ಕಲ್ಯಾಣ ಕರ್ನಾಟಕದಲ್ಲಿ 22,595 ಶಿಕ್ಷಕರ ಹುದ್ದೆಗಳು ಖಾಲಿ

ಸಾಂದರ್ಭಿಕ ಚಿತ್ರ
ರಾಯಚೂರು: ಅಭಿವೃದ್ಧಿಯ ಕನಸು ಕಾಣುತ್ತಿರುವ ರಾಯಚೂರು ಸೇರಿ ಕಲ್ಯಾಣ ಕರ್ನಾಟಕ ಭಾಗದ ಸರಕಾರಿ ಶಾಲೆಗಳಲ್ಲಿ ಖಾಲಿ ಹುದ್ದೆಗಳ ಸಮಸ್ಯೆ ತೀವ್ರವಾಗಿದ್ದು, ಸಂವಿಧಾನದ ಆಶಯದಂತೆ ಸರ್ವರಿಗೂ ಸಮಾನ ಶಿಕ್ಷಣ ಹಕ್ಕು ನೀಡದೆ ರಾಜ್ಯ ಸರಕಾರದ ಮಲತಾಯಿ ಧೋರಣೆ ಬಯಲಾಗಿದೆ.
ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಪ್ರಾಥಮಿಕ ಶಾಲೆಗಳಲ್ಲಿ 18,317 ಹುದ್ದೆಗಳು ಹಾಗೂ ಪ್ರೌಢಶಾಲೆಗಳಲ್ಲಿ 4,278 ಹುದ್ದೆಗಳು ಸೇರಿ ಒಟ್ಟು 22,595 ಹುದ್ದೆಗಳು ಖಾಲಿಯಿದೆ. ಶಿಕ್ಷಕರ ಹುದ್ದೆ ಭರ್ತಿ ಮಾಡದೆ ಅತಿಥಿ ಶಿಕ್ಷಕರ ಮೂಲಕವೇ ಬೋಧನೆ ಮಾಡಿಸುತ್ತಿದೆ.
ರಾಯಚೂರು ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆಗಳಲ್ಲಿ 8,460 ಹುದ್ದೆಗಳು ಮಂಜೂರಾಗಿದ್ದು ಕೇವಲ 3,900 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. 4,560 ಹುದ್ದೆಗಳು ಖಾಲಿ ಇವೆ. ಪ್ರೌಢಶಾಲೆಗಳ ಸ್ಥಿತಿಯೂ ಭಿನ್ನವಾಗಿಲ್ಲ. 2,239 ಹುದ್ದೆಗಳ ಪೈಕಿ ಕೇವಲ 1,175 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದು 1,064 ಹುದ್ದೆಗಳು ಖಾಲಿ ಇವೆ. ಇದು ಕಲ್ಯಾಣ ಕರ್ನಾಟಕದ ಅತ್ಯಧಿಕ ಖಾಲಿ ಹುದ್ದೆ ಇರುವ ಜಿಲ್ಲೆಯಾಗಿ ಗುರುತಿಸಿಕೊಂಡಿದೆ.
ಜಿಲ್ಲೆಯಲ್ಲಿ ಒಟ್ಟು 9,526 ಶಿಕ್ಷಕರ ಹುದ್ದೆ ಖಾಲಿಯಿದ್ದು, ಮಕ್ಕಳು ಗುಣಮಟ್ಟ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. 1ರಿಂದ 5ನೇ ತರಗತಿಯವರೆಗೆ 60 ಮಕ್ಕಳಿದ್ದರೆ ಇಬ್ಬರು ಶಿಕ್ಷಕರು, 60ರಿಂದ 90 ಮಕ್ಕಳಿದ್ದರೆ 3 ಶಿಕ್ಷಕರು, 60-100 ಮಕ್ಕಳಿದ್ದರೆ 5 ಶಿಕ್ಷಕರು ಹಾಗೂ ಒಬ್ಬ ಮುಖ್ಯ ಶಿಕ್ಷಕರು ಇರಬೇಕು ಎಂಬ ನಿಯಮವಿದ್ದರೂ ಜಿಲ್ಲೆಯ ಅನೇಕ ಶಾಲೆಗಳಲ್ಲಿ ಒಬ್ಬರು ಥವಾ ಇಬ್ಬರೇ ಶಿಕ್ಷಕರಿದ್ದಾರೆ. ಹಲವೆಡೆ ಏಕೋಪಾಧ್ಯಾಯ ಶಾಲೆಗಳಿವೆ, ಅಲ್ಲದೇ ಇನ್ನೂ ಕೆಲವೆಡೆ ಝೀರೋ ಟೀಚರ್ ಶಾಲೆಗಳಿವೆ. ಅಂದರೆ ಒಬ್ಬೇ ಒಬ್ಬ ಶಿಕ್ಷಕರಿಲ್ಲದೇ ಹೆಸರಿಗೆ ಅತಿಥಿ ಶಿಕ್ಷಕರೇ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ದೇಶದಲ್ಲಿಯೇ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ದೇವದುರ್ಗ ತಾಲೂಕಿನಲ್ಲಿಯೇ 105 ಶಾಲೆಗಳಲ್ಲಿ ಝೀರೋ (ಸೊನ್ನೆ) ಟೀಚರ್ ಶಾಲೆಗಳಿವೆ(ಅಂದರೆ ಸರಕಾರಿ ಶಿಕ್ಷಕರು ಇಲ್ಲದ ಶಾಲೆಗಳು).
ಮೂಲಸೌಲಭ್ಯದ ಕೊರತೆ, ತರಗತಿವಾರು ಶಿಕ್ಷಕರಿಲ್ಲ: ಜಿಲ್ಲೆಯ ಶಾಲೆಗಳ ದುಸ್ಥಿತಿ ಹೇಳತೀರದು. ಶುದ್ಧ ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಸೌಕರ್ಯ (ಇದ್ದರೂ ಫ್ಯಾನುಗಳಿಲ್ಲ), ತರಗತಿವಾರು ಕೊಠಡಿಗಳಿಲ್ಲ, ಮಕ್ಕಳಿಗೆ ಗ್ರಂಥಾಲಯ, ಆಟದ ಮೈದಾನ, ದೈಹಿಕ ಶಿಕ್ಷಣ ಶಿಕ್ಷಕರಿಲ್ಲ, ಬಹುತೇಕ ಶಾಲೆಗೆ ಕಾಂಪೌಂಡ್ ಇಲ್ಲ.., ಹೀಗೇ ಅನೇಕ ಇಲ್ಲಗಳ ನಡುವೆ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಶಿಕ್ಷಕರಿಲ್ಲದ ಕಾರಣ ಸರಕಾರಿ ಶಾಲೆಗಳ ದಾಖಲಾತಿ ಪ್ರಮಾಣ ಕುಸಿದಿದೆ. ಸರಕಾರಿ ಶಾಲೆಗಳ ಪಕ್ಕದಲ್ಲಿಯೇ ಖಾಸಗಿ ಶಾಲೆಗಳಿಗೆ ಪರವಾನಗಿ ನೀಡಿ ಪರೋಕ್ಷವಾಗಿ ಸರಕಾರಿ ಶಾಲೆಗಳನ್ನು ಮುಚ್ಚಲು ಕೆಳ ಹಂತದ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ. ಸರಕಾರಿ ಶಾಲೆಗಳ ಪರಿಸ್ಥಿತಿ ಬಗ್ಗೆ ಮಾತನಾಡಬೇಕಿರುವ ಜನಪ್ರತಿನಿಧಿಗಳು ಖಾಸಗಿ ಶಾಲೆಗಳು ನಡೆಸುತ್ತಿದ್ದಾರೆ ಹಾಗೂ ಅವರ ಬೆಂಬಲಿಗರಿಗೆ ಪರವಾನಗಿ ನೀಡುತ್ತಿದ್ದಾರೆ.
ಶಿಕ್ಷಕರ ಭರ್ತಿಗೆ ನಕಾರ, ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ :
ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕರ 45,431 ಹುದ್ದೆಗಳು ಮಂಜೂರಾಗಿದ್ದು, 27,114 ಕಾರ್ಯನಿರ್ವಹಿಸುತ್ತಿದ್ದಾರೆ. 18,317 ಹುದ್ದೆಗಳು ಖಾಲಿ ಇವೆ.
ಜಿಲ್ಲಾವಾರು ಗಮನಿಸಿದರೆ, ರಾಯಚೂರು ಹೊರತುಪಡಿಸಿದರೆ, ಕಲಬುರಗಿ ಜಿಲ್ಲೆಯಲ್ಲಿ 9,301 ಹುದ್ದೆಗಳು ಮಂಜೂರಾಗಿದ್ದು, 6,172 ಕಾರ್ಯ ನಿರ್ವಹಿಸುತ್ತಿದ್ದು, 3129 ಹುದ್ದೆಗಳು ಖಾಲಿ ಇವೆ. ಯಾದಗಿರಿ ಜಿಲ್ಲೆಗೆ 5,626 ಮಂಜೂರಾಗಿದೆ. ಇದರಲ್ಲಿ 2,597 ಕಾರ್ಯನಿರ್ವಹಿಸುತ್ತಿದ್ದು 3,029 ಹುದ್ದೆಗಳು ಖಾಲಿ ಇವೆ. ಕೊಪ್ಪಳ ಜಿಲ್ಲೆಗೆ ಮಂಜೂರಾದ 6,362 ಹುದ್ದೆಗಳ ಪೈಕಿ 3,745 ಕಾರ್ಯ ನಿರ್ವಹಿಸುತ್ತಿದ್ದು, 2,617 ಖಾಲಿ ಇವೆ. ಬಳ್ಳಾರಿ ಜಿಲ್ಲೆಗೆ 4,495 ಹುದ್ದೆಗಳು ಮಂಜೂರಾಗಿದ್ದು, 2,278 ಹುದ್ದೆಗಳು ಕಾರ್ಯನಿರ್ವಹಿಸಿದರೆ, 2,217 ಹುದ್ದೆಗಳು ಖಾಲಿ ಇವೆ. ಬೀದರ್ಗೆ 5,789 ಮಂಜೂರಾಗಿದೆ. ಅದರಲ್ಲಿ 4,400 ಕಾರ್ಯನಿರ್ವಹಿಸುತ್ತಿದ್ದು, 1,389 ಹುದ್ದೆಗಳು ಖಾಲಿ ಇವೆ. ವಿಜಯನಗರಕ್ಕೆ 5,626 ಮಂಜೂರಾದ ಹುದ್ದೆಗಳ ಪೈಕಿ 4,022 ಕಾರ್ಯ ನಿರ್ವಹಿಸುತ್ತಿದ್ದು, 1,376 ಹುದ್ದೆಗಳು ಖಾಲಿ ಇವೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ 18,317 ಹುದ್ದೆಗಳನ್ನು ಖಾಲಿ ಇಟ್ಟುಕೊಂಡು ಗುಣಮಟ್ಟದ ಶಿಕ್ಷಣ ಹೇಗೆ ನೀಡಲು ಸಾಧ್ಯ ಎಂದು ಶಿಕ್ಷಣ ತಜ್ಞರು ಪ್ರಶ್ನಿಸುತ್ತಿದ್ದಾರೆ.
ಪ್ರೌಢಶಾಲೆಯಲ್ಲಿ 4,278 ಹುದ್ದೆಗಳು ಖಾಲಿ :
ಪ್ರೌಢ ಶಾಲೆಗಳಿಗೆ 11,793 ಹುದ್ದೆಗಳು ಮಂಜೂರಾಗಿದ್ದು, ಈ ಪೈಕಿ 7515 ಹುದ್ದೆಗಳು ಕಾರ್ಯನಿರ್ವಹಿಸುತ್ತಿದ್ದು 4,278 ಹುದ್ದೆಗಳು ಖಾಲಿ ಇವೆ.
ರಾಯಚೂರು ಜಿಲ್ಲೆಯಲ್ಲೇ ಅತ್ಯಧಿಕ 1,064 ಹುದ್ದೆಗಳು ಖಾಲಿ ಇವೆ. ಯಾದಗಿರಿ ಜಿಲ್ಲೆಯಲ್ಲಿ 724, ಕೊಪ್ಪಳದಲ್ಲಿ 646, ಕಲಬುರಗಿಯಲ್ಲಿ 589, ಬಳ್ಳಾರಿಯಲ್ಲಿ 556, ಬೀದರ್ನಲ್ಲಿ 425 ಹಾಗೂ ವಿಜಯನಗರ ಜಿಲ್ಲೆಯಲ್ಲಿ 274 ಹುದ್ದೆಗಳು ಖಾಲಿ ಇವೆ.
ಮಂಜೂರಾಗಿರುವ ಹುದ್ದೆಗಳು ನೋಡುವುದಾದರೆ ರಾಯಚೂರು ಜಿಲ್ಲೆಗೆ 2,239 ಮಂಜೂರಾಗಿದ್ದು, 1,175 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಕಲಬುರಗಿ ಜಿಲ್ಲೆಗೆ 2,507 ಮಂಜೂರಾದರೆ 1,917 ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೀದರ್ 1,520 ಹುದ್ದೆಗಳು ಮಂಜೂರಾಗಿದ್ದು 1,095 ಕಾರ್ಯನಿರ್ವಹಿಸುತ್ತಿವೆ. ಬಳ್ಳಾರಿಗೆ 1,170 ಮಂಜೂರಾಗಿದ್ದು 614 ಕಾರ್ಯ ನಿರ್ವಹಿಸಲಾಗುತ್ತಿದೆ. ಹೊಸ ಜಿಲ್ಲೆ ವಿಜಯನಗರಕ್ಕೆ 1186 ಹುದ್ದೆಗಳು ಮಂಜೂರಾಗಿ 711 ಹುದ್ದೆಗಳಲ್ಲಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.
ಶಿಕ್ಷಣ ಹಕ್ಕು ಕಾಗದದಲ್ಲೇ ಉಳಿದಿದೆಯೇ? :
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇತ್ತೀಚೆಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಇದ್ದ ವೇದಿಕೆಯಲ್ಲಿ ಹಾಜರಿದ್ದ ಸಂದರ್ಭದಲ್ಲಿ ಭಾಷಣದಲ್ಲಿ ಮಾತನಾಡುತ್ತಾ, ‘ಗ್ಯಾರಂಟಿಗಳ ಮೂಲಕ ಜನರ ನೆರವಿಗೆ ಬಂದಿದ್ದು ಶ್ಲಾಘನೀಯ. ರಾಜ್ಯ ಸರಕಾರ ಏನೇ ಅಭಿವೃದ್ಧಿ ಮಾಡಿದರೂ ಕಲ್ಯಾಣ ಕರ್ನಾಟಕ ಭಾಗದಲ್ಲಿನ ಶಿಕ್ಷಕರ ಕೊರತೆ ನೀಗಿಸುತ್ತಿಲ್ಲ. ಕೈ ಮುಗಿದು ಕೇಳುವೆ, ಖಾಲಿ ಇರುವ ಶಿಕ್ಷಕರ ಹುದ್ದೆ ಭರ್ತಿ ಮಾಡಿ’ ಎಂದು ಅಂಗಲಾಚಿದ್ದು ಈ ಭಾಗದ ಅಸಹಾಯಕತೆಗೆ ಸಾಕ್ಷಿಯಾಗಿತ್ತು. ಅಲ್ಲದೇ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದಲ್ಲಿ ಜಾರಿಗೊಳಿಸಿದ್ದ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಅಡಿಯಲ್ಲಿ 14 ವರ್ಷದ ಎಲ್ಲಾ ಮಕ್ಕಳಿಗೆ ಕಡ್ಡಾಯ ಶಿಕ್ಷಣ ದೊರೆಯಬೇಕು ಎಂದು ಆರ್ಟಿಐ ಕಾಯ್ದೆ ಜಾರಿ ಮಾಡಿತ್ತು. ಅದಾಗ್ಯೂ, ರಾಜ್ಯ ಕಾಂಗ್ರೆಸ್ ಸರಕಾರ ಶಾಲೆಗಳಿಗೆ ಶಿಕ್ಷಕರನ್ನು ನೀಡದೇ, ತರಗತಿವಾರು ಶಿಕ್ಷಕರ ಕೊರತೆ, ಕೊಠಡಿಗಳ ಸಮಸ್ಯೆ, ಆಟದ ಮೈದಾನ, ಶೌಚಾಲಯ, ವಿದ್ಯುತ್, ಸ್ವಚ್ಛ ಕುಡಿಯುವ ನೀರು ಹಾಗೂ ಇತರೆ ಮೂಲಸೌಕರ್ಯವೂ ನೀಡದೇ ಶಾಲೆಗಳ ಸ್ಥಿತಿ ದಯನೀಯವಾಗಿದೆ. ಇಷ್ಟೆಲ್ಲಾ ಕೊರತೆಗಳ ಮಧ್ಯೆ ಮಕ್ಕಳಿಗೆ ಸೂಕ್ತ ಶಿಕ್ಷಣವನ್ನು ಒದಗಿಸುವುದು ಹೇಗೆ? ಶೈಕ್ಷಣಿಕ ಪ್ರಗತಿ ಕಾಣುವುದು ಹೇಗೆ ಎಂಬುವುದು ಯಕ್ಷ ಪ್ರಶ್ನೆಯಾಗಿದೆ. ಹೀಗಾಗಿಯೇ, ಪಾಲಕರು ಹೇಗೆ ಸರಕಾರಿ ಶಾಲೆಗೆ ಕಳುಹಿಸಲು ಹಿಂಜರಿಕೆ ತೋರಿಸುತ್ತಿದ್ದಾರೆ.
ಸರಕಾರಿ ಶಾಲೆಗಳಲ್ಲಿ ಶೌಚಾಲಯ, ಕಾಂಪೌಂಡ್ ವ್ಯವಸ್ಥೆ, ಕೊಠಡಿಗಳ ಕೊರತೆ ಹಾಗೂ ಮೂಲಸೌಕರ್ಯದ ಕೊರತೆ ಕಡಿಮೆಯಾಗಿದೆ. ಮೊದಲಿಗಿಂತ ಉತ್ತಮವಾಗಿದೆ. ಶಿಕ್ಷಕರ ಕೊರತೆ ಬಗ್ಗೆ ಸರಕಾರ ಮಟ್ಟದಲ್ಲಿ ನೇಮಕಾತಿ ನಡೆಯಬೇಕು. ನೂತನ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ್ದು ಇಲಾಖೆಯ ಸಮಸ್ಯೆಗಳ ಬಗ್ಗೆ ತಿಳಿಸಿದ್ದೇನೆ. ಮುಂದಿನ ದಿನಗಳಲ್ಲಿ ಕೆಕೆಆರ್ಡಿಬಿಯಿಂದ ಶಿಕ್ಷಕರ ನೇಮಕಾತಿಯಾಗುವ ಭರವಸೆ ನೀಡಿದ್ದಾರೆ.
-ಮಲ್ಲಿಕಾರ್ಜುನ, ಡಿಡಿಪಿಐ ರಾಯಚೂರು
ದೇವದುರ್ಗದ ತಾಲೂಕಿನಲ್ಲಿ ಶಿಕ್ಷಕರ ಕೊರತೆ ಇರುವುದು ಗಮನದಲ್ಲಿದೆ. ಶಿಕ್ಷಕರ ನೇಮಕಾತಿಯ ಬಗ್ಗೆ ಸಚಿವರಿಗೆ ಮನವಿ ಮಾಡಿದ್ದೇನೆ. ಮುಂಬರುವ ನೇಮಕಾತಿಯ ವೇಳೆ ನನ್ನ ತಾಲೂಕಿಗೆ ಮೊದಲ ಆದ್ಯತೆ ನೀಡಿ ಹೆಚ್ಚಿನ ಶಿಕ್ಷಕರನ್ನು ಭರ್ತಿ ಮಾಡಬೇಕು ಎಂದು ಮನವಿ ಮಾಡಿದ್ದೇನೆ.
-ಕರೆಮ್ಮ, ಜಿ ನಾಯಕ, ದೇವದುರ್ಗ ಶಾಸಕಿ






