ರಾಜಕೀಯ ಹಸ್ತಕ್ಷೇಪಕ್ಕೆ ಬಲಿಯಾಗುತ್ತಿದೆಯೇ ಅಲ್ಪಸಂಖ್ಯಾತರ ಮಹಿಳಾ ಕಾಲೇಜು?
ಎರಡು ವರ್ಷ ಕಳೆದರೂ ಅಂತಿಮವಾಗದ ವಕ್ಫ್ ಜಮೀನು

ಕಲಬುರಗಿ : ಅಲ್ಪಸಂಖ್ಯಾತ ಸಮುದಾಯದ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣದ ಅವಕಾಶ ಕಲ್ಪಿಸುವ ಉದ್ದೇಶದ ಮಹಿಳಾ ಕಾಲೇಜು ನಿರ್ಮಾಣಕ್ಕೆ ಜಾಗದ ಸಮಸ್ಯೆ ಎದುರಾಗಿದೆ. ಎರಡು ವರ್ಷಗಳ ಹಿಂದೆ ಅನುಮೋದನೆ ಪಡೆದಿದ್ದ ಯೋಜನೆಗೆ ಕಲಬುರಗಿಯಲ್ಲಿ ಇನ್ನೂ ಜಮೀನು ಅಂತಿಮವಾಗಿಲ್ಲ. ರಾಜಕೀಯ
ಹಸ್ತಕ್ಷೇಪದಿಂದಲೇ ಪ್ರಸ್ತಾವಿತ ಜಾಗದ ಆದೇಶ ಹಿಂಪಡೆಯಲಾಗಿದೆ ಎಂಬ ಆರೋಪವೂ ಕೇಳಿಬಂದಿದ್ದು, ಯೋಜನೆಯ ಅನುಷ್ಠಾನದ ವಿಳಂಬಕ್ಕೆ ಕಾರಣವೇನು ಎಂಬ ಪ್ರಶ್ನೆ ಎದ್ದಿದೆ.
ಮುಸ್ಲಿಮ್ ಸಮುದಾಯದ ಹೆಣ್ಣುಮಕ್ಕಳಿಗೆ ಶಿಕ್ಷಣದ ಅವಕಾಶ ವಿಸ್ತರಿಸಲು ರಾಜ್ಯದ 15 ಜಿಲ್ಲೆಗಳಲ್ಲಿ ವಕ್ಫ್ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಹಿಳಾ ಕಾಲೇಜುಗಳನ್ನು ಆರಂಭಿಸಲು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ನಿರ್ಧರಿಸಿತ್ತು. 2024ರ ಫೆಬ್ರವರಿ 23ರಂದು ನಡೆದ ಮಂಡಳಿಯ 355ನೇ ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಲಾಗಿತ್ತು. ಪ್ರತಿ ಕಾಲೇಜಿನ ಕಟ್ಟಡ ನಿರ್ಮಾಣಕ್ಕೆ 318.43 ಲಕ್ಷ ರೂ.ರಂತೆ ಒಟ್ಟು 15 ಕಾಲೇಜುಗಳಿಗೆ 4,776.46 ಲಕ್ಷ ರೂ. ವೆಚ್ಚದ ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಗಿತ್ತು.
ಇದರಂತೆ ಕಲಬುರಗಿ ನಗರದ ಯತೀಮ್ ಖಾನಾ ಪ್ರದೇಶದ ವಕ್ಫ್ ಜಮೀನಿನಲ್ಲಿ ಕಾಲೇಜು ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಈ ಜಮೀನಿನಲ್ಲಿ ಕಾಲೇಜು ನಿರ್ಮಾಣಕ್ಕೆ ನೀಡಿದ್ದ ಆದೇಶವನ್ನು ಹಿಂಪಡೆಯಲಾಗಿದೆ. ರಾಜಕೀಯ ಹಸ್ತಕ್ಷೇಪದಿಂದಲೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿದ್ದರೂ, ಈ ಬಗ್ಗೆ ಅಧಿಕೃತ ಸ್ಪಷ್ಟನೆ ಲಭ್ಯವಾಗಿಲ್ಲ. ಪರ್ಯಾಯ ಜಮೀನು ಗುರುತಿಸುವ ಪ್ರಕ್ರಿಯೆ ಎರಡು ವರ್ಷಗಳ ಬಳಿಕವೂ ಪೂರ್ಣಗೊಳ್ಳದಿರುವುದು ಯೋಜನೆಯ ಭವಿಷ್ಯದ ಬಗ್ಗೆ ಅನಿಶ್ಚಿತತೆ ಮೂಡಿಸಿದೆ.
ಎರಡು ಪರ್ಯಾಯ ಜಾಗಗಳ ಗುರುತು
ಯತೀಮ್ ಖಾನಾ ಜಮೀನಿನ ಆದೇಶ ಹಿಂಪಡೆದ ಬಳಿಕ, 2026ರ ಜುಲೈ 31ರಂದು ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಪ್ರಧಾನಮಂತ್ರಿ 15 ಅಂಶಗಳ ಕಾರ್ಯಕ್ರಮದ ಸಮಗ್ರ ಅನುಷ್ಠಾನ ಮತ್ತು ಪರಿಶೀಲನಾ ಸಭೆಯಲ್ಲಿ ಪರ್ಯಾಯ ಜಾಗದ ಕುರಿತು ಸೂಚನೆ ನೀಡಲಾಗಿತ್ತು. ಇದರ ಬೆನ್ನಲ್ಲೇ ಕೆಬಿಎನ್ ಛೋಟಿ ದರ್ಗಾದ ಖಬ್ಲುಲಾಹ್ ಹುಸೈನಿ ದರ್ಗಾದ ಸಂಗತ್ರಾಶ್ ವಾಡಿಯಲ್ಲಿರುವ ವಕ್ಫ್ ಜಮೀನು ಹಾಗೂ ಸರ್ವೆ ನಂ.39ರ ಜಮೀನನ್ನು ಪರ್ಯಾಯ ಸ್ಥಳಗಳಾಗಿ ಗುರುತಿಸಲಾಗಿದೆ ಎಂದು ತಿಳಿದುಬಂದಿದೆ. ಆದರೆ, ಇವೆರಡರಲ್ಲಿ ಯಾವುದನ್ನೂ ಅಂತಿಮಗೊಳಿಸಿಲ್ಲ.
ಅನುಷ್ಠಾನಕ್ಕೆ ವೇಗ ಯಾವಾಗ?
ಕಟ್ಟಡ ನಿರ್ಮಾಣಕ್ಕೆ ಕೋಟ್ಯಂತರ ರೂಪಾಯಿ ವೆಚ್ಚದ ಪ್ರಸ್ತಾವನೆ ಸಿದ್ಧವಾಗಿದ್ದರೂ, ಜಮೀನು ಆಯ್ಕೆ, ವಕ್ಫ್ ಆಸ್ತಿಯ ದಾಖಲೆಗಳ ಪರಿಶೀಲನೆ, ಇಲಾಖೆಗಳ ಅನುಮೋದನೆ ಮತ್ತು ನಿರ್ಮಾಣದ ಕಾಲಮಿತಿ ನಿಗದಿಪಡಿಸುವ ಪ್ರಕ್ರಿಯೆಗಳು ಇನ್ನೂ ಮುಂದುವರಿಯಬೇಕಿವೆ. ಜಾಗದ ಆಯ್ಕೆಯೇ ಅಂತಿಮವಾಗದಿರುವುದು ಆಡಳಿತಾತ್ಮಕ ವಿಳಂಬದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಉನ್ನತ ಶಿಕ್ಷಣಕ್ಕಾಗಿ ದೂರದ ಊರುಗಳಿಗೆ ತೆರಳಬೇಕಾದ ಅನಿವಾರ್ಯತೆ ಎದುರಿಸುವ ವಿದ್ಯಾರ್ಥಿನಿಯರಿಗೆ ಸ್ಥಳೀಯವಾಗಿಯೇ ಶಿಕ್ಷಣದ ಅವಕಾಶ ಕಲ್ಪಿಸುವುದು ಈ ಯೋಜನೆಯ ಉದ್ದೇಶ. ಹೀಗಿರುವಾಗ, ಮಹಿಳಾ ಕಾಲೇಜು ಮತ್ತೊಂದು ಕಡತವಾಗಿ ಉಳಿಯದಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರು ಮಧ್ಯಸ್ಥಿಕೆ ವಹಿಸಿ, ಜಾಗದ ಆಯ್ಕೆಯಲ್ಲಿನ ಗೊಂದಲ ನಿವಾರಿಸಬೇಕು. ಸಂಬಂಧಿಸಿದ ಇಲಾಖೆಗಳ ಹೊಣೆಗಾರಿಕೆ ನಿಗದಿಪಡಿಸಿ, ಕಾಲಮಿತಿಯೊಳಗೆ ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ನಿರೀಕ್ಷೆಯಾಗಿದೆ.






