ಸಂಡೂರಿನಲ್ಲಿ ಶೇ.58 ಮಳೆ ಕೊರತೆ; ಬಿತ್ತನೆ ಕುಸಿತ, ಒಣಗುತ್ತಿರುವ ಬೆಳೆ

ಸಂಡೂರು: ಗಣಿ ಸಂಪತ್ತಿನಿಂದ ರಾಜ್ಯದ ಗಮನ ಸೆಳೆದಿರುವ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕು ಇಂದು ಮಳೆ ಕೊರತೆಯಿಂದ ತೀವ್ರ ಸಂಕಷ್ಟವನ್ನು ಎದುರಿಸುತ್ತಿದೆ. ಈ ಬಾರಿ ಮುಂಗಾರು ಮಳೆಯು ಶೇ.58ರಷ್ಟು ಕೊರತೆಯಾಗಿರುವ ಪರಿಣಾಮ ರೈತರಲ್ಲಿ ಆತಂಕ ಮನೆ ಮಾಡಿದ್ದು, ಸಾವಿರಾರು ಎಕರೆ ಪ್ರದೇಶದಲ್ಲಿ ಬಿತ್ತಿದ ಬೆಳೆಗಳು ಒಣಗುವ ಹಂತ ತಲುಪಿವೆ. ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿನ ಸಮಸ್ಯೆಯೂ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ.
ಜೂನ್ ತಿಂಗಳಲ್ಲಿ ವಾಡಿಕೆಯಂತೆ 7.85 ಸೆಂ.ಮೀ. ಮಳೆಯಾಗಬೇಕಿತ್ತಾದರೂ, ಈವರೆಗೆ ಕೇವಲ 1.73 ಸೆಂ.ಮೀ. ಮಳೆಯಷ್ಟೇ ದಾಖಲಾಗಿದೆ. ಮೇ ತಿಂಗಳ ಕೊನೆಯ ವಾರ ಹಾಗೂ ಜೂನ್ ಮೊದಲ ವಾರದಲ್ಲಿ ಸುರಿದ ಹದವಾದ ಮಳೆಯನ್ನು ನಂಬಿ ರೈತರು ಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದರು. ಆದರೆ, ಕಳೆದ 20 ದಿನಗಳಿಂದ ಮಳೆ ಸಂಪೂರ್ಣ ಕೈಕೊಟ್ಟಿರುವ ಪರಿಣಾಮ ಮೊಳಕೆಯೊಡೆದ ಬೆಳೆಗಳು ಬಿಸಿಲಿನ ತಾಪಕ್ಕೆ ಒಣಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ.
ತಾಲೂಕಿನ ಒಟ್ಟು 94,359 ಹೆಕ್ಟೇರ್ ಭೌಗೋಳಿಕ ಪ್ರದೇಶದಲ್ಲಿ 37,506 ಹೆಕ್ಟೇರ್ ಕೃಷಿಭೂಮಿ ಇದ್ದು, ಅದರಲ್ಲಿ 24,885 ಹೆಕ್ಟೇರ್ ಮಳೆಯಾಶ್ರಿತ ಕೃಷಿ ಪ್ರದೇಶವಾಗಿದೆ. ಆದರೆ ಮಳೆ ಕೊರತೆಯಿಂದಾಗಿ ಈವರೆಗೆ ಕೇವಲ 11,925 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಸಾಧ್ಯವಾಗಿದೆ. ಉಳಿದ ರೈತರು ಇನ್ನೂ ಮಳೆಯ ನಿರೀಕ್ಷೆಯಲ್ಲೇ ಭೂಮಿಯನ್ನು ಹದ ಮಾಡಿಕೊಂಡು ಮುಗಿಲು ನೋಡುತ್ತಾ ಕಾಲ ಕಳೆಯುತ್ತಿದ್ದಾರೆ.
ಸಂಡೂರು, ತೋರಣಗಲ್ಲು ಹಾಗೂ ಚೋರನೂರು ಹೋಬಳಿಗಳ ಗ್ರಾಮಗಳಲ್ಲಿ ದಿನವಿಡೀ ಮೋಡ ಕವಿದ ವಾತಾವರಣ ಕಂಡುಬಂದರೂ ಮಳೆ ಮಾತ್ರ ಸುರಿಯುತ್ತಿಲ್ಲ. ಪರಿಣಾಮ ಕೆರೆ-ಕಟ್ಟೆಗಳು ಬರಿದಾಗುತ್ತಿದ್ದು, ಕುಡಿಯುವ ನೀರಿನ ಜೊತೆಗೆ ಜಾನುವಾರುಗಳಿಗೆ ಮೇವಿನ ತೀವ್ರ ಅಭಾವ ಉಂಟಾಗಿದೆ.
ಮೇವಿಗಾಗಿ ದೂರದ ತಾಲೂಕುಗಳತ್ತ ರೈತರ ಓಡಾಟ
ತಾಲೂಕಿನಲ್ಲಿ ಮೇವು ಸಿಗದ ಕಾರಣ ರೈತರು ಕಂಪ್ಲಿ ಹಾಗೂ ಕುರುಗೋಡು ತಾಲೂಕಿನ ನೀರಾವರಿ ಪ್ರದೇಶಗಳಿಗೆ ತೆರಳಿ ಭತ್ತದ ಹುಲ್ಲನ್ನು ಖರೀದಿಸುತ್ತಿದ್ದಾರೆ. ಒಂದು ಟ್ರ್ಯಾಕ್ಟರ್ ಭತ್ತದ ಹುಲ್ಲಿಗೆ ಸುಮಾರು 10 ಸಾವಿರ ರೂ.ಗಳಂತೆ ಪಾವತಿಸಿ ತಮ್ಮ ಗ್ರಾಮಗಳಿಗೆ ಸಾಗಿಸುತ್ತಿದ್ದಾರೆ. ಈಗಾಗಲೇ ಬೀಜ, ಗೊಬ್ಬರ ಹಾಗೂ ಕೃಷಿ ವೆಚ್ಚಕ್ಕಾಗಿ ಸಾಲ ಮಾಡಿಕೊಂಡಿರುವ ರೈತರಿಗೆ ಈ ಹೆಚ್ಚುವರಿ ವೆಚ್ಚ ಮತ್ತಷ್ಟು ಹೊರೆ ತಂದಿದೆ.
ಮಳೆ ಸುರಿಯಲಿ ಎಂದು ಗ್ರಾಮೀಣ ಭಾಗಗಳಲ್ಲಿ ವಿಶೇಷ ಪೂಜೆ, ಹೋಮ-ಹವನ ಹಾಗೂ ಪ್ರಾರ್ಥನೆಗಳು ನಿರಂತರವಾಗಿ ನಡೆಯುತ್ತಿವೆ. ಆದರೆ ಮಳೆರಾಯ ಮಾತ್ರ ಕರುಣೆ ತೋರದಿರುವುದು ರೈತರ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.
ಗಣಿ ಸಂಪತ್ತಿದ್ದರೂ ನೀರಿನ ಶಾಶ್ವತ ಯೋಜನೆಗಳಿಲ್ಲ: ಈ ಕುರಿತು ಪ್ರತಿಕ್ರಿಯಿಸಿದ ರೈತ ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ ಮೇಟಿ, ಸಂಡೂರು ತಾಲೂಕಿನಲ್ಲಿ ಸಾವಿರಾರು ಕೋಟಿ ರೂಪಾಯಿ ಆದಾಯ ತರುವ ಕೆಎಂಆರ್ಸಿ, ಡಿಎಂಎಫ್, ಸಿಎಸ್‌ಆರ್ ನಿಧಿಗಳು, ದೊಡ್ಡ ಗಣಿ ಕಂಪನಿಗಳು ಹಾಗೂ ಕೈಗಾರಿಕೆಗಳಿದ್ದರೂ ರೈತರಿಗೆ ಶಾಶ್ವತ ನೀರಿನ ವ್ಯವಸ್ಥೆ ಕಲ್ಪಿಸುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಅನೇಕ ರೈತರು ಕೈಗಾರಿಕೆಗಳಿಗೆ ತಮ್ಮ ಭೂಮಿಯನ್ನು ಕಳೆದುಕೊಂಡಿದ್ದಾರೆ. ಉಳಿದ ಭೂಮಿಗೂ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಮುಂದುವರಿದು, ತುಂಗಭದ್ರಾ ಜಲಾಶಯದಿಂದ ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಒದಗಿಸುವ ಯೋಜನೆ ಹಾಗೂ ಕೆರೆಗಳನ್ನು ತುಂಬಿಸುವ ಯೋಜನೆಗಾಗಿ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಜನಪ್ರತಿನಿಧಿಗಳು ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ತಕ್ಷಣವೇ ಸರಕಾರ ಗೋಶಾಲೆಗಳನ್ನು ಆರಂಭಿಸಿ, ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಜೊತೆಗೆ ಬರ ಪರಿಸ್ಥಿತಿಯನ್ನು ಘೋಷಿಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಸಂಡೂರಿನ ರೈತರು ಈಗ ಮಳೆಯ ನಿರೀಕ್ಷೆಯೊಂದಿಗೇ ದಿನ ಕಳೆಯುತ್ತಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಉತ್ತಮ ಮಳೆಯಾಗದಿದ್ದರೆ ಬೆಳೆ ಸಂಪೂರ್ಣ ಹಾನಿಯಾಗುವ ಆತಂಕ ಎದುರಾಗಿದೆ. ಸರಕಾರ ಹಾಗೂ ಜಿಲ್ಲಾಡಳಿತ ತುರ್ತು ಕ್ರಮ ಕೈಗೊಂಡು ರೈತರ ಬದುಕು ಮತ್ತು ಜಾನುವಾರುಗಳನ್ನು ರಕ್ಷಿಸಬೇಕೆಂಬ ಆಗ್ರಹ ದಿನೇದಿನೇ ಹೆಚ್ಚುತ್ತಿದೆ.
ಸಂಡೂರು ತಾಲೂಕು ಗಣಿ ಸಂಪತ್ತಿನಿಂದ ಸಾವಿರಾರು ಕೋಟಿ ರೂಪಾಯಿ ಆದಾಯ ತರುತ್ತಿದೆ. ಆದರೆ ಇದೇ ತಾಲೂಕಿನ ರೈತರು ಇಂದು ಒಂದು ಹನಿ ನೀರಿಗಾಗಿ ಮತ್ತು ಜಾನುವಾರುಗಳಿಗೆ ಒಂದು ಹೊರೆ ಮೇವಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿರುವುದು ಅತ್ಯಂತ ದುರಂತ. ಡಿಎಂಎಫ್, ಸಿಎಸ್‌ಆರ್ ಹಾಗೂ ಇತರೆ ಅಭಿವೃದ್ಧಿ ನಿಧಿಗಳನ್ನು ರೈತರ ಹಿತಕ್ಕಾಗಿ ಪರಿಣಾಮಕಾರಿಯಾಗಿ ಬಳಸಬೇಕು. ತುಂಗಭದ್ರಾ ನೀರನ್ನು ಗ್ರಾಮಗಳಿಗೆ ಶಾಶ್ವತವಾಗಿ ತಲುಪಿಸುವ ಯೋಜನೆ, ಕೆರೆಗಳನ್ನು ತುಂಬಿಸುವ ಕಾರ್ಯ ಹಾಗೂ ಗೋಶಾಲೆಗಳನ್ನು ತಕ್ಷಣ ಆರಂಭಿಸಬೇಕು. ಸರಕಾರ ಮತ್ತು ಜನಪ್ರತಿನಿಧಿಗಳು ರೈತರ ನೋವನ್ನು ರಾಜಕೀಯವಾಗಿ ನೋಡದೆ ಮಾನವೀಯ ದೃಷ್ಟಿಯಿಂದ ಪರಿಹಾರ ಕಲ್ಪಿಸಬೇಕು. ರೈತ ಉಳಿದರೆ ಮಾತ್ರ ದೇಶ ಉಳಿಯುತ್ತದೆ.
- ಚಂದ್ರಶೇಖರ್ ಮೇಟಿ
ಅಧ್ಯಕ್ಷರು, ಸಂಡೂರು ತಾಲೂಕು ರೈತ ಸಂಘ






