ನಾಲ್ಕು ವರ್ಷಗಳಲ್ಲಿ ರಾಜ್ಯಾದ್ಯಂತ 31,315 ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲು
ಶೇ.50 ಪೊಕ್ಸೊ, ಶೇ.44 ಮಕ್ಕಳ ಅಪಹರಣ ಪ್ರಕರಣ

ಸಾಂದರ್ಭಿಕ ಚಿತ್ರ | Photo credit : AI
ಬೆಂಗಳೂರು : ರಾಜ್ಯದಲ್ಲಿ ಪ್ರತಿವರ್ಷ ಸರಾಸರಿ 7,800 ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿದ್ದು, ನಾಲ್ಕು ವರ್ಷಗಳಿಂದ ಸುಮಾರು 30ಸಾವಿರಕ್ಕೂ ಅಧಿಕ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಶೇ.50ರಷ್ಟು ಪೊಕ್ಸೊ ಪ್ರಕರಣಗಳಾಗಿದ್ದು, ಶೇ.44ರಷ್ಟು ಮಕ್ಕಳ ಅಪಹರಣ ಪ್ರಕರಣಗಳಾಗಿವೆ.
2023ರಿಂದ 2026ರ ಸೆಪ್ಟಂಬರ್ ಅಂತ್ಯದವರೆಗೆ ರಾಜ್ಯಾದ್ಯಂತ ಸುಮಾರು 31,315 ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 15,909 ಪೊಕ್ಸೊ ಪ್ರಕರಣಗಳಾಗಿದ್ದರೆ, 13,832 ಮಕ್ಕಳ ಅಪಹರಣ ಪ್ರಕರಣಗಳಾಗಿವೆ. 607 ಬಾಲ್ಯ ವಿವಾಹ ಪ್ರಕರಣಗಳು, 356 ಬಾಲಕಾರ್ಮಿಕ ಪ್ರಕರಣಗಳು, 472 ಬಾಲಾಪರಾಧಿ ಪ್ರಕರಣಗಳಾಗಿವೆ.
2023ರಲ್ಲಿ 7,654 ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 3,759 ಪೊಕ್ಸೊ ಪ್ರಕರಣಗಳು ಮತ್ತು 3,442 ಮಕ್ಕಳ ಅಪಹರಣ ಪ್ರಕರಣಗಳಾಗಿವೆ. 2024ರಲ್ಲಿ 8,233 ಪ್ರಕರಣಗಳಾಗಿದ್ದು, ಈ ಪೈಕಿ 3,954 ಪೊಕ್ಸೊ ಪ್ರಕರಣಗಳಾಗಿದ್ದರೆ, 3,766 ಅಪಹರಣ ಪ್ರಕರಣಗಳಾಗಿವೆ. 2025ರಲ್ಲಿ 8,980 ಪ್ರಕರಣಗಳು ದಾಖಲಾಗಿದ್ದು, 4,561 ಪೊಕ್ಸೊ ಪ್ರಕರಣ ಮತ್ತು 3,886 ಅಪಹರಣ ಪ್ರಕರಣಗಳಾಗಿವೆ. 2026ರಲ್ಲಿ 6,448 ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, 3,635 ಪೊಕ್ಸೊ ಪ್ರಕರಣಗಳು ಮತ್ತು 2,738 ಮಕ್ಕಳ ಅಪಹರಣ ಪ್ರಕರಣಗಳಾಗಿವೆ.
ನಾಲ್ಕು ವರ್ಷಗಳಿಂದ ರಾಜ್ಯಾದ್ಯಂತ ದಾಖಲಾದ ಒಟ್ಟು ಪೊಕ್ಸೊ ಪ್ರಕರಣಗಳ ಪೈಕಿ 11,625 ಪೊಕ್ಸೊ ಅತ್ಯಾಚಾರ ಪ್ರಕರಣಗಳಾಗಿದ್ದು, 4,284 ಪೊಕ್ಸೊ, ಇತರ ಪ್ರಕರಣಗಳು ಅಂದರೆ ಲೈಂಗಿಕ ದೌರ್ಜನ್ಯ, ಲೈಂಗಿಕ ಕಿರುಕುಳ, ಅಶ್ಲೀಲ ಚಿತ್ರಗಳಿಗಾಗಿ ಮಕ್ಕಳನ್ನು ಬಳಕೆ ಮಾಡಿಕೊಂಡಿರುವ ಪ್ರಕರಣಗಳಾಗಿವೆ.
2023ರಿಂದ ಇಲ್ಲಿಯವರೆಗೆ ಬೆಂಗಳೂರು ನಗರವನ್ನು ಹೊರತುಪಡಿಸಿ ಬೆಂಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ 452 ಪೊಕ್ಸೊ ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ದಕ್ಷಿಣ(ರಾಮನಗರ) ಜಿಲ್ಲೆಯಲ್ಲಿ 416, ತುಮಕೂರು ಜಿಲ್ಲೆಯಲ್ಲಿ 703, ಕೆಜಿಎಫ್ ಹೊರತುಪಡಿಸಿ ಕೋಲಾರ ಜಿಲ್ಲೆಯಲ್ಲಿ 424, ಚಿಕ್ಕಬಳ್ಳಾಪುರ 684, ಚಿತ್ರದುರ್ಗ 543, ದಾವಣಗೆರೆ 409, ಶಿವಮೊಗ್ಗ 853, ಹಾವೇರಿ 464, ಮಂಗಳೂರು ಹೊರತುಪಡಿಸಿ ದಕ್ಷಿಣ ಕನ್ನಡ 300, ಉಡುಪಿ 207, ಚಿಕ್ಕಮಗಳೂರು 495, ಉತ್ತರ ಕನ್ನಡ ಜಿಲ್ಲೆಯಲ್ಲಿ ಪೊಕ್ಸೊ ಪ್ರಕರಣಗಳ ಸಂಖ್ಯೆ 297ಕ್ಕೆ ಏರಿಕೆಯಾಗಿದೆ.
ಬೆಳಗಾವಿ ನಗರ ಹೊರತುಪಡಿಸಿ ಬೆಳಗಾವಿ ಜಿಲ್ಲೆಯಲ್ಲಿ 565, ಬಾಗಲಕೋಟೆ 263, ವಿಜಯಪುರ 367, ಹುಬ್ಬಳ್ಳಿ-ಧಾರವಾಡ ಅವಳಿ ನಗರ ಹೊರತುಪಡಿಸಿ ಧಾರವಾಡ ಜಿಲ್ಲೆಯಲ್ಲಿ 161, ಗದಗ 184, ಮೈಸೂರು ನಗರ ಹೊರತುಪಡಿಸಿ ಮೈಸೂರು ಜಿಲ್ಲೆಯಲ್ಲಿ 603, ಮಂಡ್ಯ 574, ಚಾಮರಾಜನಗರ 314, ಹಾಸನ 628, ಕೊಡಗು 33 ಕರ್ನಾಟಕ ರೈಲ್ವೇಸ್ನಲ್ಲಿ ಪೊಕ್ಸೊ ಪ್ರಕರಣಗಳ ಸಂಖ್ಯೆ 13ಕ್ಕೆ ಹೆಚ್ಚಳವಾಗಿದೆ.
ನಾಲ್ಕು ವರ್ಷಗಳಲ್ಲಿ ಬೆಂಗಳೂರು ನಗರವೊಂದರಲ್ಲೇ 2,311 ಪೊಕ್ಸೊ ಪ್ರಕರಣಗಳು ದಾಖಲಾಗಿದ್ದು, ಮೈಸೂರು ನಗರದಲ್ಲಿ 260, ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ 219, ಮಂಗಳೂರಿನಲ್ಲಿ 238, ಬೆಳಗಾವಿ ನಗರದಲ್ಲಿ 131, ಕಲಬುರಗಿ ನಗರದಲ್ಲಿ 129, ಕೆಜಿಎಫ್ನಲ್ಲಿ 154 ಪೊಕ್ಸೊ ಪ್ರಕರಣಗಳು ದಾಖಲಾಗಿವೆ. ಇನ್ನು ಕಲಬುರಗಿ ಜಿಲೆಯಲ್ಲಿ 295, ಬೀದರ್ 209, ಯಾದಗಿರಿ 363, ಬಳ್ಳಾರಿ 339, ಕೊಪ್ಪಳ 272, ರಾಯಚೂರು 381, ವಿಜಯನಗರ 367 ಪೊಕ್ಸೊ ಪ್ರಕರಣಗಳು ದಾಖಲಾಗಿವೆ.
2023ರಲ್ಲಿ 141 ಬಾಲ್ಯವಿವಾಹ ಪ್ರಕರಣಗಳಾಗಿದ್ದು, 127 ಬಾಲಕಾರ್ಮಿಕ ಕಾಯ್ದೆ ಪ್ರಕರಣಗಳು, 99 ಬಾಲಾಪರಾಧಿ ಪ್ರಕರಣಗಳು ದಾಖಲಾಗಿವೆ. 2024ರಲ್ಲಿ 152 ಬಾಲ್ಯವಿವಾಹ ಪ್ರಕರಣಗಳಾಗಿದ್ದು, 105 ಬಾಲಕಾರ್ಮಿಕ ಕಾಯ್ದೆ ಪ್ರಕರಣಗಳು, 141 ಬಾಲಾಪರಾಧಿ ಪ್ರಕರಣಗಳು ದಾಖಲಾಗಿವೆ. 2025ರಲ್ಲಿ 197 ಬಾಲ್ಯವಿವಾಹ ಪ್ರಕರಣಗಳಾಗಿದ್ದು, 78 ಬಾಲಕಾರ್ಮಿಕ ಕಾಯ್ದೆ ಪ್ರಕರಣಗಳು, 151 ಬಾಲಾಪರಾಧಿ ಪ್ರಕರಣಗಳು ದಾಖಲಾಗಿವೆ. 2026ರಲ್ಲಿ 117 ಬಾಲ್ಯವಿವಾಹ ಪ್ರಕರಣಗಳಾಗಿದ್ದು, 46 ಬಾಲಕಾರ್ಮಿಕ ಕಾಯ್ದೆ ಪ್ರಕರಣಗಳು, 81 ಬಾಲಾಪರಾಧಿ ಪ್ರಕರಣಗಳು ದಾಖಲಾಗಿವೆ.






