ನೋಟಿಸ್ ವಿಚಾರಣೆ ಗಡುವು ಮುಗಿದರೂ 19,365 ಪ್ರಕರಣಗಳು ಬಾಕಿ!

ಸಾಂದರ್ಭಿಕ ಚಿತ್ರ (PTI)
ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ(ಎಸ್ಐಆರ್) ಪ್ರಕ್ರಿಯೆಯಲ್ಲಿ ನೋಟಿಸ್ ವಿಚಾರಣೆಯ ಗಡುವು ಅ.12ಕ್ಕೆ ಮುಗಿದಿದ್ದರೂ, ರಾಜ್ಯದಲ್ಲಿ ಇನ್ನೂ 19,365 ಪ್ರಕರಣಗಳು ಬಾಕಿ ಉಳಿದಿವೆ. ಇದುವರೆಗೂ ರಾಜ್ಯಾದ್ಯಂತ 43.82ಲಕ್ಷಕ್ಕೂ ಅಧಿಕ ನೋಟಿಸ್ಗಳನ್ನು ವಿತರಿಸಿ, ಶೇ.99.56ರಷ್ಟು ವಿಚಾರಣೆ ಪೂರ್ಣಗೊಳಿಸಿರುವುದಾಗಿ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ತಿಳಿಸಿದೆ.
ಎಸ್ಐಆರ್ ಪ್ರಕ್ರಿಯೆಯಲ್ಲಿ ಅನ್ಮ್ಯಾಪಡ್ ಮತ್ತು ತಾರ್ಕಿಕ ವ್ಯತ್ಯಾಸದಡಿಯಲ್ಲಿ ಒಟ್ಟು 43,82,824 ನೋಟಿಸ್ಗಳನ್ನು ಸೃಜಿಸಲಾಗಿದ್ದು, ಶೇ.100ರಷ್ಟು ನೋಟಿಸ್ಗಳನ್ನೂ ಸಂಬಂಧಪಟ್ಟ ಮತದಾರರಿಗೆ ವಿತರಿಸಲಾಗಿದೆ. ಈ ಪೈಕಿ 43,63,459 ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದ್ದು, 19,365 ಪ್ರಕರಣಗಳು ಬಾಕಿ ಉಳಿದಿವೆ. ಈ ಪ್ರಕರಣಗಳ ಕುರಿತು ಯಾವ ಕಾರಣಕ್ಕೆ ವಿಚಾರಣೆ ಪೂರ್ಣಗೊಂಡಿಲ್ಲ, ಪ್ರಕರಣಗಳ ಇತ್ಯರ್ಥಕ್ಕೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ಚುನಾವಣಾ ಆಯೋಗ ಇದುವರೆಗೂ ಯಾವುದೇ ಸ್ಪಷ್ಟನೆ ನೀಡಿಲ್ಲ.
ಕಲಬುರಗಿಯಲ್ಲಿ ಅತಿಹೆಚ್ಚು 8,224 ಪ್ರಕರಣಗಳ ವಿಚಾರಣೆ ಬಾಕಿ ಉಳಿದಿದೆ. ಇದು ರಾಜ್ಯದ ಒಟ್ಟು ಬಾಕಿ ಪ್ರಕರಣಗಳ ಪೈಕಿ ಸುಮಾರು ಶೇ.42.5ರಷ್ಟಾಗಿದೆ.
ಬೆಂಗಳೂರು ಗ್ರಾಮಾಂತರದಲ್ಲಿ 1,523, ಬೆಳಗಾವಿ-1,495, ಧಾರವಾಡ-1,208, ಚಿಕ್ಕಮಗಳೂರು-1,157, ಶಿವಮೊಗ್ಗ-1,095 ಹಾಗೂ ಬೆಂಗಳೂರು ನಗರ-1,016 ಪ್ರಕರಣಗಳು ಬಾಕಿ ಇವೆ. ರಾಜ್ಯದ ಒಟ್ಟಾರೆ ವಿಚಾರಣೆ ಪೂರ್ಣಗೊಂಡ ಪ್ರಮಾಣ ಶೇ.99.56ರಷ್ಟಿದ್ದರೂ, ಕೆಲವು ಜಿಲ್ಲೆಗಳಲ್ಲಿ ವಿಚಾರಣೆ ಪೂರ್ಣಗೊಳಿಸುವಲ್ಲಿ ಇನ್ನೂ ಸವಾಲುಗಳಿರುವುದನ್ನು ಈ ಅಂಕಿ-ಅಂಶಗಳು ತೋರಿಸುತ್ತವೆ.
ನೋಟಿಸ್ಗಳ ಸಂಖ್ಯೆ 1,489 ಹೆಚ್ಚಳ: ಎಸ್ಐಆರ್ ಪ್ರಕ್ರಿಯೆಯಲ್ಲಿ ತಾರ್ಕಿಕ ವ್ಯತ್ಯಾಸ ಮತ್ತು ಅನ್ಮ್ಯಾಪಡ್ ವರ್ಗಗಳ ನೋಟಿಸ್ಗಳ ಸಂಖ್ಯೆ ನಿರಂತರವಾಗಿ ಹೆಚ್ಚಾಗಿದೆ. ಆ.24ರಂದು ಕರಡು ಪಟ್ಟಿ ಪ್ರಕಟವಾದಾಗ 43,81,335 ನೋಟಿಸ್ಗಳನ್ನು ಸೃಜಿಸಲಾಗಿತ್ತು. ಅ.2ರಂದು ಈ ಸಂಖ್ಯೆ 43,82,306, ಅ.9 ರಂದು 43,82,315ಕ್ಕೆ ಹಾಗೂ ಅ.16ರಂದು 43,82,824ಕ್ಕೆ ಏರಿಕೆಯಾಗಿದೆ. ಅಂದರೆ, ಕರಡು ಪಟ್ಟಿ ಪ್ರಕಟವಾದ ಬಳಿಕ ಒಟ್ಟು 1,489 ನೋಟಿಸ್ಗಳು ಹೆಚ್ಚಳವಾಗಿದೆ.
‘ಜೂ.16 ರಿಂದ ಅ.15ರ ವರೆಗೆ ರಾಜ್ಯದಲ್ಲಿ ಒಟ್ಟು 24,46,803 ಅರ್ಜಿಗಳು ಸಲ್ಲಿಕೆಯಾಗಿವೆ. ಇವುಗಳಲ್ಲಿ ನಮೂನೆ-6ರಡಿ 10,07,392, ನಮೂನೆ-6ಎ ಅಡಿ 4,777, ನಮೂನೆ-7ರಡಿ 1,55,109 ಹಾಗೂ ನಮೂನೆ-8ರಡಿ 12,79,525 ಅರ್ಜಿಗಳು ಸೇರಿವೆ. ಎಸ್ಐಆರ್ ವೇಳಾಪಟ್ಟಿಯ ಪ್ರಕಾರ ಅ.22ರಂದು ಹಕ್ಕು ಮತ್ತು ಆಕ್ಷೇಪಣೆಗಳ ಇತ್ಯರ್ಥದ ಅವಧಿ ಮುಕ್ತಾಯಗೊಳ್ಳಲಿದ್ದು, ಅ.27 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ’
ನೋಟಿಸ್ ಗಳ ಸಂಖ್ಯೆ 1,489 ಹೆಚ್ಚಳ
ಕರಡು ಮತದಾರರ ಪಟ್ಟಿ ಪ್ರಕಟಣೆ ನಂತರದ ಚಟುವಟಿಕೆಗಳ ಕುರಿತು ಕಾರ್ಯಗಾರ’ದಲ್ಲಿ ನೀಡಿದ ಪ್ರಸ್ತುತಿಯಲ್ಲಿರುವಂತೆ, ‘ಯಾರಿಗೆ ನೋಟಿಸ್ ನೀಡಲಾಗುತ್ತದೆ?’ ಎಂಬ ಪುಟದಲ್ಲಿ ಮೂರು ವರ್ಗಗಳನ್ನು ಉಲ್ಲೇಖಿಸಲಾಗಿದೆ. ‘ಮ್ಯಾಪಿಂಗ್ ಆಗದವರು’ ಮತ್ತು ‘ಮ್ಯಾಪಿಂಗ್ನಲ್ಲಿ ವ್ಯತ್ಯಾಸ ಇರುವವರು’ ಎಂಬ ಎರಡು ವರ್ಗಗಳಿಗೆ ನೋಟಿಸ್ ನೀಡುವುದು ಕಡ್ಡಾಯ ಎಂದು ಹೇಳಿದೆ. ಆದರೆ ಈ ವರ್ಗದಲ್ಲಿ ‘ಇತರರು’ ಎಂಬ ಮೂರನೇ ವರ್ಗವೂ ಹೊಂದಿದೆ. ಈ ‘ಇತರರು’ ವರ್ಗದಲ್ಲಿ ‘ನೊ ಮ್ಯಾಪಿಂಗ್’ ವರ್ಗದಲ್ಲಿ ಇಲ್ಲದೇ ಇರುವರು ಮತ್ತು ‘ತಾರ್ಕಿಕ ವ್ಯತ್ಯಾಸಕ್ಕೆ’ ಒಳಗಾಗದೇ ಇರುವರನ್ನು ಇಆರ್ಒ’ಗಳು ತಮ್ಮ ಪರಮಾಧಿಕಾರವನ್ನು ಬಳಸಿಕೊಂಡು ಇದೀಗ ನೋಟಿಸ್ ಹಂತದಲ್ಲಿ ಹೆಚ್ಚಳವಾಗಿ 1,489 ನೋಟಿಸ್ಗಳನ್ನು ನೀಡಲಾಗಿದೆಯೇ?
-ಸರೋವರ್ ಬೆಂಕಿಕೆರೆ, ನಾಗರಿಕ ಮತಕಾವಲು ಸಮಿತಿ ವಕ್ತಾರ
ವಿಚಾರಣೆಯಲ್ಲಿ ಯಶಸ್ವಿಯಾದ ಪ್ರಕರಣಗಳೆಷ್ಟು?
ರಾಜ್ಯದಲ್ಲಿ 43,82,824 ನೋಟಿಸ್ಗಳನ್ನು ವಿತರಿಸಿ, 43,63,459 ಪ್ರಕರಣಗಳ ವಿಚಾರಣೆ ಪೂರ್ಣಗೊಳಿಸ ಲಾಗಿದೆ. ಆದರೆ, ಈ ವಿಚಾರಣೆಗಳಲ್ಲಿ ಎಷ್ಟು ಪ್ರಕರಣಗಳಲ್ಲಿ ಮತದಾರರು ತಮ್ಮ ದಾಖಲೆಗಳನ್ನು ಸಮರ್ಪಕವಾಗಿ ಸಲ್ಲಿಸಿ ಹೆಸರು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ? ಎಷ್ಟು ಪ್ರಕರಣಗಳಲ್ಲಿ ಹೆಸರು ಅಳಿಸುವ ನಿರ್ಧಾರ ಕೈಗೊಳ್ಳಲಾಗಿದೆ? ಎಷ್ಟು ಪ್ರಕರಣಗಳಲ್ಲಿ ಮತದಾರರು ದಾಖಲೆ ಸಲ್ಲಿಸಲು ಸಾಧ್ಯವಾಗಿಲ್ಲ? ವಿಚಾರಣೆ ಪೂರ್ಣಗೊಳ್ಳದ 19,365 ಪ್ರಕರಣಗಳು ಬಾಕಿ ಉಳಿಯಲು ಕಾರಣಗಳೇನು? ಎಂಬುದರ ಬಗ್ಗೆ ಚುನಾವಣಾ ಆಯೋಗ ತಿಳಿಸಿಲ್ಲ.
ವಿಚಾರಣೆ ಪೂರ್ಣಗೊಂಡ ಪ್ರಕರಣಗಳ ಸಂಖ್ಯೆಯನ್ನು ಪ್ರಕಟಿಸುವುದಷ್ಟೇ ಸಾಲದು. ವಿಚಾರಣೆಯ ಫಲಿತಾಂಶ, ಹೆಸರು ಉಳಿದ ಮತ್ತು ಅಳಿಸಲಾದ ಮತದಾರರ ಸಂಖ್ಯೆ ಹಾಗೂ ಬಾಕಿ ಪ್ರಕರಣಗಳ ಕಾರಣಗಳನ್ನು ಬಹಿರಂಗಪಡಿಸುವುದು ಚು.ಆಯೋಗದ ಜವಾಬ್ದಾರಿ ಮತ್ತು ಪಾರದರ್ಶಕತೆಗೆ ನಿದರ್ಶನ. ಆದರೆ, ಈ ವಿವರಗಳಿಲ್ಲದೆ ಶೇ.99.56ರಷ್ಟು ವಿಚಾರಣೆ ಪೂರ್ಣಗೊಂಡಿದೆ ಎಂಬ ಅಂಕಿ-ಅಂಶವೊಂದರಿಂದಲೇ ಪ್ರಕ್ರಿಯೆಯ ಪಾರದರ್ಶಕತೆಯನ್ನು ಅಳೆಯಲು ಸಾಧ್ಯವಿಲ್ಲ.
-ಗಜೇಂದ್ರ, ಎಸ್ಐಆರ್ ನೋಟಿಸ್ ಸಂತ್ರಸ್ತ ಮತದಾರ






