ಕಾಫಿ ಸಂಶೋಧನಾ ಕೇಂದ್ರಕ್ಕೆ ನೂರರ ಸಂಭ್ರಮ: ಪರಿಹಾರ ಕಾಣದ ಬೆಳಗಾರರ ಸಮಸ್ಯೆ

17ನೇ ಶತಮಾನದಲ್ಲಿ ಮಕ್ಕಾದಿಂದ ಮರಳುವಾಗ ಬಾಬ ಬುಡನ್ ಎಂಬ ಸಂತರು ಅಡಗಿಸಿಕೊಂಡು ತಂದ ಏಳು ಕಾಫಿ ಬೀಜಗಳನ್ನು ಚಿಕ್ಕಮಗಳೂರಿನ ಚಂದ್ರದ್ರೋಣ ಬೆಟ್ಟಗಳಲ್ಲಿ ನೆಟ್ಟು ಕಾಫಿಯನ್ನು ಭಾರತಕ್ಕೆ ಪರಿಚಯಿಸಿದರು. ಬ್ರಿಟಿಷರು 19ನೇ ಶತಮಾನದಲ್ಲಿ ಕಾಫಿಯನ್ನು ಒಂದು ಉದ್ಯಮವಾಗಿ ಬೆಳೆಸಿದರು. 100 ವರ್ಷಗಳ ಹಿಂದೆ ಮೈಸೂರು ಸಂಸ್ಥಾನದ ಕೃಷಿ ನಿರ್ದೇಶಕರಾದ ಡಾ.ಲೆಸ್ಲಿ ಕೋಲ್ಮನ್ ಅವರು ಮೈಸೂರು ಕಾಫಿ ಎಕ್ಸ್ ಪರಿಮೆಂಟ್ ಸ್ಟೇಷನ್ ಆರಂಭಿಸಿ ಕಾಫಿಯನ್ನು ಬಾಧಿಸುತ್ತಿದ್ದ ರೋಗಗಳನ್ನು ಎದುರಿಸಲು ಮತ್ತು ಕಾಫಿ ಕೃಷಿಯನ್ನು ವಿಸ್ತರಿಸಲು ಬುನಾದಿ ಹಾಕಿದರು.
ಈಗ ನೂರು ವರ್ಷಗಳ ಸಂಭ್ರಮ ಅಚರಿಸುತ್ತಿರುವ ಕಾಫಿ ಸಂಶೋಧನಾ ಕೇಂದ್ರ(ಸಿ.ಸಿ.ಆರ್.ಐ.) 1940ರ ನಂತರ ಕೇಂದ್ರ ಸರಕಾರದ ಆಡಳಿತಕ್ಕೆ ಒಳಪಟ್ಟಿತು. ಬಾಳೆಹೊನ್ನೂರು ಸೇರಿದಂತೆ ಐದು ರಾಜ್ಯಗಳಲ್ಲಿ ಕಾಫಿ ಸಂಶೋಧನಾ ಕೇಂದ್ರ ತನ್ನ ಸಂಶೋಧನಾ ಕೇಂದ್ರ ಹೊಂದಿದೆ.
ಸಂಭ್ರಮದ ಶತಮಾನೋತ್ಸವ ಆಚರಿಸುತ್ತಿರುವ ಕಾಫಿ ಮಂಡಳಿ '7ರಿಂದ 7 ಲಕ್ಷ ಮೆಟ್ರಿಕ್ ಟನ್' ಎಂದು ಘೋಷಣೆ ಮಾಡಿಕೊಂಡಿದೆ. ಆದರೆ ಈ ಘೋಷಣೆಗೆ ಮಂಡಳಿಯ ಸಿದ್ದತೆ ಮತ್ತು ಕಾಫಿ ಬೆಳೆಯಲು ಬೇಕಾದ ಭೂಮಿಯ ಬಗ್ಗೆ ಯಾವುದೇ ಮಾಹಿತಿ ಬೋರ್ಡ್ ಬಳಿ ಮಾಹಿತಿ ಇಲ್ಲ. ಹಾಲಿ ಕಾಫಿ ಬೆಳೆ ಬೆಳೆಯುತ್ತಿರುವ ಭೂಮಿಯನ್ನು ಉಳಿಸಿಕೊಳ್ಳುವ ಬಗ್ಗೆ ಕೂಡ ಯಾವುದೇ ಪ್ರಯತ್ನ ನೂರರ ಸಂಭ್ರಮದಲ್ಲಿ ಕಾಣುತ್ತಿಲ್ಲ.
2024-25 ಸಾಲಿನಲ್ಲಿ ದೇಶದ ಕಾಫಿಯ ಒಟ್ಟು ಉತ್ಪಾದನೆ ಸುಮಾರು 3.63 ಲಕ್ಷ ಟನ್. 2047ಕ್ಕೆ 7 ರಿಂದ 7 ಲಕ್ಷ ಟನ್ ಕಾಫಿ ಉತ್ಪಾದನೆ ಆಗಬೇಕಾದರೆ ಬಹುತೇಕ ಈಗಿರುವ ಕಾಫಿ ಉತ್ಪಾದನಾ ಪ್ರದೇಶ ಎರಡು ಪಟ್ಟು ಆಗಬೇಕು. ಆದರೆ ಈಗಿರುವ ಕಾಫಿ ಉತ್ಪಾದನಾ ಪ್ರದೇಶವನ್ನು ಕಾಫಿ ಬೆಳೆಗಾರರು ಉಳಿಸಿಕೊಳ್ಳುವುದು ಕಷ್ಟಕರವಾಗಿದೆ.
ಹವಾಮಾನ ವೈಪರೀತ್ಯ, ರೋಗ ಕಾಫಿ ಉತ್ಪಾದನೆ ಮೇಲೆ ಭಾರೀ ಪರಿಣಾಮ ಬೀರಿದೆ. CCRI ತನ್ನ ಸಂಶೋಧನಾ ಕಾರ್ಯ ತನ್ನ ಇತಿಮಿತಿಯಲ್ಲಿ ಯಶಸ್ವಿಯಾಗಿ ನಡೆಸುತ್ತಿದೆ. ಆದರೆ ಕೇಂದ್ರ ಸರಕಾರದ ವಾಣಿಜ್ಯ ಇಲಾಖೆ ಮತ್ತು ಕಾಫಿ ಬೋರ್ಡ್ ಕಾಫಿ ಬೆಳೆಯನ್ನು ಉಳಿಸಿ ಬೆಳೆಸುವ ಯಾವುದೇ ಕಾರ್ಯ ಯೋಜನೆಯನ್ನು ಹೊಂದಿರುವ ಬಗ್ಗೆ ಆರ್ಥಿಕ ಯೋಜನೆಯು ಕೇಂದ್ರ ಸರಕಾರದ ಬಜೆಟ್ ನಲ್ಲಿ ಇಲ್ಲ.
ಅನಧಿಕೃತವಾಗಿ ಕಂದಾಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಕಾಫಿ ಬೆಳೆಯುತ್ತಿರುವ ಭೂಮಿ ಉಳಿಸಿಕೊಳ್ಳುವ ಬಗ್ಗೆಯಾಗಲಿ, ಕೇಂದ್ರ ಸರಕಾರದ ಅರಣ್ಯ ಕಾಯ್ದೆಯಿಂದ ಬಾಧಿತರಾಗಿರುವ ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಯ ಬೆಳೆಗಾರರ ಒತ್ತುವರಿ ಸಮಸ್ಯೆ, ಡೀಮ್ಡ್ ಫಾರೆಸ್ಟ್, ಸೆಕ್ಷನ್ -4, ಡಿ.ಸಿ.ಫಾರೆಸ್ಟ್, ಅಭಯಾರಣ್ಯದ ಬಫರ್ ಝೋನ್, ಪಾರಂಪಾರಿಕ ಅರಣ್ಯ ಮಂಜೂರು ಕಾನೂನು ಸಮಸ್ಯೆ ಬಗೆಹರಿಸುವ ಬಗ್ಗೆ ಒಂದೇ ಒಂದು ವಿಚಾರ ಗೋಷ್ಠಿ ಇಲ್ಲ.
ಕಾಫಿ ಬೆಳೆ ಒಂದು ಉದ್ದಿಮೆ ಎಂದು ಗುರುತಿಸಿರುವುದರಿಂದ ಕಾಫಿ ಬೆಳೆಗಾರರ ಸಾಲ ಸರ್ಫೆಸಿ ಕಾಯ್ದೆಯಡಿಯಲ್ಲಿದೆ. ಇದರಿಂದ ಸಾಲ ಮಾಡಿಕೊಂಡು ಕಷ್ಟಕ್ಕೆ ಸಿಲುಕಿದ ಅನೇಕ ಕಾಫಿ ಬೆಳೆಗಾರರು ತಮ್ಮ ತೋಟಗಳನ್ನು ಮೂರು ಕಾಸಿಗೆ ಮಾರಾಟ ಮಾಡಿದರು. ದೇಶದ ಬೆರಳಣಿಕೆಯ ಲಕ್ಷಾಂತರ ಕೋಟಿ ರೂ. ಸಾಲ ಮರು ಪಾವತಿ ಹೊಂದಾಣಿಕೆ, ಬಡ್ಡಿ ಮನ್ನಾ, ಸಾಲದ ಅವಧಿಯ ವಿಸ್ತರಣೆಯ ಅವಕಾಶ ನಮ್ಮ ಕಾಫಿ ಬೆಳೆಗಾರರಿಗೆ ಲಭ್ಯವಾಗಲಿಲ್ಲ.
ನೂರರ ಸಂಭ್ರಮಕ್ಕೆ ಬಂದ ಕೇಂದ್ರ ಸರಕಾರದ ಸಚಿವರನ್ನು ಬಳಸಿಕೊಂಡು ಸುಮಾರು 13 ಸಾವಿರ ಕೋಟಿ ರೂ. ವಿದೇಶಿ ವಿನಿಮಯ, ಲಕ್ಷಾಂತರ ಕೋಟಿ ರೂ. ಜಿಎಸ್ಟ್ ಟಿ, ಎಕ್ಸ್ಪ್ರೆಸ್ ಸುಂಕ, ಸೆಸ್ ಮುಖಾಂತರ ಆದಾಯ ತರುತ್ತಿರುವ ಮತ್ತು ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಟಿಸಿರುವ ಕಾಫಿ ಉದ್ದಿಮೆಯ ಮೂಲಭೂತ ಸಮಸ್ಯೆ ಬಗೆಹರಿಸಲು ನೂರರ ಸಂಭ್ರಮ ಭರವಸೆ ನೀಡದಿರುವುದು ಕಾಫಿ ಬೆಳೆಗಾರರಿಗೆ ಸಂಭ್ರಮ ತರುವ ವಿಚಾರವಲ್ಲ.
ಸುಪ್ರೀಂಕೋರ್ಟ್, ಹಸಿರು ಪೀಠ, ಅರಣ್ಯ ಇಲಾಖೆಯ ಕಪಿಮುಷ್ಟಿಯಲ್ಲಿ ಸಿಲುಕಿರುವ ಕಾಫಿ ಬೆಳೆಗಾರರ ಈ ಜ್ವಲಂತ ಸಮಸ್ಯೆಯನ್ನು ಆಡಳಿತ ನಡೆಸುವವರ ಗಮನಕ್ಕೆ ತರಲು ಕಾಫಿ ಬೆಳೆಗಾರರ ಸಂಘಟನೆಗಳು ವಿಫಲವಾಗಿವೆ. ಉಳ್ಳವರ ಹಬ್ಬದಲ್ಲಿ ಬಡ ಕಾಫಿ ಬೆಳೆಗಾರರ ಸಮಸ್ಯೆ ಅರಣ್ಯ ರೋದನವಾಗಿದೆ.







