ಚಿಟ್ಟೆ ಮಾದರಿಯಲ್ಲಿ ಹಗಲಿನಲ್ಲಿ ಹಾರುವ ಅಪರೂಪದ ಪತಂಗ 'ಬ್ಲೂ ಟೈಗರ್ ಮೋತ್'

ಉಡುಪಿ: ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಕಂಡುಬರುವ ಬಹುತೇಕ ಪತಂಗಗಳು ರಾತ್ರಿ ವೇಳೆ ಸಕ್ರಿಯವಾಗಿರುತ್ತವೆ. ಅವು ಹಗಲಿನಲ್ಲಿ ಯಾವುದೇ ರೀತಿಯ ಹಾರಾಟ ಅಥವಾ ಚಟುವಟಿಕೆಯಲ್ಲಿ ತೊಡಗಿರುವುದಿಲ್ಲ. ಆದರೆ ಇದಕ್ಕೆ ಅಪವಾದ ಎಂಬಂತೆ ನಮ್ಮ ಪರಿಸರದಲ್ಲಿ ಚಿಟ್ಟೆಯನ್ನೇ ಹೋಲುವ ಪತಂಗ ವೊಂದು ಹಗಲಿನಲ್ಲೂ ಹಾರಾಡುತ್ತಿರುತ್ತದೆ. ಇದು ನೋಡಲು ಬ್ಲೂ ಟೈಗರ್ ಚಿಟ್ಟೆಯ ಮಾದರಿಯಲ್ಲೇ ಇದೆ. ಬ್ಲೂ ಟೈಗರ್ ಚಿಟ್ಟೆಯನ್ನು ಹೋಲುವ ಇದರ ರೆಕ್ಕೆಗಳ ವಿನ್ಯಾಸದಿಂದ ಈ ಪತಂಗಕ್ಕೆ ಅದೇ ಹೆಸರನ್ನು ಇಡಲಾಗಿದೆ. ಅದುವೇ ‘ಬ್ಲೂ ಟೈಗರ್ ಮೋತ್’(ಪತಂಗ).
ಬ್ಲೂ ಟೈಗರ್ ಮೋತ್ ಇದರ ವೈಜ್ಞಾನಿಕ ಹೆಸರು ಡಿಸ್ಫೇನಿಯಾ ಪಾಲ್ಮೈರಾ ಸ್ಟೋಲ್. ಡಿಸ್ಫೇನಿಯಾ ಜಾತಿಗೆ ಸೇರಿದ ಹೆಚ್ಚಿನ ಪತಂಗ ಗಳು ಹಗಲಿನಲ್ಲಿ ಸಕ್ರಿಯವಾಗಿರುತ್ತವೆ. ಅವುಗಳಲ್ಲಿ ಬ್ಲೂ ಟೈಗರ್ ಮೋತ್ ಕೂಡ ಒಂದು. ಈ ಪತಂಗ ಸಾಮಾನ್ಯವಾಗಿ ಹಗಲಿ ನಲ್ಲಿ ಕಾಣಿಸಿಕೊಳ್ಳುತ್ತವೆ. ಸೂರ್ಯನ ಬೆಳಕು ಬೀಳುವ ತೆರೆದ ಪ್ರದೇಶ ಗಳು, ತೋಟಗಳು ಹಾಗೂ ಸಸ್ಯಗಳಿಂದ ಕೂಡಿದ ಪ್ರದೇಶದಲ್ಲಿ ಇದು ಚಿಟ್ಟೆಯಂತೆ ವೇಗವಾಗಿ ಅಲ್ಲದಿದ್ದರೂ ನಿಧಾನವಾಗಿ ಹಾರಾಡು ತ್ತಿರುತ್ತದೆ. ಈ ಪತಂಗವು ವಯಸ್ಕ ಹಂತದಲ್ಲಿ ಬ್ಲೂ ಟೈಗರ್ ಚಿಟ್ಟೆಯನ್ನೇ ಹೋಲುತ್ತದೆ.
ರಾತ್ರಿ ಸಕ್ರಿಯವಾಗಿರುವ ಅನೇಕ ಪತಂಗಗಳು ಶತ್ರುಗಳಿಂದ ರಕ್ಷಿಸಿಕೊಳ್ಳಲು ಮರೆಮಾಚುವ ಬಣ್ಣ ಅಥವಾ ಕತ್ತಲೆಯನ್ನು ಅವಲಂಬಿಸಿರುತ್ತವೆ. ಆದರೆ ಹಗಲಿನಲ್ಲಿ ಹಾರಾಡುವ ಪತಂಗಗಳು ತಮ್ಮ ರಕ್ಷಣೆಗಾಗಿ ವಿಭಿನ್ನ ತಂತ್ರಗಳನ್ನು ಅನುಸರಿಸುತ್ತವೆ. ಬ್ಲೂ ಟೈಗರ್ ಮೋತ್ ತನ್ನ ನೇರಳೆ ಮತ್ತು ನೀಲಿ ಬಣ್ಣಗಳಿಂದ ಪರಭಕ್ಷಕಗಳಿಂದ ರಕ್ಷಿಸಿಕೊಳ್ಳುತ್ತವೆ.
ಈ ಪತಂಗದ ಗಂಡುಗಳ ರೆಕ್ಕೆಗಳ ವಿಸ್ತಾರ ಸುಮಾರು 78 ಮಿ.ಮೀ. ಮತ್ತು ಹೆಣ್ಣು ಪತಂಗದ ರೆಕ್ಕೆಗಳ ವಿಸ್ತಾರ ಸುಮಾರು 78-90 ಮಿ.ಮೀ. ಅಗಲವಾಗಿರುತ್ತವೆ. ರೆಕ್ಕೆಗಳು ಗಾಢ ನೇರಳೆ, ಪ್ರಕಾಶಮಾನವಾದ ನೀಲಿ ಬಣ್ಣದಲ್ಲಿರುತ್ತವೆ. ಈ ಆಕರ್ಷಕ ಬಣ್ಣಗಳಿಂದ ಈ ಪತಂಗವನ್ನು ಹಗಲಿನಲ್ಲಿ ಸುಲಭವಾಗಿ ಗುರುತಿಸ ಬಹುದು. ಈ ಪತಂಗವು ಚಿಟ್ಟೆಗಳಂತೆ ಮಣ್ಣಿನಲ್ಲಿರುವ ಖನಿಜಾಂಶಗಳನ್ನು ಹೀರಿಕೊಳ್ಳುವ ಮಡ್ ಪ್ಲಡಿಂಗ್ ಮಾಡುತ್ತದೆ. ಇದರ ಮರಿಹುಳು ಹಳದಿ ಬಣ್ಣದಲ್ಲಿದ್ದು, ನೀಲಿ ಛಾಯೆಯ ಚುಕ್ಕೆಗಳನ್ನು ಹೊಂದಿರುತ್ತವೆ. ಬ್ಲೂ ಟೈಗರ್ ಮೋತ್ ನಮ್ಮ ಸುತ್ತಮುತ್ತಲು ಸಾಮಾನ್ಯವಾಗಿ ಕಂಡುಬರುವ ಕಾಂಡ್ಲಾ ಕುಟುಂಬಕ್ಕೆ ಸೇರಿದ ಕ್ಯಾರಾಲಿಯಾ ಬ್ರಾಕಿಯಾಟಾ ಎಂಬ ಜಾತಿಯ ಸಸ್ಯಗಳ ಎಲೆಗಳ ಮೇಲೆ ಗುಂಪಾಗಿ ಮೊಟ್ಟೆಗಳನ್ನು ಇಡುತ್ತವೆ. ಬಳಿಕ ಮೊಟ್ಟೆಯಿಂದ ಹೊರ ಬರುವ ಹುಳಗಳು ಇದೇ ಎಲೆಯನ್ನು ಆಹಾರವಾಗಿ ಸೇವಿಸುತ್ತವೆೆ. ಮುಂದೆ ಕೋಶ ರಚಿಸಿಕೊಂಡು ಪತಂಗವಾಗಿ ಪರಿವರ್ತನೆಗೊಂಡು ವಯಸ್ಕ ಪತಂಗವಾಗಿ ಹೊರಬರುತ್ತವೆ. ಈ ಪತಂಗವು ಭಾರತದ ಮಹಾರಾಷ್ಟ್ರ, ಗೋವಾ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಕಂಡುಬರುತ್ತವೆ.
ವಿಶಿಷ್ಟ ಆಕರ್ಷಣೆಯ ಬ್ಲೂ ಟೈಗರ್ ಚಿಟ್ಟೆ
ನಮ್ಮ ಪರಿಸರದಲ್ಲಿ ಸಾಮಾನ್ಯವಾಗಿ ಕಂಡುಬರುವ ಚಿಟ್ಟೆಗಳಲ್ಲಿ ಬ್ಲೂ ಟೈಗರ್ ಬಟರ್‌ಫ್ಲೈ ಕೂಡ ಒಂದು. ಇದರ ರೆಕ್ಕೆಗಳ ವಿಸ್ತಾರ 90-100 ಮಿ.ಮೀ. ಇರುತ್ತವೆ. ರೆಕ್ಕೆಗಳ ಮೇಲ್ಭಾಗವು ಗಾಢ ಕಂದು ಅಥವಾ ಕಪ್ಪು ಬಣ್ಣದಲ್ಲಿರುತ್ತವೆ. ರೆಕ್ಕೆಗಳ ಮೇಲೆ ದೊಡ್ಡದಾದ ತಿಳಿನೀಲಿ ಅಥವಾ ಬಿಳಿ ಬಣ್ಣದ ಗುರುತುಗಳಿರುತ್ತವೆ. ರೆಕ್ಕೆಗಳ ಬುಡ ಭಾಗದಲ್ಲಿ ಉದ್ದನೆಯ ಪಟ್ಟಿಯಂತಹ ಚುಕ್ಕೆಗಳು ಕಂಡುಬರುತ್ತವೆ.
ಈ ಚಿಟ್ಟೆ ನಿಧಾನ ಹಾಗೂ ತೇಲುವ ರೀತಿಯಲ್ಲಿ ಹಾರಾಟ ಮಾಡುತ್ತಿರುತ್ತದೆ. ಏನಾದರೂ ಅಪಾಯದ ಸುಳಿವು ಸಿಕ್ಕಾಗ ವೇಗವಾಗಿ ಹಾರುತ್ತದೆ. ನೆಲಕ್ಕೆ ಸಮೀಪವಾಗಿ ಹಾರುತ್ತ ಕಡಿಮೆ ಎತ್ತರದಲ್ಲಿ ಬೆಳೆಯುವ ಹೂವುಗಳನ್ನು ಹುಡುಕಿ ಮಕರಂದ ಹೀರುತ್ತದೆ. ವಿಶ್ರಾಂತಿ ಪಡೆಯುವಾಗ ರೆಕ್ಕೆಗಳನ್ನು ಅರ್ಧ ತೆರೆದ ಸ್ಥಿತಿಯಲ್ಲಿ ಇಡುತ್ತದೆ.
ತೇವಾಂಶವಿರುವ ಮಣ್ಣಿನ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚಿಟ್ಟೆಗಳು ಒಟ್ಟುಗೂಡಿ ಮಡ್ ಪಡ್ಲಿಂಗ್ ನಡೆಸುತ್ತದೆ. ವಲಸೆ ಸಮಯದಲ್ಲಿ ನೂರಾರು ಚಿಟ್ಟೆಗಳು ಒಟ್ಟುಗೂಡಿ, ಒಣ ಕೊಂಬೆಗಳು ಅಥವಾ ಎಲೆಗಳಿಲ್ಲದ ಸಣ್ಣ ರೆಂಬೆಗಳ ಮೇಲೆ ವಿಶ್ರಾಂತಿ ಪಡೆಯುತ್ತವೆ. ಈ ಚಿಟ್ಟೆಯು ಸಾಮಾನ್ಯವಾಗಿ ಬಯಲು ಪ್ರದೇಶ, ಬಯಲು ಸೀಮೆಯ ಹುಲ್ಲುಗಾವಲು, ನಗರ ಮತ್ತು ಪಟ್ಟಣ ಪ್ರದೇಶಗಳು, ಕಡಿಮೆ ಎತ್ತರದ ದಟ್ಟ ಕಾಡುಗಳು, ಹೂವಿನ ಸಸ್ಯಗಳು ಹೆಚ್ಚಾಗಿರುವ ಪ್ರದೇಶಗಳಲ್ಲಿ ಕಂಡುಬರುತ್ತದೆ.






