ಆದಿಲ್‌ಶಾಹಿ ಸಾಹಿತ್ಯ: ಕನ್ನಡ ಅನುವಾದಗಳು (ಭಾಗ-2)

ನಿನ್ನೆಯ ಸಂಚಿಕೆಯಿಂದ....
4. ಖ್ವಾಜಾ ಮೀರ್ ಅಹ್ಮದ್ ಅಲಿಖಾನ್ ವಿರಚಿತ ಗುಲ್‌ದಸ್ತಾಯೇ ಬಿಜಾಪುರ
‘ಗುಲದಸ್ತಾಯೇ ಬಿಜಾಪುರ’ ಪುಸ್ತಕವನ್ನು ಹೈದರಾಬಾದಿನ ನಿವಾಸಿ ಖ್ವಾಜಾ ಮೀರ್ ಅಹ್ಮದ್ ಅಲಿಖಾನ್ ದಖನಿ ಭಾಷೆಯಲ್ಲಿ ಬರೆದಿದ್ದಾನೆ. ದಖನಿ ಉರ್ದುವಿನಲ್ಲಿ ಬರೆದ ಹಸ್ತಪ್ರತಿ ಆಂಧ್ರಪ್ರದೇಶದ ಆರ್ಕಿವ್ಸ್‌ನಲ್ಲಿ ದೊರೆತಿವೆ. ಇದನ್ನು ಡಾ. ಕೃಷ್ಣ ಕುಲಕರ್ಣಿ, ಮೌಲಾನಾ ಮಹಬೂಬ್ ರಹಮಾನ್ ಮದನಿಯವರು ಅನುವಾದಿಸಿದ್ದಾರೆ.
5.ಫಿತೂರ್ ಖಾನ್ ಲ್ಯಾರಿ ವಿರಚಿತ ತಾರೀಖಿ ಹಪ್ತಕುರ್ಸಿ
ಫಿತೂರ್ ಖಾನ್ ಬೆಳಗಾವಿಯ ಪ್ರಸಿದ್ಧ ಅಸದ್ ಖಾನ್ ಲ್ಯಾರಿಯ ಮಗ. ಶತಾಯುಷಿಯಾಗಿ ಮರಣಹೊಂದಿದ ಅಸದಖಾನ್ ಹಾಗೂ ಅವನ ಮಗನಿಗೆ ಬಿಜಾಪುರ ಇತಿಹಾಸ ಚೆನ್ನಾಗಿ ಗೊತ್ತಿತ್ತು. ಈ ಗ್ರಂಥದಲ್ಲಿ ಬಿಜಾಪುರದ ಪ್ರತಿಯೊಬ್ಬ ಬಾದಶಹಾನು ಪಟ್ಟಕ್ಕೆ ಬಂದಂದಿನಿಂದ ಆತನ ಮರಣದವರೆಗೆ ನಮೂದಿಸುತ್ತಾನೆ. ಜೊತೆಗೆ ಅವನ ಕಾಲದಲ್ಲಿ ನಡೆದ ಪ್ರಮುಖ ಘಟನೆಗಳು ಕಟ್ಟಿದ ಪ್ರಮುಖ ಕಟ್ಟಡ, ಕೆರೆ ಇತ್ಯಾದಿಗಳ ವಿವರಗಳನ್ನು ನಮೂದಿಸಿದ್ದಾನೆ.
ಇದರ ಪರ್ಶಿಯನ್ ಹಸ್ತಪ್ರತಿಯು ಹೈದರಾಬಾದಿನ ಸಾಲಾರಜಂಗ್ ಸಂಗ್ರಹಾಲಯದ ಹಸ್ತಪ್ರತಿ ವಿಭಾಗದಲ್ಲಿ ಲಭ್ಯವಿದೆ. ಇದನ್ನು ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಮತ್ತು ಮೌಲಾನಾ ಮಹಬೂಬ್ ರಹಮಾನ್ ಮದನಿಯವರು ಅನುವಾದಿಸಿದ್ದಾರೆ.
6. ಈಶ್ವರದಾಸ ನಗರ್ ವಿರಚಿತ ಫುತೇಹತೆ ಆಲಂಗೀರ್
ಬಿಜಾಪುರದ ಇತಿಹಾಸದಲ್ಲಿ ಪ್ರಮುಖ ವ್ಯಕ್ತಿ, ಆಲಂಗೀರ್ ಔರಂಗಜೇಬ್. ಆತನ ಬಿಜಾಪುರಕ್ಕೆ ಸಂಬಂಧಿಸಿದ ಘಟನೆಗಳನ್ನು ಗುಜರಾತಿನಲ್ಲಿ ಬ್ರಾಹ್ಮಣ ಪಂಡಿತರ ಮನೆತನದಲ್ಲಿ ಹುಟ್ಟಿ, ಆತನ ಪ್ರಮುಖ ಖಾಜಿಯಾಗಿದ್ದ ಈಶ್ವರದಾಸ ನಗರ್ ಅವರು ಬರೆದ ‘ಪುತೇಹತೆ ಆಲಂಗೀರ್’ ಎಂಬ ಕೃತಿ ಬಿಜಾಪುರ ಇತಿಹಾಸಕ್ಕೆ ಸಂಬಂಧಿಸಿದಂತೆಮಹತ್ವದ್ದು.
ಡಾ.ತಸ್ನಿಮ್ ಅಹ್ಮದ್ ಅವರು ‘ಫುತುಹತೆ ಆಲಂಗಿರಿ’ಯ ಮೂಲ ಪರ್ಷಿಯನ್ ಕೃತಿಯನ್ನು ಆಂಗ್ಲಭಾಷೆಗೆ ಅನುವಾದ ಮಾಡಿರುತ್ತಾರೆ. ಡಾ. ಆರ್.ಕೆ.ಕುಲಕರ್ಣಿಯವರು ಆಂಗ್ಲ ಭಾಷೆಯಿಂದ ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
7.ಜಹೂರ್ ಬಿನ್ ಜುಹೂರಿ ವಿರಚಿತ ಮೊಹಮ್ಮದ್ ನಾಮಾ
ಮಹಮ್ಮದ್ ಆದಿಲ್ ಶಾಹ (ಕ್ರಿ.ಶ. 1626-1656)ನ ಆಸ್ಥಾನದಲ್ಲಿದ್ದ ಮಹಮ್ಮದ್ ಜುಹೂರಿನ ‘ಮಹಮ್ಮದ್ ನಾಮಾ’ ಎಂಬ ಇತಿಹಾಸ ಗ್ರಂಥವನ್ನು ಬರೆದನು. ಮಹಮ್ಮದ್ ಜುಹೂರನು, ಮಹಮ್ಮದ್ ಆದಿಲ್ ಶಾಹನ 30 ವರ್ಷಗಳ ಆಡಳಿತದ ವಿವರಗಳನ್ನು ತುಂಬಾ ಪರಿಶ್ರಮ ಪಟ್ಟು ಬರೆದಿದ್ದಾನೆ. ಆದುದರಿಂದಲೇ ‘ಮೊಹಮ್ಮದ್ ನಾಮಾ’ ಮಹಮ್ಮದ್ ಆದಿಲ್‌ಶಾಹನ ಆಡಳಿತದ ಅಧಿಕೃತ ದಾಖಲೆಯಾಗಿ ಉಳಿದಿವೆ. ಇದರಲ್ಲಿ ಅಂದಿನ ಸಾಮಾಜಿಕ ಸಮಾರಂಭ, ಮದುವೆ, ವಾರ್ಷಿಕ ಹಜ್ ಯಾತ್ರೆ ಮತ್ತು ಕೆಲವು ಪ್ರಮುಖ ಕಟ್ಟಡಗಳನ್ನು ಕಟ್ಟಿದ ವಿವರಗಳ ಉಲ್ಲೇಖವಿದೆ. ಹೀಗಾಗಿ ಅಂದಿನ ಸಾಮಾಜಿಕ ಪರಿಸರವನ್ನು ಅಭ್ಯಸಿಸಲು ಇದು ಒಳ್ಳೆಯ ಆಕರ ಗ್ರಂಥವಾಗಿ ಉಳಿದಿವೆ.
ಇದನ್ನು ಕನ್ನಡಕ್ಕೆ ಡಾ. ಮಹನೂರ್ ಜಮಾನಿ ಬೇಗಂ, ಪ್ರೋ. ಎ.ಎಚ್. ಮಾಸಾಪತಿ, ಫಕೀರ್‌ಮಹಮ್ಮದ್ ಕಟ್ಪಾಡಿ, ಮೌಲಾನಾ ಸಯ್ಯದ್ ರಶೀದ್‌ಖಾಸಿಮಿಯಾರವರು ಇನ್ನಿತರ ಪರ್ಷಿಯನ್ ವಿದ್ವಾಂಸರ ಸಹಾಯದಿಂದ ಅನುವಾದಿಸಿದ್ದಾರೆ.
8. ಮುಲ್ಲಾ ನುಸ್ರತಿವಿರಚಿತ ಅಲಿನಾಮಾ ಮತ್ತು ತಾರೀಖೆೆ ಸಿಕಂದರಿ
ಎರಡನೆ ಅಲಿ ಆದಿಲ್‌ಶಾಹ (ಕ್ರಿ.ಶ. 1659-1672) ಆಸ್ಥಾನದಲ್ಲಿದ್ದ ಮುಲ್ಲಾ ನುಸ್ರತ್, ದಖನಿ ಉರ್ದು ಸಾಹಿತ್ಯದಲ್ಲಿ ಮಹಾಕವಿ ಎಂದು ಹೇಳಬಹುದು. ಆತನು ‘ಗುಲ್ಕನೇ ಇಷ್ಕ್’ ‘ಅಲಿನಾಮಾ’ ಹಾಗೂ ‘ತಾರೀಖೆ ಸಿಂಕದರಿ’ ಎಂಬ ಮೂರು ಕಾವ್ಯಗಳನ್ನು ಬರೆದಿದ್ದಾನೆ. ಅಲಿನಾಮಾ ಮತ್ತು ತಾರೀಖೆ ಸಿಕಂದರಿ ಅಥವಾ ಸಿಕಂದರನಾಮಾ ಎಂಬ ಕಾವ್ಯಗಳು ಚಾರಿತ್ರಿಕ ಕಾವ್ಯಗಳಾಗಿವೆ. ಅಲಿನಾಮಾದಲ್ಲಿ ಎರಡನೇ ಅಲಿ ಆದಿಲ್ ಶಾಹನ ಚರಿತ್ರೆಯ ಅಂಶಗಳಿದ್ದರೆ, ತಾರೀಖೆ ಸಿಕಂದರಿಯಲ್ಲಿ ಎರಡನೇಯ ಅಲಿಯ ಮಗ ಆದಿಲ್ ಶಾಹಿಗಳ ಕೊನೆಯ ಬಾದಶಹಾ ಸಿಕಂದರ ಆದಿಲ್‌ಶಾಹನ ಕುರಿತಾದ ವರ್ಣನೆ ಇದೆ. ಇದರಲ್ಲಿ ಮಹಾಭಾರತ, ಭಾಗವತಗಳ ಇಂದ್ರ, ಲಕ್ಷ್ಮೀ, ಅರ್ಜುನ, ಲಕ್ಷ್ಮಣರ ಪಾತ್ರಗಳ ಉಲ್ಲೇಖ ಸಂದರ್ಭಾನುಸಾರ ಬರುತ್ತದೆ.
ಅಲಿನಾಮಾ ಕಾವ್ಯವನ್ನು ಡಾ. ಮಹಮ್ಮದ್ ಸಿಬಗತುಲ್ಲಾ ಹಾಗೂ ತಾರೀಖಿ ಸಿಕಂದರಿಯನ್ನು ಡಾ. ವಿಠಲರಾವ ಟಿ. ಗಾಯಕವಾಡ ಕನ್ನಡಕ್ಕೆ ಅನುವಾದ ಮಾಡಿರುತ್ತಾರೆ.
9. ಹಜ್ರತ್ ಖಾಜಿ ಮಹಮೂದ ಬಹರಿ ವಿರಚಿತ ಉರೂಸೆ ಇರ್ಫಾನ್ ಅಥವಾ ಮನ್ ಲಗನ್ ಹಜ್ರತ್ ಖಾಜಿ ಮಹಮೂದ ಬಹರಿ
ಈಗಿನ ಶಹಾಪೂರ ತಾಲೂಕಿನ ಗೋಗಿ ಗ್ರಾಮದವರು. ಇವರು ಸೂಫಿ. ಪರ್ಷಿಯನ್ ಮತ್ತು ದಖನಿ ಭಾಷೆಯ ಮಹಾಕವಿ. ಇವರು ಬರೆದ ದಖನಿ ಕೃತಿ ‘ಮನಲಗನ್’. ಅದನ್ನೇ ಸ್ವಯಂ ಪರ್ಷಿಯನ್ ಭಾಷೆಯಲ್ಲಿ ಊರುಸೆ ಇರ್ಫಾನ್ ಎಂದು ಅನುವಾದಿಸಿದ್ದು, ದೂರದ ಅಮೇರಿಕಾದಿಂದ ಬಂದು ಅಭ್ಯಸಿಸಿದ ವಿದ್ವಾಂಸಮತ್ತು ಇತಿಹಾಸಕಾರ ರಿಚರ್ಡ್ ಇಟನ್ನನ ಕೃತಿಯಲ್ಲಿಪ್ರಸ್ತಾಪದಿಂದಾಗಿ ಈ ಕೃತಿಯು ಜಗತ್ ಪ್ರಸಿದ್ಧವಾಯಿತು. ಈ ಕೃತಿಯು ಸೂಫಿ ದಾರ್ಶನಿಕತೆಯ ಜೊತೆ ಜೊತೆಗೆ ಆ ಕಾಲದ ಆದಿಲ್‌ಶಾಹಿ ಆಳ್ವಿಕೆಯ ಹಲವು ಸಂಗತಿಗಳನ್ನು ಪ್ರಸ್ತಾಪಿಸುತ್ತಾರೆ. ಈ ಕೃತಿಯನ್ನು ಬೋಡೆ ರಿಯಾಜ್ ಅಹ್ಮದ್ ಕನ್ನಡಕ್ಕೆ ಅನುವಾದಿಸಿದ್ದಾರೆ.
10. ರಫೀಯುದ್ದೀನ್ ಇಬ್ರಾಹಿಂ ಶಿರಾಜಿ ವಿರಚಿತ ತಝ್ಕಿರತುಲ್ ಮೂಲೂಕ್
ರಫೀಯುದ್ದೀನ್ ಇಬ್ರಾಹಿಂ ಶಿರಾಜಿ ಬರೆದ ತಝ್ಕಿರತುಲ್ ಮೂಲೂಕ್ (ಬಾದಶಹಾರ ಚರಿತ್ರೆ) ಇತಿಹಾಸದ ಗ್ರಂಥವು ಎರಡನೇಯ ಇಬ್ರಾಹಿಮ ಆದಿಲ್‌ಶಾಹನ ಆಸ್ಥಾನದಲ್ಲಿ ಕ್ರಿ.ಶ. 1619-20ರ ಮಧ್ಯೆ ರಚಿತವಾಯಿತು. ಮೂಲತ ವ್ಯಾಪಾರಿಯಾಗಿ ಭಾರತಕ್ಕೆ ಬಂದ ರಫಿಯುದ್ದಿನ್ ಶಿರಾಜಿ 1559-60 ರಲ್ಲಿ ಮೊದಲು ದಿಲ್ಲಿಗೆ ಬಂದು ನಂತರ ಇಂದಿನ ಯಾದಗಿರಿ ಜಿಲ್ಲೆಯ ಸಗರಕ್ಕೆ ಬಂದನು. ನಂತರ ಬಿಜಾಪುರಕ್ಕೆ ಬಂದು ಅಲಿ ಆದಿಲ್‌ಶಹಾನು ಆಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡಿದನು. ಕ್ರಿ.ಶ. 1565ರಲ್ಲಿ ರಕ್ಕಸ ತಂಗಡಗಿ ಕಾಳಗವನ್ನು ಬಾದಶಾಹನ ಜೊತೆಯಾಗಿಯೇ ರಣರಂಗದಲ್ಲಿ ಇದ್ದನು. ಇವನು ರಣರಂಗದಲ್ಲಿ ಸ್ವಯಂ ಇದ್ದನಾದ್ದರಿಂದ ವಿಜಯನಗರದ ಕಾಳಗದ ಕುರಿತಾದ ಇವನ ವಿವರಗಳಿಗೆ ಚಾರಿತ್ರಿಕವಾಗಿ ಅಧಿಕ ಮಹತ್ವವಿದೆ. ಪರ್ಶಿಯನ್ ಭಾಷೆಯಲ್ಲಿದ್ದ ಶಿರಾಜಿಯ ಈ ಗ್ರಂಥ ಈವರೆಗೆ ಪ್ರಪಂಚದ ಯಾವ ಭಾಷೆಯಲ್ಲೂ ಅನುವಾದಗೊಂಡಿಲ್ಲ. ಪ್ರಪ್ರಥಮವಾಗಿ ಕನ್ನಡದಲ್ಲಿ ಬರುತ್ತಿರುವುದು ಇದರ ವಿಶೇಷ. ಈ ಗ್ರಂಥವನ್ನು ಖ್ಯಾತ ಕಥೆಗಾರ ಫಕೀರ ಮಹಮ್ಮದ್ ಕಟ್ಟಾಡಿಯವರು ಸುಂದರವಾಗಿ ಅನುವಾದಿಸಿದ್ದಾರೆ.
11. ಎರಡನೆಯ ಇಬ್ರಾಹಿಂ ಆದಿಲ್‌ಶಾಹ ವಿರಚಿತ ಕಿತಾಬೆ ನವರಸ್
ಕಿತಾಬೆ-ನವರಸ್ ಎಂಬುದು ಎರಡನೇಯ ಇಬ್ರಾಹಿಂ ಆದಿಲ್‌ಶಹಾನು (ಕ್ರಿ.ಶ.1580-1626) ಬರೆದ ದಖನಿ ಭಾಷೆಯ ಗೀತೆಗಳ ಸಂಕಲನ. ಇದರಲ್ಲಿ 59 ಗೀತೆಗಳು 17 ದೋಹಾಗಳು ಇವೆ. ಇದು ಹಿಂದುಸ್ತಾನಿ ಸಂಗೀತದ ಕುರಿತಾಗಿ ಬರೆದ ಕವನಗಳ ಸಂಕಲನ. ಅದರಲ್ಲಿ ಇಬ್ರಾಹಿಮನು ತನ್ನ 17 ರಾಗಗಳನ್ನು ಸೂಚಿಸಿದ್ದಾನೆ. ಇಬ್ರಾಹೀಮನು ಪರ್ಷಿಯನ್ ಜನರಿಗೆ ಭಾರತೀಯ ಸೌಂದರ್ಯ ಶಾಸ್ತ್ರ ಹಾಗೂ ನವರಸಗಳನ್ನು ಪರಿಚಯಿಸಲು ‘ಕಿತಾಬೆ-ನೌರಸ್’ ಬರೆದನಂತೆ. ಶೃಂಗಾರ, ವೀರ, ಭೀಬಿತ್ಸ, ರುದ್ರ, ಭಯಾನಕ, ಹಾಸ್ಯ, ಕರುಣ, ಅದ್ಭುತ ಮತ್ತು ಶಾಂತಿ ಇವುಗಳೇ ಒಂಭತ್ತು ರಸಗಳು. ಕಿತಾಬೆ ನವರಸ್ ಕವನ ಸಂಕಲನವು ಸರಸ್ವತಿಯ ಆವಾಹಮನೆಯಿಂದ ಪ್ರಾರಂಭವಾಗಿದೆ. ಸಂಕಲನದ ಮೊದಲ ದ್ವಿಪದಿ ಸರಸ್ವತಿ ಕುರಿತಾಗಿದೆ.
॥ ನೌರಸ್ ಸೂರ್ ಜುಗ್ ಜಗಜ್ಯೋತಿ ಅಣು ಸರೋಗನಿ !
ಸತ್ ಸರಸುತೇ ಮೌಲಾ ಇಬ್ರಾಹಿಮ ಪರಸಾದ ಭ ಈ ದೂನಿ ॥
(ಹೇ ತಾಯಿ ಸರಸ್ವತಿ ಇಬ್ರಾಹಿಮನ ಮೇಲೆ ನಿನ್ನ ಕೃಪೆ ಇರಲಿ, ನಿನ್ನ ಕೃಪೆಯಿಂದ ಆತನ ನವರಸ ಕಾವ್ಯವು ಜಗತ್ತಿನಲ್ಲಿ ಬಹುಕಾಲ ಬಾಳಲಿ).
ಇದನ್ನು ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ.
12. ಮಹಮ್ಮದ್ ಇಬ್ರಾಹಿಂ ಜುಬೇರಿ ವಿರಚಿತ ರೌಜುತುಲ್ ಔಲಿಯಾಯೇ ಬಿಜಾಪುರ
ಬಿಜಾಪುರದಲ್ಲಿ ಆದಿಲ್ ಶಾಹಿ ರಾಜಮನೆತನ ಜನ್ಮ ತಳೆದಾಗ ಇಲ್ಲಿ ಹಲವಾರು ಇಸ್ಲಾಮ್ ಗುರುಗಳು ಸೂಫಿಗಳು ಬಂದು ನೆಲೆಸಿದರು. ಒಂದು ಅಂದಾಜಿನಂತೆ ಬಿಜಾಪುರದಲ್ಲಿ ನೆಲೆಸಿದಷ್ಟು ಸೂಫಿಗಳು ಪ್ರಪಂಚದ ಯಾವುದೇ ನಗರದಲ್ಲಿ ನೆಲೆಸಿರಲಿಲ್ಲ. ಸುಮಾರು ನಾಲ್ಕು ನೂರಕ್ಕಿಂತ ಅಧಿಕ ಸೂಫಿಗಳ ಸಮಾಧಿಗಳು ಬಿಜಾಪುರದಲ್ಲಿವೆ. ಇದಲ್ಲದೆ ಸಂಸ್ಥಾನದ ಇತರ ಪ್ರದೇಶಗಳಲ್ಲಿ ಇನ್ನೂ ಅನೇಕ ಸೂಫಿಗಳು ಬಂದು ನೆಲೆಸಿದ್ದಾರೆ.
ಬಿಜಾಪುರ ಸೂಫಿಗಳ ಚರಿತ್ರೆಯ ಕುರಿತು ಮಹಮ್ಮದ್ ಇಬ್ರಾಹಿಂ ಜುಬೇರಿ ವಿರಚಿತ ‘ರೌಜುತುಲ್ ಔಲಿಯಾಯೇ ಬಿಜಾಪುರ’ ಒಂದು ಪ್ರಸಿದ್ಧ ಹಾಗೂ ಮಹತ್ವಪೂರ್ಣ ಸೂಫಿ ಚರಿತ್ರೆಯ ಕೃತಿ.
ಈ ಗ್ರಂಥವನ್ನು ಪರ್ಷಿಯನ್ ಭಾಷೆಯಿಂದ ಹಜ್ರತ್ ಶಾಹ ಸೈಫುಲ್ಲಾ ಸಾಹೇಬ ಖಾದ್ರಿ ಎಂಬುವರು ಉರ್ದು ಭಾಷೆಗೆ ಅನುವಾದ ಮಾಡಿದ್ದಾರೆ. ಉರ್ದು ಕೃತಿಯನ್ನು ಬಿಜಾಪುರದ ಡಾ. ಅಮೀರುದ್ದೀನ್ ಖಾಜಿ ಕನ್ನಡಕ್ಕೆ ಅನುವಾದಿಸಿದ್ದಾರೆ.
13. ನೂರುಲ್ಲಾ ಇಬ್ನೆ ಕಾಜಿ ಸಯ್ಯದ್ ಅಲಿ ಮುಹ್ಮದ್ ಹುಸೇನಿ ವಿರಚಿತ ತಾರೀಖಿ-ಇ-ಅಲಿ ಆದಿಲ್ ಶಾಹ
ತಾರೀಖಿ-ಇ-ಅಲಿ ಇತಿಹಾಸ ಗ್ರಂಥವನ್ನು ಬರೆದವರು ನೂರುಲ್ಲಾ ಇಬ್ನೆ ಕಾಜಿ ಸಯ್ಯದ್ ಅಲಿ ಮಹ್ಮದ್ ಹುಸೇನಿ. ಇವನು ಎರಡನೇಯ ಅಲಿ ಆದಿಲ್ ಶಾಹನ (ಕ್ರಿ.ಶ. 1656-1972) ಆಸ್ಥಾನದಲ್ಲಿದ್ದನು. ಇದು ಎರಡನೇ ಅಲಿ ಆದಿಲ್ ಶಾಹಿಯ ಜನ್ಮ, ಬಾಲ್ಯ, ಪಟ್ಟಾಭಿಷೇಕ, ಶಿವಾಜಿ-ಅಫಜಲಖಾನರ ಘಟನೆ ಮುಂತಾದ ಹಲವು ಪ್ರಮುಖ ಘಟನೆಗಳನ್ನು ದಾಖಲಿಸುತ್ತದೆ. ಈ ಗ್ರಂಥವು ವಿಶೇಷವಾಗಿ ಸಮಕಾಲೀನ ಬಿಜಾಪುರದ ಚರಿತ್ರೆಯಲ್ಲಿ ಕರ್ನಾಟಕದ ಕಥೆಯನ್ನು ತಿಳಿಸುವಲ್ಲಿ ಮಹತ್ವಪೂರ್ಣ.
14. ಅಸದ್ ಬೇಗ್‌ನ ವಾಕಾಯತ್-ಇ-ಅಸದ್ ಬೇಗ್
ಸುಮಾರು ಇನ್ನೂರು ವರ್ಷಗಳ ಆದಿಲ್ ಶಾಹಿಗಳ ಆಳ್ವಿಕೆಯಲ್ಲಿ ಅನೇಕ ಜನ ಪ್ರವಾಸಿಗರು ರಾಯಭಾರಿಗಳು ಬಂದು ಹೋಗಿದ್ದಾರೆ. ಅಕಬರ್ ಬಾದಶಾಹನ ರಾಯಭಾರಿ ‘ಅಸದ್ ಬೇಗ್’ ಬಿಜಾಪುರಕ್ಕೆ ಬಂದು ಎರಡನೇಯ ಇಬ್ರಾಹಿಂ ಆದಿಲ್ ಶಾಹನ ಆಸ್ಥಾನದಲ್ಲಿ ಕೆಲವು ಕಾಲ ಇದ್ದನು. ಆತನು ತನ್ನ ನೆನಪುಗಳನ್ನು ‘ವಾಕಾಯತ್-ಇ-ಅಸದ್‌ಬೇಗ್’ ಎಂದು ಬರೆದಿಟ್ಟಿದ್ದಾನೆ. ಬಿಜಾಪುರ ನಗರ ಮತ್ತು ಇಲ್ಲಿಯ ಜನಜೀವನ ಸೊಗಸಾದ ಚಿತ್ರಣ ಅದರಲ್ಲಿವೆ. ಅದನ್ನು ಆರ್.ಕೆ ಕುಲಕರ್ಣಿ ಇಂಗ್ಲೀಷಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.
ಇದಿಷ್ಟು ಕನ್ನಡಕ್ಕೆ ಅನುವಾದವಾದ ಆದಿಲ್‌ಶಾಹಿ ಕಾಲದ ಕೃತಿಗಳು. ಇದರ ಹೊರತಾಗಿಯೂ ಐತಿಹಾಸಿಕವಾಗಿ ಸಾಹಿತ್ಯಿಕವಾಗಿ, ಆಧ್ಯಾತ್ಮಿಕವಾಗಿ ಮಹತ್ವಪೂರ್ಣ ಇನ್ನೂ ಅನೇಕ ಕೃತಿಗಳು ಕನ್ನಡಕ್ಕೆ ಅನುವಾದವಾಗದೆ ಉಳಿದಿವೆ. ಅವುಗಳಲ್ಲಿ ಮುಖ್ಯವಾದದ್ದು ವಾಖಿಯತೆ ಮಮಲೆಕತೆ ಬಿಜಾಪುರ, ಮಹಮ್ಮದ್ ಹಾಶಿಮ್ ಫೂಜೂನಿ ಅಸ್ತ್ರಬಾದಿಯ ಫುತೆಹತೆ ಆದಿಲ್‌ಶಾಹಿ, ಅಬ್ದುಲ್ ಹಸನ್ ಕಾದರಿಯವರ ಶಾಹಪತ್-ಇ-ಹುದಾ, ಇನ್ನೊಂದು ಅತೀವ ಮಹತ್ವದ ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ಮುಲ್ಲಾ ನುಸ್ರತಿಯ ಪ್ರೇಮಕಾವ್ಯ ‘ಗುಲ್ಕನೆ-ಇಷ್ಕ್’. ಇವುಗಳು ಕನ್ನಡ ಓದುಗರಿಗೆ ಅನುವಾದಗೊಂಡು ಲಭ್ಯವಾಗಬೇಕಿದೆ. ಯಾಕೆಂದರೆ ಇವೆಲ್ಲವೂ ಬಿಜಾಪುರದಲ್ಲಿ , ಕನ್ನಡ ನಾಡಿನಲ್ಲಿ ರಚಿತವಾದ ಕೃತಿಗಳಾಗಿವೆ.
ಸೂಫಿ ಸಂತರ ಸಾಹಿತ್ಯ
ಆದಿಲ್‌ಶಾಹಿಗಳು ಸುಮಾರು ಎರಡು ಶತಮಾನಗಳ ಆಡಳಿತದಲ್ಲಿ ಸುಮಾರು ಮುನ್ನೂರಕ್ಕಿಂತ ಅಧಿಕ ಸೂಫಿ ಸಂತರು ಬಿಜಾಪುರಕ್ಕೆ ಬಂದು, ಅವರ ಆಡಳಿತದ ಪ್ರದೇಶದಲ್ಲಿ ನೆಲೆಸಿ, ಅದ್ಭುತವಾದಂತಹ ಸೂಫಿ ಅಧ್ಯಾತ್ಮ ಸಾಹಿತ್ಯವು ಪರ್ಷಿಯನ್ ಮತ್ತು ದಖನಿ ಭಾಷೆಗಳಲ್ಲಿ ರಚಿಸಿರುತ್ತಾರೆ.
‘ಗುಲಬರ್ಗಾಸೀಮೆಯ ಗೋಗಿಯಲ್ಲಿದ್ದ ಖ್ಯಾತ ದರ್ವೇಶಿ ಕವಿ ಮಹಮೂದ ಬಹರಿ ದಖನಿ ಕಾವ್ಯವನ್ನು ಗೋಗಿಯ ನಾಡಿನವರಾದ ನಾವು, ದೂರದ ಅಮೆರಿಕದಿಂದ ಬಂದ ವಿದ್ವಾಂಸನ ಇಂಗ್ಲಿಷ್ ಅನುವಾದಗಳ ಮೂಲಕ ತಿಳಿದುಕೊಳ್ಳಬೇಕಾಗಿ ಬಂದಿದ್ದು ಲಜ್ಜೆಯ ವಿಷಯ
-ಪ್ರೊ ರಹಮತ್ ತರೀಕೆರೆ







