ದ.ಕ.ದಲ್ಲಿ 2026 ರಲ್ಲಿ 53 ಇಲಿ ಜ್ವರ ಪ್ರಕರಣ ದಾಖಲು

ಮಂಗಳೂರು : ಮಳೆಗಾಲ ಆರಂಭ ವಾಗುತ್ತಿದ್ದಂತೆ ಮಲೇರಿಯಾ, ಡೆಂಗಿ, ವೈರಲ್ ಜ್ವರ ಹೀಗೆ ಒಂದಲ್ಲ ಒಂದು ಕಾಯಿಲೆಗಳು ಜನರನ್ನು ಬಾಧಿಸುತ್ತದೆ. ದ.ಕ. ಜಿಲ್ಲೆಯಲ್ಲಿ ಮಳೆ ಜೋರಾದರೆ ಇಲಿ ಜ್ವರ ಪ್ರಕರಣಗಳು ಜಾಸ್ತಿಯಾಗುತ್ತದೆ.
ಈ ಬಾರಿ ಮಳೆ ತಡವಾಗಿರುವ ಹಿನ್ನೆಲೆಯಲ್ಲಿ ಇಲಿಜ್ವರ ಕಳೆದ ವರ್ಷಕ್ಕಿಂತ ಕಡಿಮೆ ಇದೆ. 2026 ಜ.1ರಿಂದ ಜೂನ್ ಅಂತ್ಯಕ್ಕೆ 53 ಇಲಿ ಜ್ವರ ಪ್ರಕರಣ ಗಳು ವರದಿಯಾಗಿದೆ. ಕಳೆದ ವರ್ಷ ಇದೇ ವೇಳೆ 86 ಪ್ರಕರಣಗಳು ದಾಖಲಾಗಿತ್ತು. ಆದರೆ ಇದು ಏರಿಕೆ ಅಗುವುದಿಲ್ಲ ಎಂದು ಈಗಲೇ ಹೇಳುವಂತಿಲ್ಲ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.
ಇಳಿಜ್ವರವನ್ನು ಲೆಪ್ಟೋಸ್ಟಿರೋಸಿಸ್ ಎಂದು ವೈದ್ಯಕೀಯ ಭಾಷೆಯಲ್ಲಿ ಹೇಳಲಾಗುತ್ತಿದೆ. ‘ಲೆಪ್ಟೋಸ್ಪೈರಾ’ ಎಂಬ ಬ್ಯಾಕ್ಟೀರಿಯಾದಿಂದ ಹರ ಡುವ ಸೋಂಕು ಜ್ವರ ಇದಾಗಿದೆ. ಇಲಿ, ಹೆಗ್ಗಣಗಳ ಮೂಲಕ ಈ ಬ್ಯಾಕ್ಟೀರಿಯಾ ನೀರು ಮತ್ತು ಮಣ್ಣನ್ನು ಸೇರಿಕೊಂಡು ಬಳಿಕ ಮನುಷ್ಯರ ದೇಹವನ್ನು ಪ್ರವೇಶಿಸುತ್ತದೆ.
ಚಳಿ, ತೀವ್ರ ಜ್ವರ, ತಲೆನೋವು, ಕಣ್ಣುಗಳು ಕೆಂಪಾಗುವುದು, ಮೈಕೈ ನೋವು, ಮಾಂಸ ಖಂಡಗಳ ಸೆಳೆತ, ಕಾಮಾಲೆ, ಹೊಟ್ಟೆ ನೋವು ಮತ್ತು ವಾಂತಿ ಮತ್ತಿತರ ಲಕ್ಷಣಗಳು ಇಲಿಜ್ವರ ಬಾಧಿತರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ.
6 ತಿಂಗಳಲ್ಲಿ ಪ್ರಕರಣ ಕಡಿಮೆ: 2026ರ ಜೂನ್ ಅಂತ್ಯದ ತನಕ ಜಿಲ್ಲೆ ತಾಲೂಕುಗಳ ಪೈಕಿ ಮಂಗಳೂರು 20, ಬಂಟ್ವಾಳ 14, ಬೆಳ್ತಂಗಡಿ 9, ಪುತ್ತೂರು 7 ಮತ್ತು ಸುಳ್ಯ ತಾಲೂಕಿನಲ್ಲಿ 3 ಪ್ರಕರಣಗಳು ದಾಖಲಾಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.
2025ರಲ್ಲಿ ಜಿಲ್ಲೆಯಲ್ಲಿ 265 ಪ್ರಕರಣಗಳು ಕಂಡು ಬಂದಿತ್ತು. ಮಂಗಳೂರು ತಾಲೂಕಿನಲ್ಲಿ 128, ಬಂಟ್ವಾಳ 52 , ಬೆಳ್ತಂಗಡಿ 45, ಪುತ್ತೂರು 26 ಮತ್ತು ಸುಳ್ಯದಲ್ಲಿ 14 ಪ್ರಕರಣಗಳು. 2024ರಲ್ಲಿ ಜಿಲ್ಲೆಯಲ್ಲಿ 283 ಪ್ರಕರಣಗಳು ವರದಿಯಾಗಿತ್ತು. ಮಂಗಳೂರು ತಾಲೂಕಿನಲ್ಲಿ 138, ಬಂಟ್ವಾಳ 63 , ಬೆಳ್ತಂಗಡಿ 45, ಪುತ್ತೂರು 22 ಮತ್ತು ಸುಳ್ಯದಲ್ಲಿ 15 ಪ್ರಕರಣಗಳು ಬೆಳಕಿಗೆ ಬಂದಿತ್ತು.
ಇಲಿ ಸಂತತಿಯ ಏರಿಕೆ: ಇಲಿಗಳ ಸಂತತಿ ತೀವ್ರ ಏರಿಕೆಗೊಂಡಿದೆ. ನಾಟಿ ಬೆಕ್ಕುಗಳ ಸಾಕಣೆಯ ಆಸಕ್ತಿ ಜನರಲ್ಲಿ ಕಡಿಮೆಯಾಗಿರುವುದೇ ಇಲಿಗಳ ಸಂತತಿ ಏರಿಕೆಯಾಗಲು ಕಾರಣವಾಗಿದೆ. ಯಾಕೆಂದರೆ ಊರಿನ ಬೆಕ್ಕುಗಳು ಇಲಿಗಳನ್ನು ಹಿಡಿದು ತಿನ್ನುತ್ತದೆ. ಕೆರೆ ಹಾವಿಗೆ ಇಲಿ ಆಹಾರವಾಗಿದೆ. ಕೆರೆ ಹಾವುಗಳು ಹಿಂದಿನಷ್ಟು ನಮ್ಮಲ್ಲಿ ಕಂಡು ಬರುತ್ತಿಲ್ಲ. ಅದೇ ರೀತಿ ಊರಿನ ಬೆಕ್ಕುಗಳು ಹಿಂದಿನಷ್ಟು ನಮ್ಮಲ್ಲಿ ಇಲ್ಲ. ವಿದೇಶಿ ಬೆಕ್ಕುಗಳ ಸಾಕಣೆ ಪ್ರವೃತ್ತಿ ನಮ್ಮಲ್ಲಿ ಏರಿಕೆಯಾಗುತ್ತಿದೆ. ಇಂತಹ ಬೆಕ್ಕುಗಳು ಇಲಿಗಳನ್ನು ಹಿಡಿಯುವುದಿಲ್ಲ. ಇದು ಕೂಡಾ ಇಲಿಗಳ ಸಂಖ್ಯೆ ಏರಿಕೆಗೆ ಕಾರಣ ಎನ್ನಲಾಗುತ್ತದೆ.
ಇಲಿ, ಹೆಗ್ಗಣಗಳ ಸಂಖ್ಯೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಅವುಗಳಿಂದಾಗಿ ಜನರಿಗೆ ಹೆಚ್ಚು ತೊಂದರೆ ಕಾಣಿಸಿಕೊಂಡಿದೆ. ಬೆಳೆ, ದವಸ ಧಾನ್ಯಗಳ ಹಾನಿ ಒಂದಡೆಯಾದರೆ, ಇಲಿಗಳ ಕಾರಣದಿಂದಾಗಿ ಜನರಿಗೆ ಬರುವ ಕಾಯಿಲೆಯಾಗಿರುವ ಇಲಿ ಜ್ವರ ಪ್ರಕರಣಗಳು ಜಾಸ್ತಿಯಾಗಿದೆ.ಮಣ್ಣಿನಲ್ಲಿ ಬಿಲ ಕೊರೆದು ವಾಸಿಸುವ ಇಲಿಗಳು ಮಳೆಗಾಲದಲ್ಲಿ ಬಿಲಗಳಲ್ಲಿ ನೀರು ತುಂಬಿದಾಗ ಕಟ್ಟಡಗಳಿಗೆ ಲಗ್ಗೆ ಇಡುತ್ತದೆ.
ಹೊಲಗಳಲ್ಲಿ ಬೆಳೆಗಳನ್ನು ನಾಶ ಮಾಡುವ ಇಲಿ ಹೆಗ್ಗಣಗಳು ಕಟ್ಟಡಗಳಲ್ಲಿ ಬಿಲಗಳನ್ನು ಕೊರೆದು ವಾಸಿಸುತ್ತದೆ. ಜ್ವರಬಾಧಿತ ಇಲಿ, ಹೆಗ್ಗಣಗಳ ಮಲಮೂತ್ರ ನೀರು ಸೇರುತ್ತದೆ. ಅದರಲ್ಲಿರುವ ಕಾಯಿಲೆಯ ಬ್ಯಾಕ್ಟೀರಿಯಾಗಳು ಮನುಷ್ಯನಿಗೆ ಮಾತ್ರವಲ್ಲ ಸಾಕು ಪ್ರಾಣಿಗಳಾದ ನಾಯಿ, ದನ, ಆಡು, ಕುರಿ, ಹಂದಿಗಳಿಗೂ ಹರಡುತ್ತದೆ. ಮುಂಜಾಗ್ರತಾ ಕ್ರಮ ಕೈಗೊಂಡರೆ ಈ ಕಾಯಿಲೆಯಿಂದ ಬಚವಾಗಲು ಸಾಧ್ಯವಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ಜಿಲ್ಲಾ ಕೇಂದ್ರದ ಸರಕಾರಿ ಆಸ್ಪತ್ರೆಯಲ್ಲಿ ಇಲಿಜ್ವರಕ್ಕೆ ಉಚಿತ ಚಿಕಿತ್ಸೆ ಲಭ್ಯವಿರುತ್ತದೆ.
ಕಾಡಿನ ಅಂಚಿನ ಪ್ರದೇಶಗಳಲ್ಲಿ ನೆಲೆಸಿದವರು ಅಡಿಕೆ ತೋಟಗಳು, ರಬ್ಬರ್ ಪ್ಲಾಂಟೇಷನ್, ಗದ್ದೆ ಬೇಸಾಯ, ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡ ಕಾರ್ಮಿಕರಿಗೆ ಸೋಂಕು ಕಂಡು ಬರುತ್ತದೆ. ನಗರ ಪ್ರದೇಶದಲ್ಲಿ ಚರಂಡಿ ನೀರು ರಸ್ತೆಗೆ ಹರಿಯುವ ಕಲುಷಿತ ನೀರಿನ ಸಂಪರ್ಕಕ್ಕೆ ಬರುವ ವ್ಯಕ್ತಿಗಳಿಗೆ ಇಲಿಜ್ವರ ಬರುತ್ತದೆ.
ಚರಂಡಿಗಳು ಇಲಿ, ಹೆಗ್ಗಣಗಳ ವಾಸಸ್ಥಾನವಾಗಿವೆ. ಮಳೆಗಾಲದಲ್ಲಿ ಚರಂಡಿಗಳಲ್ಲಿ ನೀರು ತುಂಬಿದಾಗ ಅವು ಹೊರಬಂದು ಜನರಿಗೆ ಹೆಚ್ಚು ತೊಂದರೆ ಕೊಡುತ್ತವೆ. ನೀರನ್ನು ಕಲುಷಿತಗೊಳಿಸುತ್ತವೆ. ಅವುಗಳ ಮೂತ್ರ ವಿಸರ್ಜಣೆಯಿಂದ ಬ್ಯಾಕ್ಟೀರಿಯಾಗಳು ಮಾನವನ ದೇಹ ಪ್ರವೇಶಿಸಿ ಕಾಯಿಲೆಗೆ ಕಾರಣವಾಗುತ್ತದೆ. ಇಲಿಗಳ ಸಂಖ್ಯೆ ಜಾಸ್ತಿಯಾಗಿರುವ ಕಾರಣ ಇಲಿ ಜ್ವರ ಜಾಸ್ತಿಯಾಗಿದೆ ಎಂದು ಹೇಳುವಂತಿಲ್ಲ. ಸಾಮಾನ್ಯವಾಗಿ ದೊಡ್ಡ ಹೆಗ್ಗಣಗಳ ಕಾರಣದಿಂದ ಜನರಿಗೆ ಹೆಚ್ಚು ತೊಂದರೆಯಾಗುತ್ತದೆ.
| ಡಾ.ಅರುಣ್‌ಕುಮಾರ್ ಶೆಟ್ಟಿ, ಉಪನಿರ್ದೇಶಕರು ಪಶುಪಾಲನೆೆ ಮತ್ತು ಪಶುವೈದ್ಯಕೀಯ ಇಲಾಖೆ ದ.ಕ. ಜಿಲ್ಲೆ
ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗುವವರು ಎಲ್ಲರೂ ದ.ಕ. ಜಿಲ್ಲೆಯವರಲ್ಲ, ಕರ್ನಾಟಕ, ಕೇರಳಂ ಮತ್ತಿತರ ವಿವಿಧ ರಾಜ್ಯದವರು ಬಂದು ದಾಖಲಾಗುತ್ತಾರೆ. ಈಗ ಮಳೆ ತಡವಾದ ಕಾರಣ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ. ಮಳೆ ತೀವ್ರಗೊಂಡರೆ ಇದು ಜಾಸ್ತಿಯಾಗುವ ಸಾಧ್ಯತೆ ಇದೆ. ಇಲಿ ಜ್ವರದ ಪ್ರಾಥಮಿಕ ಹಂತದಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರೆ ಈ ಕಾಯಿಲೆ ವಾಸಿಯಾಗುತ್ತದೆ. ಆದರೆ ವೈದ್ಯರ ಸಲಹೆ ಪಡೆಯದೆ ನಿರ್ಲಕ್ಷ್ಯ ವಹಿಸಿದರೆ ಈ ಕಾಯಿಲೆ ರೋಗಿಯ ಜೀವಕ್ಕೆ ಅಪಾಯಕಾರಿ.
| ಡಾ.ನವೀನ್ ಚಂದ್ರ ಕುಲಾಲ್
ದ.ಕ.ಜಿಲ್ಲಾ ಸರ್ವೇಕ್ಷಣಾಧಿಕಾರಿ






