ಗಾಂಜಾ, ಮಾದಕ ವಸ್ತುಗಳ ಸೇವನೆ, ಮಾರಾಟದಿಂದ ನಲುಗುತ್ತಿರುವ ರಾಯಚೂರು
ಸಂಘ ಸಂಸ್ಥೆಗಳ, ರಾಜಕೀಯ ಪಕ್ಷಗಳ ಆಕ್ರೋಶ

ಸಾಂದರ್ಭಿಕ ಚಿತ್ರ
ರಾಯಚೂರು: ರಾಯಚೂರು ನಗರ ಹಾಗೂ ಜಿಲ್ಲೆಯಲ್ಲಿ ಕೊಲೆ, ಸುಲಿಗೆ, ಡ್ರಗ್ಸ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನರು ಆತಂಕಕ್ಕೀಡಾಗಿದ್ದಾರೆ. ಅನೇಕ ಅಪರಾಧ ಚಟುವಟಿಕೆಗಳಿಗೆ ಮಾದಕ ವಸ್ತುಗಳ ಸೇವನೆಯೇ ಕಾರಣ ಹೇಳಲಾಗುತ್ತಿದ್ದು, ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯ ಮೇಲೆ ಸಂಘ ಸಂಸ್ಥೆಗಳು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇಲ್ಲಿನ ಎಲ್ ಬಿಎಸ್ ನಗರದಲ್ಲಿ ಶನಿವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಕಿರಾಣಿ ಅಂಗಡಿ ಮಾಲೀಕನನ್ನು ಉದ್ರಿ (ಸಾಲದ ರೂಪದಲ್ಲಿ) ಸಿಗರೇಟ್ ನೀಡಿಲ್ಲ ಎಂದು ಮಚ್ಚಿನಿಂದ ಬರ್ಬರವಾಗಿ ಹತ್ಯೆ ಮಾಡಿದ್ದು ರಾಯಚೂರಿನ ಜನ ಬೆಚ್ಚಿ ಬಿದ್ದಿದ್ದು, ಡ್ರಗ್ಸ್ ಮಾರಾಟ, ಸಾಗಾಟದ ಮೇಲೆ ಗಂಭೀರ ಪ್ರಶ್ನೆಗಳು ಎದ್ದಿವೆ, ಪೊಲೀಸ್ ಇಲಾಖೆಯ ಆಡಳಿತ ವೈಖರಿಯನ್ನು ಪ್ರಶ್ನೆ ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ಡ್ರಗ್ಸ್, ಗಾಂಜಾ ಸೇವನೆ, ಮಾರಾಟ ಹೆಚ್ಚಾಗುತ್ತಿದ್ದು ಫ್ಲೆಡ್ಲರ್ ಗಳು ಸ್ಲಂ ಏರಿಯಾಗಳನ್ನೇ ಟಾರ್ಗೆಟ್ ಮಾಡಿಕೊಂಡಿದ್ದು ಸುಲಭವಾಗಿ ಕೈಗೆ ಸಿಗುತ್ತಿದೆ. ಡ್ರಗ್ಸ್ ಸೇವನೆ ಮತ್ತಿನಲ್ಲಿ ಸಣ್ಣಪುಟ್ಟ ವಿಚಾರಕ್ಕೆ ಜಗಳ ತೆಗೆದು ಕೊಲೆ ಹಂತಕ್ಕೆ ಹೋಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಡ್ರಗ್ಸ್ ಗೆ ಅಡಿಕ್ಟ್ ಆದ ಅನೇಕ ಯುವಕರು ಮಧ್ಯರಾತ್ರಿಯವರೆಗೆ ಅಲ್ಲಲ್ಲಿ ಕುಳಿತಿರುತ್ತಾರೆ. ಗಸ್ತು ತಿರುಗುವ ಪೊಲೀಸರು ಗುಂಪು ಗುಂಪಾಗಿ ಕುಳಿತವರನ್ನು ಮಾತನಾಡಿದರೆ ಸಾಕು ಪೊಲೀಸರ ಮೇಲೆಯೇ ಎಗರಿ ಬೀಳುತ್ತಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಕೆಳ ಹಂತದ ಪೊಲೀಸರು ಹಫ್ತಾ ವಸೂಲಿ ಮಾಡುತ್ತಿದ್ದಾರೆ. ಹೀಗಾಗಿ ಇದಕ್ಕೆ ಕಡಿವಾಣ ಬೀಳುತ್ತಿಲ್ಲ ಎನ್ನುವ ಆರೋಪವೂ ಇದೆ. ಮಾದಕ ವಸ್ತುಗಳ ಮೂಲ, ಪೂರೈಕೆ ಜಾಲ ಮತ್ತು ಮಾರಾಟಗಾರರನ್ನು ಪತ್ತೆಹಚ್ಚುವ ಅಗತ್ಯವಿದ್ದು, ಪೊಲೀಸರು ಗೌಪ್ಯವಾಗಿ ಕಾರ್ಯಾಚರಣೆ ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದರೂ ಮೇಲಿಂದ ಮೇಲೆ ಕೊಲೆ ಪ್ರಕರಣಗಳು ನಡೆಯುತ್ತಿದ್ದು ಡ್ರಗ್ಸ್ ದಂಧೆಯ ಕರಾಳಮುಖ ಅನಾವರಣಗೊಳಿಸುತ್ತಿದೆ. ಎಸ್ಪಿಯವರು ಗಾಂಜಾ ನಿಯಂತ್ರಣಕ್ಕೆ ಕೇಸ್ ಮಾಡಿರುವುದಾಗಿ ಹೇಳುತ್ತಾರೆ. ಆರೋಪಿಗಳೆಲ್ಲರೂ ಜಾಮೀನು ಪಡೆದು ಬಿಡುಗಡೆಗೊಂಡಿದ್ದಾರೆ. ಎಸ್ಪಿ ವೈಫಲ್ಯದಿಂದಲೇ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ಅವರು ಆರೋಪಿಸಿದ್ದಾರೆ.
ಮಾಹಿತಿ ಸೋರಿಕೆ: ರಾಯಚೂರು ನಗರ ಸೇರಿ ಗ್ರಾಮೀಣದ ಹಲವೆಡೆ ತಡರಾತ್ರಿವರೆಗೂ ಕೆಲವು ಕಿರಾಣಿ ಅಂಗಡಿಗಳು ತೆರೆದಿರುತ್ತವೆ ಎಂಬ ಆರೋಪಗಳಿವೆ. ಕಿರಾಣಿ ಅಂಗಡಿಗಳು, ಪಾನ್ ಶಾಪ್, ಕೆಲವರು ಮನೆಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದು ಈಗ ಗಾಂಜಾ ಮಾರಾಟದ ಕಳ್ಳದಂಧೆ ನಡೆಯುತ್ತಿದೆ, ಸ್ಥಳೀಯರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ ಕಾರಣ ಕೆಲವೆಡೆ ಬಂದ್ ಮಾಡಿದರೂ ಸಂಪೂರ್ಣ ಸ್ಥಗಿತವಾಗಿಲ್ಲ, ಮಾದಕ ವಸ್ತುಗಳ ಮಾರಾಟ, ಸೇವನೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಿದವರ ವಿವರ ಗೌಪ್ಯವಾಗಿಡಬೇಕಾದ ಅಗತ್ಯವೂ ಇದೆ. ಅದರೆ ಕೆಲ ಪೊಲೀಸರು ಇಲಾಖೆಗೆ ದೂರು ನೀಡಿದವರ, ಮಾಹಿತಿ ಸೋರಿಕೆ ಮಾಡುತ್ತಿದ್ದಾರೆ. ಕೆಲವೆಡೆ ದೂರುದಾರರಿಗೆ ಬೆದರಿಕೆ ಹಾಕುತ್ತಿರುವ ಘಟನೆಗಳು ಜರುಗುತ್ತಿವೆ.
ಕೊಳಗೇರಿ ಬಡಾವಣೆಗಳಲ್ಲಿ ಇಲ್ಲ ಜನಜಾಗೃತಿ: ಜಿಲ್ಲೆಯಲ್ಲಿ ನಿರಂತರವಾಗಿ ಅಕ್ರಮ ಮದ್ಯ ಮಾರಾಟ, ಗಾಂಜಾ ಹಾಗೂ ಇತರೆ ಮಾದಕ ವಸ್ತುಗಳ ಸೇವನೆ, ಮಾರಾಟ ನಡೆಯುತ್ತಿದೆ. ಹೆಚ್ಚಾಗಿ ಕೊಳಗೇರಿ ( ಸ್ಲಂ ಪ್ರದೇಶ) ಬಡಾವಣೆಗಳಲ್ಲಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಇಲ್ಲಿ ಸಾಮಾನ್ಯವಾಗಿ ದಲಿತ, ಅಲ್ಪಸಂಖ್ಯಾತರು, ಬಡ ಕೂಲಿ ಕಾರ್ಮಿಕರೇ ವಾಸವಾಗಿದ್ದು ಇವರೇ ಸಂತ್ರಸ್ಥರಾಗುತ್ತಿದ್ದಾರೆ. ಕೊಲೆ, ಅಪರಾಧ ಚಟುವಟಿಕೆಗಳ ನಿಯಂತ್ರಣಕ್ಕೆ ಕೇವಲ ಕಾರ್ಯಾಚರಣೆ ನಡೆಸುವುದಷ್ಟೇ ಸಾಲದು. ಅಪರಾಧಗಳನ್ನು ತಡೆಯುವ ಮುನ್ನೆಚ್ಚರಿಕೆ ಕ್ರಮಗಳೂ ಪರಿಣಾಮಕಾರಿಯಾಗಬೇಕು. ಆದರೆ ಪೊಲೀಸ್ ಇಲಾಖೆ, ಅಬಕಾರಿ ಇಲಾಖೆ ಹಾಗೂ ಆರೋಗ್ಯ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮಗಳು ಹೆಚ್ಚಾಗಿ ನಡೆಸಿಲ್ಲ , ನಡೆಸಿದರೂ ಕಾರ್ಪೋರೇಟ್ ಕೇಂದ್ರಿತ ಸಂಸ್ಥೆಗಳಿಂದ ನಡೆಸುತ್ತಿದ್ದು ಜನ ಸಾಮಾನ್ಯರ ಸಹಭಾಗಿತ್ವ ಕಂಡು ಬರುತ್ತಿಲ್ಲ ಎಂದು ಸ್ಥಳೀಯರಿಂದ ಅಸಮಾಧಾನ ವ್ಯಕ್ತವಾಗುತ್ತಿದೆ.
ಜಿಲ್ಲಾ ಪೊಲೀಸ್ ಇಲಾಖೆಯ ಮಾಹಿತಿಯ ಪ್ರಕಾರ, ಜನವರಿಯಿಂದ ಅಕ್ಟೋಬರ್ 25ರ ವೇಳೆಗೆ ಜಿಲ್ಲೆಯಲ್ಲಿ ಮಾದಕ ವಸ್ತುಗಳಿಗೆ ಸಂಬಂಧಿಸಿದಂತೆ ಒಟ್ಟು 143 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 17 ಪ್ರಕರಣಗಳಲ್ಲಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡು 24 ಆರೋಪಿಗಳನ್ನು ಬಂಧಿಸಲಾಗಿದೆ. ನಗರದ ಗಂಜ್ ವೃತ್ತ, ಹೊಸ ಕೃಷಿ ಉತ್ಪನ್ನ ಹತ್ತಿ ಮಾರುಕಟ್ಟೆ, ಸದರ್ ಬಜಾರ್ ಹಾಗೂ ಗಂಗಾನಿವಾಸ ಬಡಾವಣೆಗಳ ಸುತ್ತಮುತ್ತ ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆಯ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗಿದೆ.
-ಅರುಣಾಂಗ್ಶುಗಿರಿ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಯಚೂರು
ರಾಯಚೂರು ನಗರದಲ್ಲಿ ಡ್ರಗ್ಸ್ ದಂಧೆ ಹೆಚ್ಚಾಗಿದ್ದು, ರಾಜಕೀಯ ಹಿಂಬಾಲಕರೇ ಶಾಮೀಲಾಗಿದ್ದಾರೆ. ಪರೋಕ್ಷವಾಗಿ ಅವರಿಂದ ಬೆಂಬಲ ನೀಡಲಾಗುತ್ತಿದೆ. ನಗರದಲ್ಲಿ 15-20 ವರ್ಷಗಳಿಂದ ಪಿಎಸ್ಐಗಳು, ಸಿಪಿಐಗಳು, ಕೆಳ ಹಂತದ ಅನೇಕ ಪೊಲೀಸರು ಅನ್ಯ ಜಿಲ್ಲೆಗೆ ವರ್ಗಾವಣೆಯಾಗದೆ ಬೀಡು ಬಿಟ್ಟಿದ್ದಾರೆ. ಠಾಣೆಯಿಂದ ಠಾಣೆಗೆ ವರ್ಗಾವಣೆಯಾಗುತ್ತಾರೆ ವಿನಃ ಜಿಲ್ಲೆಯಿಂದ ವರ್ಗಾವಣೆಯಾಗುತ್ತಿಲ್ಲ. ರಾಜಕೀಯ ನಾಯಕರ ಬೆಂಬಲದಿಂದ ಜಿಲ್ಲೆ ಬಿಟ್ಟು ಕದಲುತ್ತಿಲ್ಲ. ಕೂಡಲೇ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು.
-ಎಂ.ವಿರುಪಾಕ್ಷಿ ಜೆಡಿಎಸ್ ಜಿಲ್ಲಾಧ್ಯಕ್ಷ






