ಸೌಕೂರು ಏತ ನೀರಾವರಿ ಯೋಜನೆ | 4ಮೆಸ್ಕಾಂ ಬಿಲ್ ಬಾಕಿಯಿಂದ ಪವರ್ ಕಟ್; ರೈತರಿಗೆ ಊಟಕ್ಕಿಲ್ಲದ ಉಪ್ಪಿನಕಾಯಿ!

ಸೌಕೂರು ಏತ ನೀರಾವರಿ ಪಂಪಿಂಗ್ ಹೌಸ್ |ಸುಗ್ಗಿ ಕೃಷಿಗೆ ಸಜ್ಜುಗೊಳಿಸಿದ ಗದ್ದೆ ನೀರಿಗಾಗಿ ಕಾದಿರುವುದು
ಕುಂದಾಪುರ : ಮಳೆಗಾಲದ ಬಳಿಕ ಹಿಂಗಾರು ಋತುವಿನಲ್ಲಿ ಎರಡನೇ ಬೆಳೆ (ಸುಗ್ಗಿ ಕೃಷಿ) ಮಾಡಲು ರೈತರು ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿದೆ. ರೈತರಿಗೆ ವರವಾಗಬೇಕಿದ್ದ ಸೌಕೂರು ಏತ ನೀರಾವರಿ ಯೋಜನೆ ಇದೀಗ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಇದರಿಂದ ಕೃಷಿಯನ್ನೇ ನಂಬಿ ಬದುಕುವವರು ತಲೆಮೇಲೆ ಕೈಹೊತ್ತು ಕೂರುವಂತಾಗಿದೆ.
ಕಳೆದ ಸುಮಾರು ಒಂದೂವರೆ ವರ್ಷದಿಂದ ಅಂದಾಜು ಎರಡು ಕೋಟಿ ರೂ.ನಷ್ಟು ವಿದ್ಯುತ್ ಬಿಲ್ನ್ನು ಕರ್ನಾಟಕ ನೀರಾವರಿ ನಿಗಮ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಮೆಸ್ಕಾಂ ಇದೀಗ ವಿದ್ಯುತ್ ಸಂಪರ್ಕದ ಕಡಿತಕ್ಕೆ ಮುಂದಾಗಿರುವುದು ಪರಿಸರದ ರೈತರ ಸಂಕಷ್ಟಕ್ಕೆ ಪ್ರಧಾನ ಕಾರಣವಾಗಿದೆ.
ಕೃಷಿಕರು, ರೈತರ ಭೂಮಿಗೆ ನೀರುಣಿಸಲು ಕಳೆದ ನಾಲ್ಕೂವರೆ ದಶಕಕ್ಕೂ ಅಧಿಕ ವರ್ಷಗಳಿಂದ ಬಹುಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ವಾರಾಹಿ ಮೂಲ ಯೋಜನೆ ಕಾಮಗಾರಿಯೇ ಇನ್ನೂ ಕುಂಟುತ್ತಾ ಸಾಗುವ ಬೆನ್ನಲ್ಲೇ ಅದರ ಇನ್ನೊಂದು ಭಾಗವಾದ ಏತ ನೀರಾವರಿ ಯೋಜನೆಯೂ ಹಳ್ಳ ಹಿಡಿಯುವ ಲಕ್ಷಣಗಳು ಗೋಚರವಾಗುತ್ತಿವೆ.
ಹಲವಾರು ವರ್ಷಗಳಿಂದ ಕೃಷಿಕಾರ್ಯ ಮಾಡಲು ಪರಿತಪಿಸುತ್ತಿದ್ದವರಿಗೆ ಸೌಕೂರು ಏತನೀರಾವರಿ ಯೋಜನೆ ಒಂದು ವರ್ಷ ನೆರವಾಗಿದ್ದು, ಸುಳ್ಳಲ್ಲ. ತಾಂತ್ರಿಕ ವ್ಯವಸ್ಥೆಗಳ ಜೊತೆಗೆ ಕೆರೆ-ಕಟ್ಟೆಗಳು, ನೈಸರ್ಗಿಕ ಕಾಲುವೆ- ತೋಡುಗಳ ಮೂಲಕ ಹರಿಯುವ ನೀರು ರೈತರ ಬಾಳು ಹಸನು ಮಾಡುವ ನಿರೀಕ್ಷೆಯಲ್ಲಿದ್ದವರಿಗೆ ಈ ಬಾರಿ ಬರಸಿಡಿಲು ಬಡಿದಂತಾಗಿದೆ. ಸುಗ್ಗಿ ಕೃಷಿ ಕಾರ್ಯಕ್ಕೆ ಪ್ರಸಕ್ತ ಸಮಯವೆಂದು ಗದ್ದೆಗಿಳಿದವರಿಗೆ ನೀರು ಮರೀಚಿಕೆಯಾಗಿದೆ. ಕೆಲವಷ್ಟು ಕಡೆ ನೀರು ಕಟ್ಟಿಟ್ಟು ಕೊಂಡಿದ್ದಕ್ಕೆ ಗದ್ದೆಗಳಲ್ಲಿ ನೀರಿದ್ದರೂ ತಿಂಗಳಾಂತ್ಯಕ್ಕೆ ಜಲಮೂಲ ಶೂನ್ಯವಾಗುವ ಆತಂಕವಿದೆ.
ಬಹಳಷ್ಟು ಕಡೆ ಕೃಷಿ ತಯಾರಿ ಮಾಡಿ ಭೂಮಿಗೆ ಹಾಕಿದ ಗೊಬ್ಬರ ಹಾಗೆಯೇ ಇದ್ದು ನೀರು ಮಾತ್ರ ಬಂದಿಲ್ಲ. ಒಂದೊಮ್ಮೆ ಬಿತ್ತನೆ ಮಾಡಿದರೆ ನೀರಿಲ್ಲದೆ ಎಲ್ಲವೂ ನಾಶವಾಗುತ್ತದೆ ಎನ್ನುವುದು ಯೋಜನೆ ನೀರು ನಂಬಿದ ಒಂದಷ್ಟು ಕೃಷಿಕರ ಮಾತು. ‘ಈ ಬಾರಿ ಭತ್ತ ಕೃಷಿ ಮಾಡಬೇಕೋ, ಬೇಡವೋ ತಿಳಿಯುತ್ತಿಲ್ಲ. ಅಗತ್ಯವಿರುವಾಗ ನೀರನ್ನು ಪೂರೈಸದಿದ್ದ ಮೇಲೆ ಕೋಟ್ಯಂತರ ರೂಪಾಯಿ ಯೋಜನೆ ಯಾಕೆ ಬೇಕಿತ್ತು’ ಎನ್ನುವ ಪ್ರಶ್ನೆ ರೈತರದ್ದಾಗಿದೆ.
ಮಹತ್ವಾಕಾಂಕ್ಷಿ ಯೋಜನೆ: ಕೃಷಿ, ತೋಟಗಾರಿಕೆ ಚಟುವಟಿಕೆಗಾಗಿ ಸೌಕೂರು ಏತ ನೀರಾವರಿ ಯೋಜನೆಯು ದೂರಗಾಮಿ ಚಿಂತನೆಯ ರೈತಾಪಿ ವರ್ಗದ ಹೋರಾಟದ ಫಲವಾಗಿತ್ತು. 2019-20ರ ರಾಜ್ಯ ಬಜೆಟ್ನಲ್ಲಿ 73.71 ಕೋಟಿ ರೂ. ಅನುದಾನ ಇದಕ್ಕೆ ಮಂಜೂರಾಗಿತ್ತು. ಟೆಂಡರ್ ಆಗಿ ಕಾಮಗಾರಿ ಪೂರ್ಣಗೊಂಡು 2022ರಲ್ಲಿ ಉದ್ಘಾಟನೆಗೊಂಡಿತ್ತು.
ಗುಲ್ವಾಡಿ, ಕರ್ಕುಂಜೆ, ಹಟ್ಟಿಯಂಗಡಿ, ತಲ್ಲೂರು, ದೇವಲ್ಕುಂದ ಗ್ರಾಮ ಪಂಚಾಯತ್ಗಳ ವ್ಯಾಪ್ತಿಯ ಸುಮಾರು 1,350 ಹೆಕ್ಟೆರ್ ಪ್ರದೇಶಕ್ಕೆ ಈ ನೀರು ಕೃಷಿ-ತೋಟಕ್ಕೆ ಉಪಯೋಗವಾಗುವುದಲ್ಲದೆ ಪರಿಸರದ ಅಂತರ್ಜಲ ಮಟ್ಟ ಏರಿಕೆಯಾಗಿ ಬಹಳಷ್ಟು ಕಡೆಗಳಲ್ಲಿ ಮನೆಯ ಬಾವಿ ನೀರು ಬೇಸಿಗೆಯ ಕೊನೆಯ ಹಂತದವರೆಗೂ ಇದ್ದು ಕುಡಿಯುವ ನೀರು ಸಮೃದ್ಧವಾಗಲು ಯೋಜನೆಯಿಂದ ಅನುಕೂಲವಾಗಿತ್ತು.
ಗುಲ್ವಾಡಿಯಿಂದ ಈ ನೀರು ಎಲ್ಲೆಡೆ ಹೋಗಲು ಪ್ರಮುಖವಾಗಿ ಒಂದು ಓವರ್ ಹೆಡ್ ಟ್ಯಾಂಕ್, ಐದು ಗ್ರಾಪಂಗಳಿಗೆ ಸೇರಿದ 8 ಗ್ರಾಮಗಳ 36 ಕಡೆಗಳಲ್ಲಿ ಚೆಕ್ ಡ್ಯಾಂಗಳು, 5 ಟ್ಯಾಂಕ್ ವೇಸ್ಟ್ವೇರ್ ನಿರ್ಮಿಸಿ ನೀರು ವಿತರಣೆ ಕೇಂದ್ರಗಳನ್ನು ಮಾಡಲಾಗಿತ್ತು. ಅತ್ಯುನ್ನತ ಸಾಮರ್ಥ್ಯವುಳ್ಳ ಪಂಪ್ಸೆಟ್ಗಳನ್ನು ಬಳಸಲಾಗಿತ್ತು. 2 ಕೋಟಿಗೂ ಅಧಿಕ ಹಣ ಮೆಸ್ಕಾಂಗೆ ಪಾವತಿ ಮಾಡದಿದ್ದಕ್ಕೆ ಆದ ಸಮಸ್ಯೆಯಿಂದ ರೈತೋಪಯೋಗಿ ಯೋಜನೆಯೊಂದು ಹಳ್ಳ ಹಿಡಿಯುವ ಲಕ್ಷಣ ಎದ್ದು ಕಾಣುತ್ತಿದ್ದು, ಎಲ್ಲರೂ ಸೇರಿ ತಕ್ಷಣ ಶೀಘ್ರ ಕ್ರಮಕೈಗೊಳ್ಳಬೇಕಾದ ಅನಿವಾರ್ಯ ಇದೆ.
ಈ ನೀರಾವರಿ ಯೋಜನೆ ನಂಬಿ ಕೃಷಿ ಮಾಡಲು ತಯಾರಿ ಮಾಡಿಕೊಂಡಿದ್ದೆವು. ಇಲಾಖಾಧಿಕಾರಿಗಳು ಯಾವುದೇ ಮುನ್ಸೂಚನೆ, ಮಾಹಿತಿಯನ್ನು ನೀಡದೆ ಏಕಾಏಕಿ ನೀರು ಬಿಡುವುದು ನಿಲ್ಲಿಸಿದ್ದಾರೆ. ಮೊದಲು ನಾವೆಲ್ಲಾ ಬೇರೆಡೆ ಕೆಲಸ ಮಾಡುತ್ತಿದ್ದು ಯುವ ರೈತರು ಕೃಷಿ ಮಾಡಬೇಕೆಂದು ಊರಲ್ಲಿ ನೆಲೆಸಿದ್ದೇವೆ. ಸುಗ್ಗಿ ಕೃಷಿ ಮಾಡುವ ಹುಮ್ಮಸ್ಸಿನಿಂದ ಹೊಲಕ್ಕೆ ಗೊಬ್ಬರ ಹಾಕಿ, ಬಿತ್ತನೆ ಮಾಡಲು ಹೊರಟಿದ್ದೆವು. ಇದೀಗ ಬೇರೆ ಕೆಲಸ ಹುಡುಕಿಕೊಂಡು ಮತ್ತೆ ವಲಸೆ ಹೋಗುವಂತಾಗಿದೆ.
-ಸುಕುಮಾರ್ ಶೆಟ್ಟಿ ದೇವಲ್ಕುಂದ, ಕೃಷಿಕ
ಸೌಕೂರು ಏತ ನೀರಾವರಿ ಯೋಜನೆ ನಂಬಿದ ರೈತರಿಗೆ ಹಿಂಗಾರು ಕೃಷಿ ಮಾಡುವುದು ಕಷ್ಟವಾಗಿದೆ. ಯೋಜನೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಿ ದ್ದಲ್ಲದೆ ಮನಸ್ಸಿಗೆ ಬಂದಹಾಗೆ ಕಾಮಗಾರಿ ಮಾಡಿದ್ದಾರೆ. ಇದು ಇಲ್ಲಿನ ರೈತರಿಗೆ ಮಾಡಿದ ಘೋರ ಅನ್ಯಾಯ. ಈ ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಕೂಡಲೆ ರೈತರ ಸಮಸ್ಯೆಗೆ ಸ್ಪಂದಿಸಿ ರೈತರ ಕೃಷಿಭೂಮಿಗೆ ನೀರು ಪೂರೈಸದಿದ್ದಲ್ಲಿ ಒಟ್ಟಾಗಿ ಹೋರಾಟಕ್ಕೆ ಇಳಿಯುತ್ತೇವೆ.
-ಶರತ್ಚಂದ್ರ ಶೆಟ್ಟಿ ಗುಲ್ವಾಡಿ, ಉಡುಪಿ ಜಿಲ್ಲಾ ರೈತ ಸಂಘದ ಕಾವ್ರಾಡಿ ವಲಯಾಧ್ಯಕ್ಷ
ಸೌಕೂರು ಏತ ನೀರಾವರಿ ಯೋಜನೆಯ ನೀರು ನಂಬಿ 5 ಗ್ರಾಪಂ ವ್ಯಾಪ್ತಿಯ 8 ಗ್ರಾಮಗಳ ಕೃಷಿಕರು ಬೇಸಾಯ ಮಾಡುತ್ತಿದ್ದು ಸುಗ್ಗಿ ಬೇಸಾಯಕ್ಕೆ ರೈತರಿಗೆ ನವೆಂಬರ್ ತಿಂಗಳಿನಲ್ಲಿ ನೀರು ಹರಿಸಬೇಕಿತ್ತು. ವಿದ್ಯುತ್ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ನೀರು ಬಿಡಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ. ಕುಡಿಯುವ ನೀರಿಗೂ ತತ್ವಾರ ಆಗುತ್ತಿದ್ದು ರೈತರಿಗೆ ನಷ್ಟವಾಗುತ್ತಿದೆ. ಸಂಬಂಧಪಟ್ಟವರು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು.
-ಸುದೇಶ್ ಕುಮಾರ್ ಶೆಟ್ಟಿ ಗುಲ್ವಾಡಿ, ಗುಲ್ವಾಡಿ ಗ್ರಾಪಂ ಮಾಜಿ ಅಧ್ಯಕ್ಷ
ಸ್ಥಳೀಯ ಸಂಸ್ಥೆಗಳ ಚುನಾವಣೆ: ಬಹಿಷ್ಕಾರದ ಎಚ್ಚರಿಕೆ
ಕೃಷಿ ಹಾಗೂ ತೋಟಗಾರಿಕೆ ಮಾತ್ರವಲ್ಲದೆ ಕುಡಿಯುವ ನೀರಿನ ಬಾವಿಗಳ ಅಂತರ್ಜಲ ಮಟ್ಟ ಹೆಚ್ಚಿಸಲು ಈ ನೀರಾವರಿ ಯೋಜನೆ ಅಗತ್ಯವಾಗಿತ್ತು. ಮೂಲಭೂತ ಸೌಕರ್ಯವಾದ ನೀರಿನ ಸರಬರಾಜು ಸಮಸ್ಯೆ ಬಗೆಹರಿಸಲು ಸರಕಾರ, ಜನಪ್ರತಿನಿಧಿಗಳು ಅಗತ್ಯ ಕ್ರಮವಹಿಸಬೇಕು. ಇಲ್ಲವಾದಲ್ಲಿ ಸಂಬಂಧಿಸಿದ ಎಲ್ಲಾ ಗ್ರಾಮಗಳ ಕೃಷಿಕರನ್ನು ಒಗ್ಗೂಡಿಸಿಕೊಂಡು ಪ್ರತಿಭಟಿಸುವುದಲ್ಲದೆ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಹಿಷ್ಕಾರ ಮಾಡುತ್ತೇವೆಂದು ಹಟ್ಟಿಯಂಗಡಿ ಗ್ರಾಪಂ ಮಾಜಿ ಸದಸ್ಯ ಮುತ್ತಯ್ಯ ಹೇಳಿದ್ದಾರೆ.
‘ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಕ್ಕೆ ಸಮಸ್ಯೆ’
ಕಳೆದ ಒಂದೂವರೆ ವರ್ಷದಿಂದ ಮೆಸ್ಕಾಂಗೆ ವಿದ್ಯುತ್ ಬಿಲ್ ಪಾವತಿ ಯಲ್ಲಾದ ಲೋಪದ ಕಾರಣ ಈ ಮಳೆಗಾದಲ್ಲಿ ಕಡಿತಗೊಳಿಸಿದ ವಿದ್ಯುತ್ ಸಂಪರ್ಕ ವಾಪಸ್ ನೀಡಿಲ್ಲ. ಕಳೆದ ವರ್ಷವೂ ವಿದ್ಯುತ್ ಕಡಿತ ಮಾಡಿ ಒಂದಷ್ಟು ಮೊತ್ತ ಪಾವತಿಸಿದ ಬಳಿಕ ಸಂಪರ್ಕ ನೀಡಿದ್ದರು. ನವೆಂಬರ್ ಅಂತ್ಯ ಹಾಗೂ ಡಿಸೆಂಬರ್ನಲ್ಲಿ ಸುಗ್ಗಿ ಕೃಷಿಗಾಗಿ ಉಳುಮೆ, ಬೀಜ ಬಿತ್ತನೆ ಸಮಯವಾಗಿದ್ದು ರೈತರಿಗೆ ಯೋಜನೆ ನೀರಿನ ಅನಿರ್ವಾಯದ ಬಗ್ಗೆ ಸಂಬಂಧಪಟ್ಟವರಿಗೆ ಮನವಿ ಮಾಡಿದ್ದೇವೆ. ಮೆಸ್ಕಾಂ ಈ ಸಮಯದಲ್ಲಿ ಸ್ಪಂದಿಸಿದರೆ ರೈತರಿಗೆ ಅನುಕೂಲವಾಗಲಿದೆ.
-ಪ್ರಸನ್ನ ಕುಮಾರ್ ಎಂ.ಎಂ., ವಾರಾಹಿ ನೀರಾವರಿ ಯೋಜನೆ ಸಹಾಯಕ ಇಂಜಿನಿಯರ್







