ವಿಶ್ವಕಪ್ ಗೆದ್ದು ತಂದ ಕಪಿಲ್ ಡೆವಿಲ್ಸ್ ಸಾಧನೆಗೆ 42 ವರ್ಷ

ಅದು ಏಕದಿನ ಕ್ರಿಕೆಟ್ ಆಗಷ್ಟೇ ಜನಪ್ರಿಯಗೊಳ್ಳುತ್ತಿದ್ದ ಕಾಲ. ಐದು ದಿನಗಳ ಟೆಸ್ಟ್ ನೋಡಿ, ನೋಡಿ... ಕೇಳಿ, ಕೇಳಿ... ಬೇಸತ್ತಿದ್ದ ಕ್ರಿಕೆಟ್ ಪ್ರಿಯರಿಗೆ ಆಗ ಒಂದೇ ದಿನದಲ್ಲಿ ಮುಗಿಯುವ ‘ಒನ್ ಡೇ ಮ್ಯಾಚ್’ಮುದ ನೀಡ ತೊಡಗಿತ್ತು. ಆದರೆ, ಆಟದಲ್ಲಾಗುತ್ತಿರುವ ಬದಲಾವಣೆಯನ್ನು ಕ್ರಿಕೆಟ್ ಜಗತ್ತು ಸ್ವೀಕರಿಸುವಷ್ಟರಲ್ಲೇ 2 ವಿಶ್ವಕಪ್ ಪಂದ್ಯಾಟಗಳು ಮುಗಿದು ಹೋಗಿತ್ತು. 1975ರಲ್ಲಿ ನಡೆದ ಮೊದಲ ವಿಶ್ವಕಪ್ ಟೂರ್ನಿಯಲ್ಲಿ ಸೀಮಿತ ಓವರ್‌ಗಳ ಪಂದ್ಯದ ಹೊಳಪು ಅರಿಯದೆ, ಇದ್ದ ಅರುವತ್ತೂ ಓವರುಗಳನ್ನು ಆಡಿದ್ದ ಸುನೀಲ್ ಗವಾಸ್ಕರ್ 36 ರನ್ ಗಳಿಸಿ ಅಜೇಯರಾಗಿ ಉಳಿದದ್ದು ಮರೆತು ಹೋಗತೊಡಗಿದ್ದ ಕಾಲವದು. ಅಷ್ಟು ಹೊತ್ತಿಗೆಲ್ಲಾ, ಏಕದಿನ ಕ್ರಿಕೆಟ್ ಬರೀ ಆಟವಾಗಿ ಉಳಿದಿರಲಿಲ್ಲ. ಆಗಲೇ ಅದು ಕ್ರಿಕೆಟ್ ಜ್ವರವನ್ನು ಹತ್ತಿಸತೊಡಗಿತ್ತು. ಹಾಗಿದ್ದಾಗಲೇ ಬಂತು, 1983ರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ. 1975 ಹಾಗೂ 1979ರ ವಿಶ್ವಕಪ್ ಪಂದ್ಯಾಟಗಳಲ್ಲಿ ಹೇಳಿಕೊಳ್ಳುವ ಸಾಧನೆ ಮಾಡದಿದ್ದ ಭಾರತ ತಂಡದ ಕಥೆ 1983ರ ವಿಶ್ವಕಪ್ ಪಂದ್ಯಾಟದಲ್ಲೂ ಅಷ್ಟೇ ಎಂದು ಕ್ರಿಕೆಟ್ ತಜ್ಞರು ಅಭಿಪ್ರಾಯಪಟ್ಟಿದ್ದರು. ಈ ಪರಿಸ್ಥಿತಿಯಲ್ಲಿ ಎರಡೂ ವಿಶ್ವಕಪ್‌ಗಳ ಸಾಮ್ರಾಟ ವೆಸ್ಟ್ ಇಂಡೀಸ್ ವಿರುದ್ಧ ಕಪಿಲ್ ದೇವ್ ಸಾರಥ್ಯದ ಭಾರತ ಕ್ರಿಕೆಟ್ ತಂಡ ವಿಶ್ವ ವಿಜಯಿಯಾಗಿದ್ದು ಕೂಡ ಅನಿರ್ವಚನೀಯ ಸಂದರ್ಭವೇ.
ಕಪಿಲ್ ಡೆವಿಲ್ಸ್ 1983ರಲ್ಲಿ ಗೆದ್ದ ವಿಶ್ವಕಪ್ ಸಾಧನೆಯ ಬಗ್ಗೆ ಎಷ್ಟೇ ಮಾತನಾಡಿದರೂ, ನೆನಪುಗಳ ಬುತ್ತಿ ಬಿಚ್ಚಿದರೂ ಅದು ಚೆಂದದ ಅನುಭೂತಿ. ಕ್ರಿಕೆಟ್ ಆಟದ ಸಹಜ ಸುಗಂಧ ಎನಿಸಿದ 1983ರ ವಿಶ್ವಕಪ್ ಸಾಧನೆಯ ಚಿತ್ರಣ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಸ್ಮತಿ ಪಟಲದಲ್ಲಿ ಎಂದೂ ಮಾಸದ ನೆನಪುಗಳು. 1983ರ ಜೂನ್ 25ರಂದು ಇಂಗ್ಲೆಂಡ್‌ನ ‘ಕ್ರಿಕೆಟ್ ಕಾಶಿ’ ಲಾರ್ಡ್ಸ್ ಅಂಗಳದ ಅಟ್ಟಣಿಗೆಯ ಮೇಲೆ ಕಪಿಲ್ ದೇವ್ ವಿಶ್ವಕಪ್ ಎತ್ತಿಹಿಡಿದ ಐತಿಹಾಸಿಕ ಸಾಧನೆಗೆ ಇದೀಗ ಬರೋಬ್ಬರಿ 42 ವರ್ಷಗಳು ಸಂದಿವೆ. ಕ್ರಿಕೆಟ್ ಅನ್ನು ಸದಾ ಜಪಿಸುತ್ತಿರುವ ಭಾರತೀಯರಿಗೆ ವಿಶ್ವಕಪ್ ವಿಜಯ ಹೊಸ ಇತಿಹಾಸಕ್ಕೆ ಕಾರಣವಾಯಿತು. 80ರ ದಶಕದ ಆರಂಭದಲ್ಲಿ ಉಳ್ಳವರ ಮನೆಯಲ್ಲಷ್ಟೇ ಟಿವಿ ಸೆಟ್ ಗಳಿದ್ದವು. ಊರಿಗೊಂದೋ,
ಎರಡೋ, ಅದರಲ್ಲೂ ಅವು ಕಪ್ಪು ಬಿಳುಪು. ಹಾಗಾಗಿ ಎಲ್ಲರೂ ಬಿಬಿಸಿ ಪ್ರಸಾರ ಮಾಡುತ್ತಿದ್ದ ರನ್ನಿಂಗ್ ಕಾಮೆಂಟರಿಯನ್ನು ರೇಡಿಯೊದಲ್ಲಿ ಕೇಳಿಸಿಕೊಳ್ಳುತ್ತಿದ್ದುದರಿಂದ ಭಾರತ ಗೆದ್ದ ಸುದ್ದಿ ಮಿಂಚಿನಂತೆ ಹರಡಿ, ಕಾಮೆಂಟರಿ ಕೇಳಿಸಿಕೊಳ್ಳದವರೂ ಬೀದಿಗಳಿಗೆ ಬಂದು ಕುಣಿಯುವ ಸನ್ನಿವೇಶ ಸೃಷ್ಟಿಸಿತ್ತು. ಆ ಸ್ಮರಣೀಯ ದಿನ ಎಂದೂ ಮರೆಯಲಾಗದು. ಗಂಧದ ಕೊರಡು ಎಷ್ಟೇ ಹಳೆಯದಾಗಿರಲಿ, ಆ ಕೊರಡು ತೇಯ್ದಷ್ಟೂ ಸುಗಂಧದ ಪರಿಮಳವನ್ನು ಪಸರಿಸುತ್ತಲೇ ಇರುತ್ತದೆ. ಅದೇ ರೀತಿ ಭಾರತ ಕ್ರಿಕೆಟ್ ತಂಡದ 1983ರ ವಿಶ್ವಕಪ್ ಗೆಲುವಿನ ಸಾಧನೆ ಕೂಡ.
ಭಾರತ ತಂಡದ ಹೋರಾಟ: ಭಾರತ ತಂಡದ ಸ್ಮರಣೀಯ ಹೋರಾಟದ ಸಾಧನೆಯನ್ನು ನಾವು ನೆನಪಿಸುತ್ತಿದ್ದೇವೆ. ಆ ಕ್ಷಣವನ್ನು ನೆನಪಿಸುವಾಗ ಮೈಯೆಲ್ಲ ಪುಳಕಗೊಳ್ಳುತ್ತದೆ. ಇಂದಿನ ಡಿಜಿಟಲ್ ಯುಗದಲ್ಲಿಯೂ ಆ ಕಪ್ಪುಬಿಳುಪು ಚಿತ್ರದ ಸೌಂದರ್ಯ ನಮ್ಮ ಮನದಲ್ಲಿ ಮಾಸಿಲ್ಲ. ಇವತ್ತು ಕ್ರಿಕೆಟ್ ಜಗತ್ತಿನಲ್ಲಿ ಭಾರತೀಯ ಕ್ರಿಕೆಟ್ ತಂಡ ತನ್ನ ಪ್ರಭುತ್ವವನ್ನು ಸ್ಥಾಪಿಸಿದ್ದರೆ ಅದಕ್ಕೆ 1983ರ ವಿಶ್ವಕಪ್ ಗೆಲುವೇ ಮೊದಲ ಅಡಿಗಲ್ಲು. ಯಾವುದೇ ನಿರೀಕ್ಷೆಗಳಿಲ್ಲದೆ ಆಂಗ್ಲರ ನಾಡಿಗೆ ಪ್ರಯಾಣಿಸಿದ್ದ ಭಾರತೀಯ ತಂಡ ಅಲ್ಲಿ ವಿಶ್ವಕಪ್ ಗೆದ್ದಿರುವುದೇ ಕ್ರಿಕೆಟ್ ಇತಿಹಾಸದ ರೋಚಕ ಕಹಾನಿ. ಭಾರತದಲ್ಲಿ, ‘ಕ್ರಿಕೆಟ್ ಒಂದು ಕ್ರೀಡೆಯಲ್ಲ, ಅದೊಂದು ಧರ್ಮ.’ ಭಾರತವು ಅಂದು ವಿಶ್ವಕಪ್ ಗೆಲ್ಲದಿದ್ದರೆ ಬಹುಶಃ ಇವುಗಳು ಅಸ್ತಿತ್ವಕ್ಕೆ ಬರುತ್ತಿರಲಿಲ್ಲ, ಏಕೆಂದರೆ ಅದು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತಿದೊಡ್ಡ ತಿರುವು ಎಂದು ಪರಿಗಣಿಸಲ್ಪಟ್ಟ ಕ್ಷಣವಾಗಿದೆ. ಈ ಪಂದ್ಯಾವಳಿಯ ಮೊದಲು ನಡೆದ 2 ವಿಶ್ವಕಪ್ ಪಂದ್ಯಾವಳಿಗಳಲ್ಲಿ ಭಾರತ ತಂಡವು ‘ಆಟಕ್ಕುಂಟು ಲೆಕ್ಕಕ್ಕಿಲ್ಲ ’ ಎಂಬಂತೆ ಇತ್ತು. ತಾನು ಆಡಿದ ಎಲ್ಲಾ ಪಂದ್ಯಗಳ ಪೈಕಿ ಒಂದನ್ನು ಗೆದ್ದಿರುವ ಭಾರತ ಸ್ಪರ್ಧೆಯಲ್ಲಿ ಗೆಲ್ಲುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಆದ್ದರಿಂದ, 2 ಬಾರಿಯ ವಿಶ್ವಕಪ್ ಚಾಂಪಿಯನ್ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯದಿಂದ ಫೈನಲ್ ತನಕ ಪ್ರತೀ ಗೆಲುವು ಭಾರತೀಯ ಕ್ರಿಕೆಟ್ ಇತಿಹಾಸದ ಬಹು ದೊಡ್ಡ ಗೆಲುವು ಆಗಿತ್ತು.
ರೋಚಕ ಫೈನಲ್: ಒಂದೊಂದು ಅಚ್ಚರಿಯ ಫಲಿತಾಂಶದೊಂದಿಗೆ ವಿಶ್ವಕಪ್ ಫೈನಲಿಗೆ ಎಂಟ್ರಿ ಕೊಟ್ಟ ಭಾರತೀಯ ತಂಡ ಜೂನ್ 25ರಂದು ಕ್ರಿಕೆಟ್ ತವರು ಲಾರ್ಡ್ಸ್ ನಲ್ಲಿ ಇತಿಹಾಸ ಬರೆಯಲು ಸಿದ್ಧವಾಗಿತ್ತು. ಭಾರತ ಫೈನಲ್ ಪಂದ್ಯದಲ್ಲಿ ಎದುರಿಸಿದ್ದು ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವನ್ನು.
ಆ ದಿನಗಳಲ್ಲಿ ವೆಸ್ಟ್ ಇಂಡೀಸ್ ಎಂದರೆ ಕ್ರಿಕೆಟ್ ಲೋಕದಲ್ಲಿ ಸೋಲಿಲ್ಲದ ಸರದಾರನಾಗಿತ್ತು. ವಿವಿಯನ್ ರಿಚರ್ಡ್ಸ್, ಕ್ಲೈವ್ ಲಾಯ್ಡ್, ಗಾರ್ಡನ್ ಗ್ರೀನಿಜ್, ಡೆಸ್ಮಂಡ್ ಹೇನ್ಸ್, ಲ್ಯಾರಿ ಗೋಮ್ಸ್, ಜೆಫ್ರೀ ಡ್ಯುಜಾನ್ ಅವರಂತಹ ಘಟಾನುಘಟಿ ಬ್ಯಾಟರ್‌ಗಳ ಮಧ್ಯೆ ಆ್ಯಂಡಿ ರಾಬರ್ಟ್ಸ್ , ಮಾಲ್ಕಮ್ ಮಾರ್ಷಲ್, ಮೈಕಲ್ ಹೋಲ್ಡಿಂಗ್, ಜೋಲ್ ಗಾರ್ನರ್ ಅವರಂತಹ ಬಲಿಷ್ಠ ಬೌಲಿಂಗ್ ಪಡೆ ಹೊಂದಿದ್ದ ವೆಸ್ಟ್ ಇಂಡೀಸ್ ವಿಶ್ವಕಪ್ ಗೆಲ್ಲುವ ಹಾಟ್ ಫೇವರಿಟ್ ತಂಡವಾಗಿತ್ತು. ಆದರೆ,
ಫೈನಲ್ ಪಂದ್ಯದ ಆರಂಭದಲ್ಲಿ ವೆಸ್ಟ್ ಇಂಡೀಸ್ ನಾಯಕ ಕ್ಲೈವ್ ಲಾಯ್ಡ್ ಮೊದಲ ಲೀಗ್ ಪಂದ್ಯದಲ್ಲಿ ಮಾಡಿದ ತಪ್ಪನ್ನೇ ಮಾಡಿದರು. ಟಾಸ್ ಗೆದ್ದು ಭಾರತ ತಂಡವನ್ನು ಬ್ಯಾಟಿಂಗ್‌ಗೆ ಆಮಂತ್ರಿಸಿದರು. ಆರಂಭದಲ್ಲಿ ಲಾಯ್ಡ್ ನಿರ್ಧಾರ ಸರಿ ಎಂದೇ ತೋರಿತು. ಶರವೇಗ ತ್ರಿವಳಿಗಳಾದ ಹೋಲ್ಡಿಂಗ್, ಮಾರ್ಷಲ್, ರಾಬರ್ಟ್ ದಾಳಿ ಎದುರಿಸಲಾರದ ಭಾರತ 54.4 ಓವರುಗಳಲ್ಲಿ 183 ರನ್‌ಗಳಿಗೆ ಸರ್ವಪತನ ಕಂಡಿತು. 5ನೇ ಓವರ್‌ನಲ್ಲಿ ಗವಾಸ್ಕರ್ ನಿರ್ಗಮನ, ಶ್ರೀಕಾಂತ್ ಭರವಸೆಯ ಬ್ಯಾಟಿಂಗ್ ನಡೆಸಿದರು. ಗಾರ್ನರ್ ಅವರ ಚೆಂಡನ್ನು ಸ್ಲಿಪ್ಸ್ ಮೂಲಕ ದಬ್ಬಿ ಪ್ರಥಮ ಬೌಂಡರಿ ಗಳಿಸಿದರು. ರಾಬರ್ಟ್‌ಗೆ ಹುಕ್ ಮಾಡಿ ಸಿಕ್ಸರ್ ಬಾರಿಸಿದರು. 2ನೇ ವಿಕೆಟ್‌ಗೆ ಶ್ರೀಕಾಂತ್ - ಮೊಹಿಂದರ್ ಕೇವಲ 57 ಚೆಂಡುಗಳಲ್ಲಿ 57 ರನ್ ಸೇರಿಸಿದರು. 38 ರನ್ ಗಳಿಸಿದ ಶ್ರೀಕಾಂತ್ ನಿರ್ಗಮಿಸಿದ ಮೇಲೆ ಮೊಹಿಂದರ್ ಬಂಡೆಯಂತೆ ನಿಂತರೂ ಹೋಲ್ಡಿಂಗ್ ಎಸೆತದಲ್ಲಿ ಬೌಲ್ಡ್ ಆದರು. ನಂತರ ಬಂದ ಕಪಿಲ್ ದೇವ್ ಅವರ ಲಾಂಗ್ ಆನ್ ಸಿಕ್ಸರ್ ಎಲ್ಲರಿಗೂ ಖುಷಿ ತಂದಿತು. 36ನೇ ಓವರ್‌ನಲ್ಲಿ ರೋಜರ್ ಬಿನ್ನಿ ನಿರ್ಗಮನ. ಇನಿಂಗ್ಸ್ ಕೊನೆಗೆ ಭಾರತ 183 ರನ್ ಮಾಡಿದಾಗ, ಹೆಚ್ಚಿನವರು ವಿಂಡೀಸ್ ತಂಡ ತಮ್ಮ 3ನೇ ವಿಶ್ವಕಪ್ ಅನ್ನು ಎಷ್ಟು ಓವರುಗಳಲ್ಲಿ ಗೆಲ್ಲುತ್ತದೆ ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದರು.
ವಿವಿಯನ್ ರಿಚರ್ಡ್ಸ್ ಎಂಬ ಬಲಾಢ್ಯ ಬ್ಯಾಟರನ್ನು ಹೊಂದಿದ್ದ ವೆಸ್ಟ್ ಇಂಡೀಸ್ ಬ್ಯಾಟಿಂಗ್, ಭಾರತ ನೀಡಿದ್ದ ಗುರಿಯನ್ನು ಮೂವತ್ತೇ ಓವರುಗಳಲ್ಲಿ ಛಿದ್ರಗೊಳಿಸುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಬಲ್ವಿಂದರ್ ಸಿಂಗ್ ಸಂಧು ಬೌಲಿಂಗ್‌ನಲ್ಲಿ ಆರಂಭಿಕ ಆಟಗಾರ ಗ್ರೀನಿಜ್ ಬೌಲ್ಡ್ ಆದಾಗ ಸ್ಕೋರ್ ಕೇವಲ 5 ರನ್! ರಿಚರ್ಡ್ಸ್ ಬಂದ ಕೂಡಲೇ ಸಂಧು ಎಸೆತದಲ್ಲಿ ಬೌಂಡರಿ ಬಾರಿಸಿದರು. ಮದನ್ ಲಾಲ್ ಅವರ ಮೊದಲ ಓವರ್‌ನಲ್ಲಿ ರಿಚರ್ಡ್ಸ್ 3 ಬೌಂಡರಿ ಚಚ್ಚಿದರು. ಬಿನ್ನಿ ಪಡೆದ ಕ್ಯಾಚ್ ಮೂಲಕ ಮದನ್ ಲಾಲ್ ಹೇನ್ಸ್ ಅವರನ್ನು ಬಲಿ ತೆಗೆದುಕೊಂಡರು. ಗೋಮ್ಸ್ ಅವರು ಮದನ್ ಲಾಲ್ ಬೌಲಿಂಗ್‌ನಲ್ಲಿ ಗವಾಸ್ಕರ್ ಹಿಡಿದ ಉತ್ತಮ ಕ್ಯಾಚ್‌ನಿಂದ ಪೆವಿಲಿಯನ್‌ಗೆ ವಾಪಸಾದರು. ಬೌಂಡರಿಗಳನ್ನೇ ಚಚ್ಚತೊಡಗಿದ್ದ ರಿಚರ್ಡ್ಸ್‌ಗೆ ಅವರ ಅಪರಿಮಿತ ಆತ್ಮವಿಶ್ವಾಸವೇ ಮುಳುವಾಯಿತು. 28 ಎಸೆತಗಳಲ್ಲಿ 33 ರನ್ ಸಿಡಿಸಿದ್ದ ರಿಚರ್ಡ್ಸ್ ಅವರು ಮದನ್ ಲಾಲ್ ಎಸೆತವೊಂದನ್ನು ತಮ್ಮ ಎಡಭಾಗಕ್ಕೆ ಎಳೆದು ಬೀಸಿದಾಗ ಚೆಂಡು ಗಾಳಿಯಲ್ಲಿ ಚಿಮ್ಮಿತು. ತಾವು ನಿಂತಲ್ಲಿಂದ ಹತ್ತಾರು ಮೀಟರ್ ಹಿಂದಕ್ಕೆ ಗಾಳಿಯಲ್ಲಿ ತೇಲಿ ಹೋದ ಚೆಂಡಿನತ್ತ ಬಿಟ್ಟ ದೃಷ್ಟಿ ನೆಟ್ಟ ಕಪಿಲ್ ಹಿಂದೆ ಓಡಿ, ವೃತ್ತಾಕಾರದಲ್ಲಿ ಬದಿಗೆ ತಿರುಗಿ ಕ್ಯಾಚ್ ಹಿಡಿದಾಗ ಭಾರತ ಗೆಲುವಿನ ವಾಸನೆ ಹಿಡಿಯಿತು. ರಿಚರ್ಡ್ಸ್ ಪತನ ಭಾರತದ ಉತ್ಸಾಹಕ್ಕೆ ಬಲ ನೀಡಿತು. ಮಾರ್ಷಲ್ - ಡ್ಯುಜಾನ್ ಜೋಡಿ 43 ರನ್ ಸೇರಿಸಿ ಎಚ್ಚರಿಕೆಯಿಂದ ಆಡುತ್ತಿದ್ದರು. ಮೊಹಿಂದರ್ ಎಸೆತದಲ್ಲಿ ಮಾರ್ಷಲ್ ಎಡ್ಜ್ ಮಾಡಿದ ಚೆಂಡಿಗೆ ಕಾಯುತ್ತಿದ್ದ ಗವಾಸ್ಕರ್ ಜಿಗಿದು ಕ್ಯಾಚ್ ಹಿಡಿದರು. ನಂತರ ಹೋಲ್ಡಿಂಗ್ ಹಾಗೂ ಗಾರ್ನರ್ ಭಾರತದ ಗೆಲುವಿಗೆ ಅಡ್ಡಗೋಡೆಯಂತೆ ಆಡಿದ್ದು ನಿಜಕ್ಕೂ ಶ್ಲಾಘನೀಯ.
ಹೋಲ್ಡಿಂಗ್ ಅವರನ್ನು ಎಲ್ಬಿಡಬ್ಲ್ಯು ಮುಖಾಂತರ ಅಮರನಾಥ್ ಬಲಿ ತೆಗೆದುಕೊಂಡಾಗ, ಭಾರತದ ನಂಬಲಾರದ ಕ್ಷಣ ಬಂದಿತು. ಕಪಿಲ್ ದೇವ್, ಅಮರ್‌ನಾಥ್, ಬಿನ್ನಿ , ಮದನ್‌ಲಾಲ್, ಸಂಧು ಬೌಲಿಂಗ್ ಎದುರಿಸಲಾರದೆ ವೆಸ್ಟ್ ಇಂಡೀಸ್ ದೈತ್ಯರು ಭರ್ತಿ 52 ಓವರ್ ಆಡಿ 140 ರನ್ನಿಗೆ ಕುಸಿದು ಬಿದ್ದರು. ಭಾರತ 43 ರನ್‌ಗಳಿಂದ ಫೈನಲ್ ಪಂದ್ಯವನ್ನು ಗೆದ್ದುಕೊಂಡಿತು.ಅಲ್ಲಿಗೆ ಫೈನಲ್ ಚಾಲೆಂಜ್ ಮುಗಿದಿತ್ತು. ಇಡೀ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಭಾರತದ ಬಾವುಟ ಹಾರಿಸುತ್ತಾ ಕಿಕ್ಕಿರಿದ ಭಾರತದ ಬೆಂಬಲಿಗರು ಮೈದಾನಕ್ಕೆ ನುಗ್ಗಿದರು. ಕಪಿಲ್ ಡೆವಿಲ್ಸ್ ಭಾರತಕ್ಕೆ ಮೊದಲ ವಿಶ್ವಕಪ್ ಗೆದ್ದುಕೊಟ್ಟಿತು. ಕಪಿಲ್‌ದೇವ್ ಸಂತಸದಿಂದ ಪ್ರತಿಷ್ಠಿತ ವಿಶ್ವಕಪ್ ಎತ್ತಿ ಹಿಡಿದು ಭಾರತದ ಕೀರ್ತಿಯನ್ನು ಗಗನಕ್ಕೇರಿಸಿದರು.
ಹೌದು, ಲಾರ್ಡ್ಸ್ ಮೈದಾನದಲ್ಲಿ ಎಲ್ಲರ ಲೆಕ್ಕಾಚಾರ ತಲೆಕೆಳಗಾಗಿಸಿದ್ದ ‘ಕಪಿಲ್ ಡೆವಿಲ್ಸ್’ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದ ರಣರೋಚಕ ಸಾಧನೆಯ ಕಹಾನಿಗೆ ಈಗ 42 ವರ್ಷ ಪೂರ್ಣಗೊಂಡಿದೆ. ಈ ಮಧುರ ಸ್ಮರಣೀಯ ಐತಿಹಾಸಿಕ ಗೆಲುವಿನ ಆ ಕ್ಷಣ ಎಲ್ಲಾ ಭಾರತೀಯ ಅಭಿಮಾನಿಗಳ ನೆನಪಿನಂಗಳದಲ್ಲಿದೆ.







