5 ವರ್ಷವಾದರೂ 108 ಕುಟುಂಬಗಳಿಗಿಲ್ಲ ಸೂರು
ಟಿನ್‌ಶೆಡ್‌ಗಳಲ್ಲೇ ಸಂಕಷ್ಟದ ಬದುಕು; ಮೂಲಸೌಕರ್ಯ ಕೊರತೆ

ರಾಯಚೂರು: ವಾರ್ಡ್ ನಂ.30 ಹಾಗೂ 31ರ ರಾಜೀವ್ ಗಾಂಧಿ ನಗರ ಬಡಾವಣೆಯಲ್ಲಿ ಶಿಥಿಲಾವಸ್ಥೆಗೆ ತಲುಪಿದ್ದ 108 ಮನೆಗಳನ್ನು ಜಿಲ್ಲಾಡಳಿತ ಹಾಗೂ ಆಗಿನ ನಗರಸಭೆ ಆಡಳಿತ ಮಂಡಳಿ ನೆಲಸಮ ಮಾಡಿದ್ದವು. ಬಳಿಕ ಬೇರೆಡೆ ನಿರ್ಮಿಸಿ ಕೊಡುವುದಾಗಿ ಆಶ್ವಾಸನೆ ನೀಡಿದ್ದ ಜಿಲ್ಲಾಡಳಿತ ಹಾಗೂ ಆಗಿನ ನಗರಸಭೆ ಆಡಳಿತ ಮಂಡಳಿಗಳು ಇದೀಗ 5 ವರ್ಷ ಕಳೆದರೂ ಕಟ್ಟಡ ಕಾಮಗಾರಿ ಪೂರ್ಣಗೊಳ್ಳದ ಕಾರಣ ತಾತ್ಕಾಲಿಕವಾಗಿ ಟೀನ್ ಶೆಡ್‌ನಲ್ಲಿಯೇ ವಾಸಿಸುವಂತ ಪರಿಸ್ಥಿತಿ ನಿರ್ಮಿಸಿವೆ.
ಸಿಯತಲಾಬ್ ಬಡಾವಣೆಗೆ ಹೊಂದಿಕೊಂಡ ರಾಜೀವ್ ಗಾಂಧಿ ಸ್ಲಮ್ ಬಡಾವಣೆಯ ( ವಸತಿಸಮುಚ್ಚಯ) ಮನೆಗಳು ಶಿಥಿಲಾವಸ್ಥೆ ತಲುಪಿದಾಗ, ಅಲ್ಲಿ ಇಬ್ಬರು ಬಾಲಕರು ಸಾವನ್ನಪ್ಪಿದರು. ಅಪಾಯದ ಸ್ಥಿತಿಯನ್ನು ಅರಿತು ಜಿಲ್ಲಾಡಳಿತ ಮನೆಗಳನ್ನು ಧ್ವಂಸಗೊಳಿಸಿತ್ತು. ನಂತರ ಅದೇ ಜಾಗದಲ್ಲಿ ಹೊಸ ಕಟ್ಟಡ ನಿರ್ಮಿಸಿ ಕೊಡಲಾಗುವುದು ಎಂದು ಜಿಲ್ಲಾಡಳಿತ ಹಾಗೂ ಆಗಿನ ನಗರಸಭೆ ಆಡಳಿತ ಮಂಡಳಿ ಆಶ್ವಾಸನೆ ನೀಡಿದ್ದವು. ಆಗ ಎರಡು ವರ್ಷದ ಗಡುವು ಪಡೆದಿದ್ದರು. ಈಗ 5 ವರ್ಷ ಪೂರ್ಣಗೊಂಡಿದೆ. ಆದರೂ ಮನೆಗಳನ್ನು ನಿರ್ಮಿಸಿಲ್ಲ.
ಮನೆ ಕಳೆದುಕೊಂಡ ಸಂತ್ರಸ್ಥರು ಪಕ್ಕದ ಅಮೃತಆಸ್ಪತ್ರೆಯ ಮುಂಭಾಗದ ಖಾಲಿ ಜಾಗದಲ್ಲಿ ಟೀನ್ ಶೆಡ್ ಹಾಕಿಕೊಂಡಿದ್ದು, ಅಲ್ಲಿ ಚರಂಡಿ, ಕುಡಿಯುವ ನೀರು, ಸ್ವಚ್ಛತೆ ಸೇರಿ ಮೂಲಸೌಕರ್ಯದ ಕೊರತೆಯಿಂದ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ತಗಡಿನ ಮನೆಗಳಲ್ಲಿ ಬೇಸಿಗೆಯಲ್ಲಿ ಕಾವು ಹೆಚ್ಚಾಗಿ ಸಮಸ್ಯೆಯಾದರೆ ಮಳೆಗಾಲದಲ್ಲಿ ಟೀನ್‌ಗಳಿಂದ ನೀರು ಸೋರಿ ಕುಟುಂಬಸ್ಥರು ರಾತ್ರಿ ವೇಳೆ ಜಾಗರಣೆ ಮಾಡುವಂತಾಗಿದೆ ಸ್ಥಳೀಯರು ಅಲವತ್ತುಕೊಂಡಿದ್ದಾರೆ.
ಗೂಡಂಗಡಿಗಳಂತೆ ಇರುವ ಮನೆಗಳಲ್ಲಿ 5-6 ಜನರಿರುವ ಕುಟುಂಬಗಳಲ್ಲಿ ರಾತ್ರಿ ಮಲಗಲು ಆಗುತ್ತಿಲ್ಲ, ಅಡುಗೆ ಕೋಣೆ, ಸ್ನಾನಗೃಹ ಇಲ್ಲದೆ ಸ್ನಾನ ಮಾಡಬೇಕಿದೆ. ಮನೆಯ ಮುಂಭಾಗದ ಮೂರು ಇಟ್ಟಂಗಿ ಇಟ್ಟು ಅಡುಗೆ ತಯಾರಿಸುತ್ತಿದ್ದೇವೆ ಎನ್ನುತ್ತಿದ್ದಾರೆ ಸ್ಥಳೀಯರು.
ಸದ್ಯ ಟೀನ್ ಶೆಡ್ ಹಾಕಿರುವ ಸ್ಥಳದಲ್ಲಿ ಹೈಮಾಸ್ಕ್ ಪವರ್ ಲೇನ್ ಇದ್ದು, ಇದಕ್ಕೆ ಎರಡು ಅಡಿ ಎತ್ತದಲ್ಲೇವಿದ್ಯುತ್ ತಂತಿ ಹಾಯ್ದುಹೋಗಿದೆ. ಮಳೆ, ಗಾಳಿಗೆ ಎರಡು ಬಾರಿ ವಿದ್ಯುತ್ ಅವಘಡವಾಗಿ ಅನಾಹುತವೂ ಸಂಭವಿಸಿದೆ. ಟೀನ್‌ಗೆ ವೈರ್ ತಗುಲಿ ಇತ್ತೀಚೆಗೆ ವಿದ್ಯುತ್ ಅವಘಡ ಊಂಟಾಗಿ ಇಬ್ಬರು ಯುವಕರು ತೀವ್ರ ಗಾಯಗೊಂಡು ಸಾವಿನ ದವಡೆಯಿಂದ ಪಾರಾಗಿದ್ದಾರೆ.
ಪಕ್ಕದಲ್ಲಿಯೇ ದೊಡ್ಡದಾದ ಟ್ರಾನ್ಸ್ ಫಾರ್ಮ್‌ರ್ ಹಾಕಿದ್ದು, ಯಾವುದೇ ತಂತಿಬೇಲಿ ಹಾಕದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ. 5 ವರ್ಷವಾದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೇವಲ ಭರವಸೆ ನೀಡುತ್ತಿದ್ದು ಇದುವರೆಗೆ ಮನೆಗಳು ನಿರ್ಮಿಸಿಲ್ಲ. ನೆಲಸಮ ಮಾಡಿದ ಜಾಗದಲ್ಲಿ ವಸತಿ ಸಮುಚ್ಚಯ ನಿರ್ಮಿಸಲಾಗುತ್ತಿದ್ದರೂ ಅದು ಪೂರ್ಣಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
108 ಕುಟುಂಬಗಳ ಪೈಕಿ ಅಮೃತ ಆಸ್ಪತ್ರೆಯ ಮುಂಭಾಗದ ಜಾಗದಲ್ಲಿ 50 ಕುಟುಂಬಗಳು ವಾಸವಾಗಿದ್ದು ಉಳಿದವರು ಬಂದರಗಲ್ಲಿ ಬಳಿಯ ವಡ್ಡೆಪ್ಪ ಜಿನ್ ರಸ್ತೆಯಲ್ಲಿನ ಸರಕಾರಿ ಜಾಗದಲ್ಲಿ ಶೆಡ್ ಹಾಕಿ ವಾಸವಾಗಿದ್ದಾರೆ. ಬಿಸಿಲು, ಮಳೆ, ವಿದ್ಯುತ್ ಹಾಗೂ ಇತರ ಸಮಸ್ಯೆಗಳಿಂದ ಪ್ರತಿನಿತ್ಯ ಸಂಕಷ್ಟ ಎದುರಿಸುತ್ತಿದ್ದೇವೆ ಎಂದು ದೂರಿದರು.
ನೆಲಸಮ ಮಾಡಿದ ಜಾಗದಲ್ಲಿ ನಿರ್ಮಿಸುತ್ತಿರುವ ವಸತಿ ಗೃಹಗಳ ಕಟ್ಟಡ ಕಾಮಗಾರಿ ಕಳಪೆಯಾಗಿದೆ. ಮನೆಗಳು ನಿರ್ಮಿಸಿದ ನಂತರ ನಾವು ವಂತಿಗೆ ಹಣ (ಡಿಡಿ) ಪಾವತಿಸಿ ಪಡೆಯಬೇಕು ಎಂದು ಹೇಳಲಾಗುತ್ತಿದೆ. ಬಡವರಾದ ನಮಗೆ ಹಣ ನೀಡಲು ಆಗುವುದಿಲ್ಲ. ಹಿಂದೆ ಇದ್ದ ನಮ್ಮ ಜಾಗದಲ್ಲಿಯೇ ನಮಗೆ ನಿವೇಶನ ಹಂಚಿಕೆ ಮಾಡಲಿ.
-ರಾಕೇಶ್ ಸಂತ್ರಸ್ಥ
ಶಿಥಿಲಾವಸ್ಥೆಯಲ್ಲಿರುವ ಮನೆಗಳನ್ನು ಒತ್ತಾಯಪೂರ್ವಕವಾಗಿ ಖಾಲಿ ಮಾಡಿಸಿದ್ದಾರೆ. ಈಗ ಮನೆ ನಿರ್ಮಾಣ ಮಾಡಿಸಿಕೊಟ್ಟಿಲ್ಲ. ಚಿಕ್ಕದಾದ ಮನೆಗಳಲ್ಲಿ ವಾಸಮಾಡಲು ಸಮಸ್ಯೆಯಾಗಿದೆ. ಎರಡು ವರ್ಷಗಳ ಹಿಂದೆಯೇ ಡಿ.ಸಿ ಕಚೇರಿ ಮುಂದೆ ದೊಡ್ಡ ಹೋರಾಟ ಮಾಡಿದಾಗ ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸುವುದಾಗಿ ಹೇಳಿ ಮತ್ತೆ ಈಕಡೆ ಇಣುಕಿ ನೋಡಿಲ್ಲ. ಆದಷ್ಟು ಬೇಗ ಮನೆಗಳನ್ನು ನಿರ್ಮಿಸಬೇಕು.
-ನರಸಮ್ಮ, ಸಂತ್ರಸ್ಥರು
ನಮ್ಮ ಟೀನ್ ಶೆಟ್ ಸೋರುತ್ತಿದೆ. ಹಾವು, ಚೇಳು ವಿಷಜಂತುಗಳ ಕಾಟ ಹೆಚ್ಚಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಆಗಾಗ ಭೇಟಿ ನೀಡಿದರೂ ಕಾಮಗಾರಿ ಮುಗಿದಿಲ್ಲ. ಅನೇಕ ಕುಟುಂಬಗಳಲ್ಲಿ ವಯಸ್ಸಿಗೆ ಬಂದ ಹೆಣ್ಣು ಮಕ್ಕಳಿದ್ದು ವಿವಾಹವಾಗಲು ಸಂಬಂಧಗಳು ನೆರವೇರುತ್ತಿಲ್ಲ. ಸರಕಾರ ಆದಷ್ಟು ಬೇಗ ಮನೆ ನಿರ್ಮಿಸಿಕೊಡಲಿ.
-ಹನುಮಂತ, ಸಂತ್ರಸ್ಥ






