ಇವರಾರೂ ಕ್ಷಮೆ ಯಾಚಿಸಲಿಲ್ಲ!

ಭಾಗ - 4
ಸ್ವಾತಂತ್ರ್ಯ ಸಮರದ
ಸುದೀರ್ಘ ಕೊಂಡಿ-
ಸೋಹನ್ ಸಿಂಗ್ ಬಾಖ್ನಾ
1870ರಲ್ಲಿ ಅಮೃತಸರದಲ್ಲಿ ಜನಿಸಿದ ಸೋಹನ್ ಸಿಂಗ್ ಬಾಖ್ನಾ ಗದ್ದಾರ್ ಸಂಘಟನೆಯ ಸ್ಥಾಪಕರಲ್ಲೊಬ್ಬರು. ಸಶಸ್ತ್ರ ಕ್ರಾಂತಿಯ ಪ್ರಯತ್ನದಲ್ಲಿದ್ದಾಗ ಬ್ರಿಟಿಷರು ಬಾಖ್ನಾ ಅವರನ್ನು ಬಂಧಿಸಿ ಜೈಲಿಗೆ ತಳ್ಳಿತು. 16 ವರ್ಷ ಅವರು ಜೈಲಿನಲ್ಲಿದ್ದರು. ಬಿಡುಗಡೆ ಯಾದ ಬಳಿಕ ಅವರು ರೈತ- ಕಾರ್ಮಿಕ ಸಂಘಟನೆಗಾಗಿ ದುಡಿದು, 1968ರಲ್ಲಿ ತನ್ನ 98ನೇ ವಯಸ್ಸಿನಲ್ಲಿ ನಿಧನರಾದರು
ಸೋಹನ್ ಸಿಂಗ್ ಬಾಖ್ನಾ ಜನವರಿ 22, 1870ರಂದು ಅಮೃತಸರದ ಬಳಿಯ ಹಳ್ಳಿಯಲ್ಲಿ ಜನಿಸಿದರು. ಪಂಜಾಬ್‌ನಲ್ಲೇ ಓದಿ ಸ್ಥಳೀಯವಾಗಿ ರೈತರು ನಡೆಸುತ್ತಿದ್ದ ಬಿಡಿಬಿಡಿ ಪ್ರತಿಭಟನೆಗಳಲ್ಲಿ ಅಷ್ಟಿಷ್ಟು ಭಾಗವಹಿಸಿದರೂ ಪಂಜಾಬ್‌ನಲ್ಲಿ ರೈತರ ಸ್ಥಿತಿ ದಿನೇ ದಿನೇ ದಾರುಣವಾಗುತ್ತಿದ್ದಂತೆ, ಬಾಖ್ನಾ ಅಮೆರಿಕಕ್ಕೆ ತೆರಳಿ, ಅಲ್ಲಿನ ಟಿಂಬರ್ ಕಾರ್ಖಾನೆಯಲ್ಲಿ ಕಾರ್ಮಿಕರಾಗಿ ದುಡಿಯತೊಡಗಿದರು. ನೂರಾರು ಭಾರತೀಯರು ಅಮೆರಿಕದಲ್ಲಿ ಉದ್ಯೋಗ ಅರಸಿ ಹೋದರೂ ಅಲ್ಲಿ ಅವರ ಬಗ್ಗೆ ಸರಕಾರ ಉದಾಸೀನ ತೋರುತ್ತಿತ್ತು. ಅದೇ ವೇಳೆಗೆ ಭಾರತದ ಬ್ರಿಟಿಷ್ ದಬ್ಬಾಳಿಕೆ ವಿರುದ್ಧ ಈ ಭಾರತೀಯರು ಕ್ರಿಯಾಶೀಲರಾದರು. ಹೀಗೆ ಹುಟ್ಟಿದ್ದು ಗದ್ದಾರ್ ಸಂಘಟನೆ.
ಸಶಸ್ತ್ರ ಕ್ರಾಂತಿ ಮೂಲಕ ಬ್ರಿಟಿಷ್ ಆಡಳಿತವನ್ನು ಕಿತ್ತೊಗೆಯುವುದು ಗದ್ದಾರ್ ಸಂಘಟನೆಯ ಗುರಿಯಾಗಿತ್ತು. ಬಾಖ್ನಾ ಗದ್ದಾರ ಸಂಘಟನೆಯ ಸ್ಥಾಪಕಾಧ್ಯಕ್ಷರಾದ ನಾಯಕ. ಕೊಮಗತಮರು ಹಡಗಿನಲ್ಲಿ ಭಾರತದ ಕ್ರಾಂತಿಕಾರಿಗಳಿಗೆ ಶಸ್ತ್ರಾಸ್ತ್ರ ಸಾಗಿಸಿದ್ದೂ ಈ ಸಾಹಸದ ಭಾಗ.
ಈ ಉದ್ದೇಶಿತ ಕ್ರಾಂತಿಯಲ್ಲಿ ಭಾಗವಹಿಸಲು ಬಾಖ್ನಾ ಭಾರತ ತಲುಪಿದರು. ಆದರೆ ಆಗಲೇ ಬ್ರಿಟಿಷರು ಈ ಸಂಚಿನ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಕಾರಣ ಇದು ವಿಫಲವಾಯಿತು. ಅಕ್ಟೋಬರ್ 13, 1914ರಂದು ಬ್ರಿಟಿಷರು ಬಾಖ್ನಾ ಅವರನ್ನು ಕೊಲ್ಕತಾದಲ್ಲಿ ಬಂಧಿಸಿದರು. ವಿಚಾರಣೆ ಬಳಿಕ ಶಿಕ್ಷೆಗೊಳಗಾದ ಬಾಖ್ನಾ ಅವರನ್ನು ಮೊದಲು ಮುಲ್ತಾನ್‌ನ ಜೈಲಿನಲ್ಲಿರಿಸಲಾಯಿತು. ಬಳಿಕ ಕೊಯಂಬತ್ತೂರ್ ಜೈಲಿಗೆ, ಅಲ್ಲಿಂದ ಯರವಾಡಾ ಜೈಲಿಗೆ ಸ್ಥಳಾಂತರಿಸಲಾಯಿತು.
ಜೈಲಿನಲ್ಲಿ ಸಿಖ್ ಖೈದಿಗಳಿಗೆ ಪೇಟ ಹಕ್ಕಿನ ಬಗ್ಗೆ ಬಾಖ್ನಾ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಹೂಡಿದರು. ಮತ್ತೆ ಬ್ರಿಟಿಷ್ ಸರಕಾರ ಅವರನ್ನು ಲಾಹೋರ್ ಜೈಲಿಗೆ ಎತ್ತಂಗಡಿ ಮಾಡಿತು. ಅಲ್ಲಿ ಕೆಳ ಜಾತಿ ಸಿಖ್ಖರು ಮತ್ತು ಮೇಲ್ಜಾತಿ ಸಿಖ್ಖರ ನಡುವೆ ಪಂಕ್ತಿ ಭೇದ ವಿರೋಧಿಸಿ ಬಾಖ್ನಾ ಮತ್ತೆ ಉಪವಾಸ ಸತ್ಯಾಗ್ರಹ ಹೂಡಿದರು! 1929ರಲ್ಲಿ ಮತ್ತೆ ಭಗತ್ ಸಿಂಗ್ ಪರವಾಗಿ ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾದರು. ಹದಿನಾರು ವರ್ಷಗಳ ಸುದೀರ್ಘ ಜೈಲುವಾಸದ ಬಳಿಕ 1930ರಲ್ಲಿ ಬಾಖ್ನಾ ಅವರ ಬಿಡುಗಡೆಯಾಯಿತು
ಬಿಡುಗಡೆಯ ಬಳಿಕ ಅವರು ಕಾರ್ಮಿಕ ಮತ್ತು ರೈತ ಚಳವಳಿಯಲ್ಲಿ ತೀವ್ರವಾಗಿ ತೊಡಗಿಸಿಕೊಂಡರು. ಜೊತೆಗೆ ಕಮ್ಯುನಿಸ್ಟ್ ಪಕ್ಷದ ಜೊತೆಗೂ ಗುರುತಿಸಿಕೊಂಡರು. ಜೈಲಿನಲ್ಲಿದ್ದ ಇತರ ಗದ್ದಾರ್ ಸಂಘಟನೆಯ ಸದಸ್ಯರ ಬಿಡುಗಡೆಗೂ ಶ್ರಮಿಸಿದರು. ಎರಡನೇ ಮಹಾಯುದ್ಧದ ವೇಳೆಗೆ ಮತ್ತೆ ಬ್ರಿಟಿಷ್ ಸರಕಾರ ಅವರನ್ನು ಜೈಲಿಗೆ ತಳ್ಳಿತು. ಸ್ವಾತಂತ್ರ್ಯ ಸಿಕ್ಕ ಮೇಲೆಯೇ ಅವರಿಗೆ ಬಿಡುಗಡೆ ದೊರಕಿದ್ದು. ಆಗಲೇ 80ರ ಹತ್ತಿರ ವಯಸ್ಸಾಗಿದ್ದ ಈ ಧೀರೋದಾತ್ತ ವೃದ್ಧ ಕ್ರಾಂತಿಕಾರಿಯನ್ನು ಮಾರ್ಚ್ 31, 1948ರಂದು ಸ್ವತಂತ್ರ ಭಾರತ ಬಂಧಿಸಿ, ಮೇ 8ರಂದು ಬಿಡುಗಡೆ ಮಾಡಿತು.
ಮತ್ತೆ ಪೋಲೀಸರು ಅವರನ್ನು ಬಂಧಿಸಹೊರಟಾಗ ನೆಹರೂ ಅವರಿಗೆ ಗೊತ್ತಾಗಿ, ಅವರ ಬಂಧನಕ್ಕೆ ಬ್ರೇಕ್ ಬಿದ್ದಿತು. ತನ್ನ ಇಳಿಗಾಲದವರೆಗೂ ರೈತ-ಕಾರ್ಮಿಕರ ಪರವಾಗಿ ಚಳವಳಿ ಹೂಡುತ್ತಿದ್ದ ಈ ಕ್ರಾಂತಿಕಾರಿ ಭೀಷ್ಮ ಡಿಸೆಂಬರ್ 21, 1968ರಲ್ಲಿ ನಿಧನ ಹೊಂದಿದರು.
ದೇಶದ ಮೊದಲ ಅಂತರ್‌ರಾಷ್ಟ್ರೀಯ ಕ್ರಾಂತಿಕಾರಿ ಸಂಘಟನೆ ಗದ್ದಾರ್‌ನ ನೇತಾರರಾಗಿ ಸುದೀರ್ಘ ಜೈಲುವಾಸ ಅನುಭವಿಸಿದರೂ, ಸ್ವಾತಂತ್ರ್ಯ ಸಿಕ್ಕ ಬಳಿಕವೂ ತಾನು ನಂಬಿದ ಸಮಸಮಾಜದ ಕನಸು ನನಸಾಗಲು ಈ ಜೀವ ಕೊನೆವರೆಗೂ ಹೋರಾಡಿತ್ತು. ಜೈಲಿನಲ್ಲಿರುವಾಗಲೂ ತನ್ನದೇ ಧರ್ಮದ ಒಳ ಅಸ್ಪಶ್ಯತೆಯ ವಿರುದ್ಧ ಹೋರಾಡಿದ್ದ ಇನ್ ಸೈಡರ್ ಕ್ರಿಟಿಕ್ ಬಾಖ್ನಾ.. ಕೊನೆ ಗಳಿಗೆ ವರೆಗೂ ಕಾರ್ಮಿಕ ರೈತ ಹೋರಾಟಗಳಲ್ಲಿ ಗುರುತಿಸಿಕೊಂಡ ಈ ಧೀರೋದಾತ್ತ ಜೀವ ವಯೋಸಹಜ ದೈಹಿಕ ನಿತ್ರಾಣ ಮತ್ತು ಶ್ವಾಸ ಸಂಬಂಧಿ ರಗಳೆಗಳಿಂದ ಬಳಲಿ 1968ರಲ್ಲಿ ತೀರಿಕೊಂಡರು. ಭಾರತದ ಇಡೀ ಸ್ವಾತಂತ್ರ್ಯ ಚಳವಳಿಯ ವಿವಿಧ ಮಜಲುಗಳಿಗೆ ಸಾಕ್ಷಿಯಾಗಿದ್ದ, ಬಾಖ್ನಾ ಸ್ವಾತಂತ್ರ್ಯೋತ್ತರ ಕಾಲದಲ್ಲೂ ಹೋರಾಟಗಳಲ್ಲಿ ಸಕ್ರಿಯರಾಗಿದ್ದರು.
ಈ ಜೀವನ ಪೂರ್ತಿ ಈ ಹೋರಾಟ, ರೈತ- ಕಾರ್ಮಿಕರ ಪರವಾಗಿ, ವ್ಯವಸ್ಥೆಯ ವಿರುದ್ಧ ಇತ್ತು. ಕೋಮುವಾದಿ ಅಜೆಂಡಾ ಈ ಯಾರ ಬಳಿಯೂ ಸುಳಿಯಲಿಲ್ಲ. ಅಷ್ಟೇಕೆ, ಭಗತ್ ಸಿಂಗ್‌ನಿಂದ ಹಿಡಿದು ಬಾಖ್ನಾ ವರೆಗೆ ಎಲ್ಲಾ ಕ್ರಾಂತಿಕಾರಿಗಳೂ ಕೋಮು ಧ್ರುವೀಕರಣವನ್ನು ನಖಶಿಕಾಂತ ವಿರೋಧಿಸಿದರು.
ರಾಮಪ್ರಸಾದ್ ಬಿಸ್ಮಿಲ್ಲಾ ಬರೆದ ಪ್ರಣಾಳಿಕೆಯಲ್ಲಂತೂ ಕೋಮುವಾದಿಗಳು ಸಂಘಟನೆಯ ಸದಸ್ಯರಾಗುವಂತಿಲ್ಲ ಎಂದು ಸ್ಪಷ್ಟವಾಗಿ ಬರೆಯಲಾಗಿತ್ತು!!
ಸಾವರ್ಕರ್ ಬಗ್ಗೆ ಮಾತಾಡುವವರು ಬಾಖ್ನಾ ಅವರಂಥಾ ಕ್ರಾಂತಿಕಾರಿಗಳ ಬಗ್ಗೆ ಓದಿದರೂ ಸಾಕು, ಸಾವರ್ಕರ್ ಕಟ್ಟಿದ್ದು ಎಂಥಾ ದೇಶ ವಿಭಜಕ ಸಿದ್ಧಾಂತ ಎಂದು ಗೊತ್ತಾಗುತ್ತದೆ.
ಜೈದೇವ್ ಕಪೂರ್,
ನಾವು ಮರೆತ
ಭಗತ್ ಸಂಗಾತಿ
ಜೈದೇವ್ ಕಪೂರ್ ಭಗತ್ ಸಿಂಗ್ ಸಂಗಾತಿಯಾಗಿದ್ದ ಕ್ರಾಂತಿಕಾರಿ. 1908, ಅಕ್ಟೋಬರ್ 24ರಂದು ಉತ್ತರ ಪ್ರದೇಶದಲ್ಲಿ ಜನಿಸಿದರು. ಅವರ ತಂದೆ ಆರ್ಯಸಮಾಜಿಯಾಗಿದ್ದರು. ಹರೆಯದಲ್ಲಿ ಜೈದೇವ್ ಕುಸ್ತಿ ಕಲಿತಿದ್ದರು. ಕಾನ್ಪುರದ ಡಿ.ಎ.ವಿ. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಜೈದೇವ್ ಕಪೂರ್ ಶಿವ ವರ್ಮಾ ಜೊತೆ ಸಚೀಂದ್ರನಾಥ್ ಸನ್ಯಾಲ್ ಸ್ಥಾಪಿಸಿದ ಹಿಂದೂಸ್ಥಾನ್ ರಿಪಬ್ಲಿಕನ್ ಅಸೋಸಿಯೇಷನ್ ಸೇರಿದರು. ಇದೇ ಮುಂದೆ ಭಗತ್ ಸಿಂಗ್, ಭಗವತಿ ಚರಣ್ ವೊಹ್ರಾ, ಚಂದ್ರಶೇಖರ್ ಆಝಾದ್ ಮುಂದಾಳತ್ವದಲ್ಲಿ ಹಿಂದೂಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ ಆಗಿ ರೂಪಾಂತರಗೊಂಡಿತು. 1925ರ ವೇಳೆಗೆ ಅಂದರೆ ಕಪೂರ್‌ಗೆ ಇನ್ನೂ 17ರ ವಯಸ್ಸು. ಸಂಘಟನೆಯು ಬನಾರಾಸ್‌ನಲ್ಲಿ ಕ್ರಾಂತಿಕಾರಿ ಸಂಘಟನೆಯನ್ನು ವಿಸ್ತರಿಸುವ ಜವಾಬ್ದಾರಿಯನ್ನು ಜೈದೇವ್ ಕಪೂರ್‌ಗೆ ವಹಿಸಿತು. ಈ ನಿಟ್ಟಿನಲ್ಲಿ ಅವರು ಬನಾರಾಸ್ ಹಿಂದೂ ಯುನಿವರ್ಸಿಟಿಗೆ ಬಿಎಸ್‌ಸಿಗೆ ಸೇರಿಕೊಂಡರು. ಭಗತ್ ಸಿಂಗ್ ಕೂಡಾ ಹಲವಾರು ದಿನ ಜೈದೇವ್ ಜೊತೆ ಹಾಸ್ಟೆಲ್‌ನಲ್ಲಿ ಉಳಿದಿದರು. 1928ರ ಸೆಪ್ಟಂಬರ್ 8-9ರಂದು ಫಿರೋಝ್ ಶಾ ಕೋಟ್ಲಾದ ಶಿಥಿಲ ಆವರಣದಲ್ಲಿ ದೇಶಾದ್ಯಂತ ಕಾರ್ಯಾಚರಣೆಗೆ ಉದ್ಯುಕ್ತರಾಗಿದ್ದ ಎಲ್ಲಾ ಕ್ರಾಂತಿಕಾರಿಗಳೂ ಸಭೆ ಸೇರಿದ್ದರು.
ಇಲ್ಲಿ ಎಚ್.ಎಸ್.ಆರ್.ಎ. ಎರಡು ಶಾಖೆಗಳನ್ನು ಹೊಂದಬೇಕು ಎಂದು ನಿರ್ಧರಿಸಲಾಯಿತು.
1. ಆಡಳಿತಾತ್ಮಕ. 2. ಮಿಲಿಟರಿ.
ಜೈದೇವ್ ಕಪೂರ್ ಮಿಲಿಟರಿ ಶಾಖೆಯ ಭಾಗವಾಗಿದ್ದರು. ಇದರ ಯೋಜನೆಯನ್ವಯ ಕಪೂರ್ ಬಾಂಬು ತಯಾರಿಕಾ ತರಬೇತಿಗಾಗಿ ಆಗ್ರಾ ಸೇರಿದರು.
ಭಗತ್ ಸಿಂಗ್ ಮತ್ತು ಆತನ ಸಂಗಾತಿಗಳು ದಮನಕಾರಿ ಮಸೂದೆಗಳ ವಿರುದ್ಧ ಸಂಸತ್ತಿನಲ್ಲಿ ಹುಸಿ ಬಾಂಬು ಎಸೆದರಷ್ಟೆ. ಈ ಹುಸಿಬಾಂಬನ್ನು ತಯಾರಿಸಿದ್ದು ಜೈದೇವ್ ಕಪೂರ್. ಅಷ್ಟೇ ಅಲ್ಲ ತಾನು ದಿಲ್ಲಿ ಕಾಲೇಜಿನ ವಿದ್ಯಾರ್ಥಿ ಎಂದು ಹೇಳಿಕೊಂಡು ಅಸೆಂಬ್ಲಿಯ ಗ್ರಂಥಾಲಯಕ್ಕೂ ಪ್ರವೇಶ ಗಿಟ್ಟಿಸಿಕೊಂಡ ಕಪೂರ್, ಸಂಸತ್ತಿನ ವಿಚಕ್ಷಣಾಧಿಕಾರಿಯ ಸ್ನೇಹ ಬೆಳೆಸಿಕೊಂಡರು. ಅವರ ಮೂಲಕ ಸಂಸತ್ತಿಗೆ ಪ್ರವೇಶ ಮಾಡಲು ಬೇಕಾದ ಪಾಸ್‌ಗಳನ್ನೂ ಗಿಟ್ಟಿಸಿಕೊಂಡರು. ತನ್ನ ಸಂಗಾತಿಗಳನ್ನೂ ಕರೆದುಕೊಂಡು ಹೋಗಿ ಸಂಸತ್ತಿನ ಭೌತಿಕ ವಿವರಗಳ ಇನ್‌ಸ್ಪೆಕ್ಷನ್ ಕೂಡಾ ಈ ತಂಡ ಮಾಡಿತು!
ಈಗ ಜಗದ್ವಿಖ್ಯಾತವಾಗಿರುವ ಹ್ಯಾಟ್-ಸೂಟ್ ಹಾಕಿಕೊಂಡಿರುವ ಭಗತ್ ಫೋಟೊ ಇದೆಯಲ್ಲಾ, ಆ ಫೋಟೊ ತೆಗೆಸಲು ಸ್ಟುಡಿಯೋವನ್ನೂ ಸಂಶಯ ಬಾರದಂತೆ ಗೊತ್ತು ಮಾಡಿದ್ದೂ ಕಪೂರ್.
ಈ ಮಧ್ಯೆ ವೈಸರಾಯ್ ಇರ್ವಿನ್ ಅವರ ಕಾರಿನ ಮೇಲೆ ಬಾಂಬೆಸೆಯುವ ಯೋಜನೆಯನ್ನೂ ಈ ಕ್ರಾಂತಿಕಾರಿಗಳು ಹಾಕಿಕೊಂಡಿದ್ದರು. ಜೈದೇವ್ ಬಾಂಬ್ ಎಸೆಯುವ ಜವಾಬ್ದಾರಿ ವಹಿಸಿಕೊಂಡಿದ್ದರು. ರಾಜ್ ಗುರು ಕಾರು ಬರುವುದನ್ನು ನೋಡಿ ಸಂಕೇತ ನೀಡಬೇಕಿತ್ತು. ಆದರೆ ವೈಸರಾಯ್ ಬದಲು ಆ ಕಾರಿನಲ್ಲಿ ಮೂವರು ಮಹಿಳೆಯರು ಇರುವುದನ್ನು ಕಂಡು ರಾಜ್ ಗುರು ಸಮ್ಮತಿ ಸಂಕೇತ ನೀಡಲಿಲ್ಲ. ಈ ನೈತಿಕ ನಡೆಯ ಬಗ್ಗೆ ಸಂಘಟನೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿತು. ಅಮಾಯಕರ ಹತ್ಯೆ ತಮ್ಮ ಉದ್ದೇಶವಲ್ಲ ಎಂಬುದು ಸಂಘಟನೆಯ ನಿಲುವಾಗಿತ್ತು.
ಸಂಸತ್ತಿನ ಬಾಂಬು ಪ್ರಕರಣದ ಬಳಿಕ ಕಪೂರ್ ಬಾಂಬು ಫ್ಯಾಕ್ಟರಿಯನ್ನು ಸಹ್ರಾನ್ಪುರ್‌ಗೆ ಸ್ಥಳಾಂತರಿಸಿದರು. ಅಲ್ಲೊಂದು ಡಿಸ್ಪೆನ್ಸರಿಯನ್ನು ಮುಂದೆ ಇಟ್ಟುಕೊಂಡು ಬಾಂಬು ತಯಾರಿಸುವುದು ಕಪೂರ್ ಮತ್ತು ಅವರ ಸಹಚರರ ಉದ್ದೇಶವಾಗಿತ್ತು. ಆದರೆ ಕಾಸಿಲ್ಲದೇ ಈ ಕ್ರಾಂತಿಕಾರಿಗಳು ಏನೂ ಮಾಡಲಾಗದೆ ದಿನ ಕಳೆಯಬೇಕಾಯಿತು. ಈ ಸುಖಾ ಸುಮ್ಮನೆ ವ್ಯಸ್ತವಾಗಿದ್ದ ಡಿಸ್ಪೆನ್ಸರಿ ಬಗ್ಗೆ ಸ್ಥಳೀಯರಿಗೂ ಪೋಲಿಸರಿಗೂ ಸಂಶಯ ಬಂದು ಪೊಲೀಸರು ದಾಳಿ ಮಾಡಿ ಎಲ್ಲರನ್ನೂ ಬಂಧಿಸಿದರು.
ಜೈದೇವ್ ಕಪೂರ್ ಅವರ ಸಹಿತ ಎಲ್ಲರನ್ನೂ ಮೊದಲು ಲಾಹೋರ್ ಜೈಲಿಗೆ ಕಳಿಸಲಾಯಿತು. ಬಳಿಕ ತೀರ್ಪಿನ ಬಳಿಕ ಜೈದೇವ್ ಕಪೂರ್ ಅವರನ್ನು ಅಂಡಮಾನ್‌ಗೆ ಕಳುಹಿಸಲಾಯಿತು. ಕಪೂರ್ 16 ವರ್ಷಗಳ ಕಾಲ ಅಂಡಮಾನ್‌ನಲ್ಲಿ ಶಿಕ್ಷೆ ಅನುಭವಿಸಿದರು. ಸ್ವಾತಂತ್ರ್ಯ ಪ್ರಾಪ್ತವಾಗುವ ಕೆಲಸಮಯ ಮೊದಲಷ್ಟೇ ಅವರ ಬಿಡುಗಡೆಯಾಯಿತು.
ಅಂಡಮಾನ್‌ನಲ್ಲಿ ಮೊದಲ 60 ದಿನ ಕಪೂರ್ ಅವರಿಗೆ ದಿನಾ 20 ಚಾಟಿ ಏಟು ನೀಡಲಾಗಿತ್ತು. ಅವರ ದೇಹದ ತುಂಬಾ ಈ ಚಾಟಿ ಏಟಿನ ಗುರುತು ಶಾಶ್ವತವಾಗಿತ್ತು.
ಸ್ವಾತಂತ್ರ್ಯದ ಬಳಿಕ ಹಲವಾರು ಇತರ ಕ್ರಾಂತಿಕಾರಿಗಳಂತೆ ಜೈದೇವ್ ಕಪೂರ್ ಕೂಡಾ ಅನಾಮಿಕತೆಯಲ್ಲಿ ಬದುಕಿದರು. ಅವರು 1994ರಲ್ಲಿ ಅಸುನೀಗಿದರು.
ಭಗತ್ ಸಿಂಗ್ ಬಾಂಬು ಹಾಕುವ ಮೊದಲು ತನ್ನಲ್ಲಿದ್ದ ವಾಚ್ ಮತ್ತು ಬೂಟುಗಳನ್ನು ಜೈದೇವ್ ಕಪೂರ್‌ಗೆ ನೀಡಿ, ‘‘ನನಗೆ ಇದು ಇನ್ನು ಉಪಯೋಗವಿಲ್ಲ, ನನ್ನ ಹಾದಿ ಗತಿ ಎಲ್ಲಿಗೆ ಒಯ್ಯುತ್ತೆ ಅಂತ ನನಗೆ ಗೊತ್ತು’’ ಎಂದಿದ್ದರು.
ಸಾಯುವವರೆಗೂ ಕಪೂರ್ ಈ ಎರಡನ್ನೂ ಅಮೂಲ್ಯ ಸ್ಮರಣಿಕೆಯಾಗಿ ಕಾಯ್ದುಕೊಂಡಿದ್ದರು.
ಜೈದೇವ್ ಕಪೂರ್ ಸಹಿತ ಇನ್ನೂ ಹಲವಾರು ಕ್ರಾಂತಿಕಾರಿಗಳ ಬಗ್ಗೆ ತುಂಬಾ ವಿವರಗಳೇ ಲಭ್ಯವಾಗುತ್ತಿಲ್ಲ. ನಾವು ನಿರ್ಲಕ್ಷಿಸಿದ್ದರ ಪುರಾವೆ ಇದು.
ಸಾವರ್ಕರ್ ಕುರಿತಾದ ರಂಜಿತ ಕೃತಿಯಲ್ಲಿ ಅವರು ಕೊರಡೆ ಏಟು ತಿನ್ನುತ್ತಿದ್ದ ವಿವರಗಳೂ, ರೇಖಾ ಚಿತ್ರವೂ ಇದೆ. ಒಳ್ಳೆಯದು. ಆದರೆ ಈ ಶಿಕ್ಷೆ ಅನುಭವಿಸಿದ ಕಪೂರ್ ಸಹಿತ ಇತರ ಕ್ರಾಂತಿಕಾರಿಗಳ ಬಗ್ಗೆ ಯಾವ ವಿವರಗಳೂ ಇಲ್ಲ! ಇದನ್ನೆಲ್ಲಾ ದಾಖಲಿಸಬೇಕೆಂದು ತದನಂತರದ ತಲೆಮಾರಿಗೆ ಅನ್ನಿಸಲೇ ಇಲ್ಲವೇ? ಹಿಂದಿಯಲ್ಲಿ ಒಂದೆರಡು ಕೃತಿಗಳಿವೆ. ಅವು ಅನುವಾದವಾಗಿಲ್ಲ.
ಇದಕ್ಕಿಂತ ನಾಚಿಕೆಗೇಡಿನ ಅಂಶವೆಂದರೆ ಜೈದೇವ್ ಕಪೂರ್ 1994ರ ವರೆಗೂ ಬದುಕಿದ್ದರು. ಯಾರಿಗೂ ಅವರು ನೆನಪಾಗಲಿಲ್ಲ. ಆ ವೇಳೆಗಾಗಲೇ ನಾವು ಮಾತಿನ ಶೂರರಾಗಿದ್ದ, ಕೋಮು ವಿಷ ಹರಡುತ್ತಿದ್ದ ರಾಜಕಾರಣಿಗಳು, ಭ್ರಷ್ಟ ಜಾತಿ ನಾಯಕರ ವರಸೆಗೆ ಕಿವಿ, ಕಣ್ಣು ನೀಡಿಯಾಗಿತ್ತು!
ಜೈದೇವ್ ಕಪೂರ್ ಅಮೂಲ್ಯ ಸ್ಮರಣಿಕೆಯಾಗಿ ಕಾಯ್ದುಕೊಂಡಿದ್ದ
ಭಗತ್ ಸಿಂಗ್‌ರ ವಾಚ್ ಮತ್ತು ಬೂಟುಗಳು







