವ ಅಕ್ಕಿ, ಬೇಳೆ ಸೇರಿದಂತೆ ವಿವಿಧ ಆಹಾರ ಸಾಮಗ್ರಿಗಳ ಪ್ರಮಾಣದಲ್ಲಿ ವ್ಯತ್ಯಾಸವಾಗುತ್ತಿದೆ. ಕೆಲವೆಡೆ ಪೂರೈಕೆಯಾಗುವ ಸಾಮಗ್ರಿಗಳ ಗುಣಮಟ್ಟವೂ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂದು ಪಾಲಕರು ದೂರಿದ್ದಾರೆ.
ಮೊಟ್ಟೆಯೂ ನಿಯಮಿತವಾಗಿ ದೊರೆಯುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
32,661 ಫಲಾನುಭವಿಗಳು:
ಇಲಾಖೆಯ ಆಗಸ್ಟ್ 2026ರ ವರದಿ ಪ್ರಕಾರ, ತಾಲೂಕಿನಲ್ಲಿ ಒಟ್ಟು 564 ಅಂಗನವಾಡಿ ಕೇಂದ್ರಗಳಿದ್ದು, 32,661 ಫಲಾನುಭವಿಗಳು ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. 0 ರಿಂದ 6 ವರ್ಷದೊಳಗಿನ 25,926 ಮಕ್ಕಳು ಇದ್ದು, ಈ ಪೈಕಿ 13,173 ಗಂಡು ಮತ್ತು 12,753 ಹೆಣ್ಣು ಮಕ್ಕಳು ಸೇರಿದ್ದಾರೆ. 6 ತಿಂಗಳಿಂದ 3 ವರ್ಷದೊಳಗಿನ 14,058 ಮಕ್ಕಳು ಇದ್ದಾರೆ. ಗರ್ಭಿಣಿಯರು 3,265 ಹಾಗೂ ಬಾಣಂತಿಯರು 2,404 ಇದ್ದಾರೆ.
442 ಕೇಂದ್ರಗಳಿಗೆ ಸ್ವಂತ ಕಟ್ಟಡ:
ತಾಲೂಕಿನ 564 ಅಂಗನವಾಡಿ ಕೇಂದ್ರಗಳ ಪೈಕಿ 442 ಕೇಂದ್ರಗಳು ಸ್ವಂತ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. 97 ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಶಾಲೆಗಳಲ್ಲಿ 10, ಸಮುದಾಯ ಭವನಗಳಲ್ಲಿ 11 ಹಾಗೂ ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ಒಂದು ಕೇಂದ್ರ ಕಾರ್ಯನಿರ್ವಹಿಸುತ್ತಿದೆ.
ಮೇಲ್ವಿಚಾರಣೆ ಬಿಗಿಗೊಳಿಸಲು ಆಗ್ರಹ:
ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಲ್ಲಿ ಅಪೌಷ್ಟಿಕತೆ ನಿವಾರಿಸುವ ಉದ್ದೇಶದಿಂದ ಸರಕಾರ ವಿವಿಧ ಯೋಜನೆಗಳ ಮೂಲಕ ಹಣ ವ್ಯಯಿಸುತ್ತಿದೆ. ಆದರೆ, ಯೋಜನೆಗಳ ಅನುಷ್ಠಾನದ ಹಂತದಲ್ಲಿನ ಲೋಪಗಳಿಂದ ಫಲಾನುಭವಿಗಳಿಗೆ ಸಂಪೂರ್ಣ ಪ್ರಯೋಜನ ದೊರೆಯುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಅಂಗನವಾಡಿ ಕೇಂದ್ರಗಳಿಗೆ ಪೂರೈಕೆಯಾಗುವ ಆಹಾರ ಸಾಮಗ್ರಿಗಳ ಪ್ರಮಾಣ ಮತ್ತು ಗುಣಮಟ್ಟವನ್ನು ಅಧಿಕಾರಿಗಳು ನಿಯಮಿತವಾಗಿ ಪರಿಶೀಲಿಸಬೇಕು. ಸರಕಾರ ನಿಗದಿಪಡಿಸಿರುವ ಮೆನುವಿನಂತೆ ಆಹಾರ ವಿತರಿಸಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಆಹಾರ ಪೂರೈಕೆ ಮಾಡುವ ಏಜೆನ್ಸಿಗಳು ನಿಗದಿತ ಪ್ರಮಾಣದಲ್ಲಿ ಗುಣಮಟ್ಟದ ಸಾಮಗ್ರಿ ಪೂರೈಸುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಪಾಲಕರು ಆಗ್ರಹಿಸಿದ್ದಾರೆ.
ಮೆನುವಿನಲ್ಲಿ ಎಲ್ಲವೂ, ತಟ್ಟೆಯಲ್ಲಿ ಕೇವಲ ಅನ್ನ-ಸಾಂಬಾರ್!
ತಾಲೂಕಿನ ಹಲವು ಅಂಗನವಾಡಿ ಕೇಂದ್ರಗಳಲ್ಲಿ ಸರಕಾರ ನಿಗದಿಪಡಿಸಿರುವ ಮೆನುವಿನಂತೆ ಮಕ್ಕಳಿಗೆ ಆಹಾರ ಸಿಗುತ್ತಿಲ್ಲ. ಅನ್ನ, ಸಾಂಬಾರ್‌ಗೆ ಆಹಾರ ಸೀಮಿತವಾಗಿದ್ದು, ಮೊಟ್ಟೆ, ಹಾಲು, ಬಾಳೆಹಣ್ಣು, ಸೊಪ್ಪು, ತರಕಾರಿ ಹಾಗೂ ಬೇಳೆ ಪದಾರ್ಥಗಳು ನಿಯಮಿತವಾಗಿ ದೊರೆಯುತ್ತಿಲ್ಲ ಎಂಬುದು ಪಾಲಕರ ಆರೋಪ.
ತಾಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ ಆಹಾರದ ಪೂರೈಕೆ ಬಗ್ಗೆ ಅಲ್ಲಲ್ಲಿ ದೂರುಗಳಿದ್ದು, ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಾಗುವುದು
-ನಾಗರತ್ನ, ಸಿಡಿಪಿಓ, ಲಿಂಗಸುಗೂರು
ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಆಹಾರ ಮರೀಚಿಕೆಯಾಗಿದೆ. ಕೊಡುವ ಆಹಾರ ಕಳಪೆಯಾಗಿದೆ. ಊಟ ಮಾಡಲಿಕ್ಕೆ ಮಕ್ಕಳು ಹಿಂಜರಿಯುತ್ತಾರೆ. ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು
-ಲಕ್ಷ್ಮೀ, ಪಾಲಕಿ
ಅಂಗನವಾಡಿ ಕೇಂದ್ರಗಳ ಶಿಕ್ಷಕಿಯರು, ಸಹಾಯಕಿಯರಿಗೆ ನಿರೀಕ್ಷಿತ ಪ್ರಮಾಣದಲ್ಲಿ ವೇತನ, ಗೌರವಧನ ಸಿಗುತ್ತಿಲ್ಲ. ಕೊಡುವ ಪುಡಿಗಾಸಲ್ಲೇ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ. ಸರಕಾರ ಇವರ ಆರ್ಥಿಕ ಪರಿಸ್ಥಿತಿ ಚೇತರಿಕೆಗೆ ಮುಂದಾಗಬೇಕು
-ಮುಹಮ್ಮದ್ ಜಿಲಾನಿ
ಸಾಮಾಜಿಕ ಕಾರ್ಯಕರ್ತ






