ಕಾರಾಗೃಹಗಳಲ್ಲಿ 15 ಅಕ್ರಮ ಚಟುವಟಿಕೆಗಳಲ್ಲಿ 30 ಮಂದಿ ಜೈಲುಗಳ ಅಧಿಕಾರಿಗಳು, ಸಿಬ್ಬಂದಿ ಭಾಗಿ

ಬೆಂಗಳೂರು, ನ.13: ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹ ಸಹಿತ ರಾಜ್ಯದ ಇನ್ನಿತರ ಜಿಲ್ಲೆಗಳಲ್ಲಿನ ಕಾರಾಗೃಹಗಳಲ್ಲಿ 15 ಅಕ್ರಮ ಚಟುವಟಿಕೆಗಳಲ್ಲಿ 30 ಮಂದಿ ಜೈಲುಗಳ ಅಧಿಕಾರಿ, ಸಿಬ್ಬಂದಿಯೇ ಭಾಗಿಯಾಗಿದ್ದಾರೆ ಎನ್ನಲಾಗಿದೆ.
ಜೈಲುಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದನ್ನು ಸ್ವತಃ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸದನಕ್ಕೆ 2025ರ ಆಗಸ್ಟ್‌ನಲ್ಲೇ ಉತ್ತರ ನೀಡಿದ್ದರು.
ವಿಕೃತ ಕಾಮಿ ಉಮೇಶ್ ರೆಡ್ಡಿ ಮತ್ತು ಉಗ್ರನೊಬ್ಬನಿಗೆ ಮೊಬೈಲ್ ಸಹಿತ ಇನ್ನಿತರ ಸೌಲಭ್ಯಗಳನ್ನು ಒದಗಿಸಿದ್ದ ವೈರಲ್ ಆಗಿದ್ದ ವೀಡಿಯೊ ಆಧರಿಸಿ ತನಿಖೆಗೆ ಆದೇಶಿಸಿರುವ ಬೆನ್ನಲ್ಲೇ ಬೆಂಗಳೂರಿನ ಪರಪ್ಪನ ಅಗ್ರಹಾರ ಸಹಿತ ಇನ್ನಿತರ ಜೈಲುಗಳಲ್ಲಿ 15 ಅಕ್ರಮ ಪ್ರಕರಣಗಳಲ್ಲಿ 30 ಮಂದಿ ಅಧಿಕಾರಿ, ಸಿಬ್ಬಂದಿ ಭಾಗಿಯಾಗಿದ್ದಾರೆ ಎಂದು ಸರಕಾರವು ನೀಡಿದ್ದ ಉತ್ತರವು ಮುನ್ನೆಲೆಗೆ ಬಂದಿದೆ.
ತಪಾಸಣೆ ಸಮಯದಲ್ಲಿ ನಿಷೇಧಿತ ವಸ್ತುಗಳು ದೊರೆತ ಕೂಡಲೇ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿದೆ. 2025ರ ಜುಲೈ 31ರವರೆಗೆ ಒಟ್ಟು 269 ಪ್ರಕರಣಗಳು ದಾಖಲಾಗಿವೆ.ಅಕ್ರಮ ಚಟುವಟಿಕೆಗಳಲ್ಲಿ ಶಾಮೀಲಾಗಿರುವ ಒಟ್ಟು 15 ಪ್ರಕರಣಗಳಲ್ಲಿ 30 ಜನ ಅಧಿಕಾರಿಗಳು ಹಾಗೂ ಸಿಬ್ಬಂದಿಯ ವಿರುದ್ಧ ಪ್ರಕರಣ ದಾಖಲಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರು ಕಾರಾಗೃಹದಲ್ಲಿ 4 ಪ್ರಕರಣಗಳಲ್ಲಿ 6 ಮಂದಿ ಅಧಿಕಾರಿ, ಸಿಬ್ಬಂದಿ ಭಾಗಿಯಾಗಿದ್ದಾರೆ. ಬೆಳಗಾವಿಯಲ್ಲಿ 3 ಪ್ರಕರಣಗಳಲ್ಲಿ 3 ಮಂದಿ ಸಿಬ್ಬಂದಿ ಭಾಗಿಯಾಗಿದ್ದಾರೆ. ಕಲಬುರಗಿ, ಬಳ್ಳಾರಿ ಕಾರಾಗೃಹದಲ್ಲಿನ ನಡೆದ ತಲಾ 1 ಪ್ರಕರಣದಲ್ಲಿ ಒಬ್ಬೊಬ್ಬ ಅಧಿಕಾರಿ, ಸಿಬ್ಬಂದಿ ಭಾಗಿಯಾಗಿದ್ದಾರೆ ಎಂದು ಉತ್ತರ ನೀಡಿತ್ತು.
ಧಾರವಾಡದಲ್ಲಿ 2 ಪ್ರಕರಣಗಳಲ್ಲಿ 3 ಮಂದಿ ಅಧಿಕಾರಿ, ಸಿಬ್ಬಂದಿ ಭಾಗಿಯಾಗಿದ್ದರೆ, ದಾವಣಗೆರೆ ಕಾರಾಗೃಹದಲ್ಲಿ 1 ಪ್ರಕರಣದಲ್ಲಿ 12 ಮಂದಿ ಅಧಿಕಾರಿ, ಸಿಬ್ಬಂದಿ ಭಾಗಿಯಾಗಿದ್ದಾರೆ. ಮಂಗಳೂರಿನಲ್ಲಿ 2 ಪ್ರಕರಣಗಳಲ್ಲಿ ಇಬ್ಬರು ಅಧಿಕಾರಿ, ಸಿಬ್ಬಂದಿ, ಹೂವಿನಹಡಗಲಿ ಕಾರಾಗೃಹದಲ್ಲಿ 1 ಪ್ರಕರಣದಲ್ಲಿ ಇಬ್ಬರು ಅಧಿಕಾರಿ, ಸಿಬ್ಬಂದಿ ಭಾಗಿಯಾಗಿದ್ದಾರೆ. ಒಟ್ಟಾರೆ 15 ಪ್ರಕರಣಗಳಲ್ಲಿ 30 ಮಂದಿ ಅಧಿಕಾರಿ, ಸಿಬ್ಬಂದಿ ಭಾಗಿಯಾಗಿದ್ದಾರೆ.







