ಜೇವರ್ಗಿಯಲ್ಲಿ 26 ‘ಏಕೋಪಾಧ್ಯಾಯ’ ಶಾಲೆಗಳು: ಶಿಕ್ಷಣ ವ್ಯವಸ್ಥೆ ಬಗ್ಗೆ ಆತಂಕ

ಜೇವರ್ಗಿ: ಖಾಸಗಿ ಶಾಲೆಗಳ ಸಂಖ್ಯೆಯ ಹೆಚ್ಚಳ ಮತ್ತು ಉತ್ತಮ ಸೌಲಭ್ಯಗಳ ನಡುವೆಯೇ ಜೇವರ್ಗಿ ತಾಲೂಕಿನಲ್ಲಿ ಸರಕಾರಿ ಪ್ರಾಥಮಿಕ ಶಾಲೆಗಳ ಸ್ಥಿತಿ ದಿನದಿಂದ ದಿನಕ್ಕೆ ಚಿಂತಾಜನಕವಾಗುತ್ತಿದೆ. ಜೇವರ್ಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯಲ್ಲಿ ಒಟ್ಟು 26 ಸರಕಾರಿ ಪ್ರಾಥಮಿಕ ಶಾಲೆಗಳು ಏಕೋಪಾಧ್ಯಾಯ (ಒಬ್ಬರೇ ಶಿಕ್ಷಕ) ಶಾಲೆಗಳಾಗಿರುವುದು ಬೆಳಕಿಗೆ ಬಂದಿದೆ.
ತಾಲೂಕಿನಲ್ಲಿ ಒಟ್ಟು 233 ಸರಕಾರಿ ಪ್ರಾಥಮಿಕ ಶಾಲೆಗಳಿದ್ದು, ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ ಒಂದು ತರಗತಿಯಲ್ಲಿ 30ಕ್ಕಿಂತ ಕಡಿಮೆ ವಿದ್ಯಾರ್ಥಿ ಗಳಿದ್ದರೆ ಒಬ್ಬ ಶಿಕ್ಷಕರ ನೇಮಕಕ್ಕೆ ಅವಕಾಶವಿದೆ. ಈ ನಿಯಮದ ಕಾರಣದಿಂದ ಹಲವಾರು ಶಾಲೆಗಳಲ್ಲಿ 1 ರಿಂದ 5ನೇ ತರಗತಿಯವರೆಗೆ ಓರ್ವ ಶಿಕ್ಷಕರು ಬೋಧನೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ವಿಲೀನ ಪ್ರಸ್ತಾಪದ ಮೇಲೂ ಚರ್ಚೆ
ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳನ್ನು ವಿಲೀನಗೊಳಿಸುವ ಪ್ರಸ್ತಾಪ ಹಲವು ಬಾರಿ ಬಂದಿದ್ದರೂ, ಸಾರ್ವಜನಿಕ ವಿರೋಧದಿಂದಾಗಿ ಅದು ಅನುಷ್ಠಾನವಾಗಿಲ್ಲ. ಆದರೆ, ವಿಲೀನಕ್ಕೆ ವಿರೋಧ ವ್ಯಕ್ತಪಡಿಸುವವರೇ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಧ್ವನಿ ಎತ್ತದಿರುವುದು ವಿಪರ್ಯಾಸವೆಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಶಿಕ್ಷಕ ಅನುಪಸ್ಥಿತಿಯಾದರೆ ಶಾಲೆಗೆ ರಜೆ
ಏಕೋಪಾಧ್ಯಾಯ ಶಾಲೆಗಳಲ್ಲಿ ಶಿಕ್ಷಕರು ಅನಾರೋಗ್ಯ ಅಥವಾ ಆಡಳಿತಾತ್ಮಕ ಕೆಲಸಗಳ ನಿಮಿತ್ತ ರಜೆ ಪಡೆದರೆ, ಆ ದಿನ ಶಾಲೆಗೆ ರಜೆ ಘೋಷಿಸುವುದು ಅನಿವಾರ್ಯವಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ಅಡ್ಡಿಯಾಗುತ್ತಿದೆ. ಅಲ್ಲದೆ, ಬೋಧನೆಯ ಜೊತೆಗೆ ಮಧ್ಯಾಹ್ನದ ಬಿಸಿಯೂಟ, ದಾಖಲೆ ನಿರ್ವಹಣೆ ಮತ್ತು ವಿವಿಧ ಸರಕಾರಿ ಯೋಜನೆಗಳ ಜವಾಬ್ದಾರಿಯನ್ನೂ ಒಬ್ಬರೇ ಶಿಕ್ಷಕರು ಹೊರುವಂತಾಗಿದೆ.
ಖಾಸಗಿ ಶಾಲೆಗಳಿಗೆ ಹೆಚ್ಚುತ್ತಿರುವ ಬೇಡಿಕೆ
ಗ್ರಾಮೀಣ ಪ್ರದೇಶಗಳಲ್ಲಿಯೇ ಖಾಸಗಿ ಶಾಲೆಗಳು ಬಾಡಿಗೆ ಕಟ್ಟಡಗಳಲ್ಲಿ, ಬಸ್ ವ್ಯವಸ್ಥೆಯೊಂದಿಗೆ ಸುತ್ತಮುತ್ತಲ ಗ್ರಾಮಗಳ ಮಕ್ಕಳನ್ನು ಸೆಳೆದು ಸುಗಮವಾಗಿ ಕಾರ್ಯನಿರ್ವಹಿಸುತ್ತಿವೆ. ಕೆಲ ಖಾಸಗಿ ಶಾಲೆಗಳಲ್ಲಿ ಸೀಟು ಪಡೆಯಲು ಪೋಷಕರು ಅಲೆದಾಡುವ ಪರಿಸ್ಥಿತಿ ಇದೆ. ಇದಕ್ಕೆ ವಿರುದ್ಧವಾಗಿ, ಸರಕಾರಿ ಶಾಲೆಗಳು ದಾಖಲಾತಿ ಕೊರತೆಯಿಂದ ಸಂಕಷ್ಟ ಎದುರಿಸುತ್ತಿವೆ.
ನಮ್ಮ ವ್ಯಾಪ್ತಿಯಲ್ಲಿ ಒಬ್ಬ ಶಿಕ್ಷಕರಿರುವ ಹಾಗೂ ಶಿಕ್ಷಕರೇ ಇಲ್ಲದ ಕೆಲವು ಶಾಲೆಗಳಿವೆ. ಅಂತಹ ಶಾಲೆಗಳಿಗೆ ಸಮೀಪದ ಶಾಲೆಗಳ ಶಿಕ್ಷಕರನ್ನು ಹಾಗೂ ತಾತ್ಕಾಲಿಕ ಅತಿಥಿ ಶಿಕ್ಷಕರನ್ನು ನಿಯೋಜಿಸಲಾಗಿದೆ. ಬೋಧನೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ.
-ವೀರಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ, ಜೇವರ್ಗಿ
ಮೂಲಸೌಕರ್ಯ ಕೊರತೆ ದೊಡ್ಡ ಸವಾಲು
ಸರಕಾರಿ ಶಾಲೆಗಳಲ್ಲಿ ಸಮರ್ಪಕ ಕಟ್ಟಡ, ಶಿಕ್ಷಕರ ಸಂಖ್ಯೆ ಮತ್ತು ಕಲಿಕೆಗೆ ಅಗತ್ಯವಿರುವ ಮೂಲಸೌಲಭ್ಯಗಳ ಕೊರತೆಯೇ ಪೋಷಕರನ್ನು ದೂರ ಮಾಡುತ್ತಿರುವ ಪ್ರಮುಖ ಕಾರಣವಾಗಿದೆ. ಪ್ರತಿವರ್ಷ ಶಾಲಾ ಪ್ರವೇಶಕ್ಕಾಗಿ ಜಾಗೃತಿ ಅಭಿಯಾನ ನಡೆದರೂ, ವ್ಯವಸ್ಥೆಯ ಕೊರತೆಯಿಂದ ಪೋಷಕರ ಮನವೊಲಿಸುವಲ್ಲಿ ಶಿಕ್ಷಣ ಇಲಾಖೆ ವಿಫಲವಾಗುತ್ತಿದೆ.
ಸರಕಾರಿ ಶಾಲೆಗಳಲ್ಲಿ ಸಮರ್ಪಕ ಮೂಲಸೌಲಭ್ಯಗಳಿಲ್ಲ. ಒಬ್ಬರೇ ಶಿಕ್ಷಕರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಾಧ್ಯವಿಲ್ಲ. ಹೀಗಾಗಿ ಕಷ್ಟವಾದರೂ ಖಾಸಗಿ ಶಾಲೆಗಳಿಗೆ ಹಣ ನೀಡಿ ಮಕ್ಕಳನ್ನು ಸೇರಿಸಬೇಕಾದ ಸ್ಥಿತಿ ಎದುರಾಗಿದೆ.
- ರಮೇಶ, ಪೋಷಕರು, ಯಡ್ರಾಮಿ







