ಚನ್ನರಾಯಪಟ್ಟಣ ರೈತರ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡುವ ವಿಚಾರ | 2 ತಿಂಗಳಾದರೂ ಡಿನೋಟಿಫಿಕೇಷನ್ ಆದೇಶ ಹೊರಡಿಸದ ಸರಕಾರ: ಆರೋಪ

ಬೆಂಗಳೂರು : ‘ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹಾಗೂ ಇತರ ಗ್ರಾಮಗಳಲ್ಲಿನ ಭೂ ಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈಬಿಟ್ಟಿದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿ ಎರಡು ತಿಂಗಳು ಕಳೆದರೂ, ರಾಜ್ಯ ಸರಕಾರ ಇದುವರೆಗೂ ಭೂಮಿ ಡಿನೋಟಿಫಿಕೇಶನ್ ಸಂಬಂಧ ಆದೇಶ ಹೊರಡಿಸಿಲ್ಲ, ಹೀಗಾಗಿ ರೈತರ ಬದುಕು ಅತಂತ್ರಕ್ಕೆ ಸಿಲುಕಿದೆ.
ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್‌ಗೆ ವಶಪಡಿಸಿಕೊಂಡಿದ್ದ 13ಗ್ರಾಮಗಳ 1,777.2 ಎಕರೆ ಜಮೀನನ್ನು ಸಂಯುಕ್ತ ಹೋರಾಟ ಕರ್ನಾಟಕ ಹಾಗೂ ಸಮಾನ ಮನಸ್ಕ ಸಂಘಟನೆಗಳ ಸಹಯೋಗದೊಂದಿಗೆ ನಡೆದ ರೈತರ ಹೋರಾಟದ ಫಲವಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಜುಲೈ 15ರಂದು ಕೈಬಿಡುವ ನಿರ್ಧಾರವನ್ನು ಘೋಷಿಸಿದ್ದರು. ಆದರೆ, ರಾಜ್ಯ ಸರಕಾರ ಡಿನೋಟಿಫಿಕೇಶನ್ ಆದೇಶ ಹೊರಡಿಸದೆ ನಿರ್ಲಕ್ಷ್ಯ ವಹಿಸಿದ್ದು, ಇದರಿಂದ ಚನ್ನರಾಯಪಟ್ಟಣದ ರೈತರು ತೀವ್ರ ಆತಂಕಕ್ಕೆ ಸಿಲುಕಿದ್ದಾರೆ. ಸಿಎಂ ಭರವಸೆಯ ನಂತರವೂ ಅಧಿಕಾರಿಗಳು ಗೊಂದಲದ ನಡೆ ಅನುಸರಿಸುತ್ತಿರುವುದು ರೈತರಲ್ಲಿ ಅಸಮಾಧಾನ ಹೆಚ್ಚಿಸಿದೆ.
ಈ ಮಧ್ಯೆ ಕೆಐಎಡಿಬಿಯು ಎರಡು ಗ್ರಾಮಗಳ 439 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಮುಂದುವರಿಸಿ, ಬೆಲೆ ನಿಗದಿ ಸಭೆಗೆ ನೋಟಿಸ್ ನೀಡುವ ಮೂಲಕ ಗೊಂದಲ ಸೃಷ್ಟಿಸಿತು. ಹೋರಾಟ ಸಮಿತಿಯ ತೀವ್ರ ವಿರೋಧದ ನಂತರ ಈ ಸಭೆಯನ್ನು ಮುಂದೂಡಲಾಗಿದೆ. ಈ ಬೆಳವಣಿಗೆ ಸಿಎಂ ಆದೇಶಕ್ಕೆ ಸರಕಾರಿ ಆಡಳಿತವೇ ಬೆಲೆ ನೀಡುತ್ತಿಲ್ಲವೇ? ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ ಎಂದು ರೈತ ಹೋರಾಟಗಾರ ಕಾರಳ್ಳಿ ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಮುಖ್ಯಮಂತ್ರಿ ಮಾತಿಗೆ ಬೆಲೆ ಇಲ್ಲದಿದ್ದರೆ, ನಾವು ಯಾರನ್ನು ನಂಬಬೇಕು? ಎಂಬ ಆತಂಕದಲ್ಲಿ ರೈತರಿದ್ದಾರೆ. ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂಬ ಭೀತಿಯ ನೆರಳಿನಲ್ಲಿ ಬದುಕುವಂತಾಗಿದೆ. ಈ ಹಿನ್ನೆಲೆಯಲ್ಲಿ, ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯು ಹೋರಾಟವನ್ನು ಮುಂದುವರಿಸಲು ನಿರ್ಧರಿಸಿದೆ. ಸಂಯುಕ್ತ ಹೋರಾಟದ ನೇತಾರರು ಈಗಾಗಲೇ ಈ ವಿಷಯವನ್ನು ಸರಕಾರದ ಗಮನಕ್ಕೆ ತಂದಿದೆ’ ಎಂದು ಅವರು ತಿಳಿಸಿದ್ದಾರೆ.
ಸರಕಾರವು ಸಿಎಂ ಹೇಳಿಕೆಯಂತೆ ನಡೆದುಕೊಳ್ಳುತ್ತದೆ ಎಂಬ ವಿಶ್ವಾಸದಿಂದ ಒಂದು ವಾರದ ವರೆಗೆ ಕಾಲಾವಕಾಶ ನೀಡಲು ನಿರ್ಧರಿಸಲಾಗಿದ್ದು, ಒಂದು ವೇಳೆ ಆ ಗಡುವಿನೊಳಗೆ ಸರಕಾರ ಸ್ಪಂದಿಸದಿದ್ದರೆ, ಹೋರಾಟವನ್ನು ತೀವ್ರಗೊಳಿಸುವ ಯೋಜನೆ ಸಿದ್ಧವಾಗಿದೆ. ಈಗಾಗಲೇ ರೈತರು ತಮ್ಮ ಗ್ರಾಮಗಳಲ್ಲಿ ಸಭೆಗಳನ್ನು ಕರೆದು ಸಂಘಟನೆಯನ್ನು ಗಟ್ಟಿಗೊಳಿಸುತ್ತಿದ್ದಾರೆ. ಯಾವುದೇ ಪರಿಸ್ಥಿತಿ ಎದುರಾದರೂ, ಹೋರಾಟಕ್ಕೆ ಸಜ್ಜಾಗಿ ನಿಲ್ಲುವ ಸಿದ್ಧತೆ ರೈತರ ವಲಯದಲ್ಲಿ ಸಾಗುತ್ತಿದೆ.
ಈ ಬಾರಿ ಹಿಂದಿಗಿಂತಲೂ ತೀವ್ರ ಸ್ವರೂಪದ ಹೋರಾಟದ ರೂಪುರೇಷೆಗಳು ಸಿದ್ಧವಾಗಿದ್ದು, ಇದರ ಅರಿವು ರಾಜ್ಯ ಸರಕಾರಕ್ಕೂ ಇದೆ. ಈ ನಿಟ್ಟಿನಲ್ಲಿ, ಆದಷ್ಟು ಬೇಗ ಸರಕಾರ ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವ ಸಂಬಂಧ ಡಿನೋಟಿಫಿಕೇಶನ್ ಆದೇಶ ಹೊರಡಿಸಿ, ರೈತರ ನಂಬಿಕೆಯನ್ನು ಉಳಿಸಿಕೊಳ್ಳಬೇಕು ಎಂದು ರೈತರು ಒತ್ತಾಯವಾಗಿದೆ.
ಚನ್ನರಾಯಪಟ್ಟಣ ರೈತರ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡಲಾಗುವುದೆಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿ 50 ದಿನಗಳು ಕಳೆಯುವುದರೊಳಗೆ ಎರಡು ಹಳ್ಳಿಗಳ 439 ಎಕರೆಗೆ ಬೆಲೆನಿಗದಿ ಪಡಿಸಲು ಸಭೆ ಕರೆದಿರುವುದನ್ನು ನೋಡಿ ರೈತರು ಆತಂಕ ವ್ಯಕ್ತಪಡಿಸಿ, ವಿರೋಧಿಸಿದ ಕಾರಣ ಸರಕಾರ ಸಭೆಯನ್ನು ಮುಂದೂಡಿದೆ. ಮುಖ್ಯಮಂತ್ರಿ ಮಾತಿಗೂ ಬೆಲೆ ಕೊಡದ ಕೈಗಾರಿಕಾ ಇಲಾಖೆ, ರೈತರ ಮೇಲೆ ದಬ್ಬಾಳಿಕೆ ನಡೆಸಲು ಮುಂದಾಗಿದೆ. ಈ ರೀತಿಯ ವಂಚನೆಯನ್ನು ನಿಲ್ಲಿಸಿ ಮುಖ್ಯಮಂತ್ರಿ ಘೋಷಿಸಿದ ಹಾಗೆ ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದುಪಡಿಸುವ ಅಧಿಕೃತ ಆದೇಶವನ್ನು ಹೊರಡಿಸಬೇಕು, ಇಲ್ಲವಾದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು.
-ಕಾರಳ್ಳಿ ಶ್ರೀನಿವಾಸ್, ಪದಾಧಿಕಾರಿ, ಭೂಸ್ವಾಧೀನ ಹೋರಾಟ ಸಮಿತಿ







