ಸ್ವಂತ ಖರ್ಚಿನಲ್ಲಿ 24x7 ಗ್ರಂಥಾಲಯ; ಸ್ಪರ್ಧಿಗಳಿಗೆ ನೆರವು

ರಾಯಚೂರು: ಸರಕಾರಿ ಉದ್ಯೋಗಕ್ಕಾಗಿ ತಯಾರಿ ನಡೆಸುವ ಸ್ಪರ್ಧಾಕಾಂಕ್ಷಿಗಳು ಅದರಲ್ಲೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಓದುವುದೇ ದೊಡ್ಡ ಸವಾಲು. ಅಗತ್ಯ ಪ್ರಮಾಣದಲ್ಲಿ ಪುಸ್ತಕ, ನೋಟ್ಸ್, ಮಾರ್ಗದರ್ಶನ ಸಿಗುವುದು ವಿರಳ, ಇಂತಹ ಸಮಸ್ಯೆಗಳ ಪರಿಹಾರವಾಗಿ ಮಾನ್ವಿ ತಹಶೀಲ್ದಾರ್ ಭೀಮರಾಯ ಬಿ.ರಾಮಸಮುದ್ರ ಅವರು ಮುಂದೆ ಬಂದು ನೆರವು ನೀಡುತ್ತಿದ್ದಾರೆ.
ಸಾಮಾನ್ಯವಾಗಿ ತಮ್ಮ ಕೆಲಸ, ಮನೆ, ಕುಟುಂಬಕ್ಕೆ ಮಾತ್ರ ಕೆಲಸ ಮಾಡುವವರ ಮಧ್ಯೆ ತಹಶೀಲ್ದಾರ್ ಭೀಮರಾಯ ಅವರು ಸ್ವಂತ ಖರ್ಚಿನಲ್ಲಿ 24x7 ಗ್ರಂಥಾಲಯ ತೆರೆದು ಸ್ಪರ್ಧಾತ್ಮಕ ಪರೀಕ್ಷೆ ತಯಾರಿಯಲ್ಲಿರುವ ಅಭ್ಯರ್ಥಿಗಳಿಗೆ ಸಹಾಯಹಸ್ತ ನೀಡುತ್ತಿರುವುದು ಹಲವರ ಮೆಚ್ಚುಗೆಗೆ ಪಾತ್ರವಾಗಿದೆ.
ಮಾನ್ವಿ ಪಟ್ಟಣದ ಉದ್ಯೋಗಕಾಂಕ್ಷಿಗಳು ಈ ಮೊದಲು ನಿತ್ಯದ ಅಧ್ಯಯನಕ್ಕೆ ಸಾರ್ವಜನಿಕ ಗ್ರಂಥಾಲಯ ಮತ್ತು ಖಾಸಗಿ ರೀಡಿಂಗ್ ರೂಮ್ ಮೇಲೆ ಅವಲಂಬನೆಯಾಗಿದ್ದರು. ಕಳೆದ ವರ್ಷ ತಹಶೀಲ್ದಾರ್ ಭೀಮರಾಯ ಅವರು ಮಾನ್ವಿ ಪಟ್ಟಣದ ಆರ್ಜಿ ಕ್ಯಾಂಪ್ ರಸ್ತೆಯಲ್ಲಿರುವ ಖಾಸಗಿ ಕಟ್ಟಡವನ್ನು ತಮ್ಮ ಸ್ವಂತ ಹಣದಿಂದ ಬಾಡಿಗೆ ಪಡೆದು ಯುವಕರು, ಕಾಲೇಜು ವಿದ್ಯಾರ್ಥಿಗಳು ಪ್ರತಿದಿನ ಓದಲು 24x7 ಉಚಿತ ಗ್ರಂಥಾಲಯ ಹಾಗೂ ಅಧ್ಯಯನ ಕೇಂದ್ರ ತೆರೆದಿರುವುದು ವಿದ್ಯಾರ್ಥಿಗಳಲ್ಲಿ ಸಂತಸ ಮೂಡಿಸಿದೆ.
ಈ ಅಧ್ಯಯನ ಕೇಂದ್ರದ ನಿರ್ವಹಣಾ ವೆಚ್ಚವನ್ನು ಅವರೇ ಭರಿಸುತ್ತಿದ್ದಾರೆ. ಸುಸಜ್ಜಿತ ಕುರ್ಚಿ, ಟೇಬಲ್, ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ನೂರಾರು ಪುಸ್ತಕಗಳು ಇರುವ ಈ ಅಧ್ಯಯನ ಕೇಂದ್ರವನ್ನು ಕಳೆದ ಒಂದು ವರ್ಷದಿಂದ ನೂರಾರು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಸ್ಥಳೀಯ ಕೆಲವು ದಾನಿಗಳು ಸಹ ಸ್ಪರ್ಧಾತ್ಮಕ ಪರೀಕ್ಷೆಯ ಮಾರ್ಗದರ್ಶಿ ಪುಸ್ತಕಗಳನ್ನು ದೇಣಿಗೆಯಾಗಿ ನೀಡಿದ್ದಾರೆ.
ತಹಶೀಲ್ದಾರ್ ಭೀಮರಾಯ ಬಿ.ರಾಮಸಮುದ್ರ ತಮ್ಮ ತಂಡದೊಂದಿಗೆ ರಚಿಸಿರುವ ‘ಜೇಡರ ಬಲೆ’ ಎಂಬ 25 ಸಾವಿರ ಪ್ರಶೋತ್ತರಗಳನ್ನು ಒಳಗೊಂಡ ಸಾಮಾನ್ಯ ಜ್ಞಾನ (ಜಿ.ಕೆ) ಪುಸ್ತಕದ ನೂರಾರು ಪ್ರತಿಗಳನ್ನು ಯುವಕರಿಗೆ ಉಚಿತವಾಗಿ ವಿತರಿಸಲಾಗಿದೆ.
ಭೀಮರಾಯ ಅವರು ತಮ್ಮ ಕರ್ತವ್ಯದ ಜೊತೆಗೆ ಬಿಡುವಿನ ವೇಳೆ ಮಾನ್ವಿ ಪಟ್ಟಣದಲ್ಲಿ ಸ್ಪರ್ಧಾಕಾಂಕ್ಷಿಗಳಿಗಾಗಿ ತಹಶೀಲ್ದಾರ್ ಭೀಮರಾಯ ಆರಂಭಿಸಿರುವ ಅಧ್ಯಯನ ಕೇಂದ್ರ ಹಾಗೂ ಇತರ ಸಂಸ್ಥೆಗಳಲ್ಲಿ ನಡೆಯುವ ಸ್ಪರ್ಧಾತ್ಮಕ ತಯಾರಿ ಕಾರ್ಯಾಗಾರಗಳಲ್ಲಿ ಖುದ್ದಾಗಿ ವಿಶೇಷ ಉಪನ್ಯಾಸಗಳ ಮೂಲಕ ಮಾರ್ಗದರ್ಶನ ನೀಡುತ್ತಿದ್ದಾರೆ. ಇದಲ್ಲದೇ ಕೆಎಎಸ್, ಐಎಎಸ್ ಪರೀಕ್ಷೆ ತಯಾರಿ ಕುರಿತು ಮಾರ್ಗದರ್ಶನ ಮಾಡುತ್ತಿದ್ದಾರೆ.
ಮೂಲತಃ ಯಾದಗಿರಿ ಜಿಲ್ಲೆಯ ರಾಮಸಮುದ್ರ ಗ್ರಾಮದವರಾದ ತಹಶೀಲ್ದಾರ್ ಭೀಮರಾಯ ತಾವು ಕೆಎಎಸ್ ಹಾಗೂ ಇತರ ಪರೀಕ್ಷೆಗಳಿಗೆ ಸಿದ್ಧತೆಯಲ್ಲಿದ್ದಾಗ ಮಾರ್ಗದರ್ಶನ ಹಾಗೂ ಪುಸ್ತಕಗಳ ಕೊರತೆ ಎದುರಿಸಿದ್ದರು, ತಮ್ಮಂತೆ ಈಗಿನ ಯುವಕ, ಯುವತಿಯರು ಸಮಸ್ಯೆ ಅನುಭವಿಸಬಾರದು ಎಂಬ ಉದ್ದೇಶದೊಂದಿಗೆ ಕೇವಲ ಪ್ರೇರಣಾನುಡಿ, ಉಪನ್ಯಾಸಕ್ಕೆ ಸೀಮಿತವಾಗದೇ ತಮ್ಮ ಕೈಲಾದಷ್ಟು ಆರ್ಥಿಕ ನೆರವು ನೀಡುತ್ತಿದ್ದಾರೆ.
ಆ.2ರಂದು ನಡೆದ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆ ಹಿನ್ನೆಲ್ಲೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸುವ ಅಭ್ಯರ್ಥಿಗಳಿಗೆ ಭೀಮರಾಯ ಸಾಮಸಮುದ್ರ ಅವರು ತಮ್ಮ ಸ್ವಂತ ಖರ್ಚಿನಿಂದ ಉಚಿತ ವಸತಿ, ಊಟದ ವ್ಯವಸ್ಥೆ ಮಾಡಿದ್ದಾರೆ. ಮಾನ್ವಿ ಪಟ್ಟಣದ ಐಬಿ ರಸ್ತೆಯ ಟೌನ್ ಹಾಲ್, ಈದ್ಗಾ ಮೈದಾನದ ಬಳಿಯ ಶಾದಿಮಹಲ್ ಹಾಗೂ ಭೀಮರಾಯ 24x7 ಗ್ರಂಥಾಲಯ ಕಟ್ಟಡದಲ್ಲಿ ಅಂದರೆ ಪಟ್ಟಣದ ಮೂರು ಸ್ಥಳಗಳಲ್ಲಿ ವಸತಿ, ಊಟದ ವ್ಯವಸ್ಥೆ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇಷ್ಟೇ ಅಲ್ಲದೇ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿರುವುದನ್ನು ಕಳಚಿಹಾಕಲು ಸರಕಾರಿ ಹುದ್ದೆಗಳಲ್ಲಿ ಈ ಭಾಗದ ವಿದ್ಯಾರ್ಥಿಗಳು ಹೆಚ್ಚಾಗಿ ಆಯ್ಕೆಯಾಗಬೇಕು ಎಂಬ ಮಹದಾಸೆ ಅವರದ್ದು, ಎಸೆಸೆಲ್ಸಿ ಪರೀಕ್ಷೆಯ ಮುಂಚೆ ಹತ್ತನೆಯ ತರಗತಿಯ ಮಕ್ಕಳ ಮನೆಗಳಿಗೆ ಬೆಳಿಗ್ಗೆ ಭೇಟಿ ನೀಡಿ ಮಕ್ಕಳಿಗೆ ಬೆಳಿಗಿನ ಜಾವ ಹಾಗೂ ಸಂಜೆಯ ವೇಳೆ ಮೊಬೈಲ್ ಗೀಳು, ಟಿ.ವಿ ಮಾಧ್ಯಮದಿಂದ ದೂರ ಉಳಿಯುವಂತೆ ಜಾಗೃತಿ ಮೂಡಿಸಿ ಏಕಾಗ್ರತೆಯಿಂದ ಓದುವಂತೆ ಜಾಗೃತಿ ಮೂಡಿಸಿದ್ದರು.
ಯಾವುದೇ ಸರಕಾರಿ ಹುದ್ದೆ ಪಡೆಯಬೇಕಾದರೆ ಸಾಕಷ್ಟು ಪೂರ್ವತಯಾರಿ, ನಿರಂತರ ಅಧ್ಯಯನದ ಜೊತೆಗೆ ಸಕಾರಾತ್ಮಕ ಚಿಂತನೆಯಿದ್ದರೆ ಯಶಸ್ವಿಯಾಗಬಹುದು. ಇದೇ 24x7ಗ್ರಂಥಾಲಯ ಸ್ಥಾಪನೆಯ ಮುಖ್ಯ ಉದ್ದೇಶ. ಈ ಭಾಗದ ಯುವಕ, ಯುವತಿಯರು ಸ್ಪರ್ಧಾತ್ಮಕ ಪರೀಕ್ಷೆ ಪಾಸ್ ಆಗಿ ನೌಕರಿ ಪಡೆಯಬೇಕು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಲ್ಲಿ ಮತ್ತಷ್ಟು ಸೌಲಭ್ಯ ಕಲ್ಪಿಸಲಾಗುವುದು.
-ಭೀಮರಾಯ ಬಿ. ರಾಮಸಮುದ್ರ
ತಹಶೀಲ್ದಾರ್ ಮಾನ್ವಿ
ತಹಶೀಲ್ದಾರ್ ಭೀಮರಾಯ ಅವರು ಗ್ರಂಥಾಲಯ ತೆರೆದು ಬಡ ಮಕ್ಕಳೂ ಸರಕಾರಿ ನೌಕರಿ ಪಡೆಯುವ ಕನಸು ಕಾಣುವಂತೆ ಮಾಡಿದ್ದಾರೆ. ಅನೇಕ ಬಾರಿ ಖುದ್ದಾಗಿ ಮಕ್ಕಳಿಗೆ ಉಪನ್ಯಾಸ ಮತ್ತು ಸಿಇಟಿ ಕಾರ್ಯಗಾರ ಮಾಡಿದ್ದಾರೆ. 800 ರೂ. ಬೆಲೆಯ ಜೇಡರ ಬಲೆ ಪುಸ್ತಕ ಉಚಿತವಾಗಿ ವಿತರಿಸಿ ಮಾರ್ಗದರ್ಶನ ಮಾಡಿದ್ದಾರೆ.
-ಮಹೆಬೂಬ್ ಮದ್ಲಾಪುರ ಉಪನ್ಯಾಸಕ






