Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಗಾಂಧಿ ಸತ್ಯದ ಹತ್ಯೆಗೆ ಮತ್ತೊಂದು ಹೊಸ...

ಗಾಂಧಿ ಸತ್ಯದ ಹತ್ಯೆಗೆ ಮತ್ತೊಂದು ಹೊಸ ಪ್ರಯತ್ನ

ವಾರ್ತಾಭಾರತಿವಾರ್ತಾಭಾರತಿ10 Nov 2026 3:14 PM IST
share
ಗಾಂಧಿ ಸತ್ಯದ ಹತ್ಯೆಗೆ ಮತ್ತೊಂದು ಹೊಸ ಪ್ರಯತ್ನ

ಎಳ್ಳು ಮೊನೆಯಷ್ಟೂ ಇತಿಹಾಸದ ಅರಿವಿಲ್ಲದ, ಓದಿನ ಬಲವಿಲ್ಲದ ತಿಳಿಗೇಡಿಯೊಬ್ಬ ಬಟಾ ಬಯಲಿನಲ್ಲಿ ನಿಂತು ಹೇಸಿಗೆ ಮಾಡಿಕೊಂಡಂತಿರುವ ಒಂದು ನಾಟಕ ಸಹಜವಾಗಿಯೇ ವಿಪರೀತ ಸದ್ದು ಮಾಡುತ್ತಿದೆ. ಗಾಂಧೀಜಿಯ ಬಗ್ಗೆ ದೇಹ-ಮನಸ್ಸುಗಳ ಪೂರಾಪೂರ ದ್ವೇಷವನ್ನೇ ತುಂಬಿಕೊಂಡಿರುವ ನೀಚಾತಿನೀಚನೊಬ್ಬ ಕಾರಿದ ವಿಷ ಸಮಾಜಕ್ಕೆ ಸಿಡಿಯಲಾರಂಭಿಸಿದೆ.

84 ಪುಟಗಳ ಈ ಪುಸ್ತಕದಲ್ಲಿರುವುದು ಕೇವಲ ಒಂದೇ ಅಂಶದ ಘೋಷವಾಕ್ಯ: ‘ಗಾಂಧಿ ಎಂಬ ಮಹಾ ದೇಶದ್ರೋಹಿಯನ್ನು ಗೋಡ್ಸೆ ಎಂಬ ಪರಮ ದೇಶಪ್ರೇಮಿ ಕೊಂದು ಹಾಕಿದ’

ಇಷ್ಟೇ ಇಷ್ಟನ್ನು ಹೇಳುವುದಕ್ಕೆ ಎಷ್ಟೆಲ್ಲ ಕಷ್ಟ ಪಟ್ಟಿರುವ ‘ಈ ಶತಮಾನದ ಅತಿಶ್ರೇಷ್ಠ ಲೇಖಕ’ ಅಡ್ಡಂಡ ಸಿ.ಕಾರ್ಯಪ್ಪ, ಈ ನಾಟಕ ರಚನೆಗೆ ತಾವು ಪರಾಮರ್ಶಿಸಿದ್ದೇವೆ ಎಂದು ಹೇಳಿಕೊಳ್ಳುವ ಐವತ್ತು ಪುಸ್ತಕಗಳ ಪಟ್ಟಿಯನ್ನೇ ನೀಡಿ, ತಮ್ಮ ಅಧ್ಯಯನಶೀಲತೆಯನ್ನು ಸಾಬೀತುಪಡಿಸುವ ಯತ್ನ ನಡೆಸಿದ್ದಾರೆ. ಅವರು ಅವೆಲ್ಲವನ್ನೂ ನಿಜವಾಗಿಯೂ ಓದಿದ್ದರೆ , ಐತಿಹಾಸಿಕ ಸತ್ಯಗಳು ನಿಜಕ್ಕೂ ಸಾಯುತ್ತಲೇ ಇರಲಿಲ್ಲ.

‘ಗಾಂಧಿ ಎಂಬ ಮುದುಕ, ವಂಚಕ, ದೇಶದ್ರೋಹಿ..’ ಎಂಬ ಶಬ್ದಗಳನ್ನು ಎಗ್ಗಿಲ್ಲದೆ ಬಳಸುವ ಈ ಸಿಗ್ಗುಗೇಡಿ, ತನ್ನ ಅಸಹ್ಯ ನಡವಳಿಕೆಯನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸಮರ್ಥಿಸಿಕೊಳ್ಳಲು ಮುಂದಾಗುವುದು ನಿಜಕ್ಕೂ ಸಂವಿಧಾನಕ್ಕೆ ಮಾಡಿರುವ ಅತಿದೊಡ್ಡ ಅಪಚಾರ.

ಹೀಗೆಂದ ಮಾತ್ರಕ್ಕೆ ಗಾಂಧೀಜಿ ಎಲ್ಲ ಬಗೆಯ ಪರಾಮರ್ಶೆಗಳಿಂದ ಮುಕ್ತರೇ, ವಿವಾದ, ಟೀಕೆಗಳಿಗೆ ಅತೀತರೇ? ಅಲ್ಲ, ಆಗಬಾರದು ಕೂಡ. ಆದರೆ ಭಾಷೆಗೂ ಒಂದು ಚೆಂದವಿದೆ. ಸಂಸ್ಕೃತಿ-ಸಂಸ್ಕಾರವಿದೆ. ಘನತೆ-ಗಾಂಭೀರ್ಯವಿದೆ. ತನ್ನನ್ನು ತಾನು ಸನಾತನಿ ಎಂದು ಕರೆದುಕೊಳ್ಳುವ ಈ ಅವಿವೇಕಿ, ಚರಿತ್ರೆಯ ಹಂಗೇ ತನಗೆ ಬೇಡ ಎಂದು ತೀರ್ಮಾನಿಸಿದಂತಿದೆ ಈ ಪುಸ್ತಕ.

ಕಾರ್ಯಪ್ಪನವರು ಈ ಹಿಂದೆಯೂ ಟಿಪ್ಪು ಕನಸು ನಾಟಕವನ್ನೇ ತಿರುಚಿ, ಟಿಪ್ಪು ನಿಜ ಕನಸುಗಳು ಎಂದು ಮಾರ್ಪಾಟು ಮಾಡಿ ಬೆತ್ತಲಾಗಿದ್ದು ಈಗ ಇತಿಹಾಸ. ನಿಜ ಮಹಾತ್ಮಾ ಅಂಬೇಡ್ಕರ್, ಕರಿನೀರ ವೀರ ಮೊದಲಾದ ನಾಟಕಗಳ ಕತೃವಾಗಿರುವ ಅಡ್ಡಂಡ, ಚರಿತ್ರೆಯನ್ನೂ ಅಡ್ಡಾದಿಡ್ಡಿಯಾಗಿಯೇ ಚಿತ್ರಿಸಲು ಮುಂದಾಗುತ್ತಿರುವುದಕ್ಕೆ ‘ಗಾಂಧಿ ಹತ್ಯೆಯ ಸತ್ಯ’ ಸಾಕ್ಷಿಯಾಗಿದೆ.

‘ನಾನೇಕೆ ಈ ನಾಟಕ ಬರೆದೆ’ ಎಂಬ ಹನ್ನೊಂದು ಪುಟಗಳ ಸುದೀರ್ಘ ಮುನ್ನುಡಿಯಲ್ಲಿಯೇ ಉದ್ದೇಶ ಸ್ಪಷ್ಟವಾಗುತ್ತದೆ. ಗಾಂಧೀಜಿ ಸ್ವಾತಂತ್ರ್ಯಸಂಗ್ರಾಮದ ನೇತೃತ್ವ ವಹಿಸಿದ್ದೇ ಸುಳ್ಳು, ಅವರ ನಾಯಕತ್ವದಲ್ಲಿಯೇ ನಾವು ಸ್ವಾತಂತ್ರ್ಯ ಪಡೆದ್ದಿದ್ದೇವೆ ಎಂಬುದೂ ಸುಳ್ಳು, ಈ ದೇಶ ವಿಭಜನೆಯ ಘೋರಕ್ಕೆ ನೇರಾನೇರ ಕಾರಣಕರ್ತರೇ ಗಾಂಧೀಜಿ, ಹಿಂದೂ ಸಮಾಜಕ್ಕೆ ಗಾಂಧೀಜಿ ಮಾಡಿರುವ ಅನ್ಯಾಯಗಳ ಪಟ್ಟಿಯೇ ಬಲುದೊಡ್ಡದು, ಗಾಂಧೀಜಿಯನ್ನು ರಾಷ್ಟ್ರಪಿತ ಎಂದು ಕರೆದದ್ದೇ ದೊಡ್ಡ ತಮಾಷೆ..ಎಂಬೆಲ್ಲ ಮಾತುಗಳನ್ನು ಓತಪ್ರೋತವಾಗಿ ದಾಖಲಿಸಲಾಗಿದೆ.

ಅಹಿಂಸಾ ಪರಮೋ ಧರ್ಮಃ ಎಂಬ ಮಾತನ್ನು ಹೇಳಿರುವ ಭಗವದ್ಗೀತೆಯೇ ಅಹಿಂಸಾ ಸಾಧು ಹಿಂಸೇತಿ ಶ್ರೇಯಾನ್ ಧರ್ಮಪರಿಗ್ರಹಾಃ ಎಂಬ ಶಬ್ದವನ್ನೂ ಉಚ್ಚರಿಸುತ್ತದೆ ಎಂಬ ಗಿಳಿಪಾಠ ಒಪ್ಪಿಸುವ ಲೇಖಕರು, ಸನಾತನ ಧರ್ಮದ ನೀತಿ, ಧರ್ಮಬದ್ಧವಾದ ಹಿಂಸೆಗೂ ಅಷ್ಟೇ ದೊಡ್ಡ ಬೆಲೆ ಇದೆ ಎಂದೆನ್ನುವ ಮೂಲಕ ಹಿಂಸೆಯೂ ಇಂದಿಗೆ ಅನಿವಾರ್ಯ ಎಂಬ ಸಾರವನ್ನು ಸಾರಲು ಮುಂದಾಗಿದ್ದಾರೆ.

ಸಾವು-ನೋವುಗಳನ್ನು ಕಾಲಕಸವಾಗಿ ಕಂಡು, ದೇಶ-ವಿದೇಶಗಳಲ್ಲಿ ನೇಣುಗಂಬವನ್ನೇರಿ ತಮ್ಮ ಜೀವನ ಸಾರವನ್ನೇ ಬಲಿದಾನ ಮಾಡಿ, ಹುತಾತ್ಮರಾದವರ ಉದಾಹರಣೆಗಳಿಂದ ನಮ್ಮ ರಾಷ್ಟ್ರಮಾನಸ ಉದ್ದೀಪನಗೊಂಡಿದೆ ಎಂಬ ಮಾತನ್ನು ಬರೆಯುವ ಅಡ್ಡಂಡ ಸಾಹೇಬರಿಗೆ, ಸುದೀರ್ಘ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಂಗ್ರಾಮದಲ್ಲಿ ಮೃತರಾದ ಸರಿಸುಮಾರು 13,500ಕ್ಕೂ ಹೆಚ್ಚು ಹುತಾತ್ಮರ ಪಟ್ಟಿಯಲ್ಲಿ ಸಂಘದ ಒಬ್ಬರೇ ಒಬ್ಬ ಕಾರ್ಯಕರ್ತರೂ ಇಲ್ಲವೆಂಬುದನ್ನು ಹೇಳುವಷ್ಟು ಧೈರ್ಯವಿಲ್ಲ. (ಭಾರತ ಸರಕಾರದ ಸಂಸ್ಕೃತಿ ಸಚಿವಾಲಯ ಮತ್ತು ಭಾರತೀಯ ಇತಿಹಾಸ ಸಂಶೋಧನಾ ಮಂಡಳಿ ಜಂಟಿಯಾಗಿ ಸಿದ್ಧಪಡಿಸಿರುವ ‘ಡಿಕ್ಷನರಿ ಆಫ್ ಮಾರ್ಟಿರ್ಸ್’ ಅಂಕಿ-ಅಂಶ).

ಆರೆಸ್ಸೆಸ್ ಸ್ಥಾಪಕ ಡಾ.ಕೇಶವ ಬಲಿರಾಂ ಹೆಡಗೇವಾರ್ ಅವರು ಕಾಂಗ್ರೆಸ್‌ನಲ್ಲಿದ್ದಾಗ ಸ್ವಾತಂತ್ರ್ಯ ಹೋರಾಟದ ಖಿಲಾಫತ್ ಚಳವಳಿ ಮತ್ತು ಜಂಗಲ್ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಜೈಲುವಾಸ ಅನುಭವಿಸಿದ್ದರು ಎಂಬುದನ್ನು ಹೊರತುಪಡಿಸಿದರೆ, ಆರೆಸ್ಸೆಸ್ ಗಾಂಧೀಜಿಯವರ ನೇತೃತ್ವದ ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ ಅಥವಾ 1942ರ ಕ್ವಿಟ್ ಇಂಡಿಯಾ ಚಳವಳಿಯಂತಹ ಬೃಹತ್ ಸ್ವಾತಂತ್ರ್ಯ ಹೋರಾಟಗಳಲ್ಲಿ ಅಧಿಕೃತವಾಗಿ ಪಾಲ್ಗೊಂಡಿರಲಿಲ್ಲ ಎಂಬುದು ಮುಖ್ಯವಾಹಿನಿಯ ಇತಿಹಾಸದ ಸತ್ಯ.

ಇದರ ಜತೆಗೆ ಕೆಲವು ಸ್ವಯಂಸೇವಕರು ಅಥವಾ ಬೆಂಬಲಿಗರು 1942ರ ‘ಚಿಮೂರ್’ ಹೋರಾಟದಂತಹ ಸ್ಥಳೀಯ ಘಟನೆಗಳಲ್ಲಿ ಕೆಲ ಭಾಗವಹಿಸಿದ್ದರು ಎಂದು ಹೇಳಲಾಗುತ್ತದಾದರೂ, ಒಟ್ಟಾರೆಯಾಗಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣತ್ಯಾಗ ಮಾಡಿದ ಆರೆಸ್ಸೆಸ್ ನಾಯಕರು ಅಥವಾ ಅಧಿಕೃತ ಹುತಾತ್ಮರ ಪಟ್ಟಿ ಇತಿಹಾಸದಲ್ಲಿ ದಾಖಲಾಗಿಲ್ಲ. ಹೀಗಿದ್ದರೂ ನಾವೇ ಸ್ವಾತಂತ್ರ್ಯವೀರರು, ನಮ್ಮಿಂದಲೇ ತಾಯಿ ಭಾರತಿಯ ಸಂಕೋಲೆ ಹರಿದದ್ದು ಎಂದು ಆರ್ಭಟಿಸುವ ದಾರ್ಷ್ಟ್ಯ ಇಂಥವರಿಗೆ ಇನ್ನೂ ಕಡಿಮೆಯಾಗಿಲ್ಲ ಎಂಬುದು ಅತ್ಯಂತ ನೋವಿನ ಸಂಗತಿ.

ಗಾಂಧೀಜಿಯವರೇ ಭಾರತ ವಿಭಜನೆಗೆ ಮೂಲ ಕಾರಣ ಎಂಬ ಪ್ರತಿಪಾದನೆಯ ಈ ನಾಟಕ , ತನ್ನ ಈ ನಿಲುವಿನಿಂದಾಗಿಯೇ ಐತಿಹಾಸಿಕವಾಗಿ ಸೋಲುತ್ತದೆ. ಮಹಮದೀಯರೂ ಮೂಲತಃ ಹಿಂದೂಗಳೇ, ಧರ್ಮದ ಆಧಾರದಲ್ಲಿ ದೇಶವನ್ನು ಒಡೆಯಬೇಡಿ. ಹಾಗೂ ಒಂದು ವೇಳೆ ವಿಭಜನೆ ಆಗುವುದೇ ಆದರೆ, ನನ್ನ ಶವದ ಮೇಲಾಗಲಿ ಎಂದು ಖಡಾಖಂಡಿತವಾಗಿ ಹೇಳಿದ್ದ ಗಾಂಧೀಜಿಯವರನ್ನು ಖಳನಾಯಕನಂತೆ ಚಿತ್ರಿಸಿರುವುದೇ ಈ ನಾಟಕದ ಅಸಹ್ಯಕರ ಅಂಶ.

ಈ ನಾಟಕವೇ ಒಂದು ದೊಡ್ಡ ಸುಳ್ಳಿನ ಕಂತೆ. ಬಾಲಿಶವಾದ ಗಪದ್ಯದ ಮೂಲಕ ತೆರೆ ಸರಿಸುವ ನಾಟಕದಲ್ಲಿ ನೆಹರೂ ಸ್ವಾತಂತ್ರ್ಯ ಭಾಷಣ ಮಾಡುತ್ತಾರೆ. ಮಾತು ಮುಗಿಯುತ್ತಿದ್ದಂತೆ ವಿಜಯೋತ್ಸವ ಆರಂಭಗೊಳ್ಳುತ್ತದೆ. ಜನ ಆನಂದತುಂದಿಲರಾಗಿ ‘ದೇದಿ ಹಮೇ ಆಝಾದಿ, ಬಿನಾ ಖಡ್ಗ್ ..’ ಎಂಬ ಹಾಡು ಹಾಡುತ್ತಾ ಕುಣಿಯುತ್ತಾರೆ.

ದೇದಿ ಹಮೇ ಆಝಾದಿ, ಬಿನಾ ಖಡ್ಗ್, ಬಿನಾ ಢಾಲ್ ಎಂಬ ಹಾಡು ಹುಟ್ಟಿದ್ದೇ 1954ರಲ್ಲಿ. ಕವಿ ಪ್ರದೀಪ್ ಜಾಗೃತಿ ಸಿನೆಮಾಕ್ಕಾಗಿ ಬರೆದ ಈ ಹಾಡನ್ನು ಅಡ್ಡಂಡ ಕಾರ್ಯಪ್ಪ 1947ರಲ್ಲಿಯೇ ಕಟ್ಟಿದ್ದು ಎಂಬಂತೆ ಮೊದಲ ಹಸಿಸುಳ್ಳು ಕಟ್ಟುತ್ತಾರೆ. ಅತ್ತ ಸ್ವಾತಂತ್ರ್ಯದ ಉತ್ಸವ ನಡೆಯುತ್ತಿರುವಾಗ ಇತ್ತ ರೈಲುಗಳಲ್ಲಿ ಬಂದ ಹಿಂದೂಗಳ ಹೆಣದ ರಾಶಿ ಎಂದು ಉದ್ಗರಿಸುತ್ತಾರೆ. ದೇಶ ವಿಭಜನೆಯ ಕಾವಿನಲ್ಲಿ ಹಿಂದೂ, ಮುಸ್ಲಿಮ್, ಕ್ರೈಸ್ತ, ಸಿಖ್ಖರೆಲ್ಲರ ಹೆಣಗಳೂ ಇದ್ದವೆಂಬ ಸತ್ಯವನ್ನೇ ಮುಚ್ಚಿಟ್ಟು ಹಿಂದೂ ತುಷ್ಟೀಕರಣದ ಮಾತುಗಳನ್ನು ಕಟ್ಟುತ್ತಾರೆ.

ಇನ್ನೂ ದೇಶ ವಿಭಜನೆಗೊಂಡು ಒಂದು ದಿನವೂ ಕಳೆದಿಲ್ಲ. ಆಗಲೇ ಅಡ್ಡಂಡರ ಪತ್ರಕರ್ತನೊಬ್ಬ ‘ಈ ಪಾಕಿಗಳು ಮನುಷ್ಯರೇ ಅಲ್ಲ, ರಾಕ್ಷಸರು’ ಎಂದು ಗುಡುಗುತ್ತಾನೆ. ಸ್ವಾತಂತ್ರ್ಯದ ಮಧ್ಯರಾತ್ರಿಯ ಸಮಯದಲ್ಲಿ ನೌಕಾಲಿಯಲ್ಲಿದ್ದ ಮಹಾತ್ಮಾ ಗಾಂಧೀಜಿಯವರನ್ನು ಸಾಂಕೇತಿಕವಾಗಿ ಎಳೆತರುವ ಕಾರ್ಯಪ್ಪ, ನೊಂದ ಪೊಲೀಸಪ್ಪ, ಪತ್ರಕರ್ತ ಹಾಗೂ ಕೆಲವು ಮಹಿಳೆಯರೊಡನೆ ಮುಖಾಮುಖಿಯಾಗಿಸುತ್ತಾರೆ. ಅಲ್ಲೋರ್ವ ಮಹಿಳೆ ಗಾಂಧೀಜಿಗೆ ನೇರವಾಗಿಯೇ ನಮ್ಮ ಶಾಪ ನಿಮಗೆ ತಟ್ಟುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಹಿಂದೂರಾಷ್ಟ್ರ ಪತ್ರಿಕೆಯ ಸಂಪಾದಕ ಗೋಡ್ಸೆಯವರ ವೀರಾವೇಶ, ಕಾಶ್ಮೀರದ ಕಬಳಿಕೆ, ಮುಸ್ಲಿಮ್ ರಾಷ್ಟ್ರಕ್ಕೆ 55 ಕೋಟಿ ರೂಪಾಯಿ ಕೊಟ್ಟರೆಂಬ ಬಡಬಡಿಕೆ, ಉಕ್ಕು ಕರಗಿ ಗಾಂಧೀಜಿಗೆ ತಲೆ ಬಾಗುತ್ತದೆ ಎಂದು ಪಟೇಲರ ಬಗ್ಗೆಯೂ ಹೀನಾಯ ಹೇಳಿಕೆ, ಆಪ್ಟೆ, ಕರ್ಕರೆ, ಪರ್ಚುರೆಗಳೆಲ್ಲ ಸೇರಿ ಹತ್ಯೆಗೆ ಸಂಚು ರೂಪಿಸುವ ಸಂಗತಿ ದೇಶಪ್ರೇಮದ ಸರಕಾಗಿ ಕಾಣಿಸಿಕೊಳ್ಳುತ್ತದೆ. ಮತ್ತೊಂದು ಅಂಕದಲ್ಲಿ ನೆಹರೂ ಪ್ರಧಾನ ಮಂತ್ರಿ ಕಚೇರಿಯಿಂದಲೇ ಲೇಡಿ ಮೌಂಟ್ ಬ್ಯಾಟನ್ ಅವರೊಂದಿಗೆ ಟೆಲಿಫೋನ್‌ನಲ್ಲಿ ಸಲ್ಲಾಪದಿಂದ ಮಾತನ್ನಾಡುತ್ತಾರೆ. ಇದೇ ಸಂದರ್ಭಕ್ಕೆ ಸರಿಯಾಗಿ ಕೋಪೋದ್ರಿಕ್ತರಾಗಿ ಒಳ ಬರುವ ಸರ್ದಾರ್ ವಲಭಬಾಯ್ ಪಟೇಲ್, ನಡೆಯುತ್ತಿರುವ ಗಲಭೆ-ಕೊಲೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಇತಿಹಾಸದ ಯಾವ ಪುಟ ತಿರುವಿದರೂ , ನೆಹರೂ-ಪಟೇಲ್ ಬಹಿರಂಗವಾಗಿ ಕಿತ್ತಾಡಿಕೊಂಡ ಯಾವುದೇ ಒಂದು ಘಟನೆಯೂ ಕಾಣಸಿಗುವುದಿಲ್ಲ. ಆದರೆ ಕಾರ್ಯಪ್ಪನವರ ನಾಟಕಕಾರನ ಒಳಗಣ್ಣಿಗೆ ಎಲ್ಲವೂ ಸುಸ್ಪಷ್ಟವಾಗಿ ಕಂಡುಬಿಟ್ಟಿವೆ. ಈ ಇಬ್ಬರ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಮತ್ತು ಸಂಪುಟ ಸಭೆಗಳಲ್ಲಿ ಬಿಸಿಬಿಸಿ ಚರ್ಚೆಗಳು ನಡೆದಿದ್ದರೂ, ಸಂಸತ್‌ನ ಒಳಗೆ ಅವರು ತೀವ್ರವಾಗಿ ಜಗಳವಾಡಿದ ಉದಾಹರಣೆಗಳಿಲ್ಲ.

ಮತ್ತೆ ಟಿಪ್ಪುನಿಜ ಕನಸುಗಳು ನಾಟಕದಂತೆಯೇ ಇಲ್ಲಿಯೂ ತಾಯಿ ಪ್ರತ್ಯಕ್ಷರಾಗುತ್ತಾರೆ. ಗೋಡ್ಸೆಯ ಕನಸಿನಲ್ಲಿಯೂ ಬರುತ್ತಾರೆ. ತಾಯಿ ಭಾರತಿ, ಕೃಷ್ಣ-ಶಿಶುಪಾಲ,ಗಾಂಧಿ ಎಂಬ ದುಷ್ಟ ತಂತ್ರಗಾರ, ಕಡೆಗೆ ಚಿತ್ಪಾವನ ವಂಶದ ಘನತೆಯನ್ನು ಸಾರುತ್ತಾ ಆಘಾತಕ್ಕೆ ಒಳಗಾಗುವುದರೊಂದಿಗೆ ಅಂಕವೊಂದು ಸರಿಯುತ್ತದೆ.

ಕೊನೆಯ ಅಂಕದಲ್ಲಿ ನಾಥೂರಾಂ ಗೋಡ್ಸೆ ನಾನೇಕೆ ಗಾಂಧಿಯನ್ನು ವಧೆ ಮಾಡಿದೆ ಎಂಬುದನ್ನು ನ್ಯಾಯಪೀಠಕ್ಕೆ ವಿವರಿಸುವ ದೃಶ್ಯವಿದೆ. ಇಲ್ಲಿ ಹತ್ಯೆಯಲ್ಲ, ವಧೆ ಎಂಬ ಪ್ರಯೋಗವಿದೆ. ಗಾಂಧಿಯನ್ನು ಕೊಂದಿರುವುದಕ್ಕೆ ನಾನು ಕ್ಷಮೆ ಯಾಚಿಸುವುದಿಲ್ಲ ಎಂಬ ಮಾತನ್ನೇ ವೀರೋಚಿತ ಎಂಬಂತೆ ಬಿಂಬಿಸಲಾಗಿದೆ. ಇದೇ ಈ ನಾಟಕದ ಹೈಲೈಟ್ ಕೂಡಾ ಆಗಿದೆ.

ಕಡೆಯಲ್ಲಿ ಗೋಡ್ಸೆ ಆಡುವ ಮಾತುಗಳಿವು: ಯುವರ್ ಆನರ್, ಹಾಡ ಹಗಲಿನಲ್ಲಿ ಸರಿಸುಮಾರು 400 ಜನರ ಎದುರು ಗಾಂಧೀಜಿಯವರತ್ತ ಗುಂಡು ಹಾರಿಸಿದ್ದೇನೆ. ನನ್ನ ಗುಂಡೇಟಿನಿಂದ ಅಹ್ ಎಂದು ಅವರು ಕುಸಿದರು. ನಾನು ಓಡಿ ಹೋಗಲಿಲ್ಲ. ಆವೇಶಕ್ಕೆ ಒಳಗಾಗಲಿಲ್ಲ. ಸ್ಥಿತಪ್ರಜ್ಞನಂತೆ ಇದ್ದೆ. ‘ಹೇ ರಾಮ್ ‘ ಎಂಬ ಶಬ್ದ ಅವರ ಚೇಲರು ಅವರ ಬಾಯಿಗೆ ತುರುಕಿದ್ದು. ಈ ಅಖಂಡ ಹಿಂದೂರಾಷ್ಟ್ರ ಒಂದಾಗಲಿ...ಹೀಗೆಯೇ ಬಡಬಡಿಕೆ ಸಾಗುತ್ತದೆ.

ವೀರಗೀತೆಯೊಂದಿಗೆ ನಾಟಕವೂ ಮುಗಿಯುತ್ತದೆ.

ಎರಡು ಪ್ರಶ್ನೆಗಳು

@ ಗಾಂಧೀಜಿಯವರ ಹತ್ಯೆಗೆ ದೇಶ ವಿಭಜನೆ ಮತ್ತು ಪಾಕಿಸ್ತಾನಕ್ಕೆ 55 ಕೋಟಿ ರೂ.ಘೋಷಣೆಯೇ ಕಾರಣ ಎಂಬ ಗೋಡ್ಸೆ ಹೇಳಿಕೆಯನ್ನು ಈ ನಾಟಕಕಾರ ಸುಖಾಸುಮ್ಮನೆ ಪ್ರತಿಪಾದಿಸುತ್ತಿರುವುದರ ಹಿಂದೆ ಯಾವ ದುಷ್ಟ ಶಕ್ತಿಗಳನ್ನು ಮೆಚ್ಚಿಸುವ ಹುನ್ನಾರವಿದೆ..?

@ 1932ರ ಪೂನಾ ಹತ್ಯಾ ಯತ್ನ, 1944ರ ಜುಲೈ ಪಂಚಗನಿಯಲ್ಲಿ ಹಾಗೂ 1944ರಲ್ಲೇ ಬಾಂಬೆಯಲ್ಲಿ ಇದೇ ಗೋಡ್ಸೆ ನಡೆೆಸಿದ ಕೊಲೆ ಪ್ರಯತ್ನಕ್ಕೆ ಯಾವ ಕಾರಣವಿತ್ತು..,ಆಗ ವಿಭಜನೆಯೂ ಆಗಿರಲಿಲ್ಲ, 55 ಕೋಟಿ ರೂ. ಪ್ರಸ್ತಾವವೂ ಇರಲಿಲ್ಲ. ಇದಕ್ಕೆ ಉತ್ತರ ನೀಡಬೇಕಾದ ನಾಟಕ, ಈ ಸಂಗತಿಗಳನ್ನು ಜಾಣ ಮೌನಕ್ಕೆ ಸರಿಸಿರುವುದೇಕೆ..?

share
ವಾರ್ತಾಭಾರತಿ
ವಾರ್ತಾಭಾರತಿ
Next Story
X