ದೇಶಾದ್ಯಂತ ಪ್ರತೀ ವರ್ಷ 1.87ಲಕ್ಷ ಮಕ್ಕಳ ಮೇಲೆ ದೌರ್ಜನ್ಯ

ಸಾಂದರ್ಭಿಕ ಚಿತ್ರ | Photo credit : magnific
ಬೆಂಗಳೂರು, ಜು.18: ದೇಶದಲ್ಲಿ ಪ್ರತಿವರ್ಷ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, 2024ರಲ್ಲಿ ದೇಶಾದ್ಯಂತ 1,87,702 ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಶೇ.62.70ರಷ್ಟು ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆಯಾಗಿದ್ದು, ದೇಶದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಅಪರಾಧ ದರ ಹೆಚ್ಚಳವಾಗಿದೆ.
2023ರಲ್ಲಿ 1,77,335 ಪ್ರಕರಣಗಳು ದಾಖಲಾಗಿದ್ದು, 2024ರಲ್ಲಿ ಶೇ.5.84ರಷ್ಟು ಪ್ರಕರಣಗಳು ಹೆಚ್ಚಾಗಿವೆ. 2024ರ ಒಟ್ಟು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಶೇ.40.01ರಷ್ಟು ಮಕ್ಕಳ ಅಪಹರಣ ಪ್ರಕರಣಗಳಾಗಿದ್ದರೆ, 36.12ರಷ್ಟು ಪೊಕ್ಸೊ ಪ್ರಕರಣಗಳಾಗಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ(ಎನ್ಸಿಆರ್ಬಿ) ಬಿಡುಗಡೆ ಮಾಡಿದ 2024ನೇ ವರ್ಷದ ಅಪರಾಧ ವರದಿಯು ಬಹಿರಂಗಪಡಿಸಿದೆ.
ದೇಶದಲ್ಲಿ ದಾಖಲಾದ ಒಟ್ಟು 1,87,702 ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ಪೈಕಿ 75,108 ಮಕ್ಕಳ ಅಪಹರಣ ಪ್ರಕರಣಗಳಾಗಿವೆ. 13,177 ಪ್ರಕರಣಗಳು ಮದುವೆ ಮಾಡಿಕೊಳ್ಳಲು ಬಾಲಕಿಯರನ್ನು ಅಪಹರಿಸಿದ ಪ್ರಕರಣಗಳಾಗಿವೆ. 67,809 ಪೊಕ್ಸೊ ಪ್ರಕರಣಗಳು, 1,965 ಬಾಲಕಾರ್ಮಿಕ ಪ್ರಕರಣ, 1,511 ಬಾಲ್ಯ ವಿವಾಹ ಪ್ರಕರಣಗಳಾಗಿವೆ. 1,210 ಮಕ್ಕಳ ಕೊಲೆ ಪ್ರಕರಣಗಳು ದಾಖಲಾಗಿವೆ.
ಪೊಕ್ಸೊ ಪ್ರಕರಣ ಒಳಗೊಂಡಂತೆ 1,034 ಹಲ್ಲೆ ಪ್ರಕರಣ, 1,673 ಬಲವಂತವಾಗಿ ಲೈಂಗಿಕತೆಗೆ ಒಳಪಡಿಸುವ ಪ್ರಕರಣ, 784 ಅತ್ಯಾಚಾರ ಪ್ರಕರಣ, 1,037 ಹಲ್ಲೆ ನಡೆಸಿ ಮಾನಭಂಗ ಮಾಡಲು ಯತ್ನಿಸಿದ ಪ್ರಕರಣ, 263 ಲೈಂಗಿಕ ಕಿರುಕುಳ ಪ್ರಕರಣ, 38 ವಿವಸ್ತ್ರಗೊಳಿಸುವ ಉದ್ದೇಶದಿಂದ ಹಲ್ಲೆ ನಡೆಸಿದ ಪ್ರಕರಣಗಳು ದಾಖಲಾಗಿವೆ. 140 ಭ್ರೂಣಹತ್ಯೆ ಪ್ರಕರಣಗಳಾಗಿವೆ. ಉಳಿದ 30 ಸಾವಿರಕ್ಕೂ ಅಧಿಕ ಇನ್ನಿತರ ಮಕ್ಕಳ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ.
ಮಹಾರಾಷ್ಟ್ರದಲ್ಲೇ ಅಧಿಕ, ಕರ್ನಾಟಕಕ್ಕೆ ಆರನೇ ಸ್ಥಾನ :
ಮಹಾರಾಷ್ಟ್ರದಲ್ಲಿ 24,171 ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ದಾಖಲಾಗಿದ್ದು, ದೇಶದಲ್ಲೇ ಹೆಚ್ಚು ಪ್ರಕರಣ ದಾಖಲಾಗಿರುವ ರಾಜ್ಯ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಉತ್ತರ ಪ್ರದೇಶ 22,222, ಮಧ್ಯಪ್ರದೇಶ 21,908, ಬಿಹಾರ 13,349, ತಮಿಳುನಾಡು 10,046, ಕರ್ನಾಟಕ 9,568, ಆಂಧ್ರ ಪ್ರದೇಶ 2,633, ಅರುಣಾಚಲ ಪ್ರದೇಶ 152, ಅಸ್ಸಾಂ 5,871, ಛತ್ತೀಸ್ಗಡ 6,964, ಗೋವಾ 207, ಗುಜರಾತ್ 5,394, ಹರ್ಯಾಣ 7,574, ಹಿಮಾಚಲ ಪ್ರದೇಶ 794, ಜಾರ್ಖಂಡ್ 1,555, ಕೇರಳ 5,929, ಮಣಿಪುರ 107, ಮೇಘಾಲಯ 556, ಮಿಜೋರಾಂ 176. ನಾಗಾಲ್ಯಾಂಡ್ 52, ಒಡಿಶಾ 9,528, ಪಂಜಾಬ್ 2,468, ರಾಜಸ್ಥಾನ 8,992, ಸಿಕ್ಕಿಂ 122, ತೆಲಂಗಾಣ 6,767, ತ್ರಿಪುರಾ 270, ಉತ್ತರಾಖಂಡ 2,068, ಪಶ್ಚಿಮ ಬಂಗಾಳ 9,044 ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು 138, ಚಂಡಿಗಢ 255, ದಾದ್ರಾ ಮತ್ತು ನಗರ್ ಹವೇಲಿ ಮತ್ತು ದಾಮನ್ ಮತ್ತು ದಿಯು 84, ದಿಲ್ಲಿ 7,662, ಜಮ್ಮು ಮತ್ತು ಕಾಶ್ಮೀರ 887, ಲಡಾಖ್ 17, ಲಕ್ಷದ್ವೀಪ 6, ಪುದುಚೇರಿ 193 ಪ್ರಕರಣಗಳು ಸೇರಿ ದೇಶದಲ್ಲಿ ಒಟ್ಟು 1,87,702 ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ನಡೆದಿವೆ ಎಂದು ಎನ್ಸಿಆರ್ಬಿ ಹೇಳಿದೆ.
ದೇಶದಲ್ಲಿ 30 ಸಾವಿರಕ್ಕೂ ಅಧಿಕ ಬಾಲಾಪರಾಧಿಗಳು :
ದೇಶದಲ್ಲಿ ಪ್ರತಿವರ್ಷ 30ಸಾವಿರಕ್ಕೂ ಅಧಿಕ ಬಾಲಾಪರಾಧ ಪ್ರಕರಣಗಳು ದಾಖಲಾಗುತ್ತಿದ್ದು, 2024ರಲ್ಲಿ ದೇಶಾದ್ಯಂತ ನಡೆದ ವಿವಿಧ ಅಪರಾಧ ಪ್ರಕರಣಗಳಲ್ಲಿ 34,878 ಬಾಲಾಪರಾಧಿಗಳು ಭಾಗಿಯಾಗಿದ್ದಾರೆ. ಬಿಹಾರದಲ್ಲಿ ಅತ್ಯಂತ ಅಧಿಕ, 5,037 ಮಂದಿ ಬಾಲಾಪರಾಧಿಗಳಿದ್ದಾರೆ.
ಮಹರಾಷ್ಟ್ರದಲ್ಲಿ 3,779, ಮಧ್ಯಪ್ರದೇಶದಲ್ಲಿ 3,474, ತಮಿಳುನಾಡಿನಲ್ಲಿ 2,946, ರಾಜಸ್ಥಾನದಲ್ಲಿ 2,827, ಛತ್ತೀಸ್ಗಡ 2,180, ಒಡಿಶಾ 1,611, ತೆಲಂಗಾಣ 1,569, ಹರ್ಯಾಣ 1,550, ಗುಜರಾತ್ 1,274, ಉತ್ತರ ಪ್ರದೇಶ 1,175, ಕರ್ನಾಟಕ 1,115 ಸೇರಿ ದೇಶದಲ್ಲಿ 34,878 ಬಾಲಾಪರಾಧಿಗಳಿರುವುದಾಗಿ ಎನ್ಸಿಆರ್ಬಿ ತಿಳಿಸಿದೆ.
10 ವರ್ಷಗಳಲ್ಲಿ ಶೇ.222.37ರಷ್ಟು ಪ್ರಕರಣ ಹೆಚ್ಚಳ :
ಕಳೆದ 10 ವರ್ಷಗಳಲ್ಲಿ ಮಕ್ಕಳ ದೌರ್ಜನ್ಯ ಪ್ರಕರಣಗಳು ಶೇ.222.37ರಷ್ಟು ಹೆಚ್ಚಳವಾಗಿವೆ. 2013ರಲ್ಲಿ 58,224 ಪ್ರಕರಣಗಳು ದಾಖಲಾಗಿವೆ. 2014ರಲ್ಲಿ 89,423 ಪ್ರಕರಣ, 2015ರಲ್ಲಿ 94,172 ಪ್ರಕರಣ, 2016ರಲ್ಲಿ 1,06,958 ಪ್ರಕರಣ, 2017ರಲ್ಲಿ 1,29,032 ಪ್ರಕರಣ, 2018ರಲ್ಲಿ 1,14,764 ಪ್ರಕರಣ, 2019ರಲ್ಲಿ 1,48,185 ಪ್ರಕರಣ, 2020ರಲ್ಲಿ 1,28,531 ಪ್ರಕರಣ, 2021ರಲ್ಲಿ 1,49,404 ಪ್ರಕರಣ, 2022ರಲ್ಲಿ 1,62,449 ಪ್ರಕರಣ, 2023ರಲ್ಲಿ 1,77,335 ಪ್ರಕರಣಗಳು ದಾಖಲಾಗಿವೆ.






