ಮಸ್ಕಿಯಲ್ಲಿ 4 ಸಾವಿರ ವರ್ಷ ಹಿಂದಿನ ಜನವಸತಿ ಪತ್ತೆ
ಅಮೆರಿಕಾ, ಕೆನೆಡಾ, ಭಾರತದ 20 ಜನರ ತಂಡದಿಂದ ಸಂಶೋಧನೆ

ರಾಯಚೂರು : ಜಿಲ್ಲೆಯ ಮಸ್ಕಿ ತಾಲೂಕು ಅಶೋಕನ ಶಿಲಾಶಾಸನದ ಮೂಲಕ ಐತಿಹಾಸಿಕ ಮಹತ್ವ ಪಡೆದಿದೆ. ಈಗ 4 ಸಾವಿರ ವರ್ಷಗಳ ಹಿಂದಿನ ಜನವಸತಿ ಮಸ್ಕಿಯಲ್ಲಿ ಪತ್ತೆಯಾಗಿದ್ದು, ಅದರ ಕುರುಹುಗಳ ಬಗ್ಗೆ ಸಂಶೋಧನೆ ಮುಂದುವರೆದಿದೆ.
1915ರಲ್ಲಿ ಮಸ್ಕಿಯ ಹೊರವಲಯದಲ್ಲಿ ಅಶೋಕನ ಶಿಲಾಶಾಸನ ದೊರೆಯುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದಕ್ಕೂ ಮೊದಲು 1870 ಮತ್ತು 1888 ರಲ್ಲಿ ರಾಬರ್ಟ್ ಬ್ರೂಸ್ ಫೂಟ್ ಅಧ್ಯಯನ ಮಾಡಿದ್ದರು.
1915ರಲ್ಲಿ ಗಣಿ ಎಂಜಿನಿಯರ್ ಸಿ.ಬೀಡನ್ ಇಲ್ಲಿ ಅಶೋಕನ ಶಿಲಾ ಶಾಸನವನ್ನು ಕಂಡುಹಿಡಿದರು. 1935–37ರಲ್ಲಿ ಹೈದರಾಬಾದ್ ರಾಜ್ಯದ ಪುರಾತತ್ವ ಇಲಾಖೆ ಈ ಪ್ರದೇಶವನ್ನು ಅನ್ವೇಷಿಸಿತು ಮತ್ತು 1954ರಲ್ಲಿ ಭಾರತದ ಪುರಾತತ್ವ ಸಮೀಕ್ಷೆಯ ಪರವಾಗಿ ಅಮಲಾನಂದ ಘೋಷ್ ಈ ಸ್ಥಳವನ್ನು ಉತ್ಖನನ ಮಾಡಿದರು. ಆ ಉತ್ಖನನದಿಂದ ಈ ಪ್ರದೇಶವು ನಾಲ್ಕು ವಿಭಿನ್ನ ಸಾಂಸ್ಕೃತಿಕ ಅವಧಿಗಳಲ್ಲಿ ಆಕ್ರಮಿಸಿಕೊಂಡಿದೆ ಎಂಬುದು ತಿಳಿಯುತ್ತದೆ.
ಅಮೆರಿಕ, ಕೆನಡಾ ಹಾಗೂ ಭಾರತದ 20 ಸಂಶೋಧಕರ ತಂಡ ಕಳೆದ ಮೂರು ತಿಂಗಳಿನಿಂದ ಪಟ್ಟಣದ ಮಲ್ಲಿಕಾರ್ಜುನ ಬೆಟ್ಟ, ಬಯಲು ಆಂಜನೇಯ ದೇವಸ್ಥಾನದ ಸುತ್ತಲಿನ ಪ್ರದೇಶದಲ್ಲಿ ನಡೆಸಿದ ಉತ್ಖನನ ಹಾಗೂ ಸಂಶೋಧನೆ ವೇಳೆ ಈ ಅಂಶ ಕಂಡುಬಂದಿದೆ. ಉತ್ಖನನ ಹಾಗೂ ಸಂಶೋಧನೆಗಾಗಿ ಈ ತಂಡವು ಇಲ್ಲಿ 271 ಸ್ಥಳಗಳನ್ನು ಗುರುತಿಸಿದೆ. ಗುರುತಿಸಿದ ಸ್ಥಳಗಳಲ್ಲಿ ಭೂಮಿ ಅಗೆದಾಗ ವಿವಿಧ ಕಾಲಘಟ್ಟದ ಜನವಸತಿ ಇತ್ತು ಎಂಬುದು ದೃಢಪಟ್ಟಿದೆ. ಜನರ ಜೀವನ ಮಟ್ಟ, ಆಹಾರ ಪದ್ಧತಿ ಹಾಗೂ ಅವರು ಬಳಸುತ್ತಿದ್ದ ಮನೆಗಳ ಆಕಾರ, ಮಣ್ಣಿನ ಮಡಕೆ ಸೇರಿದಂತೆ ಅನೇಕ ವಸ್ತುಗಳು ಪತ್ತೆಯಾಗಿವೆ. ಹೆಚ್ಚಿನ ಸಂಶೋಧನೆಗಾಗಿ ಅವುಗಳನ್ನು ಸಂಗ್ರಹಿಸಲಾಗಿದೆ ಎಂದು ಸಂಶೋಧಕರೊಬ್ಬರು ತಿಳಿಸಿದ್ದಾರೆ.
ಅಮೆರಿಕ, ಕೆನಡಾ ಮತ್ತು ಭಾರತದ ಸಂಶೋಧಕರ ತಂಡದಿಂದ ಜಂಟಿಯಾಗಿ ಉತ್ಖನನ ಕೈಗೊಳ್ಳಲಾಗಿದೆ. 4 ಸಾವಿರ ವರ್ಷಗಳ ಹಿಂದೆ ಜನವಸತಿ ಇರುವ ಬಗ್ಗೆ ಪ್ರಮುಖ ದಾಖಲೆಗಳನ್ನು ಸಂಗ್ರಹಿಸಲಾಗಿದೆ ಎಂದು ದೆಹಲಿಯ ನೋಯಿಡಾ ವಿವಿಯ ಹೇಮಂತ್ ಕಡಾಂಬಿ ತಿಳಿಸಿದ್ದಾರೆ.
ಕೇಂದ್ರ ಪುರಾತತ್ವ ಇಲಾಖೆಯ ಅನುಮತಿ ಪಡೆದ ಅಮೆರಿಕದ ಸ್ಕ್ಯಾನ್ ಫೋರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಆ್ಯಂಡ್ರಿಮ್ ಎಂ.ಬವೆರ್, ಕೆನಡಾದ ಮ್ಯಾಕ್ ಗಿಲ್ ವಿಶ್ವವಿದ್ಯಾಲಯದ ಪೀಟರ್ ಜಿ.ಜೋಹಾನ್ಸನ್ ಹಾಗೂ ದೆಹಲಿಯ ನೊಯಿಡಾ ವಿಶ್ವವಿದ್ಯಾಲಯದ ಹೇಮಂತ್ ಕಡಾಂಬಿ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳ ತಂಡ ಈ ಭಾಗದಲ್ಲಿ ಉತ್ಖನನ ಮಾಡಿ ಪ್ರಾಚೀನ ಕಾಲದಲ್ಲಿ ಬಳಕೆಯಲ್ಲಿದ್ದ ಪಳಿಯುಳಿಕೆಗಳನ್ನು ಸಂಗ್ರಹಿಸುತ್ತಿದೆ.
ಮಸ್ಕಿ ಪಟ್ಟಣದಲ್ಲಿ ನಾಲ್ಕು ಸಾವಿರ ವರ್ಷಗಳ ಹಿಂದೆಯೇ ಜನವಸತಿ ಇತ್ತು ಎಂಬುದನ್ನು ದೃಢಪಡಿಸುವ ಕುರುಹುಗಳು ಇಲ್ಲಿ ಉತ್ಖವನ ನಡೆಸಿದ ವೇಳೆ ಲಭಿಸಿವೆ.
ಒಂದನೇಯ ಅವಧಿ ನವಶಿಲಾಯುಗ ಚಾಲ್ಕೊಲಿಥಿಕ್, ಎರಡನೇ ಅವಧಿ ಮೆಗಾಲಿಥಿಕ್, ಮೂರನೇ ಅವಧಿ ಆರಂಭಿಕ ಇತಿಹಾಸ ಹಾಗೂ ನಾಲ್ಕನೇ ಮಧ್ಯಕಾಲೀನ ಅವಧಿಯಲ್ಲಿ ಅಗೇಟ್ ಚೆರ್ಟ್, ಕಾರ್ನೆಲಿಯನ್ ಮತ್ತು ಓಪಲ್ ನಿಂದ ಮಾಡಿದ ಮೈಕ್ರೋಲಿತ್‌ಗಳು ಮತ್ತು ಬ್ಲೇಡ್‌ಗಳು ಕಂಡುಬರುತ್ತವೆ. ಹವಳ , ಚಿಪ್ಪು ಮತ್ತು ಇತರ ವಸ್ತುಗಳ ಅಲಂಕಾರಿಕ ಮಣಿಗಳು ಸಹ ಕಂಡುಬರುತ್ತವೆ. ಮಂದ-ಬೂದು ಬಣ್ಣದ ಸಾಮಾನುಗಳು ಮತ್ತು ಬಣ್ಣ ಬಳಿದ-ಬಫ್ ಸಾಮಾನು ಮಡಿಕೆಗಳು ಕಂಡುಬರುತ್ತವೆ.
ಈಗ ಅಮೇರಿಕಾದ ಸ್ಟ್ಯಾನ್ ಫೋರ್ಡ್ ವಿಶ್ವ ವಿದ್ಯಾಲಯದ ಡಾ.ಆ್ಯಂಡ್ರಿಮ್ ಎಂ.ಬವೇರ್, ಕೆನಡಾದ ಮ್ಯಾಕ್ ಗಿಲ್ ವಿಶ್ವ ವಿದ್ಯಾಲಯದ ಡಾ.ಪೀಟರ್ ಜಿ., ಜೋಹಾನ್ಸನ್ ಮತ್ತು ದೆಹಲಿಯ ನೊಯಿಡಾ ವಿಶ್ವ ವಿದ್ಯಾಲಯದ ಡಾ.ಹೇಮಂತ್ ಕಡಾಂಬಿ ಸಂಶೋಧನಾ ವಿದ್ಯಾರ್ಥಿಗಳೊಂದಿಗೆ ಬಂದು ಸುಮಾರು ಎರಡು ತಿಂಗಳುಗಳ ಕಾಲ ಮಸ್ಕಿ ಅಶೋಕನ ಶಿಲಾಶಾಸನದ ಆಸುಪಾಸಿನ ದುರ್ಗದ ಗುಡ್ಡ, ಮಜ್ಜಿಗೆ ಗುಂಡು ಮತ್ತು ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮುಂಭಾಗದ ಪ್ರದೇಶಗಳಲ್ಲಿ ಉತ್ಖನನ ಮಾಡಿ ಕೆಲವು ಪಳಿಯುಳಿಕೆಗಳನ್ನು ಸಂಗ್ರಹಿಸಿಕೊಂಡು ಅಧ್ಯಯನ ಮಾಡಿ ಈಚೆಗೆ ಹಿಂದಿರುಗಿದ್ದಾರೆ.
ಅವರಿಗೆ ಕರ್ನಾಟಕ ಭೋವಿ ಸಮಾಜ ವಿಕಾಸ ಸಂಘ ಮಸ್ಕಿ ಮತ್ತು ರಾಯಚೂರು ಜಿಲ್ಲೆಯ ನಾಗರಿಕರ ಪರವಾಗಿ ಗೌರವ ಸನ್ಮಾನ ಮಾಡಿ ಬಿಳ್ಕೊಟ್ಟಿದ್ದಾರೆ. ಈ ಅಪರೂಪದ ಸ್ಮಾರಕಗಳ ತವರಾಗಿರುವ ಮಸ್ಕಿಯ ಐತಿಹಾಸಿಕ ನೆಲೆಗಳನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸುವುದು ಸರಕಾರದ, ಜನಪ್ರತಿನಿಧಿಗಳ, ಇತಿಹಾಸ ಪ್ರೇಮಿಗಳ ಸಾರ್ವಜನಿಕರ ಜವಬ್ದಾರಿಯಾಗಿದೆ.
ಅವರೇ ಹೇಳುವಂತೆ ಇದು ಅಧ್ಯಯನದ ದೃಷ್ಟಿಯಿಂದ ಬಹಳ ಮಹತ್ವಪೂರ್ಣವಾದ ಸ್ಥಳ, ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದೆ ಇಲ್ಲಿ ಜನವಸತಿ ಇತ್ತು. ಉತ್ಖನನದಿಂದ ಅವರ ಜೀವನ ಶೈಲಿ, ಬಳಸಿದ ವಸ್ತುಗಳು ಲಭ್ಯವಾಗಿವೆ. ಅವುಗಳ ತಳಸ್ಪರ್ಶಿ ಅಧ್ಯಯನದಿಂದ ಇನ್ನೂ ಮಾಹಿತಿ ಲಭ್ಯವಾಗುತ್ತದೆ ಎಂಬುದು ತಿಳಿದುಬಂದಿದೆ.








